ದೇಹ ಬೆಚ್ಚಗಿಡುವ ದಾಲ್ಚಿನ್ನಿ

ದಾಲ್ಚಿನ್ನಿಯು ಅನೇಕ ಔಷಧೀಯ ಗುಣಗಳಿಂದ ಕೂಡಿರುವ ಪದಾರ್ಥ. ಬಹಳ ಪರಿಣಾಮಕಾರಿ ಫಲಿತಾಂಶವನ್ನು ನೀಡಬಲ್ಲ ಈ ಪದಾರ್ಥದ ಆರೋಗ್ಯ ಸಹಕಾರಿ, ಚಿಕಿತ್ಸಕಾರಿ ಗುಣಗಳ ಬಗ್ಗೆ ಹಿಂದಿನ ಅಂಕಣವೊಂದರಲ್ಲಿ ತಿಳಿದುಕೊಂಡಿದ್ದೆವು. ಚಳಿಗಾಲದಲ್ಲಿ ಆರೋಗ್ಯಕ್ಕೆ ಹಿತ ಮಾಡುವ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳುತ್ತಿರುವ ಈ ಸರಣಿ ಬರಹಗಳಲ್ಲಿ ದಾಲ್ಚಿನ್ನಿಯ ಬಗೆಗೆ ನಮೂದಿಸುವುದು ಬಹಳ ಅವಶ್ಯ.

ಚಳಿಗಾಲದಲ್ಲಿ ದಾಲ್ಚಿನ್ನಿಯ ಅಧಿಕ ಬಳಕೆಯು ಆರೋಗ್ಯ ನಿರ್ವಹಣೆಯಲ್ಲಿ ಬಹಳ ಸಹಕಾರಿ. ಇದು ಶೀತವನ್ನು ಹೋಗಲಾಡಿಸುವಂತಹ ಗುಣವುಳ್ಳ ಅತ್ಯದ್ಭುತ ಆಹಾರೌಷಧ. ಗಡುಸಾದ ಧ್ವನಿಯನ್ನು ಮೃದುವಾಗಿಸುತ್ತದೆ. ದೇಹವನ್ನು ಬೆಚ್ಚಗಿರಿಸುತ್ತದೆ. ವೈದ್ಯರ ಪ್ರಕಾರ ದಾಲ್ಚಿನ್ನಿಯನ್ನು ನೆನೆಸಿದ ಬಿಸಿ ನೀರಿಗೆ ಎರಡು ಮೂರು ಹನಿಗಳಷ್ಟು ಜೇನುತುಪ್ಪವನ್ನು ಬೆರೆಸಿ ದಿನಕ್ಕೆ ಎರಡು ಮೂರು ಸಲ ಕುಡಿಯುವುದರಿಂದ ಗಂಟಲುನೋವು ಕಡಿಮೆ ಆಗುತ್ತದೆ. ಶೀತ ಸಹ ಕಡಿಮೆ ಆಗುತ್ತ ಬರುತ್ತದೆ.

ದಾಲ್ಚಿನ್ನಿ ಚಹಾವನ್ನು ಬೆಳಗ್ಗೆ ಕುಡಿಯುವುದರಿಂದ ಇಡೀ ದಿನ ದೇಹವು ಬೆಚ್ಚಗಿರಲು ಸಹಾಯವಾಗುತ್ತದೆ. ದಾಲ್ಚಿನ್ನಿಯಲ್ಲಿರುವ ಸಿನ್ನೆಮಲ್ಡಿಹೈಡ್ ಎಂಬ ಅಂಶವು ಇದರಲ್ಲಿನ ಆರೋಗ್ಯ ಸಹಕಾರಿ ಗುಣಗಳಿಗೆ ಕಾರಣ. ಆಂಟಿ ಆಕ್ಸಿಡೆಂಟ್​ಗಳ ಆಗರವಾಗಿರುವಂತಹ ದಾಲ್ಚಿನ್ನಿಯು ದೇಹದ ಕೋಶಗಳ ಹಾನಿಯನ್ನು ಕಡಿಮೆ ಮಾಡಲು ಪೂರಕವಾಗುತ್ತದೆ. ಚರ್ಮದ ಆರೋಗ್ಯಕ್ಕೆ ಉತ್ತಮ. ಚಳಿಗಾಲದಲ್ಲಿ ಚರ್ಮದ ಬಿರುಕು, ಒಡಕು, ಕಪ್ಪಾಗುವುದು ಇಂತಹ ಸಮಸ್ಯೆಗಳು ಹೆಚ್ಚು ಕಾಡುವುದರಿಂದ ಇಂತಹ ಸಮಸ್ಯೆಗಳ ಪ್ರಮಾಣವನ್ನು ತಗ್ಗಿಸಲು ಇದು ನೆರವಾಗುತ್ತದೆ.

ಸೋಂಕುಗಳಿಂದ ರಕ್ಷಿಸಲು, ಅಸ್ತಮಾದಂತಹ ತೊಂದರೆಗಳ ನಿರ್ವಹಣೆಗೆ ಸಹಾಯ ಮಾಡಲು, ಕ್ರೋನಿಕ್ ತೊಂದರೆಗಳು, ನೊವುಗಳು, ರುಮೈಟೆಡ್ ಆರ್ಥರೈಟಿಸ್ ಹಾಗೂ ಆಸ್ಟಿಯೋ ಆರ್ಥರೈಟಿಸ್​ನ ತೀವ್ರತೆಯನ್ನು ಕಡಿಮೆ ಮಾಡಲು ದಾಲ್ಚಿನ್ನಿಯ ಅಳವಡಿಕೆ ಅನುಕೂಲಕಾರಿ.

Leave a Reply

Your email address will not be published. Required fields are marked *