ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಿಲು ವಿಶ್ವಸಂಸ್ಥೆಯಲ್ಲಿ ಹೊಸ ಪ್ರಸ್ತಾವನೆ

ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್​ನಿಂದ ಬೆಂಬಲ

ವಿಶ್ವಸಂಸ್ಥೆ: ಜೈಷ್​​ ಎ ಮೊಹಮದ್​ ಭಯೋತ್ಪಾದನೆ ಸಂಘಟನೆ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವಂತೆ ಕೋರಿ ಅಮೆರಿಕ, ಬ್ರಿಟನ್​ ಮತ್ತು ಫ್ರಾನ್ಸ್​ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಹೊಸ ಪ್ರಸ್ತಾವನೆ ಸಲ್ಲಿಸಿವೆ. ಈ ಮೂಲಕ ಜಾಗತಿಕವಾಗಿ ಪ್ರಯಾಣಿಸದಂತೆ, ಜಗತ್ತಿನಾದ್ಯಂತ ಇರಬಹುದಾದ ಆತನ ಆಸ್ತಿಪಾಸ್ತಿಗಳ ಜಪ್ತಿ ಮತ್ತು ಶಸ್ತ್ರಾಸ್ತ್ರ ಸಾಗಣೆ ನಿರ್ಬಂಧಿಸಬೇಕೆಂದು ಈ ರಾಷ್ಟ್ರಗಳು ಮನವಿ ಮಾಡಿಕೊಂಡಿವೆ.

ಈ ಪ್ರಸ್ತಾವನೆ ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ 10 ದಿನಗಳ ಕಲಾಪ ನಡೆಸಲು ನಿರ್ಧರಿಸಿದೆ. ಇದರಿಂದಾಗಿ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರನೆಂದು ಘೋಷಿಸಬೇಕೆಂಬ ಭಾರತದ ಪ್ರಯತ್ನಕ್ಕೆ ಭಾರಿ ಬೆಂಬಲ ವ್ಯಕ್ತವಾದಂತಾಗಿದೆ.

ಒಂದು ರೀತಿಯಲ್ಲಿ ಭಾರತ ಈ ವಿಷಯವಾಗಿ ರಾಜತಾಂತ್ರಿಕ ಮೇಲುಗೈ ಸಾಧಿಸಿದಂತಾಗಿದ್ದರೆ, ಇನ್ನೊಂದೆಡೆ ಚೀನಾ ರಾಜತಾಂತ್ರಿಕವಾಗಿ ಇಕ್ಕಟ್ಟಿಗೆ ಸಿಲುಕಿಕೊಂಡಂತಾಗಿದೆ. ಅಜರ್​ ಮಸೂದ್​ನನ್ನು ಜಾಗತಿಕ ಉಗ್ರನೆಂದು ಘೋಷಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಯತ್ನಕ್ಕೆ ತನ್ನ ವಿಟೋ ಅಧಿಕಾರ ಬಳಸಿಕೊಂಡು ಅದು ಅಡ್ಡಗಾಲು ಹಾಕಿಕೊಂಡು ಬರುತ್ತಿರುವುದು ಇದಕ್ಕೆ ಕಾರಣ. (ಏಜೆನ್ಸೀಸ್​)