ಭಾರತೀಯ ಮೂಲದ ‘ಹೊಸ ಜಿಹಾದಿ ಜಾನ್​’ ಈಗ ಜಾಗತಿಕ ಉಗ್ರ

ವಾಷಿಂಗ್ಟನ್​: ಐಸಿಸ್​ ಉಗ್ರರ ವಲಯದಲ್ಲಿ “ಹೊಸ ಜಿಹಾದಿ ಜಾನ್​” ಎಂದೇ ಪ್ರಖ್ಯಾತನಾಗಿರುವ ಭಾರತೀಯ ಮೂಲದ ಉಗ್ರನನ್ನು ಅಮೆರಿಕ ಜಾಗತಿಕ ಉಗ್ರ ಎಂದು ಘೋಷಿಸಿದೆ.

ಬ್ರಿಟನ್​ನಲ್ಲಿ ನೆಲೆಸಿದ್ದ ಭಾರತೀಯ ಮೂಲದ ಸಿದ್ದಾರ್ಥ ಧರ್​ ಎಂಬಾತ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ಅಬು ರುಮಯ್ಯಷ್​ ಎಂದು ಬದಲಿಸಿಕೊಂಡಿದ್ದ. ಆತ 2014ರಲ್ಲಿ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಬ್ರಿಟನ್​ನಿಂದ ಸಿರಿಯಾಗೆ ತೆರಳಿ ಉಗ್ರ ಸಂಘಟನೆಗೆ ಸೇರ್ಪಡೆಗೊಂಡಿದ್ದ.

ಐಸಿಸ್​ ಸಂಘಟನೆಯಲ್ಲಿ ಪ್ರಬಲ ನಾಯಕನಾಗಿ ಬೆಳೆದಿದ್ದ ಈತ ಹಿರಿಯ ಕಮಾಂಡರ್​ ಆಗಿದ್ದಾನೆ. ಆತನನ್ನು ಈಗ ಹೊಸ ಜಿಹಾದಿ ಜಾನ್​ ಎಂದೇ ಗುರುತಿಸಲಾಗುತ್ತಿದೆ ಎಂದು ವರದಿಗಳು ತಿಳಿಸುತ್ತವೆ. ಐಸಿಸ್​ ಉಗ್ರ ಸಂಘಟನೆ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಅಮೆರಿಕ ಈಗ ಸಿದ್ದಾರ್ಥ ಧರ್​ ಮತ್ತು ಮೊರಕ್ಕೋದ ನಾಗರಿಕನಾಗಿರುವ ಮತ್ತೋರ್ವ ಉಗ್ರ ಅಬ್ದೆಲತೀಫ್​ ಗೈನಿಯನ್ನು ಜಾಗತಿಕ ಉಗ್ರರು ಎಂದು ಘೋಷಿಸಿದ್ದು, ಅವರ ಮೇಲೆ ನಿಷೇಧ ಹೇರಿದೆ.

2016ರ ಮೇನಲ್ಲಿ ಐಸಿಸ್​ ಉಗ್ರರು ನಿಹದ್​ ಬರ್ಕತ್​ ಎಂಬಾಕೆ ಸೇರಿದಂತೆ ಹಲವು ಯುವತಿಯರನ್ನು ಅಪಹರಿಸಿದ್ದರು. ಅವರನ್ನು ಅಪಹರಿಸುವಲ್ಲಿ ಸಿದ್ದಾರ್ಥ ಧರ್​ ಪ್ರಮುಖ ಪಾತ್ರ ವಹಿಸಿದ್ದ ಎಂದು ಆಕೆ ಬಿಡುಗಡೆಗೊಂಡ ನಂತರ ತಿಳಿಸಿದ್ದಳು. (ಏಜೆನ್ಸೀಸ್​)

Leave a Reply

Your email address will not be published. Required fields are marked *