ಪಟೇಲ್​ಗಿರಿ ಕುತೂಹಲ

| ಯಗಟಿ ರಘು ನಾಡಿಗ್ ಬೆಂಗಳೂರು

ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ನಡುವಿನ ಹಗ್ಗಜಗ್ಗಾಟ ಬಹುತೇಕರ ಗಮನ ಸೆಳೆದಿರುವುದು ಖರೆ. ಈ ಕಸರತ್ತಿನ ಕೇಂದ್ರಬಿಂದುವಾಗಿರುವವರೇ ಆರ್​ಬಿಐ ಗವರ್ನರ್ ಉರ್ಜಿತ್ ಪಟೇಲ್. 2008-2014ರ ಕಾಲಾವಧಿಯಲ್ಲಿನ ಬೇಕಾಬಿಟ್ಟಿ ಸಾಲ ವಿತರಣೆಗೆ ಆರ್​ಬಿಐ ಕಡಿವಾಣ ಹಾಕದಿದ್ದ ಕಾರಣ ಬ್ಯಾಂಕಿಂಗ್ ವಲಯಕ್ಕೆ ಕೆಟ್ಟಕಾಲ ಬರುವಂತಾಗಿದೆ ಎಂದು ಆರೋಪಿಸಿದ ಸರ್ಕಾರ, ಬ್ಯಾಂಕಿಂಗೇತರ ಹಣಕಾಸು ವಲಯಕ್ಕೆ ಹಣಪೂರೈಕೆ, ಅನುತ್ಪಾದಕ ಸಾಲಗಳ ನಿರ್ವಹಣೆ, ಮಾರುಕಟ್ಟೆ ನಗದು ನಿರ್ವಹಣೆ ವಿಷಯದಲ್ಲೂ ಅಸಮಾಧಾನ ವ್ಯಕ್ತಪಡಿಸಿತು. ಮಾತ್ರವಲ್ಲ, ಸಾರ್ವಜನಿಕ ಹಿತರಕ್ಷಣೆಯ ಕಾರಣ ಮುಂದಿಟ್ಟುಕೊಂಡು, ಆರ್​ಬಿಐಗೆ ಪತ್ರಮುಖೇನ ನಿರ್ದೇಶನಗಳನ್ನು ನೀಡಲೆಂದು ಆರ್​ಬಿಐ ಕಾಯ್ದೆಯ ಪರಿಚ್ಛೇದ 7ನ್ನು ಅಸ್ತ್ರವಾಗಿ ಬಳಸಿಕೊಂಡಿತು. ಈ ನಡೆಯಿಂದ ಕೆರಳಿದ ಪಟೇಲರು, ಆರ್​ಬಿಐ ಸ್ವಾಯತ್ತತೆಗೆ ಧಕ್ಕೆ ತರಲೆಂದೇ ಈ ಅಸ್ತ್ರಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ ಎಂದು ಭುಸುಗುಡುತ್ತಿದ್ದು, ಅದು ಸದ್ಯದಲ್ಲೇ ಅವರ ರಾಜೀನಾಮೆಯಲ್ಲಿ ಪರ್ಯವಸಾನಗೊಳ್ಳಲಿದೆ ಎಂಬುದು ಕ್ಷೇತ್ರತಜ್ಞರ ಅಂಬೋಣ. ಸರ್ಕಾರ-ಆರ್​ಬಿಐ ನಡುವಿನ ಇಂಥ ‘ಹಾವು-ಮುಂಗುಸಿ’ ಕಿತ್ತಾಟ ಹೊಸದೇನಲ್ಲ; ಆದರೆ ಇಂಥ ಬಿಕ್ಕಟ್ಟು ಎದುರಾದಾಗಲೆಲ್ಲ ಆಯಾ ಕಾಲಘಟ್ಟದಲ್ಲಿ ಆಯಕಟ್ಟಿನ ಜಾಗಗಳಲ್ಲಿದ್ದವರು ಪರಿಸ್ಥಿತಿಯನ್ನು ಅತೀವ ಕುಶಲತೆಯೊಂದಿಗೆ ನವಿರಾಗಿ ನಿಭಾಯಿಸಿದ ನಿದರ್ಶನಗಳಿವೆ. ಆದರೆ, ಉಸಿರುಗಟ್ಟಿಸುವಂಥ ನಿರ್ಬಂಧಕ್ಕೊಳಗಾದಾಗ, ಆರ್​ಬಿಐ ಸ್ವಾತಂತ್ರ್ಯಕ್ಕೇ ಧಕ್ಕೆಯಾಗುತ್ತಿದೆ ಎಂಬ ಗ್ರಹಿಕೆ ದಟ್ಟವಾದಾಗ ಹುದ್ದೆ ತೊರೆಯುವ ಚಿತ್ತಸ್ಥಿತಿ ಆರ್​ಬಿಐ ಗವರ್ನರ್​ಗಳಲ್ಲಿ ರೂಪುಗೊಳ್ಳಬಹುದು. ಪ್ರಸ್ತುತ, ಪಟೇಲರೂ ಅಂಥ ‘ಸಾಂರ್ದಭಿಕ ಶಿಶು’ವೇ ಎಂಬುದು ಬಲ್ಲವರ ಭರತವಾಕ್ಯ.

ಇಂಥ ಅಭಿಪ್ರಾಯಕ್ಕೆ ಕಾರಣಗಳಿವೆ. ಹೆಚ್ಚುವರಿ ನಗದುಸಂಗ್ರಹವನ್ನು ವರ್ಗಾಯಿ ಸಬೇಕು, ನಗದು ಲಭ್ಯತೆ ಕುರಿತಾದ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ವರಾತ ಹಚ್ಚಿಕೊಂಡಿರುವ ಸರ್ಕಾರದ ಒತ್ತಡ ತೀವ್ರವಾಗುತ್ತಲೇ ಇದೆ; ನ.19ರಂದು ನಡೆಯಲಿರುವ ಆರ್​ಬಿಐ ನಿರ್ದೇಶಕರ ಮಂಡಳಿ ಸಭೆಯಲ್ಲಿ, ಸರ್ಕಾರಕ್ಕೆ ಒತ್ತಾಸೆಯಾಗಿ ನಿಂತಿರುವ ನಿರ್ದೇಶಕರ ಗುಂಪೂ ಇದಕ್ಕೆ ಮತ್ತಷ್ಟು ‘ತುಪ್ಪ ಸುರಿಯುವ’ ಸಾಧ್ಯತೆ ದಟ್ಟವಾಗಿರುವುದರಿಂದ, ಸಂಭಾವ್ಯ ಮುಜುಗರ ತಪ್ಪಿಸಿಕೊಳ್ಳಲು ರಾಜೀನಾಮೆಯೇ ಸೂಕ್ತ ಎಂಬುದು ಉರ್ಜಿತ್ ಮನದಲ್ಲಿ ಈಗಾಗಲೇ ಕೆನೆಗಟ್ಟಿರುವ ನಿರ್ಧಾರವಾಗಿರಬಹುದು ಎನ್ನಲಾಗುತ್ತಿದೆ. ಆದರೆ ‘ಸರ್ಕಾರದೊಂದಿಗಿನ ಸಂರ್ಘರ್ಷದಿಂದಾಗಿ ಉರ್ಜಿತ್ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗಿರುವುದರಿಂದ ರಾಜೀನಾಮೆಯ ಚಿಂತನೆ ಅವರಲ್ಲಿ ಮೊಳಕೆ ಯೊಡೆದಿದೆ’ ಎಂಬ ಊಹಾಪೋಹಗಳು ಈ ವಿದ್ಯಮಾನಕ್ಕೆ ಅಂಟಿರುವ ರೆಕ್ಕೆಪುಕ್ಕಗಳೇ ವಿನಾ, ಅವು ಚರ್ಚಾವಿಷಯದ ಆತ್ಮವೇನಲ್ಲ ಎಂಬುದು ಬಹಿರಂಗಗುಟ್ಟು!

ಸರ್ಕಾರ-ಆರ್​ಬಿಐ ನಡುವಿನ ‘ನೀ ಕೊಡೆ, ನಾ ಬಿಡೆ’ ಶೈಲಿಯ ಈ ಚೌಕಾಶಿ ಕುರಿತಾದ ಪ್ರತಿಕ್ರಿಯೆಗಳೂ ಸ್ವಾರಸ್ಯಕರವಾಗಿವೆ. ‘ಆರ್​ಬಿಐ ಇಂಥ ಪರಿಸ್ಥಿತಿಯಲ್ಲಿ ರಾಹುಲ್ ದ್ರಾವಿಡ್​ರಂತೆ ರಕ್ಷಣಾತ್ಮಕ ಆಟವಾಡಬೇಕೇ ವಿನಾ, ನವಜೋತ್ ಸಿಧು ರೀತಿಯಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾಗಬಾರದು’ ಎಂದಿರುವ ಆರ್​ಬಿಐ ಮಾಜಿ ಗವರ್ನರ್ ರಘುರಾಂ ರಾಜನ್, ‘ಆರ್​ಬಿಐ ಎಂಬುದು ಸರ್ಕಾರದ ಪಾಲಿನ ಸೀಟ್​ಬೆಲ್ಟ್ ಇದ್ದಂತೆ; ಅದಿಲ್ಲವಾದರೆ ಅಪಘಾತ ಕಟ್ಟಿಟ್ಟಬುತ್ತಿ’ ಎಂದೂ ಸರ್ಕಾರಕ್ಕೆ ಮಾರ್ವಿುಕವಾಗಿ ಚುಚ್ಚಿರುವುದು ಇದಕ್ಕೊಂದು ಸ್ಯಾಂಪಲ್. ಮತ್ತೊಂದೆಡೆ, ‘ಆರ್ಥಿಕತೆಗೆ ಸಂಬಂಧಿಸಿದ ಕಟುವಾಸ್ತವಗಳನ್ನು ಮುಚ್ಚಿಡಲು ಸರ್ಕಾರ ಹೀಗೆ ಹರಸಾಹಸ ಮಾಡುತ್ತಿದೆಯಷ್ಟೇ; ಪರಿಚ್ಛೇದ 7ನ್ನು ಸರ್ಕಾರ ಅಸ್ತ್ರವಾಗಿ ಬಳಸಿದರೆ, ಮುಂದೆ ಮತ್ತಷ್ಟು ಕೆಟ್ಟಸುದ್ದಿಗಳನ್ನು ಕೇಳಬೇಕಾಗುತ್ತದೆ’ ಎಂದುಗುಡುಗಿದ್ದಾರೆ ಮಾಜಿ ವಿತ್ತಸಚಿವ ಪಿ. ಚಿದಂಬರಂ! ಈ ವಾದ-ವಿವಾದಗಳೇನೇ ಇರಲಿ, ಓರ್ವ ಅರ್ಥಶಾಸ್ತ್ರಜ್ಞರಾಗಿ ಪಟೇಲರದ್ದು ತೆಗೆದುಹಾಕಲಾಗದ ಹೆಸರು. ಆರ್​ಬಿಐ ನಿಕಟಪೂರ್ವ ಗವರ್ನರ್ ರಘುರಾಂ ರಾಜನ್ ಅಧಿಕಾರಾವಧಿ ಸಮಾಪನಗೊಳ್ಳುವ ವೇಳೆ, ‘ಮುಂದೆ ಆರ್​ಬಿಐ ಸಾರಥಿಯಾಗಬಲ್ಲಂಥ ದಕ್ಷವ್ಯಕ್ತಿ ಯಾರು?’ ಎಂಬ ಸಹಜಪ್ರಶ್ನೆ ಎದುರಾಯಿತು. ಅಂದು ಭಾರತೀಯ ಸ್ಟೇಟ್ ಬ್ಯಾಂಕ್ ಅಧ್ಯಕ್ಷೆಯಾಗಿದ್ದ ಅರುಂಧತಿ ಭಟ್ಟಾಚಾರ್ಯ, ಮಾಜಿ ಮಹಾಲೇಖಪಾಲ (ಸಿಎಜಿ) ವಿನೋದ್ ರೈ ಸೇರಿದಂತೆ ಒಂದಷ್ಟು ಅತಿರಥ-ಮಹಾರಥರ ಹೆಸರುಗಳೂ ಆಗ ಮುನ್ನೆಲೆಗೆ ಬಂದದ್ದುಂಟು. ಆದರೆ ಅಂತಿಮವಾಗಿ ಅದು ಉರ್ಜಿತ್ ಮಡಿಲು ಸೇರಿತು. ಅಂದಿಗೆ ಆರ್​ಬಿಐ ಡೆಪ್ಯೂಟಿ ಗವರ್ನರ್ ಆಗಿದ್ದ ಪಟೇಲರು, ಹಣದುಬ್ಬರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಘುರಾಂ ರಾಜನ್​ರಿಗೆ ನೆರವಾದ ಪರಿ, ಹಣಕಾಸು ಕಾರ್ಯನೀತಿ ಕುರಿತಾದ ಸಂಶೋಧನೆ, ಸಾಂಖ್ಯಿಕ ಮತ್ತು ಮಾಹಿತಿ ನಿರ್ವಹಣೆಯಂಥ ವಿಷಯಗಳಲ್ಲಿ ಹೊಂದಿದ್ದ ಪ್ರಾವೀಣ್ಯವೇ ಅವರಿಗೆ ಈ ಸಾರಥ್ಯವನ್ನು ಪ್ರದಾನಿಸಿತು ಎನ್ನಬೇಕು.

ಕೀನ್ಯಾದ ನೈರೋಬಿಯಲ್ಲಿ 1963ರ ಅಕ್ಟೋಬರ್ 28ರಂದು ಉರ್ಜಿತ್ ಜನಿಸಿದರು. ಬಹಳ ಹಿಂದೆಯೇ ಗುಜರಾತ್​ನಿಂದ ನೈರೋಬಿಗೆ ವಲಸೆ ಹೋಗಿದ್ದ ಅವರ ತಾತ ಅಲ್ಲೇ ನೆಲೆಗೊಂಡಿದ್ದರು. ಪಟೇಲರ ಹೆತ್ತವರು ಅಲ್ಲೇ ರಾಸಾಯನಿಕ ಕಾರ್ಖಾನೆಯೊಂದನ್ನು ನಡೆಸುತ್ತಿದ್ದರು. ನೈರೋಬಿಯಲ್ಲೇ ಆರಂಭಿಕ ಶಿಕ್ಷಣ ಮುಗಿಸಿದ ಪಟೇಲರು, ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್​ನಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ, ಆಕ್ಸ್​ಫರ್ಡ್ ವಿಶ್ವವಿದ್ಯಾಲಯದಿಂದ ಎಂ.ಫಿಲ್. (1986), ಅಮೆರಿಕದ ಯೇಲ್ ವಿಶ್ವವಿದ್ಯಾಲಯದಿಂದ ಪಿಎಚ್​ಡಿ (1990) ಪಡೆದರು. ಕೆಲಕಾಲದಲ್ಲೇ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಸೇರಿದರು. ಅಲ್ಲಿ 1995ರವರೆಗೆ ಭಾರತ-ಅಮೆರಿಕ-ಬಹಮಾಸ್-ಮ್ಯಾನ್ಮಾರ್ ದೇಶಗಳಿಗೆ ಸಂಬಂಧಿಸಿದ ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸಿದ ಪಟೇಲರು ಐಎಂಎಫ್ ನಿಯೋಜನೆಯ ಮೇರೆಗೆ ಆರ್​ಬಿಐ ಅಂಗಳ ಪ್ರವೇಶಿಸಬೇಕಾಗಿ ಬಂತು. ಸಾಲ ಮಾರುಕಟ್ಟೆ, ಬ್ಯಾಂಕಿಂಗ್ ಮತ್ತು ಪಿಂಚಣಿ ನಿಧಿ ವಲಯಗಳ ಸುಧಾರಣೆಯಂಥ ಮಹತ್ತರ ವಿಷಯಗಳಲ್ಲಿ ಆರ್​ಬಿಐ ಸಲಹೆಗಾರನಾಗಿ ಅವರು ಪಾತ್ರ ನಿರ್ವಹಿಸಿದ ಪರಿ ಶ್ಲಾಘನೆಗೊಳಗಾಯಿತು. ಹೀಗಾಗಿ ಕೇಂದ್ರ ಹಣಕಾಸು ಖಾತೆಯ ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಸಮಾಲೋಚಕರಾಗುವ ಅವಕಾಶ ಅನಾಯಾಸವಾಗಿ ಒದಗಿಬಂತು. ಆ ಹುದ್ದೆಯನ್ನು 1998ರಿಂದ 2001ರವರೆಗೆ ನಿಭಾಯಿಸಿ, 2006-07ರ ಅವಧಿಯಲ್ಲಿ ಗುಜರಾತ್ ರಾಜ್ಯ ಪೆಟ್ರೋಲಿಯಂ ನಿಗಮದ ನಿರ್ದೇಶಕರ ಮಂಡಳಿಯಲ್ಲೂ ಅನುಪಮ ಸೇವೆ ಸಲ್ಲಿಸಿದರು. ಇಷ್ಟು ಮಾತ್ರವಲ್ಲದೆ, 2000-04ರ ಅವಧಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಟ್ಟದಲ್ಲಿನ ಹಲವು ಉನ್ನತಮಟ್ಟದ ಸಮಿತಿಗಳಲ್ಲಿ ಅವರು ಕಾರ್ಯನಿರ್ವಹಿಸಿದ್ದಿದೆ- ಭಾರತದ ಸ್ಪರ್ಧಾತ್ಮಕ ಆಯೋಗ, ನೇರತೆರಿಗೆ ಕಾರ್ಯಪಡೆ, ಪ್ರಧಾನಮಂತ್ರಿಗಳ ಮೂಲಸೌಕರ್ಯ ಕಾರ್ಯಪಡೆ- ಹೀಗೆ ‘ಪಟೇಲ್-ಪ್ರಭಾವ’ ವ್ಯಾಪಿಸಿದ ಕ್ಷೇತ್ರಗಳು ಒಂದೆರಡಲ್ಲ. 2013ರ ಜನವರಿಯಲ್ಲಿ ಆರ್​ಬಿಐನ ಡೆಪ್ಯೂಟಿ ಗವರ್ನರ್ ಆಗಿ ನೇಮಕಗೊಳ್ಳುವುದಕ್ಕೂ ಮುನ್ನ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್​ನಲ್ಲಿ ಇಂಧನ ಮತ್ತು ಮೂಲಸೌಕರ್ಯ ವಲಯದ ಸಲಹೆಗಾರರಾಗಿ, 1997-2006ರ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್​ನ ವ್ಯವಹಾರ ಅಭಿವೃದ್ಧಿ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಿದೆ.

ಹೀಗೆ, ಆರ್ಥಿಕವಿಷಯ ಸಂಬಂಧಿತ ಕ್ಷೇತ್ರಗಳನ್ನೇ ‘ಕುಟುಂಬ’ವಾಗಿ ಪರಿಗಣಿಸುತ್ತ ಬಂದಿರುವ ಉರ್ಜಿತ್ ಪಟೇಲ್​ಗೆ ತಮ್ಮದೆನ್ನುವ ‘ಕುಟುಂಬ’ ಇಲ್ಲ; ಈಗಲೂ ಅವಿವಾಹಿತರಾಗಿದ್ದು, ಅಮ್ಮನೊಂದಿಗೆ ಮುಂಬೈಯಲ್ಲಿ ನೆಲೆಸಿದ್ದಾರೆಂಬುದು ಗಮನಿಸಬೇಕಾದ ಸಂಗತಿ.

(ಲೇಖಕರು ವಿಜಯವಾಣಿ ಮುಖ್ಯ ಉಪಸಂಪಾದಕರು)

[ಪ್ರತಿಕ್ರಿಯಿಸಿ: [email protected], [email protected]]

Leave a Reply

Your email address will not be published. Required fields are marked *