ಉರಿ ಬೊಕ್ಕಸಕ್ಕೆ 100 ಕೋಟಿ ರೂ.!

ನಟ ವಿಕ್ಕಿ ಕೌಶಾಲ್ ಅಭಿನಯದ ‘ಉರಿ; ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರ ಸದ್ದಿಲ್ಲದೆ ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ಗಳಿಕೆ ಮಾಡಿದೆ. ಜ.11ಕ್ಕೆ ಬಿಡುಗಡೆಯಾಗಿದ್ದ ಈ ಚಿತ್ರ ಕೇವಲ 10 ದಿನದಲ್ಲಿ 100 ಕೋಟಿ ಕ್ಲಬ್ ಸೇರಿಕೊಂಡು, ಕಥೆ ಚೆನ್ನಾಗಿದ್ದರೆ ಸ್ಟಾರ್​ಗಳ ಅವಶ್ಯಕತೆ ಇಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಬಿಡುಗಡೆಯಾದ ಮೊದಲ ದಿನ 8 ಕೋಟಿ ರೂ. ಕಮಾಯಿ ಮಾಡಿದ್ದ ‘ಉರಿ..’, ನಂತರದ ದಿನಗಳಲ್ಲಿ ಎಲ್ಲರ ಮೆಚ್ಚುಗೆ ಗಿಟ್ಟಿಸಿಕೊಂಡಿತು. ಐದು ದಿನಕ್ಕೆ 50 ಕೋಟಿ ರೂ, 8 ದಿನಕ್ಕೆ 75 ಕೋಟಿ ರೂ., ಇದೀಗ 11 ದಿನಕ್ಕೆ 115.87 ಕೋಟಿ ರೂ.ಗೆ ಬಂದು ತಲುಪಿದೆ. 2019ರ ಮೊದಲ ಶತಕೋಟಿ ಸಿನಿಮಾ ಎಂಬ ಖ್ಯಾತಿ ಗಿಟ್ಟಿಸಿಕೊಂಡಿದ್ದಲ್ಲದೆ, ವರ್ಷದ ಮೊದಲ ಬ್ಲಾಕ್​ಬಸ್ಟರ್ ಚಿತ್ರವಾಗಿದೆ. ಸ್ಟಾರ್​ಗಿರಿ ನೆಚ್ಚಿಕೊಳ್ಳದೆ, ಕಂಟೆಂಟ್ ಮೂಲಕವೇ ಎಲ್ಲರನ್ನೂ ಸೆಳೆದ ‘ಉರಿ..’ ಚಿತ್ರ ನಟ ವಿಕ್ಕಿ ಕೌಶಲ್​ಗೂ ದೊಡ್ಡ ಬ್ರೇಕ್ ನೀಡಿದೆ. 2016ರ ಸರ್ಜಿಕಲ್ ಸ್ಟ್ರೈಕ್ ವಿವರಗಳನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ದೇಶನ ಮಾಡಿದ್ದ ಆದಿತ್ಯ ಧಾರ್ ಕೆಲಸಕ್ಕೂ ಎಲ್ಲೆಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಸದ್ಯ ಗಳಿಕೆಯ ಓಟ ಮುಂದುವರಿಸಿರುವ ‘ಉರಿ..’ ಚಿತ್ರ, ಇನ್ನು ಕೆಲ ದಿನಗಳಲ್ಲಿ 150 ಕೋಟಿ ರೂ. ಗಳಿಕೆ ಮಾಡಲಿದೆ ಎಂಬುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. 40 ಕೋಟಿ ರೂ. ಬಜೆಟ್​ನಲ್ಲಿ ಈ ಸಿನಿಮಾ ನಿರ್ವಣಗೊಂಡಿತ್ತು. ಇನ್ನು, ಈ ಚಿತ್ರವನ್ನು ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿಯೂ ನಿರ್ಮಾಣ ಮಾಡುವ ಕುರಿತು ಮಾತುಕತೆ ಜಾರಿಯಲ್ಲಿವೆ. -ಏಜೆನ್ಸೀಸ್