ಅರ್ಬನ್​ ನಕ್ಸಲರಿಗೆ ಕಾಂಗ್ರೆಸ್​ ಬೆಂಬಲ: ಪ್ರಧಾನಿ ಮೋದಿ ಆರೋಪ

ನವದೆಹಲಿ: ಅರ್ಬನ್​ ನಕ್ಸಲರಿಗೆ ಕಾಂಗ್ರೆಸ್​ ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆರೋಪಿಸಿದರು.
ಛತ್ತೀಸ್​ಗಢದಲ್ಲಿ ಮುಂದಿನ ವಾರ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಬಾಸ್ಟರ್​ನ ಜಗ್ದಲ್​ಪುರದಲ್ಲಿ ಆಯೋಜಿಸಿದ್ದ ಮೊದಲ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಅರ್ಬನ್ ​ನಕ್ಸಲರು ಸಾಮಾನ್ಯ ಜನರ ಮಧ್ಯವೇ ಇದ್ದುಕೊಂಡು ಅವರ ಜೀವನ ಹಾಳು ಮಾಡುತ್ತಾರೆ. ಬಡ ಬುಡಕಟ್ಟು ಜನಾಂಗದವರನ್ನು ಸರ್ಕಾರದ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ ಎಂದು ಹೇಳಿದರು.

ಅರ್ಬನ್​ ನಕ್ಸಲರು ಎಸಿ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ವಿದೇಶದಲ್ಲಿ ಅಧ್ಯಯನ ಮಾಡಿದವರು. ಐಷಾರಾಮಿ ಕಾರುಗಳಲ್ಲಿ ಎಲ್ಲ ಕಡೆ ಸುತ್ತುತ್ತಾರೆ. ಆದರೆ, ಬುಡಕಟ್ಟು, ಸಾಮಾನ್ಯ ಯುವಕರ ಜೀವನ ನಾಶ ಮಾಡುತ್ತಿದ್ದಾರೆ. ಅಂಥವರಿಗೆ ಕಾಂಗ್ರೆಸ್​ ಬೆಂಬಲ ನೀಡುತ್ತಿದೆ ಎಂದು ದಶಕಗಳಿಂದ ನಕ್ಸಲ್​ ಚಟುವಟಿಕೆಗಳ ಮುಖ್ಯಕೇಂದ್ರವಾದ ಛತ್ತೀಸ್​ಗಢದಲ್ಲಿ ಸಾರ್ವಜನಿಕ ಸಭೆಯಲ್ಲೇ ಹೇಳಿದರು.
ನಕ್ಸಲರು ಪೈಶಾಚಿಕ ಮನಸು ಹೊಂದಿದ ರಾಕ್ಷಸರು ಎಂದು ಹೇಳಿದ ಮೋದಿ, ನಕ್ಸಲ್​ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸುತ್ತದೆ. ಛತ್ತೀಸ್​ಗಢ ನಕ್ಸಲರ ಕಾರಣದಿಂದ ತುಂಬ ಹಿಂದೆ ಉಳಿಯುತ್ತಿದ್ದು ಇಲ್ಲಿನ ಜನರಿಗೆ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಛತ್ತೀಸ್​ಗಢಕ್ಕೆ 18 ವರ್ಷ ತುಂಬಿತು. ಮಕ್ಕಳಿಗೆ 18 ವರ್ಷ ತುಂಬುತ್ತಿದ್ದಂತೆ ಪಾಲಕರು ಅವರ ಭವಿಷ್ಯಕ್ಕಾಗಿ ಹೆಚ್ಚಿನ ಹಣ ನೀಡುತ್ತಾರೆ. ಈಗ 18 ವರ್ಷಕ್ಕೆ ಕಾಲಿಟ್ಟ ಛತ್ತೀಸ್​ಗಢದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಇಲ್ಲಿನ ನಕ್ಸಲ್​ ಪೀಡಿತ ಬಸ್ಟರ್​ ಪ್ರದೇಶಕ್ಕಾಗಿ ಹಿಂದೆ ಇದ್ದ ಯುಪಿಎ ಸರ್ಕಾರ ಏನೂ ಮಾಡಿಲ್ಲ. ನನಗೆ ನಂಬಿಕೆ ಇದೆ ಖಂಡಿತ ಇಲ್ಲಿನ ಜನ ಬಿಜೆಪಿಗೆ ಅಧಿಕಾರ ಕೊಡುತ್ತಾರೆಂದು. ಬಾಸ್ಟರ್​ನಲ್ಲಿ ಬಿಜೆಪಿ ಎಲ್ಲ ಸೀಟ್​ಗಳಲ್ಲೂ ಗೆಲುವು ಸಾಧಿಸುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.