ಇ-ಸ್ಟಾಂಪ್ ಸಲೀಸು

<< ಶೀಘ್ರ ಆನ್​ಲೈನ್​ನಲ್ಲೂ ಸಿಗಲಿದೆ ಸೌಲಭ್ಯ >>

ಬೆಂಗಳೂರು: ಬಾಡಿಗೆ ಮನೆ, ಆಸ್ತಿ ಮಾರಾಟ ಕ್ರಯಪತ್ರ ಸೇರಿ ಇನ್ನಿತರ ಕರಾರುಗಳಿಗೆ ಅತ್ಯಗತ್ಯವಾಗಿರುವ ಇ-ಸ್ಟಾಂಪ್ ಕಾಗದ ಪಡೆಯಲು ಇನ್ಮುಂದೆ ಅಧಿಕೃತ ಕೇಂದ್ರಗಳಿಗೆ ಅಲೆದಾಡಬೇಕಿಲ್ಲ. ಮನೆಯಲ್ಲೇ ಕುಳಿತು ಆನ್​ಲೈನ್​ನಲ್ಲೇ ಹಣ ಪಾವತಿಸಿ ಪ್ರಿಂಟೌಟ್ ಪಡೆದುಕೊಳ್ಳುವ ಸೌಲಭ್ಯ ಶೀಘ್ರದಲ್ಲೇ ರಾಜ್ಯದ ಜನತೆಗೆ ಮುಕ್ತವಾಗಲಿದೆ.

ಸ್ಟಾಕ್ ಹೋಲ್ಡಿಂಗ್ ಕಾಪೋರೇಷನ್ ಇಂಡಿಯಾ ಸಂಸ್ಥೆ ಸಹಯೋಗದಲ್ಲಿ ಮುದ್ರಾಂಕ ಮತ್ತು ನೋಂದಣಿ ಇಲಾಖೆ ಈ ಹೊಸ ವ್ಯವಸ್ಥೆ ಜಾರಿಗೆ ತೀರ್ವನಿಸಿದ್ದು, ಉಪ ಚುನಾವಣೆ ಬಳಿಕ ಯೋಜನೆ ಅನುಷ್ಠಾನಕ್ಕೆ ತರಲು ಸಿದ್ಧತೆ ಮಾಡಿಕೊಂಡಿದೆ. ಸ್ಟಾಕ್ ಹೋಲ್ಡಿಂಗ್ಸ್ ಕಾಪೋರೇಷನ್ ಇಂಡಿಯಾ ಸಂಸ್ಥೆಯ ಅಧಿಕೃತ 3500 ಕೇಂದ್ರಗಳಲ್ಲಿ ಸ್ಥಿರಾಸ್ತಿಗಳ ಹಸ್ತಾಂತರ, ಅಡಮಾನ, ಭೋಗ್ಯ, ಅಧಿಕಾರಿಗಳ ಪತ್ರ, ಮಾಲೀಕರು ಮತ್ತು ನೌಕರರು ಸೇರಿ ಇನ್ನಿತರ ಒಪ್ಪಂದ ಪತ್ರಗಳನ್ನು ಪಡೆದು ನೋಟರಿ ಮಾಡಿಸಿಕೊಳ್ಳಲು ಸದ್ಯ ಅವಕಾಶವಿದೆ. ಆನ್​ಲೈನ್​ನಲ್ಲೇ ಇ-ಸ್ಟಾಂಪ್ ಪಡೆಯುವ ಈ ಹೊಸ ವ್ಯವಸ್ಥೆಯನ್ನು ವಿಧಾನಸಭೆ ಮತ್ತು ಲೋಕಸಭೆ ಉಪಚುನಾವಣೆ ಮುಗಿದ ಬಳಿಕ ಅಧಿಕೃತವಾಗಿ ರಾಜ್ಯದಲ್ಲಿ ಜಾರಿಗೆ ತರಲಾಗುತ್ತದೆ. ನಕಲಿ ಇ-ಸ್ಟಾಂಪ್ ಮತ್ತು ವಂಚನೆ ತಡೆಗಟ್ಟಲು ಮಾಹಿತಿ ಭರ್ತಿ ಮಾಡಿದ ಅರ್ಜಿಗಳನ್ನು

ಕಂಪ್ಯೂಟರ್​ನಲ್ಲಿ ನಮೂದಿಸಲಾಗುತ್ತದೆ. ಅರ್ಜಿಯಲ್ಲಿ ಭರ್ತಿಯಾದ ಮಾಹಿತಿ ಆಧರಿಸಿ ಒಮ್ಮೆ ಮಾತ್ರವೇ ಇ ಸ್ಟಾಂಪ್ ಪಡೆದುಕೊಳ್ಳಬಹುದು ಎಂದು ಮುದ್ರಾಂಕ ಮತ್ತು ನೋಂದಣಿ ಇಲಾಖೆ ಆಯುಕ್ತ ಡಾ.ಕೆ.ವಿ. ತ್ರಿಲೋಕ್​ಚಂದ್ರ ಮಾಹಿತಿ ನೀಡಿದ್ದಾರೆ.

ಪಡೆಯುವುದು ಹೇಗೆ?

stock holding corporation of india ವೈಬ್​ಸೈಟ್​ಗೆ ಭೇಟಿ ನೀಡಿ ಇ-ಸ್ಟಾಂಪ್ ಪೇಪರ್ ಆಯ್ಕೆ ಕ್ಲಿಕ್ ಮಾಡಿದರೆ ಅಫಿಡವಿಟ್ ಮತ್ತು ಅಗ್ರಿಮೆಂಟ್ ಆಯ್ಕೆ ಬರುತ್ತವೆ. ಅದರಲ್ಲಿ ನಿಮಗೆ ಬೇಕಾದ ಒಪ್ಪಂದ ಪತ್ರವನ್ನು ಕ್ಲಿಕ್ ಮಾಡಿದಲ್ಲಿ ಓಪನ್ ಆಗುತ್ತದೆ.

ಅಲ್ಲಿ ಎಲ್ಲ ಮಾಹಿತಿಗಳನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಆನ್​ಲೈನ್​ನಲ್ಲೇ ಹಣ ಪಾವತಿಸಿದರೆ ಇ-ಸ್ಟಾಂಪ್ ಪ್ರಿಂಟ್​ಔಟ್ ಬರುತ್ತದೆ. ಅದನ್ನು ಪಡೆದು ನೋಟರಿ ಮಾಡಿಸಿಕೊಳ್ಳಬಹುದು. ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಅತಿ ಹೆಚ್ಚಿನ ಆದಾಯವನ್ನು ರಾಜ್ಯ ಸರ್ಕಾರಕ್ಕೆ ತರುತ್ತಿದೆ. ನಕಲಿ ಛಾಪಾ ಕಾಗದ ಪ್ರಕರಣ ತಪ್ಪಿಸಲು 2008ರಲ್ಲೇ ರಾಜ್ಯದಲ್ಲಿ ಇ-ಮುದ್ರಾಂಕವನ್ನು ಜಾರಿಗೆ ತರಲಾಗಿದೆ. ಪ್ರತಿ ನಿತ್ಯ 80 ಸಾವಿರ ಇ-ಸ್ಟಾಂಪ್ ಪೇಪರ್ ಮಾರಾಟವಾಗುತ್ತಿದೆ. ಸಾರ್ವಜನಿಕರು 20 ರೂ.ಬೆಲೆಯ ಅಫಿಡವಿಟ್ ಮತ್ತು 200 ರೂ. ಬೆಲೆಯ ಅಗ್ರಿಮೆಂಟ್ ಪತ್ರಗಳನ್ನು ಹೆಚ್ಚಾಗಿ ಖರೀದಿಸುತ್ತಾರೆ ಎಂದು ಆಯಕ್ತರು ಮಾಹಿತಿ ನೀಡಿದ್ದಾರೆ.