ಕಾಯ್ದಿರಿಸದ ರೈಲ್ವೆ ಟಿಕೆಟ್ ಪಡೆಯಲು ಯುಟಿಎಸ್ ಮೊಬೈಲ್ ಆ್ಯಪ್ ಬಳಸಿ

ವಿಜಯವಾಣಿ ಸುದ್ದಿಜಾಲ ಮಂಗಳೂರು
ಮುಂಗಡ ಕಾಯ್ದಿರಿಸದ ರೈಲ್ವೆ ಟಿಕೆಟ್ ಪಡೆಯುವುದಕ್ಕಾಗಿ ಯುಟಿಎಸ್ ಮೊಬೈಲ್ ಆ್ಯಪ್ ಬಳಸುವಂತೆ ಪ್ರಯಾಣಿಕರನ್ನು ಪ್ರೇರೇಪಿಸಲು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಶನಿವಾರ ಹಮ್ಮಿಕೊಂಡ ಜಾಗೃತಿ ಅಭಿಯಾನಕ್ಕೆ ವಿಭಾಗೀಯ ರೈಲ್ವೆ ಪ್ರಬಂಧಕ (ಡಿಆರ್‌ಎಂ) ಪ್ರತಾಪ್ ಸಿಂಗ್ ಶಮಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಮಂಗಳೂರು ಸೆಂಟ್ರಲ್ ವ್ಯಾಪ್ತಿಯಲ್ಲಿ ಪ್ರಯಾಣಿಕ ಸ್ನೇಹಿ ಹೊಸ ಆ್ಯಪ್ ಬಳಸುವವರ ಸಂಖ್ಯೆ ಶೇ.2ಕ್ಕಿಂತಲೂ ಕಡಿಮೆ ಇದೆ. ಒಟ್ಟು ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿ ಶೇ.1ಕ್ಕಿಂತಲೂ ಕಡಿಮೆ ಇದೆ. ಪ್ರಮುಖ ನಗರ ಹಾಗೂ ಉಪನಗರಗಳ ವ್ಯಾಪ್ತಿಯಲ್ಲಿ ಆ್ಯಪ್‌ಬಳಕೆ ಅವಕಾಶ ಒದಗಿಸಲಾಗಿದ್ದು, ಮುಂದಿನ 12 ತಿಂಗಳಲ್ಲಿ ಆ್ಯಪ್ ಬಳಸುವವರ ಸಂಖ್ಯೆ ಶೇ.10 ದಾಟಬೇಕು ಎನ್ನುವುದು ನಮ್ಮ ಗುರಿ ಎಂದರು.
ಪ್ರಯಾಣಿಕರು ಉದ್ದೇಶಿಸುವ ಊರುಗಳಿಗೆ ಪ್ರಯಾಣಿಸುವುದಲ್ಲದೆ, ರೈಲ್ವೆ ನಿಲ್ದಾಣ ಪ್ರವೇಶಿಸಲು ಅಗತ್ಯವಿರುವ ಫ್ಲಾಟ್‌ಫಾರ್ಮ್ ಟಿಕೆಟ್ ಪಡೆಯಲು ಕೂಡ ಈ ಆ್ಯಪ್ ಬಳಸಬಹುದು.

ಆ್ಯಂಡ್ರಾಯ್ಡಾ ಮೊಬೈಲ್ ಇರುವವರು ಪ್ಲೇ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ಹೊಸ ಮೊಬೈಲ್ ಆ್ಯಪನ್ನು ಬಳಸಬಹುದು. ದೇಶದಲ್ಲಿ ನಗದು ರಹಿತ ಆರ್ಥಿಕ ವ್ಯವಹಾರ ಉತ್ತೇಜಿಸುವ ನಿಟ್ಟಿನಲ್ಲಿ ಕೂಡ ಕಾರ‌್ಯಕ್ರಮ ಮುಖ್ಯವಾಗಿದೆ.
– ಪ್ರತಾಪ್ ಸಿಂಗ್ ಶಮಿ ವಿಭಾಗೀಯ ರೈಲ್ವೆ ಪ್ರಬಂಧಕ (ಡಿಆರ್‌ಎಂ)