More

    ಜನಸೇವೆಗೆ ತಂತ್ರಜ್ಞಾನದ ಬಳಕೆ: ಅಶ್ವಿನಿ ವೈಷ್ಣವ್ ಲೇಖನ

    ಜನಸೇವೆಗೆ ತಂತ್ರಜ್ಞಾನದ ಬಳಕೆ: ಅಶ್ವಿನಿ ವೈಷ್ಣವ್ ಲೇಖನಕೆಲ ವರ್ಷಗಳ ಹಿಂದಿನವರೆಗೂ ತಂತ್ರಜ್ಞಾನ ಎಂಬುದು ನಗರದ ಶ್ರೀಮಂತರಿಗೆ ಮಾತ್ರ ಲಭ್ಯವಿರುವ ಅನುಕೂಲ ಎಂದು ಭಾವಿಸಲಾಗುತ್ತಿತ್ತು. ಗ್ರಾಮೀಣ ಪ್ರದೇಶದ ಜನರಿಗೆ ಇಂಟರ್​ನೆಟ್ ಕೈಗೆಟಕುವಂತಿರಲಿಲ್ಲ. 2014ರವರೆಗೆ ಕೇವಲ 25 ಕೋಟಿ ಭಾರತೀಯರು ಇಂಟರ್​ನೆಟ್ ಬಳಸುತ್ತಿದ್ದರು. 2022ರಲ್ಲಿ ಇದು 84 ಕೋಟಿಗೆ ಏರಿಕೆಯಾಯಿತು. ಈ ಹಿಂದೆ, 1ಜಿಬಿ ಡೇಟಾದ ವೆಚ್ಚ 300 ರೂ. ಆಗಿತ್ತು. ಈಗ 13.5 ಜಿಬಿಗೆ ನಾವು 10 ರೂ. ಕೊಡುತ್ತಿದ್ದೇವೆ. ಈಗ ಕೈಗೆಟಕುವ ದರದಲ್ಲಿ ಸಿಗುತ್ತಿದೆ. ಹೊಸ ಭಾರತದಲ್ಲಿ ತಂತ್ರಜ್ಞಾನದ ಮೂಲಕ ಎಲ್ಲರನ್ನೂ ಹೇಗೆ ಪ್ರಧಾನಿ ನರೇಂದ್ರ ಮೋದಿ ಒಳಗೊಂಡಿದ್ದಾರೆ ಎಂಬುದರ ಒಂದು ಚಿತ್ರಣ ಇದು.

    ಸಾಂಕ್ರಾಮಿಕ ರೋಗದ ಸಮಯವು ತಂತ್ರಜ್ಞಾನಕ್ಕೆ ಪರೀಕ್ಷಾ ಕಾಲವಾಗಿತ್ತು. ಡಿಜಿಟಲ್ ಇಂಡಿಯಾ ಉಪಕ್ರಮಗಳು ಈ ಸಮಯದಲ್ಲಿ ಜನಜೀವನದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಿತು. ಇಂಟರ್​ನೆಟ್ ಕೈಗೆಟಕುವಂತೆ ಜನರಿಗೆ ಸಿಕ್ಕಿದ್ದರಿಂದ ಹಲವು ಸೇವೆಗಳು ಲಭ್ಯವಾದವು. ಶಾಲೆಗಳಲ್ಲಿ ಶಿಕ್ಷಣವು ಆನ್​ಲೈನ್ ವಿಧಾನಕ್ಕೆ ಬದಲಾದಾಗ, ದೀಕ್ಷಾ ಪ್ಲಾಟ್​ಫಾರಂ ಮೂಲಕ ಉತ್ತರ ಪ್ರದೇಶದ ಬಲರಾಮ್ುರದ ಸುಹಾನಿ ಸಾಹು ತಮ್ಮ ವ್ಯಾಸಂಗವನ್ನು ಆನ್​ಲೈನ್​ನಲ್ಲೇ ಮುಂದುವರಿಸಿದರು.

    ಬಿಹಾರದ ಪೂರ್ವ ಚಂಪಾರಣ್​ನ ಗ್ರಾಮದ ಶುಭಮ್ ಕುಮಾರ್ ಅವರು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ತಾಯಿಯ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಂಡರು. ಅವರು ಇ-ಸಂಜೀವಿನಿ ಆಪ್ ಮೂಲಕ ವೈದ್ಯರ ಟೆಲಿಕನ್ಸಲ್ಟೇಶನ್ ಪಡೆದುಕೊಂಡರು. ಇದರಿಂದ ಅವರಿಗೆ ಪ್ರಯಾಣದ ಸಮಯ ಮತ್ತು ವೆಚ್ಚದ ಉಳಿತಾಯವೂ ಆಯಿತು. ಈವರೆಗೆ ಇಂತಹ 10 ಕೋಟಿ ಟೆಲಿಕನ್ಸಲ್ಟೇಶನ್​ಗಳು ನಡೆದಿವೆ.ಡೆಹ್ರಾಡೂನ್​ನಲ್ಲಿ ಇರುವ ಟ್ಯಾಕ್ಸಿ ಚಾಲಕ ಹರಿ ರಾಮ್ ಬಳಿ ಉತ್ತರ ಪ್ರದೇಶದ ಹದೋಯಿಯಲ್ಲಿ ಮಾಡಿಸಿದ ರೇಷನ್ ಕಾರ್ಡ್ ಇತ್ತು. ಆದರೆ, ಡೆಹ್ರಾಡೂನ್​ನಲ್ಲೂ ಆ ರೇಷನ್ ಕಾರ್ಡ್ ಬಳಸಿ ಆಹಾರ ಸಾಮಗ್ರಿಗಳನ್ನು ಪಡೆಯಲು ಅವರಿಗೆ ‘ಒನ್ ನೇಷನ್ ಒನ್ ರೇಷನ್ ಕಾರ್ಡ್’ ಸಹಾಯ ಮಾಡಿತು.

    ಭಾರತದ ಅತ್ಯಂತ ಕುಗ್ರಾಮದಲ್ಲೂ ಇರುವ ಜನರಿಗೆ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (ಎಇಪಿಎಸ್) ಬಳಸಿಕೊಂಡು ಭಾರತೀಯ ಅಂಚೆ ಇಲಾಖೆಯ ಗ್ರಾಮೀಣ ಪೋಸ್ಟ್​ಮ್ಯಾನ್​ಗಳು ಹಣಕಾಸು ಸೇವೆ ಒದಗಿಸಿದರು.

    ಬಡತನ ನಿವಾರಿಸಲು ಮತ್ತು ಜೀವನವನ್ನು ಸರಾಗಗೊಳಿಸಲು ತಂತ್ರಜ್ಞಾನವನ್ನು ಒಂದು ಸಾಧನವನ್ನಾಗಿ ಬಳಸುವ ಪ್ರಧಾನಿ ಮೋದಿಯವರ ಒತ್ತಾಸೆ ಕೋಟ್ಯಂತರ ಭಾರತೀಯರಿಗೆ ಅನುಕೂಲ ಮಾಡಿಕೊಟ್ಟಿದೆ. ಡಿಜಿಟಲ್ ತಂತ್ರಜ್ಞಾನಗಳು ನಮ್ಮ ಜೀವನದಲ್ಲಿ ಅವಿಭಾಜ್ಯ ಅಂಗವೇ ಆಗಿವೆ. ಎಐ, 5ಜಿ ಮತ್ತು ಕ್ವಾಂಟಮ್ ತಂತ್ರಜ್ಞಾನವು ಮುಖ್ಯವಾಹಿನಿಯೇ ಆಗುವಷ್ಟರ ಮಟ್ಟಿಗೆ ಪಕ್ವವಾಗಿದೆ.

    ಈ ನಿಟ್ಟಿನಲ್ಲಿ 2023ರ ಒಂದು ಮಹತ್ವದ ಮೈಲುಗಲ್ಲಾಗಿದೆ. ಈ ಸಮಯದಲ್ಲಿ, ಜಿ-20 ನಾಯಕತ್ವವನ್ನು ಭಾರತ ವಹಿಸಿಕೊಂಡಿದೆ. ವಿಶ್ವಕ್ಕೆ ತನ್ನ ತಂತ್ರಜ್ಞಾನದ ಪ್ಲಾಟ್​ಫಾರಂಗಳನ್ನು ಎಲ್ಲರ ಉಳಿತಿಗಾಗಿ ಬಳಕೆ ಮಾಡಬೇಕು ಎಂಬ ತತ್ವದ ಜತೆಗೆ ಪ್ರದರ್ಶಿಸಲು ಆತ್ಮನಿರ್ಭರ ಭಾರತವು ಸಿದ್ಧವಾಗಿದೆ.

    ಇಂದು, ಜನರಿಗೆ ಸರ್ಕಾರ ಒಂದು ಸಮಸ್ಯೆ ಎಂದು ಅನಿಸುತ್ತಿಲ್ಲ; ಬದಲಿಗೆ, ಹೊಸ ಅವಕಾಶಗಳಿಗೆ ರಹದಾರಿ ಎಂದು ನಮ್ಮ ಸರ್ಕಾರವನ್ನು ಜನರು ಪರಿಗಣಿಸುತ್ತಿದ್ದಾರೆ. ಇದರಲ್ಲಿ ತಂತ್ರಜ್ಞಾನವು ದೊಡ್ಡ ಪಾತ್ರ ವಹಿಸಿದೆ. ಭಾರತದಲ್ಲಿ ಆಮೂಲಾಗ್ರವಾದ ಡಿಜಿಟಲ್ ರೂಪಾಂತರವಾಗಿದೆ. ಓಪನ್ ಸೋರ್ಸ್ ಆಗಿರುವ, ಎಲ್ಲರಿಗೂ ಲಭ್ಯವಿರುವ ಸಾರ್ವಜನಿಕ ಡಿಜಿಟಲ್ ಪ್ಲಾಟ್​ಫಾರಂಗಳನ್ನು ನಿರ್ಮಾಣ ಮಾಡುವುದರ ಮೇಲೆ ಭಾರತ ಗಮನ ಕೇಂದ್ರೀಕರಿಸಿದೆ.

    ಈ ಧ್ಯೇಯಕ್ಕೆ ಅನುಗುಣವಾಗಿಯೇ ಕೋವಿನ್ (CoWIN) ಪ್ಲಾಟ್​ಫಾರಂ ಅಭಿವೃದ್ಧಿಪಡಿಸಲಾಗಿದೆ. ಲಸಿಕೆ ಉತ್ಪಾದಕರು, ಕ್ಲಿನಿಕ್​ಗಳು, ಆಸ್ಪತ್ರೆಗಳು, ನಾಗರಿಕರ ನೋಂದಣಿ, ಶೆಡ್ಯೂಲ್ ಮಾಡುವುದು ಸೇರಿದಂತೆ ಲಸಿಕೆಯ ಅಂತಿಮ ಪ್ರಮಾಣಪತ್ರವನ್ನು ವಿತರಿಸುವವರೆಗೆ ಎಲ್ಲವನ್ನೂ ಡಿಜಿಟಲ್​ಗೆ ಪರಿವರ್ತಿಸಲಾಗಿತ್ತು. ಮೊದಲ 12 ತಿಂಗಳುಗಳಲ್ಲೇ 150 ಕೋಟಿ ಡೋಸ್​ಗಳನ್ನು ನೀಡಲು ಭಾರತಕ್ಕೆ ಇದು ಅನುವು ಮಾಡಿತ್ತು. ಈಗ ಭಾರತ ಅಂದಾಜು 220 ಕೋಟಿ ಡೋಸ್​ಗಳನ್ನು ನೀಡಿದೆ. ಕೋವಿನ್ (CoWIN), ಡಿಜಿಟಲ್ ತಂತ್ರಜ್ಞಾನದ ವಿಕೇಂದ್ರೀಕರಣಕ್ಕೆ ಒಂದು ಅದ್ಭುತ ಉದಾಹರಣೆಯಾಗಿದೆ.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ಸಮಾಜದ ಅನುಕೂಲಕ್ಕಾಗಿ ತಂತ್ರಜ್ಞಾನವನ್ನು ಬಳಸುವ ವಿಶಿಷ್ಟ ವಿಧಾನವನ್ನು ಭಾರತ ತೋರಿಸಿಕೊಟ್ಟಿದೆ. ಇಂದು ಬೀದಿ ಬದಿ ವ್ಯಾಪಾರಿಗಳು, ತರಕಾರಿ ಮಾರುವವರು, ರಸ್ತೆ ಬದಿಯ ತಿಂಡಿ ತಿನಿಸು ಅಂಗಡಿಗಳು, ಸಣ್ಣ ಅಂಗಡಿಗಳು ಸೇರಿದಂತೆ ದೊಡ್ಡ ಶೋರೂಮ್ಳವರು ಡಿಜಿಟಲ್ ಪೇಮೆಂಟ್​ಗಳನ್ನು ಸ್ವೀಕರಿಸುವುದಕ್ಕೆ ಕ್ಯೂಆರ್ (ಕ್ವಿಕ್ ರೆಸ್ಪಾನ್ಸ್) ಕೋಡ್ ಸ್ಟಿಕ್ಕರ್​ಗಳನ್ನು ಇಟ್ಟುಕೊಂಡಿದ್ದಾರೆ. ಸಾರ್ವಜನಿಕ ನಿಧಿಗಳನ್ನು ಬಳಸಿಕೊಂಡು ನಾವು ಒಂದು ವೇದಿಕೆ ರಚಿಸಿದೆವು. ಇದರಲ್ಲಿ ಬ್ಯಾಂಕ್​ಗಳು, ವಿಮೆ ಕಂಪನಿಗಳು, ಇ-ಕಾಮರ್ಸ್ ಕಂಪನಿಗಳು, ಎಂಎಸ್​ಎಂಇಗಳು, ಸ್ಟಾರ್ಟಪ್​ಗಳು ಸೇರಿದವು. ಎಲ್ಲಕ್ಕಿಂತ ಮುಖ್ಯವಾಗಿ 120 ಕೋಟಿ ಭಾರತೀಯರು ಇದಕ್ಕೆ ಕೈಜೋಡಿಸಿದರು. ಈ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ, ಪ್ಲಾಟ್​ಫಾರಂ ಮೇಲೆ ಯಾವುದೇ ಒಂದು ಸಂಸ್ಥೆಯ ಸಂಪೂರ್ಣ ನಿಯಂತ್ರಣವಿಲ್ಲ. ಹೀಗಾಗಿ, ಇದು ಪ್ರಜಾಪ್ರಭುತ್ವದ ವೇದಿಕೆಯಾಗಿ ಹೊರಹೊಮ್ಮಿದೆ. 2016ರಲ್ಲಿ ಆರಂಭಿಸಿದ ಯುಪಿಐ ಈಗ ಪ್ರತಿ ವರ್ಷ 1.5 ಟ್ರಿಲಿಯನ್ ಡಾಲರ್ ಮೌಲ್ಯದ ವಹಿವಾಟುಗಳನ್ನು ಮಾಡುತ್ತದೆ. ಇದರಿಂದ ಪಾರದರ್ಶಕತೆ ಹೆಚ್ಚಿದೆ ಮತ್ತು ಅನುಕೂಲವೂ ಹೆಚ್ಚಾಗಿದೆ. ಭಾರತದ ಯುಪಿಐ ಡಿಜಿಟಲ್ ಪೇಮೆಂಟ್​ಗಳಿಗೆ ಜಾಗತಿಕ ಮಾನದಂಡವಾಗಿ ಹೊರಹೊಮ್ಮಿದೆ.

    ಫಾಸ್ಟಾ್ಯಗ್ ತಂತ್ರಜ್ಞಾನದಿಂದ ಟೋಲ್ ಪ್ಲಾಜಾಗಳಲ್ಲಿ ವಾಹನ ದಟ್ಟಣೆ ಮತ್ತು ಕಾಯುವ ಸಮಯ ಕಡಿಮೆಯಾಗಿದೆ. ಅಲ್ಲದೆ, ಡಿಜಿಟಲ್ ಪೇಮೆಂಟ್​ಗಳ ಮಹತ್ವವೂ ಇದರಿಂದ ಹೆಚ್ಚಾಗಿದೆ. 5ಜಿ ಬಂದ ಮೇಲೆ ತಂತ್ರಜ್ಞಾನ ಬೃಹತ್ ಹೆಜ್ಜೆಯನ್ನು ಇಟ್ಟಿದೆ. ಈಗಾಗಲೇ ನಾವು 481 ಜಿಲ್ಲೆಗಳಲ್ಲಿ 1 ಲಕ್ಷಕ್ಕೂ ಹೆಚ್ಚು 5ಜಿ ಸೈಟ್​ಗಳನ್ನು ಸ್ಥಾಪಿಸಿದ್ದೇವೆ. ಆರೋಗ್ಯ ಸೇವೆ, ಶಿಕ್ಷಣ, ಕೃಷಿ, ಕಟ್ಟಡ ನಿರ್ಮಾಣ ವಲಯಗಳು ಇತ್ಯಾದಿಯಲ್ಲಿ 5ಜಿ ಬಳಕೆಯ ಧ್ಯೇಯವನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಭಾರತವು 4ಜಿ ಮತ್ತು 5ಜಿ ತಂತ್ರಜ್ಞಾನದ ರಫ್ತುದಾರನಾಗಿ ಹೊರಹೊಮ್ಮಲು ಶ್ರಮಿಸುತ್ತಿದೆ.

    ಇದನ್ನೂ ಓದಿ: ಆನ್​ಲೈನ್​ನಲ್ಲಿ ಐಫೋನ್​ ಬುಕ್​ ಮಾಡಿದ್ರೆ ಬಂದಿದ್ದು ನಿರ್ಮಾ ಸೋಪ್​!; ಮುಂದೇನಾಯ್ತು?

    ಈಗ ನಾವು ಒಸಿಇಎನ್ (ಓಪನ್ ಕ್ರೆಡಿಟ್ ಎನೇಬಲ್​ವೆುಂಟ್ ನೆಟ್​ವರ್ಕ್) ಅಭಿವೃದ್ಧಿಪಡಿಸುತ್ತಿದ್ದೇವೆ. ನಗದು ಹರಿವು ಆಧಾರಿತ ಸಾಲಕ್ಕೆ ಇಡೀ ವ್ಯವಸ್ಥೆಯನ್ನು ಬದಲಿಸುವ ಮೂಲಕ ಸಾಲ ಅರ್ಹತೆಯನ್ನು ಇದು ಗಮನಾರ್ಹವಾಗಿ ಹೆಚ್ಚಳ ಮಾಡಲಿದೆ. ಒಬ್ಬ ವ್ಯಕ್ತಿಗೆ ಸಾಲ ನೀಡುವುದಕ್ಕೆ ವಿವಿಧ ಬ್ಯಾಂಕ್​ಗಳು ಸ್ಪರ್ಧೆ ಒಡ್ಡುವುದಕ್ಕೆ ಒಸಿಇಎನ್ ಕಾರಣವಾಗಲಿದೆ. ಇದರಿಂದ ಸಾಲದ ವೆಚ್ಚ ಕಡಿಮೆಯಾಗುತ್ತದೆ. ಮಾರ್ಗನ್ ಸ್ಟಾನ್ಲೆ ಅಂದಾಜಿನ ಪ್ರಕಾರ, ಪ್ರಸ್ತುತ ಸಾಲದಿಂದ ಜಿಡಿಪಿ ಅನುಪಾತ ಶೇ. 57ರಷ್ಟು ಇದ್ದು, 2031ರ ವೇಳೆಗೆ ಇದು ಶೇ. 100 ಕ್ಕೆ ಏರಿಕೆಯಾಗಲಿದೆ.

    ಡಿಜಿಟಲ್ ಮತ್ತು ತಂತ್ರಜ್ಞಾನ ಆಧಾರಿತ ಕ್ರಾಂತಿಯು ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯಾಗಿದ್ದು, ಜನಸಾಮಾನ್ಯರ ಜೀವನದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ. ಇದು ಕಡು ಬಡವ ಮತ್ತು ಹಿಂದುಳಿದ ಜನರಿಗೆ ಇನ್ನಷ್ಟು ಅಧಿಕಾರವನ್ನು ನೀಡುತ್ತದೆ. ಆರೋಗ್ಯ, ಶಿಕ್ಷಣ, ಸಾರಿಗೆ, ಕೃಷಿ ಅಥವಾ ರಕ್ಷಣೆ ಸೇರಿದಂತೆ ಹಲವು ವಲಯಗಳಿಗೆ ಇಂಥದ್ದೇ ಪ್ಲಾಟ್​ಫಾರಂಗಳನ್ನು ರಚಿಸಲಾಗುತ್ತಿದ್ದು, ಇದರ ಆಧಾರದಲ್ಲಿ ಸ್ಟಾರ್ಟಪ್​ಗಳು ಅಥವಾ ಸಂಸ್ಥೆಗಳು ಪರಿಹಾರಗಳನ್ನು ರೂಪಿಸಬಹುದಾಗಿದೆ. ಜಾಗತಿಕ ಅನಿಶ್ಚಿತತೆಯ ಸಮಯದಲ್ಲಿ ಭಾರತವು ಅಮೃತ ಘಳಿಗೆಯಲ್ಲಿ ಇದೆ. ದೂರದೃಷ್ಟಿ ಹೊಂದಿರುವ, ಕಾರ್ಯಕ್ಷಮತೆಗೆ ಒತ್ತು ನೀಡುವ ಪ್ರಧಾನಿ ಮೋದಿ ನಾಯಕತ್ವದಲ್ಲಿ ಭಾರತ ಜಿ20 ಅಧ್ಯಕ್ಷ ಸ್ಥಾನ ಹೊಂದಿರುವುದು, ಇಡೀ ಜಗತ್ತಿಗೆ ನಮ್ಮ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯವನ್ನು ಹಂಚಿಕೊಳ್ಳುವುದಕ್ಕೆ ಪೂರಕವಾಗಿದೆ.

    (ಲೇಖಕರು ಕೇಂದ್ರ ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು)

    ಪ್ಯಾನ್-ಆಧಾರ್ ಲಿಂಕ್​, ಮಾ. 31 ಕಡೇ ದಿನ: ಸ್ಟೇಟಸ್​ ಚೆಕ್ ಮಾಡಿಕೊಳ್ಳುವುದು ಹೇಗೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts