ನವದೆಹಲಿ: ನಗರ ಸಹಕಾರಿ ಬ್ಯಾಂಕುಗಳಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ 1,000ದ ಹತ್ತಿ ವಂಚನೆ ಪ್ರಕರಣಗಳು ನಡೆದಿದ್ದು, 220 ಕೋಟಿ ರೂಪಾಯಿಗೂ ಅಧಿಕ ವಂಚನೆ ಆಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆರ್ಟಿಐ ಅರ್ಜಿಗೆ ಉತ್ತರಿಸುತ್ತ ಈ ವಿವರ ಬಹಿರಂಗಪಡಿಸಿದೆ. 2018-19ರ ಅವಧಿಯಲ್ಲಿ 181 ವಂಚನೆ ಪ್ರಕರಣ ದಾಖಲಾಗಿದ್ದು, 127.7 ಕೋಟಿ ರೂಪಾಯಿ ಮೌಲ್ಯದ ವಂಚನೆ ಆಗಿದೆ. 2017-18ರಲ್ಲಿ 99 ಪ್ರಕರಣಗಳಲ್ಲಿ 46.9 ಕೋಟಿ ರೂಪಾಯಿ ಮತ್ತು 2016-17ರಲ್ಲಿ 27 ಪ್ರಕರಣಗಳಲ್ಲಿ 9.3 ಕೋಟಿ ರೂಪಾಯಿ ವಂಚನೆ ನಡೆದಿದೆ.
ಇದಕ್ಕೂ ಮುನ್ನ, 2015-16ರಲ್ಲಿ 187 ಪ್ರಕರಣಗಳಾಗಿದ್ದು, 17.3 ಕೋಟಿ ರೂಪಾಯಿ, 2014-15ರಲ್ಲಿ 478 ಕೇಸ್ಗಳ ಮೂಲಕ 19.8 ಕೋಟಿ ರೂಪಾಯಿ ವಂಚನೆಯಾಗಿದೆ. ಹೀಗೆ 2014-15ರಿಂದ 2018-19ರ ಐದು ಹಣಕಾಸು ವರ್ಷದ ಅವಧಿಯಲ್ಲಿ ಒಟ್ಟು 972 ಕೇಸ್ಗಳ ಮೂಲಕ ನಗರ ಸಹಾರಿ ಬ್ಯಾಂಕ್ಗಳಿಗೆ 221 ಕೋಟಿ ರೂಪಾಯಿ ವಂಚನೆ ಆಗಿದೆ.
ದೇಶಾದ್ಯಂತ 1,544 ನಗರ ಸಹಕಾರಿ ಬ್ಯಾಂಕುಗಳಿದ್ದು, 2019ರ ಮಾರ್ಚ್ 31 ಅಂಕಿ ಅಂಶ ಪ್ರಕಾರ 4.84 ಲಕ್ಷ ಕೋಟಿ ರೂಪಾಯಿ ಠೇವಣಿ ಹೊಂದಿವೆ.ಈ ಪೈಕಿ ಮಹಾರಾಷ್ಟ್ರದ 496 ಬ್ಯಾಂಕುಗಳಲ್ಲಿ 3 ಲಕ್ಷ ಕೋಟಿಗೂ ಅಧಿಕ ಠೇವಣಿ ಇದೆ. ಗುಜರಾತ್ನ 219 ಬ್ಯಾಂಕುಗಳಲ್ಲಿ 55,102 ಕೋಟಿ ರೂಪಾಯಿ, ಕರ್ನಾಟಕದ 263 ಬ್ಯಾಂಕುಗಳಲ್ಲಿ 41,096 ಕೋಟಿ ರೂಪಾಯಿ ಠೇವಣಿ ಇದೆ. (ಏಜೆನ್ಸೀಸ್)