ಸದ್ದಾಂನಂತೆ ಟ್ರಂಪ್​ರನ್ನೂ ಸೋಲಿಸ್ತೀವಿ ಎಂದ ರೌಹಾನಿ

ಡೆಹ್ರಾನ್: ಇರಾನ್ ಜತೆಗಿನ ತಿಕ್ಕಾಟದಲ್ಲಿ ಇರಾಕ್​ನ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಪತನ ಕಂಡಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸೋಲು ಕಾಣಲಿದ್ದಾರೆ ಎಂದು ಇರಾನ್ ಅಧ್ಯಕ್ಷ ಹಸನ್ ರೌಹಾನಿ ಎಚ್ಚರಿಸಿದ್ದಾರೆ. ವಾರ್ಷಿಕ ಗಲ್ಪ್ ನೌಕಾಪಡೆ ಪರೇಡ್ ಉದ್ಘಾಟಿಸಿ ಮಾತನಾಡಿದ ರೌಹಾನಿ , ‘ಅಮೆರಿಕ ಯಾವುದೇ ಕ್ರಮ ಕೈಗೊಂಡರೂ ಹೆದರುವುದಿಲ್ಲ. ಜತೆಗೆ ಶಸ್ತ್ರಾಸ್ತ್ರ ಉತ್ಪಾದನೆ ನಿಲ್ಲಿಸುವುದಿಲ್ಲ’ ಎಂದು ಟ್ರಂಪ್​ಗೆ ಸಂದೇಶ ರವಾನಿಸಿದ್ದಾರೆ. ಮೇನಲ್ಲಿ ಇರಾನ್ ಜತೆಗಿನ ಅಣು ಒಪ್ಪಂದದಿಂದ ಹೊರನಡೆದಿದ್ದ ಟ್ರಂಪ್, ಕಳೆದ ತಿಂಗಳು ಹಲವು ನಿರ್ಬಂಧಗಳನ್ನು ಇರಾನ್ ವಿರುದ್ಧ ಹೇರಿದ್ದರು.

ಉಗ್ರರ ದಾಳಿಗೆ 24 ಬಲಿ: ಇರಾನ್​ನ ಅಹ್ವಾಜ್ ನಗರದಲ್ಲಿ ನಡೆಯುತ್ತಿದ್ದ ಮಿಲಿಟರಿ ಪರೇಡ್ ಗುರಿಯಾಗಿಸಿ ಉಗ್ರರು ಗುಂಡಿನ ದಾಳಿ ನಡೆಸಿದ್ದು ಒಬ್ಬ ಪತ್ರಕರ್ತ ಸೇರಿ 24 ಮಂದಿ ಮೃತಪಟ್ಟಿದ್ದಾರೆ. ದಾಳಿಯಲ್ಲಿ ಯೋಧರು, ಸ್ಥಳೀಯರು ಸಾವನ್ನಪ್ಪಿದ್ದಾರೆ. ಉಗ್ರರು ದೂರದಲ್ಲಿ ಅಡಗಿ ಕುಳಿತು ಪರೇಡ್ ಮೇಲೆ ಗುಂಡು ಹಾರಿಸಿದರು. ಪ್ರತಿದಾಳಿ ನಡೆಸಿ ಮೂವರು ಉಗ್ರರನ್ನು ಹೊಡೆದುರುಳಿಸಿದ್ದೇವೆ. 53ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಬ್ರಿಗೇಡಿಯರ್ ಜನರಲ್ ಅಬೊಲ್ಪಾಜಲ್ ಶೆಕಾರ್ಚ್ ತಿಳಿಸಿದ್ದಾರೆ.