ಸಿನಿಮಾ

ಅಮೆರಿಕ ಇಬ್ಬಂದಿತನ: ಮತ್ತೆ ಮಿಲಿಟರಿ ನೆರವು ಕೋರಿದ ಪಾಕಿಸ್ತಾನ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಪಾಕಿಸ್ತಾನವು ಸೇನಾ ನೆರವನ್ನು ಪುನರಾರಂಭಿಸುಂತೆ ಅಮೆರಿಕಕ್ಕೆ ಮನವಿ ಮಾಡಿರುವುದು ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬಂತಹ ಧೋರಣೆಯನ್ನೇ ಬಿಂಬಿಸುತ್ತದೆ. ಆರ್ಥಿಕವಾಗಿ ಸಂಪೂರ್ಣ ನೆಲಕಚ್ಚಿರುವ ಪಾಕಿಸ್ತಾನದ ನಾಗರಿಕರು ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿಯೇ ಆ ದೇಶದ ನಾಯಕರು ಸೇನಾ ನೆರವನ್ನು ಕೋರುತ್ತಿರುವುದು ವಿಪರ್ಯಾಸ. ಅಫ್ಘಾನಿಸ್ತಾನದ ಭಯೋತ್ಪಾದಕ ಗುಂಪುಗಳಿಗೆ ಸುರಕ್ಷಿತ ನೆಲೆ ಒದಗಿಸಿದ್ದಕ್ಕಾಗಿ ಡೋನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕ ಸರ್ಕಾರವು ಪಾಕಿಸ್ತಾನಕ್ಕೆ ಮಿಲಿಟರಿ ನೆರವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು 2018ರ ಜನವರಿಯಲ್ಲಿ ಕೈಗೊಂಡಿತ್ತು.

‘ಕಳೆದ 15 ವರ್ಷಗಳಲ್ಲಿ 33 ಬಿಲಿಯನ್ ಡಾಲರ್ (2,64,000 ಕೋಟಿ ರೂಪಾಯಿ) ನೆರವನ್ನು ಅಮೆರಿಕವು ಪಾಕಿಸ್ತಾನಕ್ಕೆ ನೀಡಿದೆ. ಇದು ಮೂರ್ಖತನವೇ ಸರಿ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನವು ಸುಳ್ಳು ಮತ್ತು ವಂಚನೆ ಬಿಟ್ಟು ಬೇರೇನೂ ನೀಡಿಲ್ಲ. ನಾವು ಅಫ್ಘಾನಿಸ್ತಾನದಲ್ಲಿ ಬೇಟೆಯಾಡುತ್ತಿರುವ ಭಯೋತ್ಪಾದಕರಿಗೆ ಅವರು ತಮ್ಮ ದೇಶದಲ್ಲಿ ಸುರಕ್ಷಿತ ನೆಲೆ ಒದಗಿಸಿದ್ದಾರೆ’ ಎಂದು ಟ್ರಂಪ್ ಬಹಿರಂಗವಾಗಿಯೇ ಟೀಕಿಸಿದ್ದರು. ಬರಾಕ್ ಒಬಾಮಾ ಆಡಳಿತ ಕೂಡ 2011ರಲ್ಲಿ 800 ಮಿಲಿಯನ್ ಡಾಲರ್ (6400 ಕೋಟಿ ರೂಪಾಯಿ) ಹಾಗೂ 2016ರಲ್ಲಿ 300 ಮಿಲಿಯನ್ ಡಾಲರ್ (2400 ಕೋಟಿ ರೂಪಾಯಿ) ನೆರವನ್ನು ಇಂತಹುದೇ ಕಾರಣಕ್ಕಾಗಿ ಸ್ಥಗಿತಗೊಳಿಸಿತ್ತು.

ಆದರೆ, ಜೋ ಬೈಡೆನ್ ಅಧ್ಯಕ್ಷರಾದ ನಂತರ 2022ರ ಸೆಪ್ಟೆಂಬರ್​ನಲ್ಲಿ, 3600 ಕೋಟಿ ರೂಪಾಯಿ ಮೊತ್ತದ ಎಫ್ 16 ಯುದ್ಧವಿಮಾನ ಹಾಗೂ ಸೇನಾ ಉಪಕರಣಗಳ ನೆರವನ್ನು ಪಾಕಿಸ್ತಾನಕ್ಕೆ ಒದಗಿಸಲು ಅಮೆರಿಕ ಸರ್ಕಾರವು ನಿರ್ಧಾರ ಕೈಗೊಂಡಿತ್ತು. ಇದಕ್ಕೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಭಯೋತ್ಪಾದನೆ ವಿರುದ್ಧದ ಹೋರಾಟದ ನೆಪದಲ್ಲಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಒದಗಿಸುವುದರಲ್ಲಿ ಯಾವುದೇ ಸದುದ್ದೇಶ ಈಡೇರುವುದಿಲ್ಲ ಎಂದು ಭಾರತದ ವಿದೇಶಾಂಗ ಎಸ್. ಜೈಶಂಕರ್ ನೇರಾನೇರ ಮಾತುಗಳಲ್ಲಿ ಅಮೆರಿಕಕ್ಕೆ ಅದರದೇ ನೆಲದಲ್ಲಿಯೇ ಆಗ ಚಾಟಿ ಬೀಸಿದ್ದರು. ‘ಭಯೋತ್ಪಾದನೆ ನಿಗ್ರಹಕ್ಕಾಗಿ ಈ ನೆರವನ್ನು ನೀಡಲಾಗುತ್ತಿದೆ ಎಂದು ಹೇಳುವ ಮೂಲಕ ಯಾರನ್ನೂ ಮೂರ್ಖರನ್ನಾಗಿಸಲಾಗದು. ಈ ಯುದ್ಧವಿಮಾನಗಳನ್ನು ಯಾವುದಕ್ಕೆ ಬಳಸಲಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ’ ಎಂದು ತರಾಟೆಗೆ ತೆಗೆದುಕೊಂಡಿದ್ದರು.

ಬೈಡೆನ್ ಹಿಂದಿನಿಂದಲೂ ಪಾಕ್ ಪಕ್ಷಪಾತಿ ಧೋರಣೆಯನ್ನೇ ಬಿಂಬಿಸಿಕೊಂಡು ಬಂದವರು. ಅಮೆರಿಕದ ಅಧ್ಯಕ್ಷರಾದ ನಂತರ ಪಾಕಿಸ್ತಾನ ಕುರಿತಂತೆ ಅವರ ಧೋರಣೆಗಳಲ್ಲಿ ಗೊಂದಲಗಳೇ ಕಾಣಿಸುತ್ತವೆ. ಪಾಕ್​ಗೆ ಯುದ್ಧ ವಿಮಾನ ನೀಡಲು ಬೈಡೆನ್ ಸರ್ಕಾರ ಕೆಲ ತಿಂಗಳುಗಳ ಹಿಂದೆ ನಿರ್ಧರಿಸಿತ್ತು. ಇದಾದ ನಂತರ ಬೈಡೆನ್ ಅವರು, ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಹಿಡಿತ ಇಲ್ಲದ ಪಾಕಿಸ್ತಾನವು ಜಗತ್ತಿನ ಅತ್ಯಂತ ಅಪಾಯಕಾರಿ ರಾಷ್ಟ್ರವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದರು. ಬೈಡೆನ್ ಅವರು ಬರುವ ಸೆಪ್ಟೆಂಬರ್​ನಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ಭಾರತದ ವಿರುದ್ಧ ಭಯೋತ್ಪಾದನೆಯನ್ನು ಪೋಷಿಸಿಕೊಂಡು ಬರುತ್ತಿರುವ ಪಾಕಿಸ್ತಾನದಂತಹ ರಾಷ್ಟ್ರವನ್ನು ಬೆಂಬಲಿಸದಿರುವ ಸ್ಪಷ್ಟ ನಿಲುವನ್ನು ಅಮೆರಿಕದ ಅಧ್ಯಕ್ಷರು ಈಗಲಾದರೂ ಪ್ರದರ್ಶಿಸುವರೇ ಎಂಬುದನ್ನು ಕಾದುನೋಡಬೇಕಿದೆ.

ಭಾರಿ ಮಳೆ: ಹಳ್ಳ ದಾಟುತ್ತಿದ್ದ ತಾಯಿ ಜತೆ ಇಬ್ಬರು ಮಕ್ಕಳೂ ನೀರುಪಾಲು

ಗರ್ಭವತಿಯರ ಪತ್ತೆಗಾಗಿ ಶಾಲಾ ಮಕ್ಕಳಿಗೂ ಋತುಮತಿ ಕಾರ್ಡ್!

Latest Posts

ಲೈಫ್‌ಸ್ಟೈಲ್