ಭಯೋತ್ಪಾದನೆ ನಿಗ್ರಹಿಸುವಲ್ಲಿ ಪಾಕಿಸ್ತಾನ ವಿಫಲ; 2,100 ಕೋಟಿ ನೆರವು ರದ್ದು ಮಾಡಿದ ಅಮೆರಿಕ

ವಾಷಿಂಗ್ಟನ್​: ತನ್ನ ನೆಲದಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಯನ್ನು ನಿಗ್ರಹಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಆರೋಪಿಸಿರುವ ಅಮೆರಿಕ, ಪಾಕಿಸ್ತಾನಕ್ಕೆ ನೀಡುತ್ತಿದ್ದ 300 ದಶಲಕ್ಷ ಡಾಲರ್​ (2,100 ಕೋಟಿ) ಮೈತ್ರಿ ಬೆಂಬಲ ನಿಧಿಯನ್ನು ರದ್ದು ಮಾಡಿದೆ.

ಪಾಕಿಸ್ತಾನ ಭಯೋತ್ಪಾದಕರಿಗೆ ಸ್ವರ್ಗವನ್ನೇ ಸೃಷ್ಟಿಸಿದೆ. ನೆರೆಯ ಅಫ್ಘಾನಿಸ್ತಾನದಲ್ಲಿ 17 ವರ್ಷಗಳಿಂದ ನಡೆಯುತ್ತಿರುವ ಆಂತರಿಕ ಯುದ್ಧಕ್ಕೆ ಪಾಕಿಸ್ತಾನವೇ ನೇರ ಹೊಣೆ ಎಂದು ಅಮೆರಿಕ ಆರೋಪಿಸಿದೆ. ಆದರೆ, ಈ ಆರೋಪಗಳನ್ನು ಪಾಕಿಸ್ತಾನ ಅಲ್ಲಗೆಳೆದಿದೆ.

“ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನ ಸಂಪೂರ್ಣ ವಿಫಲವಾಗಿರುವ ಹಿನ್ನೆಲೆಯಲ್ಲಿ ನಾವು ಆ ದೇಶಕ್ಕೆ ನೀಡುತ್ತಿದ್ದ ಆರ್ಥಿಕ ನೆರವನ್ನು ರದ್ದು ಮಾಡಿದ್ದೇವೆ. ಆ ಹಣವನ್ನು ನಾವು ಅದ್ಯತೆ ಮೇರೆಗೆ ತುರ್ತು ಕೆಲಸ ಕಾರ್ಯಗಳಿಗೆ ವಿನಿಯೋಗಿಸುತ್ತೇವೆ ಎಂದು ಪೆಂಟಗನ್​ನ ವಕ್ತಾರ ಲೆಫ್ಟಿನೆಂಟ್​ ಕಲೊನೆಲ್​ ಕೋನ್​ ಫಾಕ್ನರ್​ ತಿಳಿಸಿದ್ದಾರೆ.

ಹೀಗಿರುವಾಗಲೇ ಸೆ. 5ರಂದು ಅಮೆರಿಕ ಸರ್ಕಾರದ ಕಾರ್ಯದರ್ಶಿ ಮೈಕ್​ ಪೆಂಪೋಸ್​ ಅವರು ಪಾಕಿಸ್ತಾನಕ್ಕೆ ಭೇಟಿ ನೀಡುತ್ತಿದ್ದು, ಎರಡೂ ದೇಶಗಳ ನಡುವೆ ಭಯೋತ್ಪಾದನ ನಿಗ್ರಹವೇ ಪ್ರಮುಖ ಚರ್ಚಾ ವಿಷಯವಾಗಲಿದೆ ಎಂದು ಹೇಳಲಾಗಿದೆ.

ಪಾಕಿಸ್ತಾನಕ್ಕೆ 300 ದಶಲಕ್ಷ ಡಾಲರ್​ ಮೈತ್ರಿ ಬೆಂಬಲ ನಿಧಿಯನ್ನು ನೀಡುವುದಾಗಿ ಕಳೆದ ವರ್ಷ ಡೊನಾಲ್ಡ್​ ಟ್ರಂಪ್​ ಘೋಷಿಸಿದ್ದರು. ಆದರೆ, ಭಯೋತ್ಪಾದನೆ ನಿಗ್ರಹದಲ್ಲಿ ಅಮೆರಿಕ ನಿರೀಕ್ಷಿಸಿದ ಮಟ್ಟಕ್ಕೆ ಪಾಕಿಸ್ತಾನ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಅನುದಾನ ರದ್ದು ಮಾಡುವ ನಿರ್ಧಾರವನ್ನು ಆಗಸ್ಟ್​ನಲ್ಲಿ ಅಮೆರಿಕ ಕಾಂಗ್ರೆಸ್​ ಕೈಗೊಂಡಿತ್ತು.