Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಸಿಂಗಾಪುರದಲ್ಲಿ ಟ್ರಂಪ್-ಕಿಮ್ ಸ್ನೇಹಶೃಂಗ

Tuesday, 12.06.2018, 3:02 AM       No Comments

ಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೊರಿಯಾದ ಅಧಿನಾಯಕ ಕಿಮ್ ಜಾಂಗ್ ಉನ್ ಮಧ್ಯೆಯ ಐತಿಹಾಸಿಕ ಭೇಟಿಗೆ ಸಿಂಗಾಪುರದ ಸೆಂಟೊಸಾ ದ್ವೀಪದ ಐಷಾರಾಮಿ ಕ್ಯಾಪೆಲ್ಲಾ ರೆಸಾರ್ಟ್ ಸಕಲ ರೀತಿಯಲ್ಲೂ ಸಜ್ಜಾಗಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 9ಕ್ಕೆ (ಭಾರತೀಯ ಕಾಲಮಾನ ಬೆಳಗ್ಗೆ 6.30) ಉಭಯ ಮುಖಂಡರು ಮುಖಾಮುಖಿಯಾಗಿ ಮೊದಲ ಸುತ್ತಿನ ಚರ್ಚೆ ನಡೆಸಲಿದ್ದಾರೆ. ಮಂಗಳವಾರ ಸಂಜೆಯೇ ಅಮೆರಿಕಕ್ಕೆ ಟ್ರಂಪ್ ಹಿಂತಿರುಗಲಿದ್ದಾರೆ. ಈ ಭೇಟಿಯನ್ನು ಜಗತ್ತು ವಿಸ್ಮಯದಿಂದ ನೋಡುತ್ತಿದೆ. ಏಳು ದಶಕದಿಂದ ಕಿತ್ತಾಡುತ್ತಿರುವ ಪೂರ್ವ ಮತ್ತು ಪಶ್ಚಿಮದ ಈ ದೇಶಗಳ ಆಡಳಿತಗಾರರು ಇದೇ ಮೊದಲ ಬಾರಿಗೆ ಭೇಟಿಯಾಗುತ್ತಿರುವುದು ವಿಶೇಷ. ಈ ಮಹತ್ವದ ಮಾತುಕತೆಗಾಗಿ ಟ್ರಂಪ್ ಮತ್ತು ಕಿಮ್ ಎರಡು ದಿನ ಮೊದಲೆ ಸಿಂಗಾಪುರಕ್ಕೆ ಬಂದು, ಪ್ರತ್ಯೇಕ ಹೋಟೆಲ್​ಗಳಲ್ಲಿ ಉಳಿದುಕೊಂಡಿದ್ದಾರೆ.

ಗೋರ್ಖಾಗಳ ಭದ್ರತೆ

ಟ್ರಂಪ್- ಕಿಮ್ ಭೇಟಿಯಾಗುವ ಸೆಂಟೊಸಾ ದ್ವೀಪಕ್ಕೆ ನೇಪಾಳ ಗೋರ್ಖಾ ಪಡೆ ಭದ್ರತೆಯನ್ನು ಸಿಂಗಾಪುರ ಸರ್ಕಾರ ನಿಯೋಜಿಸಿದೆ. ಕಂದು ಬಣ್ಣದ ಟೋಪಿ ಧರಿಸಿದ 1,800 ಗೋರ್ಖಾ ಯೋಧರು, ಸಿಂಗಾಪುರ ಮತ್ತು ಸೆಂಟೊಸಾ ದ್ವೀಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸೆಂಟೊಸಾ ದ್ವೀಪವು ಈ ಹಿಂದೆ ಕಡಲ್ಗಳ್ಳರ ತಾಣವಾಗಿತ್ತು ಎನ್ನಲಾಗಿದೆ.

ಜಿಗುಟುತನದ ಡೊನಾಲ್ಡ್ ಟ್ರಂಪ್

ಸೋಮವಾರ 72ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಬಲಪಂಥೀಯ ನಿಲುವಿನ ಜಿಗುಟು ಸ್ವಭಾವದ ವ್ಯಕ್ತಿ. ಮೂಲತಃ ಉದ್ಯಮಿಯಾದ ಟ್ರಂಪ್ 2016ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಹಿಲರಿ ಕ್ಲಿಂಟನ್ ವಿರುದ್ಧ ಸ್ಪರ್ಧಿಸಿ ಅಧ್ಯಕ್ಷರಾದರು. 2017ರಲ್ಲಿ ಅಧಿಕಾರ ವಹಿಸಿಕೊಂಡ ಟ್ರಂಪ್, ಅಮೆರಿಕ ಮೊದಲು ನೀತಿಯನ್ನು ಅನುಷ್ಠಾನಕ್ಕೆ ತರಲು ಯಾವುದೇ ಕಠಿಣ ನಿರ್ಧಾರವನ್ನಾದರೂ ಕೈಗೊಳ್ಳಬಲ್ಲರು. ಇದಕ್ಕೆ ಸಾಕ್ಷಿ ಎಂದರೆ ಜಾಗತಿಕ ತಾಪಮಾನ ತಗ್ಗಿಸುವಿಕೆ ಕುರಿತಂತೆ ಆಗಿರುವ ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿದಿರುವುದು ಮತ್ತು ಅಮೆರಿಕದ ಯುವಸಮುದಾಯಕ್ಕೆ ಉದ್ಯೋಗ ದೊರಕಿಸಿಕೊಡಲು ಎಚ್ 1ಬಿ ವೀಸಾ ನಿಯಮ ಕಠಿಣಗೊಳಿಸಿರುವುದು ಹಾಗೂ ನೂತನ ವಾಣಿಜ್ಯ ಸಮರ ಸಾಕ್ಷಿ.

ಶತಮೊಂಡ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾದ 3ನೇ ಸರ್ವಾ ಧಿಕಾರಿ ಯಾದ ಕಿಮ್ ಜಾಂಗ್ ಉನ್ ನಿಗೂಢ ವ್ಯಕ್ತಿತ್ವದ, ಮೊಂಡುತನದ ವ್ಯಕ್ತಿ. ಕಿಮ್ ಜನ್ಮದಿನ ಕೂಡ ನಿಗೂಢವಾಗಿದೆ. ಉ.ಕೊರಿಯಾ ದಾಖಲೆಗಳ ಪ್ರಕಾರ ಕಿಮ್ ಹುಟ್ಟಿದ್ದು 1982ರ ಜನವರಿ 8. ಆದರೆ, ದಕ್ಷಿಣ ಕೊರಿಯಾ ಬೇಹುಗಾರಿಕಾ ಇಲಾಖೆ ಇದು ನಿಜವಾದ ಜನ್ಮದಿನವಲ್ಲ ಎಂದಿದೆ. ಕಿಮ್ ಜಾಂಗ್ ಉನ್, ಉತ್ತರ ಕೊರಿಯಾದ ಅಧಿಕಾರವನ್ನು ತಂದೆ ಕಿಮ್ ಜಾಂಗ್ ಇಲ್ ಮರಣಾನಂತರ 2011ರಲ್ಲಿ ಅಧಿಕಾರ ವಹಿಸಿಕೊಂಡರು. ಸೇನೆಯ ಪರಮೋಚ್ಚ ದಂಡನಾಯಕರೂ ಆಗಿದ್ದಾರೆ. ವಿಶ್ವಾಸ ಘಾತಕತನ ಮಾಡಿದರೆಂದು ಕಿಮ್ ಚಿಕ್ಕಪ್ಪ ಕಿಮ್ ಜಾಂಗ್ ಥೇಕ್​ರಿಗೆ 2013 ನೇಣಿಗೇರಿಸಿದ್ದ ಹಾಗೂ ಅಣ್ಣನನ್ನೂ ಕೊಲ್ಲಿಸಿದ್ದ ಆರೋಪವಿದೆ.

ಟ್ರಂಪ್ ನಿರೀಕ್ಷೆ ಏನು?

  • ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮ ಸಂಪೂರ್ಣವಾಗಿ ಸ್ಥಗಿತ.
  • ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಕ್ಷಿಪಣಿಗಳ ನಾಶ ಮತ್ತು ವಾಗ್ದಾನದಿಂದ ಹಿಂದೆ ಸರಿಯದ ಬದ್ಧತೆ.
  • ನಿಶ್ಶಸ್ತ್ರೀಕರಣದ ಪ್ರಕ್ರಿಯೆಯನ್ನು ಅಂತಾರಾಷ್ಟ್ರೀಯ ಮಟ್ಟದ ವೀಕ್ಷಕರ ತಂಡ ಪರಿಶೀಲನೆ ನಡೆಸಲು ಸಮ್ಮತಿ.
  • ಅಪಹರಣ ಮಾಡಿರುವ ಜಪಾನ್ ನಾಗರಿಕರನ್ನು ಸ್ವದೇಶಕ್ಕೆ ಕಳುಹಿಸಬೇಕು. ಮುಂದೆ ಇಂತಹ ಪ್ರಕರಣಗಳು ಸಂಭವಿಸದಂತೆ ತಡೆಯಬೇಕು.
  • ಕಿಮ್ ಹೆಚ್ಚಿನ ಭರವಸೆಯನ್ನು ಬಯಸಿದರೆ ಕಾಂಗ್ರೆಸ್ (ಅಮೆರಿಕ ಸಂಸತ್) ಒಪ್ಪಿಗೆ ಪಡೆಯಬೇಕೆಂದು ಹೇಳಬಹುದು.

 

ಕಿಮ್ ಬಯಕೆ ಏನು?

  • ಉತ್ತರ ಕೊರಿಯಾ ಮೇಲೆ ಅಮೆರಿಕ, ವಿಶ್ವಸಂಸ್ಥೆ ಮತ್ತು ಇನ್ನಿತರ ರಾಷ್ಟ್ರಗಳು ಹೇರಿರುವ ನಿರ್ಬಂಧ ತೆರವು.
  • ಉತ್ತರ ಹಾಗೂ ದಕ್ಷಿಣ ಕೊರಿಯಾ ಮಧ್ಯೆ ಕದನಕ್ಕೆ ಪೂರ್ಣವಿರಾಮ.
  • ಕನಿಷ್ಠ ಮಟ್ಟದ ಅಣ್ವಸ್ತ್ರ ಇರಿಸಿಕೊಳ್ಳಲು ಅವಕಾಶ.
  • ಸಂಪೂರ್ಣ ನಿಶ್ಶಸ್ತ್ರೀಕರಣವು ಉ.ಕೊರಿಯಾದಲ್ಲಿ ಮಾತ್ರವಲ್ಲ, ಈಶಾನ್ಯ ಏಷ್ಯದಲ್ಲೇ ಆಗಬೇಕು. ಅಂದರೆ ದಕ್ಷಿಣ ಕೊರಿಯಾ ಮತ್ತು ಜಪಾನ್​ಗಳಲ್ಲೂ ಅಣ್ವಸ್ತ್ರ ನಿಶ್ಶಸ್ತ್ರೀಕರಣ ಅಗತ್ಯ.
  • ಅಣ್ವಸ್ತ್ರ ನಾಶ ಮಾಡಬೇಕಾದರೆ ದೇಶದ ಸರ್ವಾಧಿಕಾರಿ ಸ್ಥಾನ ಅಚಲವಾಗಿರಬೇಕು ಎಂಬ ಷರತ್ತು.

ಕಚ್ಚಾಟದ ಇತಿಹಾಸ

ಕಿಮ್ ಅವರನ್ನು ಟ್ರಂಪ್ ‘ಕುಳ್ಳ ರಾಕೆಟ್ ಮಾನವ’, ‘ವಿಶ್ವ ಹಿಂದೆಂದೂ ಕಂಡರಿಯದ ಬೆಂಕಿ ಉಗುಳುವ, ಹುಚ್ಚುಕೋಪದ ನಾಯಕ’ ಎಂದು ಜರೆದಿದ್ದರು. ಇದಕ್ಕೆ ಪ್ರತಿಯಾಗಿ ಟ್ರಂಪ್ ಅವರನ್ನು ಹೀಯಾಳಿಸಿದ್ದ ಕಿಮ್ ‘ಬುದ್ಧಿಗೇಡಿ’, ’ಅರುಳುಮರುಳಿನ ಮುದುಕ’ ಎಂದಿದ್ದರು. ಶಾಂತ ಸಾಗರದಲ್ಲಿನ ಅಮೆರಿಕದ ಆಡಳಿತಕ್ಕೆ ಒಳಪಟ್ಟಿರುವ ಗುವಾಮ್ ಮೇಲೆ ದಾಳಿ ಮಾಡುವುದಾಗಿ ಉ.ಕೊರಿಯಾ ಹೇಳಿದ್ದರೆ, ಇಂತಹ ವಿಪರೀತ ಕೆಲಸ ಮಾಡಿದರೆ ಉ.ಕೊರಿಯಾ ಹುಟ್ಟಡಗಿಸುವುದಾಗಿ ಅಮೆರಿಕ ಗುಡುಗಿತ್ತು. ಅಣ್ವಸ್ತ್ರದ ಬಟನ್ ನನ್ನ ಮೇಜಿನ ಮೇಲಿದೆ ಎಂದು ಕಿಮ್ ಧಮಕಿ ಹಾಕಿದರೆ, ಟ್ರಂಪ್ ನನ್ನ ಮೇಜಿನ ಮೇಲಿರುವ ಬಟನ್​ಗಳು ಸದಾ ಸಕ್ರಿಯವಾಗಿರುತ್ತವೆ ಎಂದು ಕುಟುಕಿದ್ದರು. ಆದರೆ, ಕಳೆದ ಮಾರ್ಚ್​ನಲ್ಲಿ ಕಿಮ್ ಅವರನ್ನು ಭೇಟಿ ಮಾಡುವ ಪ್ರಸ್ತಾವನೆಯನ್ನು ಟ್ರಂಪ್ ಒಪ್ಪಿಕೊಂಡು ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದರು. ಆದರೆ, ಈ ಮಧ್ಯೆ ಕಿಮ್ ಮತ್ತೆ ದ್ವೇಷಕಾರುವ ಮಾತನಾಡಿದರು ಎಂದು ಜೂನ್ 12 ಭೇಟಿಯನ್ನು ರದ್ದು ಮಾಡುವುದಾಗಿ ಘೋಷಿಸಿದರು. ಈ ಮುನಿಸಿಗೆ ತೇಪೆ ಹಚ್ಚಿದ್ದು ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ ಇನ್. ಮೂನ್ ಜೆ ಇನ್ ಅವರು ಎರಡನೇ ಸಾರಿ ಕಿಮ್ ಅವರನ್ನು ಭೇಟಿಯಾದಾಗ ಈ ಗೊಂದಲವನ್ನು ಹೋಗಲಾಡಿಸಿದರು.

ಫಲಪ್ರದವಾದರೆ ಮುಂದೇನು?

ಕಿಮ್ ಮತ್ತು ಟ್ರಂಪ್ ಸಭೆಯು ಫಲಪ್ರದವಾದರೆ ಶೀತಲ ಯದ್ಧದ ಶಮನವಾಗುವುದರ ಜತೆಗೆ ಉಭಯ ದೇಶಗಳ ಮಧ್ಯೆ ಮುಂದಿನ ಮಾತುಕತೆಗೆ ಹೆದ್ದಾರಿ ತೆರೆದುಕೊಳ್ಳಲಿದೆ. ಮುಂದಿನ ಹಂತದ ಮಾತುಕತೆಗೆ ಕಿಮ್ ಅವರನ್ನು ಅಮೆರಿಕಕ್ಕೆ ಬರುವಂತೆ ಟ್ರಂಪ್ ಆಹ್ವಾನ ನೀಡುವ ಸಾಧ್ಯ ತೆಯೂ ಇದೆ. ಈ ಸಭೆಯ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಿಸಿ ಕೊಂಡಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜೆ ಇನ್ ಜುಲೈ 27ಕ್ಕೆ ತ್ರಿಪಕ್ಷೀಯ ಶೃಂಗ ನಡೆಸುವ ಇಚ್ಛೆ ಹೊಂದಿದ್ದಾರೆ.

ಅಂತಾರಾಷ್ಟ್ರೀಯ ಪರಿಣಾಮ ಏನು?

ಕಿಮ್ ಮತ್ತು ಟ್ರಂಪ್ ಮಾತುಕತೆ ಫಲಪ್ರದವಾದರೆ ಎರಡೂ ದೇಶಗಳ ದಶಕಗಳ ಜಗಳ ಕೊನೆಯಾಗಿ ಆ ಪ್ರಾದೇಶಿಕ ವಲಯದ ದೇಶಗಳು ನೆಮ್ಮದಿಯಿಂದ ಇರುವಂತಹ ಸನ್ನಿವೇಶ ನಿರ್ಮಾಣ ಆಗುತ್ತದೆ. ಮುಖ್ಯವಾಗಿ ದಾಯಾದಿ ರಾಷ್ಟ್ರಗಳಾದ ಉತ್ತರ ಮತ್ತು ದಕ್ಷಿಣ ಕೊರಿಯಾಗಳ ಮಧ್ಯೆ ಶಾಂತಿ ನೆಲೆಸುತ್ತದೆ. ವಿಶ್ವಸಂಸ್ಥೆಯ ನಿರ್ಣಯದ ಅನುಸಾರ ಉ.ಕೊರಿಯಾ ಜತೆ ವ್ಯಾಪಾರ- ವಹಿವಾಟನ್ನು ವಿಶ್ವದ ಅನೇಕ ರಾಷ್ಟ್ರಗಳು ನಡೆಸುತ್ತಿಲ್ಲ. ಈ ನಿರ್ಬಂಧ ತೆರವುಗೊಂಡರೆ ಉ.ಕೊರಿಯಾ ಕೂಡ ವಿಶ್ವಸಮುದಾಯದ ಭಾಗವಾಗಿ ಎಲ್ಲ ದೇಶಗಳ ಜತೆ ಉತ್ತಮ ಬಾಂಧವ್ಯ ಹೊಂದಲು ಸಾಧ್ಯವಾಗುತ್ತದೆ.

Leave a Reply

Your email address will not be published. Required fields are marked *

Back To Top