ನಡಾಲ್ ಯುಎಸ್ ಚಾಂಪಿಯನ್: ಮೆಡ್ವೆಡೇವ್ ಪ್ರತಿರೋಧ ಹಿಮ್ಮೆಟ್ಟಿಸಿದ ಸ್ಪೇನ್ ದಿಗ್ಗಜ, 19ನೇ ಗ್ರಾಂಡ್ ಸ್ಲಾಂ ವಿಜಯ

ನ್ಯೂಯಾರ್ಕ್: ಟೆನಿಸ್ ಇತಿಹಾಸ ನೆನಪಿನಲ್ಲಿ ಇಟ್ಟುಕೊಳ್ಳುವಂಥ ಪುನರಾಗಮನವನ್ನು ತಡೆಯುವಲ್ಲಿ ಯಶಸ್ವಿಯಾದ ರಾಫೆಲ್ ನಡಾಲ್, ವೃತ್ತಿಜೀವನದ 19ನೇ ಗ್ರಾಂಡ್ ಸ್ಲಾಂ ಹಾಗೂ ನಾಲ್ಕನೇ ಯುಎಸ್ ಓಪನ್ ಟ್ರೋಫಿ ಜಯಿಸಿದ್ದಾರೆ. ಆರ್ಥರ್ ಆಶ್ ಸ್ಟೇಡಿಯಂನಲ್ಲಿ ನಡೆದ ಅಂದಾಜು ಐದು ಗಂಟೆಗಳ ನಾಟಕೀಯ ಫೈನಲ್ ಪಂದ್ಯದಲ್ಲಿ ರಷ್ಯಾದ ಯುವ ಆಟಗಾರ ಡೆನಿಲ್ ಮೆಡ್ವೆಡೇವ್​ರ ಸ್ಪೂರ್ತಿಯುತ ಹೋರಾಟವನ್ನು ಮಣಿಸಲು ಯಶ ಕಂಡ ಸ್ಪೇನ್​ನ ದಿಗ್ಗಜ ಆಟಗಾರ 7-5, 6-3, 5-7, 4-6, 6-4 ಸೆಟ್​ಗಳಿಂದ ಗೆದ್ದು, 2019ರ ಯುಎಸ್ ಓಪನ್ ಪುರುಷರ ಸಿಂಗಲ್ಸ್ ವಿಭಾಗದ ಚಾಂಪಿಯನ್ ಎನಿಸಿದರು.

ಎರಡು ಸೆಟ್​ಗಳ ಮುನ್ನಡೆ ಹಾಗೂ 3ನೇ ಸೆಟ್​ನಲ್ಲಿ ಒಂದು ಬ್ರೇಕ್ ಸೇರಿದಂತೆ ಸುಲಭವಾಗಿ ಗೆಲ್ಲುವ ಎಲ್ಲ ಅವಕಾಶ ಹೊಂದಿದ್ದ ನಡಾಲ್​ಗೆ ಮೆಡ್ವೆಡೇವ್ 3 ಹಾಗೂ 4ನೇ ಸೆಟ್ ಗೆಲ್ಲುವ ಮೂಲಕ ತಿರುಗೇಟು ನೀಡಿದರು. ಕೊನೆಯ ಸೆಟ್​ನಲ್ಲಿ ಎಚ್ಚರಿಕೆಯ ಆಟವಾಡಿದ ನಡಾಲ್, ಮೆಡ್ವೆಡೇವ್​ಗೆ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ನಿರಾಕರಿಸಿದರು.

‘ನೀವು ಆಡುವ ರೀತಿ ನೋಡಿದರೆ ನಿಜಕ್ಕೂ ತಮಾಷೆ ಎನಿಸುತ್ತದೆ’ ಎಂದು ಪಂದ್ಯದ ಬಳಿಕ ಮಾರ್ವಿುಕವಾಗಿ ನಡಾಲ್ ಆಟಕ್ಕೆ ಮೆಚ್ಚುಗೆ ಸೂಚಿಸುತ್ತಲೇ ಮಾತನಾಡಿದ ಮೆಡ್ವೆಡೇವ್, ‘ನಿಮ್ಮ ವಿರುದ್ಧ ಆಡುವುದು ಬಹಳ ಕಷ್ಟ. 3ನೇ ಸೆಟ್​ನ ವೇಳೆಗಾಗಲೇ ನಾನು ಪಂದ್ಯದ ಬಳಿಕ ಏನು ಮಾತನಾಡುವುದು ಎನ್ನುವ ಯೋಚನೆಯಲ್ಲಿದ್ದೆ. ರಾಫಾಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಗೆದ್ದ ಎಲ್ಲ ಗ್ರಾಂಡ್ ಸ್ಲಾಂಗಳ ವಿಡಿಯೋ ದೃಶ್ಯಾವಳಿಯನ್ನು ನೋಡುತ್ತಿದ್ದೆ. 19 ಗ್ರಾಂಡ್ ಸ್ಲಾಂ ಗೆಲುವುದು ನಂಬಲಾಗದ ಹಾಗೂ ಅಸಾಧಾರಣ ಸಾಧನೆ’ ಎಂದು ಹೊಗಳಿದರು. ‘ಹಾಗೇನಾದರೂ ನಾನು ಗೆದ್ದಿದ್ದರೆ, ಅವರಿಗೆ ವಿಡಿಯೋ ತೋರಿಸಲು ಯಾವ ಗೆಲುವೂ ಇರುತ್ತಿರಲಿಲ್ಲ’ ಎಂದು ಹಾಸ್ಯ ಚಟಾಕಿಯನ್ನೂ ಹಾರಿಸಿದರು.

ಈ ಜಯದೊಂದಿಗೆ ನಡಾಲ್, ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಗರಿಷ್ಠ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ರೋಜರ್ ಫೆಡರರ್​ರ ದಾಖಲೆಯಿಂದ ಕೇವಲ 1 ಗ್ರಾಂಡ್ ಸ್ಲಾಂ ಗೆಲುವಿನ ದೂರದಲ್ಲಿ ನಿಂತಿದ್ದಾರೆ. ಫೆಡರರ್ 20 ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದಿದ್ದರೆ, ನಡಾಲ್, 19ನೇ ಗ್ರಾಂಡ್ ಸ್ಲಾಂ ಗೆಲುವಿನೊಂದಿಗೆ ಫೆಡರರ್​ರ ಅಪರೂಪದ ದಾಖಲೆಗೆ ಸನಿಹವಾಗಿದ್ದಾರೆ. ಅದಲ್ಲದೆ, ಗರಿಷ್ಠ ಯುಎಸ್ ಓಪನ್ ಪ್ರಶಸ್ತಿ ಗೆದ್ದ ಆಟಗಾರರ ಪಟ್ಟಿಯಲ್ಲಿ ನಡಾಲ್, ಜಾನ್ ಮೆಕೆನ್ರೋರೊಂದಿಗೆ ಜಂಟಿ 2ನೇ ಸ್ಥಾನ ಸಂಪಾದಿಸಿದರು. ಜಿಮ್ಮಿ ಕಾನರ್ಸ್, ಫೆಡರರ್ ಹಾಗೂ ಪೀಟ್ ಸಾಂಪ್ರಸ್ ದಾಖಲೆಯ 5 ಬಾರಿಗೆ ಯುಎಸ್ ಓಪನ್ ಗೆಲ್ಲುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. -ಪಿಟಿಐ/ಏಜೆನ್ಸೀಸ್

ನಾನು ಟೆನಿಸ್ ಆಡುತ್ತೇನೆ. ಏಕೆಂದರೆ, ಟೆನಿಸ್ ಆಡುವುದು ನನಗೆ ಇಷ್ಟ. ಗ್ರಾಂಡ್ ಸ್ಲಾಂ ಗೆಲುವಿನತ್ತ ಮಾತ್ರವೇ ನಾನು ಗಮನ ನೀಡುವುದಿಲ್ಲ. ಟೆನಿಸ್ ಎನ್ನುವುದು ಗ್ರಾಂಡ್ ಸ್ಲಾಂಗಿಂತ ದೊಡ್ಡದು. ನನ್ನ ಸಂತೋಷಕ್ಕಾಗಿ ನಾನು ಆಡುತ್ತೇನೆ. ಇಂದಿನ ಈ ಗೆಲುವು ಸಂತೋಷವನ್ನು ಇಮ್ಮಡಿ ಮಾಡಿದೆ.

| ರಾಫೆಲ್ ನಡಾಲ್

ಗರಿಷ್ಠ ಗ್ರಾಂಡ್ ಸ್ಲಾಂ ಗೆಲುವು

 • ಮಾರ್ಗರೇಟ್ ಕೋರ್ಟ್: 24
 • ಸೆರೇನಾ ವಿಲಿಯಮ್್ಸ: 23
 • ಸ್ಟೆಫಿ ಗ್ರಾಫ್: 22
 • ರೋಜರ್ ಫೆಡರರ್: 20
 • ಹೆಲೆನ್ ವಿಲ್ಸ್ ಮೂಡಿ/ನಡಾಲ್: 19
 • ಕ್ರಿಸ್ ಎವರ್ಟ್/ನವ್ರಾಟಿಲೋವಾ: 18
 • ನೊವಾಕ್ ಜೋಕೊವಿಕ್: 16

ಫೆಡ್ ದಾಖಲೆ ಉರುಳುವುದು ಖಚಿತ

ನಡಾಲ್​ರ ಫಾಮ್ರ್ ಗಮನಿಸಿದರೆ, ಮುಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ ಫೆಡರರ್​ರ ಗರಿಷ್ಠ ಗ್ರಾಂಡ್ ಸ್ಲಾಂ ಗೆಲುವಿನ ದಾಖಲೆಯನ್ನು ಮುರಿಯುವ ಸಾಧ್ಯತೆ ದಟ್ಟವಾಗಿದೆ. 4 ಯುಎಸ್ ಓಪನ್​ನೊಂದಿಗೆ, 12 ಫ್ರೆಂಚ್ ಓಪನ್, 2 ವಿಂಬಲ್ಡನ್ ಹಾಗೂ 1 ಆಸ್ಟ್ರೇಲಿಯನ್ ಓಪನ್ ಗೆದ್ದಿರುವ 33 ವರ್ಷದ ನಡಾಲ್, ಫೆಡರರ್​ಗಿಂತ 5 ವರ್ಷ ಕಿರಿಯರು. ಈ ಲೆಕ್ಕಾಚಾರದಲ್ಲಿ ನೊವಾಕ್ ಜೋಕೊವಿಕ್​ರನ್ನೂ ಮರೆಯುವಂತಿಲ್ಲ. 16 ಗ್ರಾಂಡ್ ಸ್ಲಾಂ ಗೆದ್ದಿರುವ 32 ವರ್ಷದ ಜೋಕೊವಿಕ್, ಬಿಗ್ ಥ್ರಿ ಆಟಗಾರರಲ್ಲಿ ಕಿರಿಯವರು. ಆದರೆ, ಅವರಿಗೆ ಗಾಯದ ಸಮಸ್ಯೆಯೇ ಹೆಚ್ಚಾಗಿ ಬಾಧಿಸುತ್ತಿದೆ. ಮುಂದಿನ ಎರಡು ವರ್ಷದಲ್ಲಿ ಬಿಗ್ ಥ್ರಿ ಗ್ರಾಂಡ್ ಸ್ಲಾಂ ಗೆಲುವಿನ ಲೆಕ್ಕಾಚಾರಗಳೇ ಬದಲಾಗಬಹುದು. ನಡಾಲ್ ಜಯದೊಂದಿಗೆ, ಸತತ 12 ಗ್ರಾಂಡ್ ಸ್ಲಾಂಗಳನ್ನು ಬಿಗ್ ಥ್ರಿ ಆಟಗಾರರೇ ಗೆದ್ದುಕೊಂಡಂತಾಗಿದೆ. 2016ರ ಯುಎಸ್ ಓಪನ್ ಬಳಿಕ ನಡೆದ ಎಲ್ಲ ಗ್ರಾಂಡ್ ಸ್ಲಾಂಗಳನ್ನು ಫೆಡರರ್, ಜೋಕೊವಿಕ್ ಹಾಗೂ ನಡಾಲ್ ಗೆದ್ದುಕೊಂಡಿದ್ದಾರೆ.

27- ಗೆಲುವಿನೊಂದಿಗೆ ರಾಫೆಲ್ ನಡಾಲ್ ಟ್ರೋಫಿ ಹಾಗೂ 27 ಕೋಟಿ ರೂ. ಬಹುಮಾನ ಗೆದ್ದುಕೊಂಡರು. ರನ್ನರ್​ಅಪ್ ಡೆನಿಲ್ ಮೆಡ್ವೆಡೇವ್, ರನ್ನರ್ ಅಪ್ ಪ್ಲೇಟ್ ಹಾಗೂ 13 ಕೋಟಿ ರೂ. ಬಹುಮಾನ ಪಡೆದುಕೊಂಡರು.

ನಡಾಲ್ ಗ್ರಾಂಡ್ ಸ್ಲಾಂ ವಿಜಯ

 • ಆಸ್ಟ್ರೇಲಿಯನ್ ಓಪನ್: 2009
 • ಫ್ರೆಂಚ್ ಓಪನ್: 2005, 2006, 2007, 2008, 2010, 2011, 2012, 2013, 2014, 2017, 2018, 2019
 • ವಿಂಬಲ್ಡನ್: 2008, 2010
 • ಯುಎಸ್ ಓಪನ್: 2010, 2013, 2017, 2019

ಹಿರಿಯ-ಕಿರಿಯ ಫೈನಲಿಸ್ಟ್​ಗಳು!

ನಡಾಲ್ 2015ರ ಯುಎಸ್ ಓಪನ್​ನಲ್ಲಿ ಫೆಡರರ್ (34 ವರ್ಷ) ಬಳಿಕ ಫೈನಲ್ ಆಡಿದ ಹಿರಿಯ ಆಟಗಾರ ಎನಿಸಿದ್ದರು. ಇನ್ನೊಂದೆಡೆ, 2010ರ ಯುಎಸ್ ಓಪನ್​ನಲ್ಲಿ ಜೋಕೊವಿಕ್ (23 ವರ್ಷ) ಬಳಿಕ ಫೈನಲ್ ಪಂದ್ಯವಾಡಿದ ಕಿರಿಯ ಆಟಗಾರ ಎನ್ನುವ ಶ್ರೇಯಕ್ಕೆ ಡೆನಿಲ್ ಮೆಡ್ವೆಡೇವ್ ಪಾತ್ರರಾಗಿದ್ದರು. 2010ರಲ್ಲಿ ಜೋಕೊವಿಕ್, ನಡಾಲ್​ರಿಂದ ಎದುರಿಸಿದ್ದ ಫಲಿತಾಂಶವನ್ನೇ ಮೆಡ್ವೆಡೇವ್ ಎದುರಿಸಿದರು.

ಕಣ್ಣೀರಿಟ್ಟ ಸ್ಪೇನ್ ದಿಗ್ಗಜ

ಐದನೇ ಸೆಟ್​ನ ಚಾಂಪಿಯನ್​ಷಿಪ್ ಪಾಯಿಂಟ್​ನಲ್ಲಿ ನಡಾಲ್​ರ ಸರ್ವೀಸ್ ರಿಟರ್ನ್​ಅನ್ನು ಬೇಸ್​ಲೈನ್​ನ ಹೊರಗಡೆ ಮೆಡ್ವೆಡೇವ್ ಬಾರಿಸಿದರು. ಅದರ ಬೆನ್ನಲ್ಲಿಯೇ ಅಂಗಾತವಾಗಿ ಮಲಗಿ ಸಂಭ್ರಮಿಸಿದ ನಡಾಲ್, ಆ ಬಳಿಕ ಮೆಡ್ವೆಡೇವ್​ರ ಬೆನ್ನುತಟ್ಟಿದರು. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಅಣಿಯಾಗಲು ಚೇರ್​ನಲ್ಲಿ ಕುಳಿತಿದ್ದ ವೇಳೆ, ಕೋರ್ಟ್​ನ ದೈತ್ಯ ಪರದೆಯಲ್ಲಿ ನಡಾಲ್​ರ ಸ್ಮರಣೀಯ ವೃತ್ತಿಜೀವನದ 19 ಗ್ರಾಂಡ್ ಸ್ಲಾಂ ಗೆಲುವುಗಳನ್ನು ಬಿತ್ತರಿಸಲಾಯಿತು. ಈ ಹಂತದಲ್ಲಿ ನಡಾಲ್ ಕಣ್ಣೀರಿಡುತ್ತಲೇ ಮುಖ ಮುಚ್ಚಿಕೊಂಡು ಗೆಲುವಿನ ಸಂಭ್ರಮ ಆಚರಿಸಿದರು.

Leave a Reply

Your email address will not be published. Required fields are marked *