ಅಮೆರಿಕದ ಮಾಜಿ ಅಧ್ಯಕ್ಷ ಬಿಲ್​ ಕ್ಲಿಂಟನ್​ ನಿವಾಸದ ಬಳಿ ಬಾಂಬ್​ ಪತ್ತೆ

ನ್ಯೂಯಾರ್ಕ್​: ಅಮೆರಿಕ ಮಾಜಿ ಅಧ್ಯಕ್ಷ ಬಿಲ್​ ಕ್ಲಿಂಟನ್​ ಅವರ ನಿವಾಸದ ಬಳಿ ಶಂಕಿತ ಸ್ಫೋಟಕವುಳ್ಳ ಪ್ಯಾಕೆಟ್​ ಪತ್ತೆಯಾಗಿದೆ ಎಂದು ಅಮೆರಿಕದ ಗುಪ್ತಚರ ದಳದ ಅಧಿಕಾರಿಗಳು ತಿಳಿಸಿದ್ದಾರೆ.

ಬಿಲ್​ ಕ್ಲಿಂಟನ್​ ಮತ್ತು ಹಿಲರಿ ಕ್ಲಿಂಟನ್​ ಅವರ ನಿವಾಸದ ಬಳಿ ಬಾಂಬ್​ ಪತ್ತೆಯಾದ ಬೆನ್ನಲ್ಲೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್​ ಒಬಾಮ ಅವರ ನಿವಾಸದ ವಿಳಾಸವುಳ್ಳ ಶಂಕಿತ ಪ್ಯಾಕೆಟ್​ ಅನ್ನು ಗುಪ್ತಚರ ದಳದ ಅಧಿಕಾರಿಗಳು ತಡೆ ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳವಾರ ಮ್ಯಾನ್​ಹಟ್ಟನ್​ನ ಉತ್ತರದಲ್ಲಿರುವ ವೆಸ್ಟ್ಚೆಸ್ಟರ್​ನಲ್ಲಿರುವ ಕ್ಲಿಂಟನ್​ ನಿವಾಸದ ಬಾಂಬ್​ ಇದ್ದ ಪ್ಯಾಕೆಟ್​ ಅನ್ನು ವಶಕ್ಕೆ ಪಡೆಯಲಾಗಿದೆ. ಬುಧವಾರ ಬೆಳಗ್ಗೆ ಅಂಚೆ ಸೇವೆಯ ತಪಾಸಣೆ ವೇಳೆ ವಾಷಿಂಗ್ಟನ್​ನ ಒಬಾಮ ಅವರ ನಿವಾಸದ ವಿಳಾಸವಿದ್ದ 2 ನೇ ಪ್ಯಾಕೆಟ್​ ಅನ್ನು ಪತ್ತೆ ಹಚ್ಚಲಾಗಿದೆ ಎಂದು ಗುಪ್ತಚರ ದಳ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸ್ಫೋಟಕವಿದ್ದ ಪ್ಯಾಕೆಟ್​ ಪತ್ತೆಯಾದ ಸಂದರ್ಭದಲ್ಲಿ ಕ್ಲಿಂಟನ್​ ದಂಪತಿ ಮತ್ತು ಒಬಾಮ ಅವರು ಮನೆಯಲ್ಲಿ ಇದ್ದ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.  ಒಬಾಮ ಮತ್ತು ಕ್ಲಿಂಟನ್​ ಅವರ ಮೇಲಿನ ದಾಳಿ ಯತ್ನವನ್ನು ಶ್ವೇತಭವನ ಖಂಡಿಸಿದೆ. (ಏಜೆನ್ಸೀಸ್​)