ಅಮೆರಿಕದ ಈ ರೆಸ್ಟೋರೆಂಟ್​ನಲ್ಲಿ ಮೊಬೈಲ್​ ಫೋನ್​ ಅನ್ನು ಲಾಕರ್​ನಲ್ಲಿ ಇಟ್ಟು ಬಂದರೆ, ಪಿಜ್ಜಾ ಫ್ರೀ!

ಫ್ರೆಸ್ನೋ: ಮೊಬೈಲ್​ ಫೋನ್​ ಜೀವನದ ಅವಿಭಾಜ್ಯ ಅಂಗವಾಗಿದೆ. ಸ್ಮಾರ್ಟ್​ಫೋನ್​ಗಳ ಬಂದ ಮೇಲಂತೂ ದೈನಂದಿನ ಎಲ್ಲ ಕೆಲಸ ಕಾರ್ಯಗಳಿಗೂ ಮೊಬೈಲ್​ ಫೋನ್​ಗಳ ಬಳಕೆ ಹೆಚ್ಚಾಗುತ್ತಿದೆ. ಜತೆಗೆ ಮೊಬೈಲ್​ ಫೋನ್​ ಗೀಳಿಗೆ ಬಿದ್ದಿರುವ ಯುವಜನರು ತಮ್ಮ ಸುತ್ತಮುತ್ತಲಿನವರ ಪರಿವೇ ಇಲ್ಲದೆ ಫೋನ್​ಗಳಲ್ಲೇ ಕಳೆದು ಹೋಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೊಬೈಲ್​ ಫೋನ್​ ಅನ್ನು ತಾತ್ಕಾಲಿಕವಾಗಿ ತೊರೆದು ಸ್ನೇಹಿತರೊಂದಿಗೆ ಮಾತನಾಡಲು ಬಯಸುವವರಿಗೆ ಪಿಜ್ಜಾವನ್ನು ಉಚಿತವಾಗಿ ಕೊಡಲು ಅಮೆರಿಕದ ರೆಸ್ಟೋರೆಂಟ್​ ನಿರ್ಧರಿಸಿದೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಎ ಕರಿ ಪಿಜ್ಜಾ ಕಂಪನಿ ಎಂಬ ರೆಸ್ಟೋರೆಂಟ್​ ‘ಟಾಕ್​ ಟು ಈಚ್​ ಅದರ್​ ಡಿಸ್ಕೌಂಟ್​’ ಎಂಬ ಈ ಆಫರ್​ ಅನ್ನು ನೀಡುತ್ತಿದೆ. ಇದರಲ್ಲಿ ಸ್ನೇಹಿತರ ಅಥವಾ ಕುಟುಂಬಸ್ಥರೊಂದಿಗೆ ರೆಸ್ಟೋರೆಂಟ್​ಗೆ ಬರುವ ಗ್ರಾಹಕರು ಮೊಬೈಲ್​ ಫೋನ್​ ಹೆಚ್ಚಾಗಿ ಬಳಕೆ ಮಾಡುತ್ತಿದ್ದು, ತಮ್ಮವರ ಜತೆ ಮಾತುಕತೆಯಾಡುತ್ತಿಲ್ಲ ಎಂಬುದನ್ನು ರೆಸ್ಟೋರೆಂಟ್​ನವರು ಗಮನಿಸಿದ್ದರು. ಹಾಗಾಗಿ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಹೆಚ್ಚಿನ ಸಮಯ ನೀಡುವಂತೆ ಮಾಡಲು ಈ ಆಫರ್​ ಅನ್ನು ಆರಂಭಿಸಿದ್ದಾರೆ.

ಅದರಂತೆ ರೆಸ್ಟೋರೆಂಟ್​ಗೆ ಬರುವ, ಕನಿಷ್ಠ ನಾಲ್ಕು ಜನರು ಇರುವ ತಂಡ ಊಟ ಮಾಡುವಷ್ಟು ಸಮಯ ತಮ್ಮ ಸ್ಮಾರ್ಟ್​ ಫೋನ್​ಗಳನ್ನು ಲಾಕರ್​ನಲ್ಲಿ ಇಡಲು ಒಪ್ಪಿಕೊಂಡರೆ ಅವರಿಗೆ ಉಚಿತವಾಗಿ ಪಿಜ್ಜಾವನ್ನು ಕೊಡಲಾಗುತ್ತಿದೆ. ಈ ಆಫರ್​ನಲ್ಲಿ ಗ್ರಾಹಕರು ತಾವು ಊಟ ಮಾಡಿದ ಬಳಿಕ ಉಚಿತ ಪಿಜ್ಜಾವನ್ನು ಮನೆಗೂ ಕೊಂಡೊಯ್ಯಬಹುದು ಅಥವಾ ಮುಂದಿನ ಬಾರಿ ಬಂದಾಗ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. ಈ ಆಫರ್​ ಅಡಿ ಈಗಾಗಲೆ 40 ರಿಂದ 50 ಪಿಜ್ಜಾಗಳನ್ನು ಉಚಿತವಾಗಿ ಕೊಟ್ಟಿರುವುದಾಗಿ ರೆಸ್ಟೋರೆಂಟ್​ನ ಸಹ ಮಾಲೀಕ ವರಿಂದರ್​ ಮಹ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *