ಯುಪಿಎಸ್​ಸಿ ಗುರಿ ಇರಲಿ ಬ್ಯಾಕ್​ಅಪ್ ಜತೆಗಿರಲಿ

‘ಯುಪಿಎಸ್​ಸಿ ಪರೀಕ್ಷೆಯನ್ನು ಸುಮಾರು 10 ಲಕ್ಷ ಜನ ಬರೀತಾರೆ. ಅವರಲ್ಲಿ ಶೇ.0.1 ರಷ್ಟು ಮಂದಿ ಯಶಸ್ವಿಯಾಗ್ತಾರೆ. ಉಳಿದ ಶೇ. 99.9ರಷ್ಟು ಜನ ಬುದ್ಧಿವಂತರಿದ್ರೂ, ಎಷ್ಟೇ ಅರ್ಹರಿದ್ರೂ ಆಯ್ಕೆಯಾಗೋದಿಲ್ಲ. ಏಕೆಂದರೆ, ಇಲ್ಲಿ ಅಷ್ಟರಮಟ್ಟಿಗಿನ ಸ್ಪರ್ಧೆ ಇರುತ್ತೆ. ಹೀಗಾಗಿ, ಅಕಸ್ಮಾತ್ ಇಲ್ಲಿ ಯಶಸ್ವಿಯಾಗದಿದ್ದರೆ ಬದುಕಿಗೆ ಏನು ಎಂದು ಯೋಚಿಸಿಕೊಂಡೇ ಮುನ್ನಡೆಯಬೇಕು. ಬಿಎ ಮಾಡಿಕೊಂಡು ಯುಪಿಎಸ್​ಸಿ ಪರೀಕ್ಷೆ ಬರೆಯೋಣ ಎಂದು ನಿರ್ಧರಿಸಿದರೆ, ಅದು ಆಗದಿದ್ದಾಗ ಏನು ಮಾಡ್ಬೇಕು ಅಂತ ಸ್ಪಷ್ಟತೆ ಇರಬೇಕು. ಹೀಗಾಗಿ, ಬ್ಯಾಕಪ್ ಚೆನ್ನಾಗಿರಲಿ. ಯುಪಿಎಸ್​ಸಿ ಆಗದಿದ್ದರೂ ಇನ್ನೊಂದು ವೃತ್ತಿ ಅಥವಾ ಉತ್ತಮವಾದ ಬದುಕನ್ನು ಕಟ್ಟಿಕೊಳ್ಳಬಹುದಾದಂಥ ಶೈಕ್ಷಣಿಕ ಅರ್ಹತೆ ಹೊಂದಿರಬೇಕು. ಜೀವನವಿಡೀ ಕುಳಿತು ತಿನ್ನಬಹುದಾದಷ್ಟು ಆರ್ಥಿಕ ಸೌಲಭ್ಯ ಇರೋರು ಏನು ಬೇಕಿದ್ರೂ ಮಾಡ್ಬೋದು. ಆದ್ರೆ, ಬದುಕಿಗೆ ಆರ್ಥಿಕ ಬೆಂಬಲ ಬೇಕೇ ಬೇಕು ಅನ್ನೋರು ಇದನ್ನು ಗಮನದಲ್ಲಿ ಇಟ್ಕೊಳ್ಳೋದು ಮುಖ್ಯ. ಅಲ್ಲದೆ, ಇಂಥ ಶಿಕ್ಷಣ ಅಥವಾ ವೃತ್ತಿಯ ಬ್ಯಾಕ್​ಅಪ್ ಇದ್ದಾಗ ನಮ್ಮಲ್ಲಿರುವ ಕಾನ್ಪಿಡೆನ್ಸ್ ಲೆವಲ್ಲೇ ಬೇರೆ ಇರುತ್ತೆ. ಆದರೆ, ಯುಪಿಎಸ್​ಸಿಯಿಂದಲೇ ಬದುಕು ಆಗ್ಬೇಕು ಅಂತಾದಾಗ ಉದ್ವೇಗ, ಒತ್ತಡಕ್ಕೆ ಒಳಗಾಗಬಹ್ದು. ಹೀಗಾಗಿ, ಇದು ಸಹ ಯಶಸ್ವಿ ಆಗೋಕೆ ಕೊಡುಗೆ ನೀಡುತ್ತೆ’ ಎನ್ನುವ ಕಿವಿಮಾತು ಬಂದಿದ್ದು ಯುಪಿಎಸ್​ಸಿ ಸಾಧಕರಿಂದ.

ವಿಜಯವಾಣಿ ಮಂಗಳವಾರ ಹಮ್ಮಿಕೊಂಡಿದ್ದ ಫೋನ್​ಇನ್ ಕಾರ್ಯಕ್ರಮದಲ್ಲಿ 2017ರ ಯುಪಿಎಸ್​ಸಿ ಪರೀಕ್ಷೆ ಪಾಸಾಗಿರುವ ನಾಲ್ವರು ಸಾಧಕರು ಪಾಲ್ಗೊಂಡು ರಾಜ್ಯದ ಮೂಲೆಮೂಲೆಯ ಆಕಾಂಕ್ಷಿಗಳಿಗೆ ಹಲವಾರು ರೀತಿಯಲ್ಲಿ ಮಾರ್ಗದರ್ಶನ ಮಾಡಿದರು. ಪ್ರಿಲಿಮ್್ಸ ಸಿದ್ಧತೆಯಿಂದ ಹಿಡಿದು, ಮೇನ್ಸ್ ಪರೀಕ್ಷೆ, ಸಂದರ್ಶನವನ್ನು ಎದುರಿಸುವುದು ಹೇಗೆ ಎಂಬುವವರೆಗೆ ಮಾಹಿತಿ ನೀಡಿದರು.

ಯುಪಿಎಸ್​ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ರಾಜ್ಯದ ನಾಲ್ವರು ಸಾಧಕರೊಂದಿಗೆ ಫೋನ್ ಇನ್ ಏರ್ಪಡಿಸುವ ಪುಟ್ಟದೊಂದು ಜಾಹೀರಾತು ಹೊರಬಿದ್ದಿದ್ದೇ ತಡ, ಸೋಮವಾರದಿಂದಲೇ ಎಡೆಬಿಡದೆ ಕರೆಗಳು ಬರಲಾರಂಭಿಸಿದ್ದವು. ‘ಇವತ್ತಲ್ಲ, ನಾಳೆ’ ಎನ್ನುವ ಉತ್ತರ ಪಡೆದವರು ಮಂಗಳವಾರ ಬೆಳಗಿನಿಂದಲೇ ಮತ್ತೆ ಕರೆ ಮಾಡಲು ಆರಂಭಿಸಿದ್ದರು. ಆಗಲೂ ‘ಹನ್ನೊಂದು ಗಂಟೆ ಬಳಿಕ ಮಾಡಿ’ ಎಂದು ಹೇಳಬೇಕಾದ ಅನಿವಾರ್ಯತೆ. ದೇಶದ ಅತ್ಯುನ್ನತ ಸೇವೆಗೆ ಸೇರುವ ಆಕಾಂಕ್ಷಿಗಳು ಈಗಾಗಲೇ ಆ ಸಾಧನೆ ಮಾಡಿ, ಕನಸನ್ನು ನನಸು ಮಾಡಿಕೊಳ್ಳುತ್ತಿರುವ ಸಾಧಕರೊಂದಿಗೆ ಮಾತನಾಡಲು ತೀವ್ರ ಉತ್ಸಾಹಿತರಾಗಿದ್ದರು.

ಈಗ ತಾನೇ ಎಸ್​ಎಸ್​ಎಲ್​ಸಿ ಬರೆದವರು, ಪಿಯುಸಿ ಪೂರೈಸಿದವರು ಕೂಡಾ ಕರೆ ಮಾಡಿದ್ದುದು ಈ ಬಾರಿಯ ಫೋನ್ ಇನ್ ಕಾರ್ಯಕ್ರಮದ ವಿಶೇಷ. ಬಹುತೇಕ ಪ್ರಶ್ನೆಗಳು ‘ಹೇಗೆ ಪ್ರಿಪೇರ್ ಆಗಬೇಕು? ಯಾವ ಡಿಗ್ರಿ ಓದಿದರೆ ಅನುಕೂಲ? ಯಾವ ಬುಕ್ಸ್ ಓದಬೇಕು?, ಕನ್ನಡ ಮೀಡಿಯಂನವರಿಗೆ ಕಷ್ಟ ಆಗುತ್ತಾ?’ ಎನ್ನುವ ಕುರಿತಾಗಿಯೇ ಇದ್ದವು. ಯುಪಿಎಸ್​ಸಿ ಪರೀಕ್ಷೆ ಬರೆಯಲು ಯಾವ ಶಿಕ್ಷಣ ಪೂರೈಸಿರಬೇಕು ಎನ್ನುವ ಕನಿಷ್ಠ ಮಾಹಿತಿಯೂ ಇಲ್ಲದೆ ಕರೆ ಮಾಡಿದವರಿದ್ದರು. ಇನ್ನು, ಸಿದ್ಧತೆ ಆರಂಭಿಸಬೇಕು ಎನ್ನುವ ಹಂತದಲ್ಲಿರುವ ಬಹಳಷ್ಟು ಮಂದಿ ಪರೀಕ್ಷಾ ವಿಧಾನದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಪಡೆಯಲೆಂದೇ ಕರೆ ಮಾಡಿದ್ದರು. ಬರುವ ಜೂನ್ 20ಕ್ಕೆ ಪ್ರಿಲಿಮ್್ಸ ಪರೀಕ್ಷೆ ನಡೆಯಲಿದ್ದು, ಇರುವಷ್ಟು ದಿನಗಳಲ್ಲಿಯೇ ಹೇಗೆ ಸಿದ್ಧತೆ ನಡೆಸಬೇಕು ಎನ್ನುವ ಪ್ರಶ್ನೆಗಳೂ ಎದುರಾದವು.

ಹೆಚ್ಚಿನವರು ‘ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು’ ಎಂದು ಆತಂಕಪಡುವ ಜತೆಗೆ ‘ಕನ್ನಡದಲ್ಲಿಯೇ ಪರೀಕ್ಷೆ ಬರೆಯಬಹುದಾ?’ ಎಂದೂ ವಿಚಾರಿಸಿದರು. ಯುಪಿಎಸ್​ಸಿಯಂಥ ಪ್ರಮುಖ ಪರೀಕ್ಷೆಗೆ ಸಿದ್ಧತೆ ನಡೆಸುವಾಗ ‘ಟೈಮ್ೇಬಲ್ ಹಾಕಿಕೊಂಡು ಹೇಗೆ ಓದ್ತಾರೆ? ಹೇಗೆ ಟೈಂ ಅಡ್ಜಸ್ಟ್ ಮಾಡ್ಕೋತಾರೆ ಅಂತಾನೇ ಗೊತ್ತಾಗಲ್ಲ’ ಎನ್ನುವ ಅಚ್ಚರಿಬೆರೆತ ಉದ್ಗಾರಗಳು ಮೂಡಿದವು. ‘ಓದಿದ್ದನ್ನು ನೆನಪು ಇಟ್ಟುಕೊಳ್ಳೋದು ಹೇಗೆ?’ ಎಂಬ ಸವಾಲೂ ಎದುರಾಯಿತು. ವಿಜಯವಾಣಿ ಫೋನ್ ಇನ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲ ಸಾಧಕರು ಇವೆಲ್ಲ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ನೀಡಿದರು, ಅರಿಯದವರಿಗೆ ಮಾರ್ಗದರ್ಶನ ಮಾಡಿದರು. ಕನ್ನಡದಲ್ಲಿಯೇ ಓದಲು, ಬರೆಯಲು ಸಾಧ್ಯ ಎಂದು ಧೈರ್ಯ ತುಂಬಿದರು. ಇಂಗ್ಲಿಷ್ ಬರೋದೇ ಇಲ್ಲ ಎನ್ನುವ ಆತಂಕ ಹೊಂದಿದವರಿಗೆ ಬೇಸಿಕ್ ಇಂಗ್ಲಿಷ್ ಸುಧಾರಿಸಿಕೊಳ್ಳಲು ಟಿಪ್ಸ್ ನೀಡಿದರು. ಸಾಧಕರೊಂದಿಗೆ ಮಾತನಾಡಲು ರಾಜ್ಯದ ಮೂಲೆಮೂಲೆಗಳಿಂದ ಆಕಾಂಕ್ಷಿಗಳು ಕರೆ ಮಾಡಿದ್ದುದರ ಜತೆಗೆ, ಉತ್ತರ ಕರ್ನಾಟಕ ಭಾಗದ ಕರೆಗಳು ಹೆಚ್ಚು ಬಂದಿದ್ದು ವಿಶೇಷ.

ಮಗಳು ಇಂಜಿನಿಯರಿಂಗ್ ಮಾಡುತ್ತಿದ್ದಾಳೆ. ಸಾಮಾನ್ಯ ಜ್ಞಾನಕ್ಕಾಗಿ ಯಾವ ಪುಸ್ತಕ ಓದಬೇಕು ಹಾಗೂ ತರಬೇತಿ ಕೇಂದ್ರದ ಆಯ್ಕೆ ಹೇಗೆ?

-ಸುಮಂಗಲಾ ಯಲ್ಲಾಪುರ

ಉತ್ತಮ ಪೂರ್ವಸಿದ್ಧತೆಯಿದ್ದರೆ ಕೋಚಿಂಗ್ ಅಗತ್ಯವಿಲ್ಲ. ಒಂದು ವೇಳೆ ಕೋಚಿಂಗ್ ಬೇಕೇಬೇಕು ಎಂದಿದ್ದರೆ ತಮ್ಮ ಆರ್ಥಿಕ ಪರಿಸ್ಥಿತಿ ಆಧಾರದ ಮೇಲೆ ಕೋಚಿಂಗ್ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಬೆಂಗಳೂರಿನಲ್ಲಿ ಶ್ರೇಷ್ಠ ಕೋಚಿಂಗ್ ಸೆಂಟರ್​ನಲ್ಲಿ ತರಬೇತಿ ಪಡೆಯಬಹುದು. ಆದರೆ, ಕಠಿಣ ಪರಿಶ್ರಮವಿಲ್ಲದೆ ಏನೂ ಸಾಧ್ಯವಿಲ್ಲ. ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳಿಂದ ಕೂಡ ಮಾಹಿತಿ ಪಡೆದುಕೊಳ್ಳಬಹುದು. ಇನ್ನು ಆರಂಭದಲ್ಲಿ ಯುಪಿಎಸ್​ಸಿ ಪರೀಕ್ಷೆಯ ಬಗ್ಗೆ ಮಾಹಿತಿ, ಸಮೂಹ ಅಧ್ಯಯನಕ್ಕೆ ಕೂಡ ಕೋಚಿಂಗ್ ಪಡೆದುಕೊಳ್ಳಬಹುದು. ನಿತ್ಯವೂ ಪತ್ರಿಕೆ ಓದಬೇಕು, ಸರ್ಕಾರಿ ಯೋಜನೆಗಳ ಬಗ್ಗೆ ಅರಿವಿರಬೇಕು ಮತ್ತು ಕಳೆದ ನಾಲ್ಕೈದು ವರ್ಷದ ಯುಪಿಎಸ್​ಸಿ ಪ್ರಶ್ನೆ ಪತ್ರಿಕೆ ಅಧ್ಯಯನ ಮಾಡಿದರೆ ಸಾಮಾನ್ಯ ಜ್ಞಾನದ ಹಲವು ವಿಷಯ ಸಿಗುತ್ತದೆ. ಇನ್​ಸೈಟ್ಸ್ ಆನ್ ಇಂಡಿಯಾ ಡಾಟ್ ಕಾಮ್ (ಜ್ಞಿಠಜಿಜಜಠಿಠಟ್ಞಜ್ಞಿಛಜಿಚ.ಟಞ) ವೆಬ್​ಸೈಟ್​ನಲ್ಲಿ ಸಾಕಷ್ಟು ಮಾಹಿತಿ ಸಿಗುತ್ತದೆ.

ಮೇನ್ಸ್ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸ ಬೇಕಾದರೆ ತಯಾರಿ ಹೇಗಿರಬೇಕು?

-ಪ್ರಕಾಶ್ ಬಾಗಲಕೋಟೆ

ನಿಮ್ಮ ಅಧ್ಯಯನ ವಿಧಾನ ಹಾಗೂ ವಿಷಯವನ್ನು ಬರವಣಿಗೆ ಮೂಲಕ ಹೇಗೆ ಅರ್ಥೈಸುತ್ತೀರಿ ಎನ್ನುವ ಆಧಾರದಲ್ಲಿ ಅಂಕ ನಿರ್ಧಾರವಾಗುತ್ತದೆ. ಮೇನ್ಸ್​ನಲ್ಲಿ ಆಯ್ಕೆಗಿಂತ ಬರೆಯುವುದು ಹೆಚ್ಚಿರುತ್ತದೆ. ಪ್ರಿಲಿಮ್್ಸ ಹಾಗೂ ಮೇನ್ಸ್ ಎರಡಕ್ಕೂ ಒಟ್ಟಿಗೆ ತಯಾರಿ ನಡೆಸಬೇಕು. ಸ್ನಾತಕೋತ್ತರ ಪದವಿ ಪಡೆದರೆ ಇನ್ನಷ್ಟು ಉಪಯೋಗವಾಗುತ್ತದೆ. ಕಾಲೇಜು ವಿಷಯಗಳ ಓದಿನ ಜತೆಗೆ ಸಮಯದ ನಿರ್ವಹಣೆ ಬಹಳ ಅಗತ್ಯ.

ಬಿ.ಎಸ್ಸಿ ಪದವಿ ಅಭ್ಯಸಿಸುತ್ತಿದ್ದು ಈಗಿನಿಂದಲೇ ನಾಗರಿಕ ಸೇವಾ ಪರೀಕ್ಷೆಗೆ ಹೇಗೆ ತಯಾರಿ ಮಾಡಿಕೊಳ್ಳಬಹುದು?

-ಅಶ್ವಿನಿ ವಿಜಯಪುರ

ಎನ್​ಸಿಇಆರ್​ಟಿ ಪುಸ್ತಕವನ್ನು ಓದಲು ಆರಂಭಿಸುವ ಜತೆಗೆ ಪರೀಕ್ಷಾ ರಚನೆ ಬಗ್ಗೆ ಪ್ರಾಥಮಿಕವಾಗಿ ತಿಳಿದುಕೊಳ್ಳಬೇಕು. ಎಲ್ಲ ವಿಷಯದ ಬಗ್ಗೆ ಓದಿ, ಒಂದು ವಿಷಯದ ಮೇಲೆ ವಿಶೇಷವಾದ ಅಧ್ಯಯನ ನಡೆಸಿ, ಅದರಲ್ಲಿ ಪ್ರೌಢಿಮೆ ಪಡೆದುಕೊಳ್ಳಬೇಕು. ಒಂದಕ್ಕೊಂದು ಆಂತರಿಕ ಸಂಬಂಧ ಕಲ್ಪಿಸುವ ಕಲೆ ಬೆಳೆಸಿಕೊಳ್ಳಬೇಕು.

ಬಿ.ಕಾಂ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಯುಪಿಎಸ್​ಸಿಗೆ ಯಾವ ವಿಷಯ ಆಯ್ಕೆ ಮಾಡಿಕೊಂಡರೆ ಸುಲಭವಾಗಿ ಯಶಸ್ಸು ಸಾಧ್ಯ?

-ಸಿದ್ದು ಬೆಳಗಾವಿ

ಐಚ್ಛಿಕ ವಿಷಯದಲ್ಲಿ ಯಾವುದು ಲಭ್ಯವಿದೆ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಯುಪಿಎಸ್​ಸಿ ವೆಬ್​ಸೈಟ್​ಗೆ ಭೇಟಿ ನೀಡಿದರೆ ಸಂಪೂರ್ಣ ವಿವರ ಲಭ್ಯವಾಗುತ್ತದೆ. ಅಷ್ಟಕ್ಕೂ ಮೊದಲು ಗ್ರೌಂಡ್ ವರ್ಕ್ ಮಾಡಬೇಕಾಗುತ್ತದೆ. ಪದವಿಯಲ್ಲಿ ಯಾವ ವಿಷಯದಲ್ಲಿ ವ್ಯಾಸಂಗ ಮಾಡಿದ್ದೀರಿ ಎಂಬುದರ ಆಧಾರದ ಮೇಲೆ ನಿಮ್ಮ ಐಚ್ಛಿಕ ವಿಷಯ ಆಯ್ಕೆ ಮಾಡಿಕೊಳ್ಳುವುದು ಸೂಕ್ತ.

ಐಚ್ಛಿಕ ವಿಷಯದ ಆಯ್ಕೆ ಹೇಗಿರಬೇಕು? ಪದ ಮಿತಿಗೆ ಅನುಗುಣವಾಗಿಯೇ ಪರೀಕ್ಷೆ ಬರೆಯಬೇಕೆ?

-ಶ್ರೇಯಾ ವಿಜಯಪುರ

ಕನ್ನಡ, ಭೂಗೋಳಶಾಸ್ತ್ರ ಅಥವಾ ಸಾರ್ವಜನಿಕ ಆಡಳಿತ ವಿಷಯವನ್ನು ತೆಗೆದುಕೊಂಡು ಉತ್ತಮ ಅಂಕ ಗಳಿಸಬಹುದು. ನಿಮಗಿಷ್ಟವಾದ ಯಾವ ವಿಷಯವನ್ನಾದರೂ ಆಯ್ಕೆ ಮಾಡಿಕೊಳ್ಳಿ. ಸಾಮಾನ್ಯವಾಗಿ ಪದವಿ ಒಳಗಿನ ವಿಷಯಕ್ಕೆ ಸಂಬಂಧಿಸಿ ಪ್ರಶ್ನೆಗಳು ಯುಪಿಎಸ್​ಸಿ ಪರೀಕ್ಷೆಯಲ್ಲಿ ಬರುತ್ತವೆ. ಇನ್ನು 150 ಪದ ಇರಬೇಕೆಂಬ ನಿಯಮವಿಲ್ಲ. ಸುಮಾರು 30 ಪದ ಹೆಚ್ಚು ಕಡಿಮೆ ಆದರೆ ಅಂತಹ ವ್ಯತ್ಯಾಸ ಆಗಲಾರದು. ಆದರೆ, ನೀವು ಹೇಳಬೇಕಾದ ವಿಷಯ ಆ ಪದಮಿತಿಯಲ್ಲಿ ಒಳಪಟ್ಟಿರಬೇಕು.

ಪ್ರಿಲಿಮ್ಸ್​ಗೆ ಇನ್ನು ಬೆರಳಣಿಕೆಯಷ್ಟು ದಿನ ಮಾತ್ರವಿದೆ. ಈ ಅಲ್ಪಾವಧಿಯಲ್ಲಿ ತಯಾರಿ ಹೇಗಿರಬೇಕು?

-ದರ್ಶನ್ ಭದ್ರಾವತಿ

ವೇಗವಾಗಿ ಬರೆಯುವುದನ್ನು ಅಭ್ಯಾಸ ಮಾಡಿ. ಟಾರ್ಗೆಟ್ ಇಟ್ಟುಕೊಂಡು, ನಿಗದಿತ ಸಮಯದೊಳಗೆ ಬರವಣಿೆಗೆಯ ಮೂಲಕ ಅದನ್ನು ತಲುಪಲು ಪ್ರಯತ್ನಿಸಿ. ಸಮಯದ ನಿರ್ವಹಣೆ ಬಹಳ ಮುಖ್ಯವಾಗುತ್ತದೆ. ನಿಮ್ಮ ದೌರ್ಬಲ್ಯ ಏನು ಮತ್ತು ಯಾವ ವಿಷಯದಲ್ಲಿ ನೀವು ಹಿಂದೆ ಇದ್ದೀರಿ ಎಂಬುದನ್ನು ಪುನರ್​ವುನನ ಮಾಡಿಕೊಳ್ಳಿ. ಆ ಎರಡೂ ವಿಷಯದಲ್ಲಿ ದಿನೇ ದಿನೆ ಪ್ರೌಢಿಮೆ ಸಾಧಿಸಲು ಪ್ರಯತ್ನಿಸಿ. ಬೆಂಗಳೂರಿನ ವಿಜಯನಗರದಲ್ಲಿರುವ ವಿಷನರಿ ಝೆರಾಕ್ಸ್ ಸೆಂಟರ್​ನಲ್ಲಿ ಪರಿಕರ ಸಿಗುತ್ತದೆ. ವಿಷನ್ ಟೆಸ್ಟ್ ಸಿರಿಸ್ ಕೈಗೆತ್ತಿಕೊಂಡು ಪ್ರಯತ್ನಿಸಿ.

ಯುಪಿಎಸ್​ಸಿ ಪಠ್ಯಕ್ರಮವನ್ನು ಸುಲಭವಾಗಿ ನೆನಪಿನಲ್ಲಿ ಇಟ್ಟುಕೊಳ್ಳಲು ಏನು ಮಾಡಬೇಕು?

-ದುರ್ಗಾಪ್ರಸಾದ್ ಕೊಳ್ಳೆಗಾಲ

ಪಠ್ಯಕ್ರಮವನ್ನು ಚಿಕ್ಕದಾಗಿ ವಿಂಗಡಿಸಿಕೊಂಡು ಅಧ್ಯಯನ ಮಾಡಿ. ಆಗಾಗ ಮೆಲಕು ಹಾಕುವುದರಿಂದ ನೆನಪಿನಲ್ಲಿಟ್ಟುಕೊಳ್ಳುವುದು ಸಾಧ್ಯ. ಉಳಿದಂತೆ ನಿರಂತರ ಅಧ್ಯಯನವೊಂದೆ ಪರಿಹಾರ.

ವೈಯಕ್ತಿಕ ಸಂದರ್ಶನ ಯಾವ ರೀತಿ ಇರುತ್ತದೆ? ಏನೆಲ್ಲ ಸವಾಲನ್ನು ಎದುರಿಸಬೇಕು?

-ಶ್ರೀಧರ್ ಮೈಸೂರು

ಸಂದರ್ಶನಕ್ಕೆ ಹೋಗುವ ಮೊದಲು ಸ್ವ ವಿವರದ ಪತ್ರ ನೀಡಲಾಗುತ್ತದೆ. ಇದರಲ್ಲಿ ಬಹುತೇಕ ಪ್ರಶ್ನೆ ನಿಮ್ಮ ಊರು, ನಿಮ್ಮ ಆಸಕ್ತಿ ಕ್ಷೇತ್ರ, ಹವ್ಯಾಸ ಸೇರಿದಂತೆ ಹಲವು ವಿಷಯದ ಬಗ್ಗೆ ಬರೆಯಬೇಕು. ಸಂದರ್ಶನದಲ್ಲಿ ಇದರ ಆಧಾರದ ಮೇಲೆಯೇ ಬಹುತೇಕ ಪ್ರಶ್ನೆ ಕೇಳಲಾಗುತ್ತದೆ. ಹೀಗಾಗಿ ನಿಮ್ಮಲ್ಲಿ ಯಾವುದೇ ರೀತಿಯ ಗೊಂದಲ ಇರಕೂಡದು. ಕೆಲವೊಂದು ಪ್ರಶ್ನೆ ಪಠ್ಯಕ್ರಮದ ಹೊರತಾಗಿ ಕೇಳುವ ಸಾಧ್ಯತೆ ಇರುತ್ತದೆ. ಎಲೆಕ್ಟ್ರಿಕ್ ಇಂಜಿನಿಯರಿಂಗ್ ಮೂಲದ ಅಭ್ಯರ್ಥಿಗೆ ಸಂದರ್ಶನ ಕೊಠಡಿಗೆ ಅವಶ್ಯಕವಾಗಿರುವ ಎಲೆಕ್ಟ್ರಿಕಲ್ ವೈಯರ್ ಎಷ್ಟು ಬೇಕಾಗಬಹುದು ಎಂದು ಕೂಡ ಕೇಳಬಹುದು. ಸಂದರ್ಶಕರ ಬಗ್ಗೆ ಕೂಡ ನಮಗೆ ಮಾಹಿತಿ ಇರುವುದಿಲ್ಲ. ಮಾತೃಭಾಷೆಯಲ್ಲಿಯೇ ಸಂದರ್ಶನ ಎದುರಿಸುವುದಾದರೆ ಅರ್ಜಿ ನಮೂನೆಯಲ್ಲಿ ನಮೂದಿಸಿರಬೇಕು. ಆಗ ಭಾಷಾಂತರಗಾರರು ಇರುತ್ತಾರೆ.

ನಾನು ಈಗಾಗಲೇ ಕೆಲಸದಲ್ಲಿದ್ದೇನೆ. ಹೀಗಾಗಿ ಅಭ್ಯಾಸದ ಸಮಯದ ವೇಳಾಪಟ್ಟಿ ಹೇಗಿರಬೇಕು? ಇತಿಹಾಸ ಉತ್ತಮ ಆಯ್ಕೆ ಆಗುತ್ತದೆಯೇ?

-ಸತೀಶ್ ಕೋಲಾರ

ಸಮಯವಿಲ್ಲ ಎಂದುಕೊಂಡರೆ ಸಾಧಿಸಲು ಸಾಧ್ಯವಿಲ್ಲ. ಉದ್ಯೋಗದ ಅವಧಿ ಮುಗಿದ ಬಳಿಕದ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಇತಿಹಾಸ ಆಯ್ಕೆ ಮಾಡಿಕೊಳ್ಳಬಹುದು. ಆದರೆ, ತುಂಬಾ ವಿಸ್ತಾರವಾಗಿರುವ ಕಾರಣ ಅಧ್ಯಯನಕ್ಕೆ ಸಾಕಷ್ಟು ಸಮಯ ಬೇಕು. ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿದ್ದರೆ ಆಯ್ದುಕೊಳ್ಳಿ.

ನಾನು ವಿಜ್ಞಾನ ವಿಷಯದಲ್ಲಿ ಪಿಯುಸಿ ಮುಗಿಸಿದ್ದೇನೆ. ಮುಂದೆ ಯಾವ ಪದವಿಯಲ್ಲಿ ವ್ಯಾಸಂಗ ಮಾಡಿದರೆ ಯುಪಿಎಸ್​ಸಿ ಪರೀಕ್ಷೆಗೆ ಅನುಕೂಲವಾಗಲಿದೆ?

-ದೀಪಾ ಬೆಳಗಾವಿ

ಯುಪಿಎಸ್​ಸಿ ಪರೀಕ್ಷೆ ತೆಗೆದುಕೊಳ್ಳಲು ಪದವಿ ಹೊಂದಿದ್ದರೆ ಸಾಕು. ನಮಗೆ ಇಷ್ಟವಾಗುವ ವಿಷಯ ನಿಮಗೆ ಇಷ್ಟವಾಗದೆ ಇರಬಹುದು. ಹೀಗಾಗಿ ಮೊದಲು ನಿಮ್ಮ ಮೆಚ್ಚಿನ ವಿಷಯ ಯಾವುದು ಎಂಬುದನ್ನು ನೀವೇ ಆಯ್ಕೆ ಮಾಡಿಕೊಂಡು ವ್ಯಾಸಂಗ ಮಾಡುವುದು ಉತ್ತಮ.

ನಾನು ಬಿ.ಕಾಂ ಮುಗಿಸಿದ್ದೇನೆ. ಯಾವ ಪುಸ್ತಕ ಓದುವುದು ಉತ್ತಮ?

-ಸುನೀಲ್ ಬೆಳಗಾವಿ

6ರಿಂದ 12ನೇ ತರಗತಿಯವರೆಗೆ ಎನ್​ಸಿಇಆರ್​ಟಿ ಪುಸ್ತಕಗಳನ್ನು ಓದಬೇಕು. ದಿನಪತ್ರಿಕೆಯನ್ನು ಹೆಚ್ಚು ಓದಬೇಕು. ಸುದ್ದಿ ವಾಹಿನಿಯಲ್ಲಿ ನಡೆಯಲಿರುವ ಚರ್ಚೆಗಳನ್ನು ನೋಡಬೇಕು. ಹಳೆಯ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲು ಪ್ರಯತ್ನಿಸಬೇಕು. ಪ್ರತಿನಿತ್ಯ ಕನಿಷ್ಠ 5-6 ತಾಸು ಓದಿದರೆ ಒಳ್ಳೆಯದು. ಶ್ರೀರಾಮ್ ನೋಟ್ಸ್ ಕೂಡ ಸಹಕಾರಿ.

ಬಿ.ಎ. ಓದುತ್ತಿದ್ದೇನೆ. ಮುಂದೆ ಪರೀಕ್ಷೆಯಲ್ಲಿ ಕಲಾ ನಿಕಾಯದ ವಿಷಯಗಳ ಬಗ್ಗೆ ಪ್ರಶ್ನೆಗಳು ಕೇಳಿರುತ್ತಾರೆಯೇ?

-ಅಜಿತ್ ಕ್ಯಾತಸಂದ್ರ

ಹೌದು. ಕಲಾ ನಿಕಾಯದ ವಿಷಯಗಳಲ್ಲೇ ಸಾಕಷ್ಟು ಪ್ರಶ್ನೆಗಳನ್ನು ಕೇಳಿರುತ್ತಾರೆ. ಇಷ್ಟು ಮಾತ್ರವಲ್ಲದೇ ಇನ್​ಸೈಟ್ಸ್ ಆನ್ ಇಂಡಿಯಾ ಮೂಲಕವೂ ಪರೀಕ್ಷೆ ಸಿದ್ಧತೆ ನಡೆಸಬಹುದು.

ನಾನು ಪಿಯು ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಪದವಿಯಲ್ಲಿ ಯಾವ ವಿಷಯ ತೆಗೆದುಕೊಳ್ಳುವುದು ಸೂಕ್ತ.?

-ವೈಷ್ಣವಿ ಬೆಂಗಳೂರು

ಯುಪಿಎಸ್​ಇ ಪರೀಕ್ಷೆಯ ಯಶಸ್ಸಿನ ಪ್ರಮಾಣ ಬಹಳ ಕಮ್ಮಿ ಇದೆ. 10 ಲಕ್ಷ ಜನ ಪರೀಕ್ಷೆ ಬರೆದರೆ ಆಯ್ಕೆಯಾಗುವುದೇ 1 ಸಾವಿರ ಜನ ಮಾತ್ರ. ಹೀಗಾಗಿ ಕೆಲಸ ಕೂಡ ಮುಖ್ಯ. ಮೊದಲು ಕೆಲಸದ ಕಡೆ ಗಮನ ನೀಡಿ. ಅದರ ಜತೆಗೆ ವ್ಯಾಸಂಗ ಮಾಡುವುದು ಮುಖ್ಯ.

ಸಮಗ್ರ ಆಂಗ್ಲ ಅಧ್ಯಯನ ನನಗೆ ಕಷ್ಟವಾಗುತ್ತಿದೆ. ಅದಕ್ಕೆ ಹೆಚ್ಚಿನ ಸಮಯ ವ್ಯರ್ಥವಾಗುತ್ತಿದೆ. ಪರೀಕ್ಷೆಯಲ್ಲಿ ಇರುವ ಸಮಯಾವಕಾಶದಲ್ಲಿ ಅದನ್ನು ಬರೆಯುವುದು ಹೇಗೆ, ಒತ್ತಡ ನಿಭಾಯಿಸುವುದು ಹೇಗೆ?

-ಪ್ರಭಾಕರ್ ಬಿಬಿಎಂಪಿ ಸಿಬ್ಬಂದಿ

ಮೊದಲು 40 ನಿಮಿಷದಲ್ಲಿ ನಿಮಗೆ ಸುಲಭವಾಗಿರುವ ಒಂದೊಂದೇ ವಿಷಯಗಳಿಗೆ ಉತ್ತರಿಸಿ ಪೂರ್ಣಗೊಳಿಸಿ. ಆಂಗ್ಲ ಮಾಧ್ಯಮದಲ್ಲಿ ಕಲಿತಿರುವವರಿಗೂ ಸಮಗ್ರ ಆಂಗ್ಲ ವಿಷಯ ಬಗ್ಗೆ ಕೆಲವು ಗೊಂದಲಗಳಿರುತ್ತವೆ. ಹಾಗಾಗಿ ನಂತರದ 45 ನಿಮಿಷವನ್ನು ಅದಕ್ಕೆ ಮೀಸಲಿಟ್ಟರೆ ಒತ್ತಡರಹಿತವಾಗಿ ನಿಭಾಯಿಸಬಹುದು. ಬೇಕಿರುವುದು 66 ಅಂಕ ಮೊದಲು ನಮಗೆ ಸುಲಭವಾಗಿರುವ ವಿಷಯಗಳಿಗೆ ಉತ್ತರಿಸಿ ಪೂರ್ಣಗೊಳಿಸಿದರೆ ನಂತರ ಭಯವಿರುವುದಿಲ್ಲ.

ನನ್ನ ಮಗ ನೀಟ್ ಬರೆದಿದ್ದಾನೆ. ಆತನಿಗೂ ಯುಪಿಎಸ್​ಸಿ ಮಾಡುವ ಆಸೆಯಿದೆ. ಈಗ ಆತ ಮೆಡಿಕಲ್​ಗೆ ತೆರಳಬೇಕೋ ಬಿಎಸ್​ಸಿಗೆ ತೆರಳಬೇಕೋ?

-ಡಿ.ಎಸ್.ಕೃಷ್ಣಮೂರ್ತಿ ಓದುಗ

ಯುಪಿಎಸ್​ಸಿ ಎದುರಿಸಲು ಇಂತಹದೇ ಪದವಿ ಇರಬೇಕೆಂದಿಲ್ಲ. ಆಸಕ್ತಿಯ ಪದವಿ ಆಯ್ಕೆ ಮಾಡಿಕೊಳ್ಳಬಹುದು. ವೈದ್ಯಕೀಯ ಶಿಕ್ಷಣ ಆಯ್ದುಕೊಂಡರೂ ಪ್ರತಿದಿನ ಯುಪಿಎಸ್​ಸಿ ಸಿದ್ಧತೆಗಾಗಿ 1 ಗಂಟೆ ಸಮಯ ಮೀಸಲಿಡುವುದು ಕಷ್ಟವಲ್ಲ. ಆದರೆ ಇಲ್ಲಿ 10 ಲಕ್ಷ ಜನ ಪರೀಕ್ಷೆ ಬರೆದರೂ ಆಯ್ಕೆಯಾಗುವವರ ಸಂಖ್ಯೆ ತೀರ ವಿರಳ. ಹೀಗಾಗಿ ಜೀವನ ನಿರ್ವಹಣೆಗಾಗಿ ಒಂದು ಉದ್ಯೋಗಾಧಾರಿತ ಪದವಿ ಇರುವುದು ಉತ್ತಮ. ಯುಪಿಎಸ್​ಸಿ ಸಾಧ್ಯವಾಗದಿದ್ದರೂ ಜೀವನ ಸಾಗಿಸಲು ಉದ್ಯೋಗ ಒದಗಿಸುವ ಪದವಿಯೊಂದು ಜತೆಗಿರಬೇಕು.


ನಿರ್ಧಾರ ಅಚಲವಾಗಿದ್ರೆ ಎಲ್ಲವೂ ಸಾಧ್ಯ

34 ವರ್ಷದ ಡಾ. ಟಿ. ಶುಭಮಂಗಳಾ ಹುಟ್ಟಿದ್ದು ಕುದುರೆಮುಖದಲ್ಲಿ. ತಂದೆ ಸಿ.ತಿರುಮಲಪ್ಪ ಕುದುರೆಮುಖ ಕಬ್ಬಿಣದ ಅದಿರು ಕಂಪನಿಯಲ್ಲಿ ಮೆಕಾನಿಕ್ ಆಗಿದ್ದರು. ಹೀಗಾಗಿ 12ನೇ ತರಗತಿವರೆಗೂ ಕುದುರೆಮುಖದ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಣ ಪೂರ್ಣಗೊಳಿಸಿದರು. 2001ರಲ್ಲಿ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಪಡೆದ ಇವರು ತಮ್ಮ ಬ್ಯಾಚ್​ನ ಟಾಪರ್ ಆಗಿ ಚಿನ್ನದ ಪದಕ ಪಡೆದಿದ್ದರು. 2010ರಲ್ಲಿ ಹುಬ್ಬಳ್ಳಿಯ ಕರ್ನಾಟಕ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್​ನಿಂದ ಪ್ರಸೂತಿ ಮತ್ತು ಸ್ತ್ರಿ ರೋಗ ಶಾಸ್ತ್ರದಲ್ಲಿ ಎಂಎಸ್ ಪೂರೈಸಿದರು. ಈಗ ನಾಲ್ಕು ವರ್ಷದ ಮಗುವಿನ ತಾಯಿ. ಇವರ ಪತಿ ಡಾ.ವೆಂಕಟೇಶ್ ಐಆರ್​ಎಸ್ ಅಧಿಕಾರಿ. ಪರಾಸ್ ಪ್ರಕಾಶನದಿಂದ ಮುದ್ರಿಸಿರುವ ಪ್ರಾಕ್ಟಿಕಲ್ ಕೇಸಸ್ ಇನ್ ಅಬ್ಸ್​ಟೇಟ್ರಿಕ್ ಆಂಡ್ ಗೈನಕಾಲಜಿ ಪುಸ್ತಕವನ್ನು ಬರೆದಿದ್ದಾರೆ. ಯುಪಿಎಸ್​ಸಿಯಲ್ಲಿ 147ನೇ ರ್ಯಾಂಕ್ ಪಡೆದಿರುವ ಇವರು, ಬೆಂಗಳೂರಿನ ಸಹಕಾರ ನಗರದಲ್ಲಿ ಹೆಲ್ತ್ ಕೇರ್ ಸೆಂಟರ್ ಕ್ಲಿನಿಕ್ ನಡೆಸುತ್ತಿದ್ದಾರೆ.

‘6ನೇ ಕ್ಲಾಸ್ ಇರೋವಾಗ್ಲೇ ಯುಪಿಎಸ್​ಸಿ ಸಾಧಕರ ಚಿತ್ರಗಳನ್ನು ಜಿಕೆಟುಡೆಯಲ್ಲಿ ನೋಡಿ ಆಸೆ ಪಟ್ಟಿದ್ದೆ. ಆಗಲೇ ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯಬೇಕೆಂದು ಆಸೆ ಮೂಡಿತ್ತು. ಆದರೆ, ಆಗ ಯಾರೋ ಅಲ್ಲಿಗೆ ಆಯ್ಕೆಯಾಗಬೇಕೆಂದ್ರೆ ಕೋಟಿಗಟ್ಟಲೆ ದುಡ್ಡು ನೀಡಬೇಕು ಎಂದು ಅಪ್ಪನಿಗೆ ಹೇಳಿದ್ರು. ಹೀಗಾಗಿ, ಅಪ್ಪ, ನೀನು ಚೆನ್ನಾಗಿ ಓದಿದ್ರೂ ಅಲ್ಲಿಗೆ ದುಡ್ಡು ಕೊಟ್ಟು ಹೇಗೂ ಸೇರಿಸೋಕೆ ಆಗಲ್ಲ. ಹೀಗಾಗಿ, ಡಾಕ್ಟರ್ ಆಗು ಎಂದು ಹುರಿದುಂಬಿಸಿದರು.

ಹೀಗಾಗಿ, ಡಾಕ್ಟರ್ ಓದಿದೆ. ಆದರೆ, ಕೊನೆಗೆ ಅವರಿಗೆ ಯುಪಿಎಸ್​ಸಿ ಭ್ರಷ್ಟಾಚಾರ ರಹಿತ ವ್ಯವಸ್ಥೆಯ ಬಗ್ಗೆ ತಿಳಿದಾಗ ಕ್ಯಾನ್ಸರ್​ಪೀಡಿತರಾಗಿದ್ರು. ಆಗ ‘ನಾನೇ ನಿನ್ನನ್ನು ದಾರಿ ತಪ್ಪಿಸಿದ್ದು. ಈಗಾದ್ರೂ ಅದನ್ನು ಬರೆದು ಪಾಸು ಮಾಡು’ ಎಂದು ಹೇಳಿದ್ರು. ಈಗ ಅವರಿಲ್ಲ. ಆದರೆ, ಅವರು ಹೇಳಿದ್ದರಿಂದಲೇ ನಾನು ಮತ್ತೆ ಈ ಕಡೆ ಮುಖ ಮಾಡಿದೆ. ನಾನು ಮೆಡಿಕಲ್ ಸೇರಿದ ಮೇಲೆ ಬಹುತೇಕ 15 ವರ್ಷಗಳ ಕಾಲ ಪತ್ರಿಕೆಗಳನ್ನೇ ಓದಿರಲಿಲ್ಲ. ಅಣ್ಣನೂ ಡಾಕ್ಟರ್. ಚೆನ್ನಾಗಿ ಓದಬೇಕೆಂದು ಹೇಳಿದ್ದ. ಸೋ, ನ್ಯೂಸ್ ನೋಡ್ತಿರಲಿಲ್ಲ, ಪತ್ರಿಕೆಯನ್ನೂ ಓದಿರಲಿಲ್ಲ. ಹೀಗಾಗಿ, ನಾನು ಪತ್ರಿಕೆ ಓದಲು ಮತ್ತೆ ಆರಂಭಿಸಿದ್ದೇ 2014ರಲ್ಲಿ. ಎರಡು ವರ್ಷಗಳನ್ನು ಕಳೆದ ಹದಿನೈದು ವರ್ಷಗಳಲ್ಲಿ ಏನೇನು ಆಗಿದೆ ಎಂದು ತಿಳಿದುಕೊಳ್ಳುತ್ತಲೇ ಕಳೆದೆ. ಬೇಸಿಕ್ಸ್ ಬಿಲ್ಡ್ ಮಾಡಿಕೊಂಡೆ. ಪ್ರಿಲಿಮ್್ಸ ಆದ ಬಳಿಕ ಮೂರು ಗಂಟೆ ಪರೀಕ್ಷೆ ಬರೆಯುವುದನ್ನು ಅಭ್ಯಾಸ ಮಾಡಿದೆ. ಅದನ್ನು ಅಭ್ಯಾಸ ಮಾಡುವುದು ತುಂಬ ಇಂಪಾರ್ಟೆಂಟ್. ಉತ್ತರ ಗೊತ್ತಿದ್ರೂ ಬರೆಯೋಕೆ ಆಗದೆ ಇದ್ರೆ ಮಾರ್ಕ್ಸ್ ತೆಗೆಯೋಕೆ ಆಗಲ್ಲ. ನನ್ನ ಹ್ಯಾಂಡ್​ರೈಟಿಂಗ್ ಕೂಡ ಕೆಟ್ಟದಾಗಿತ್ತು. ಎಲ್​ಕೆಜಿ ಮಕ್ಕಳ ಬುಕ್ ಇಟ್ಕೊಂಡು ಒಂದು ತಿಂಗಳು ಚೆನ್ನಾಗಿ ಪ್ರಾಕ್ಟೀಸ್ ಮಾಡಿ ಸುಧಾರಿಸಿಕೊಂಡೆ. ಕೋಚಿಂಗ್ ಹೋಗೋಕೆ ಟೈಮ್ ಇರಲಿಲ್ಲ. ಆನ್​ಲೈನ್ ಮಟೀರಿಯಲ್ ಬಳಕೆ ಮಾಡಿಕೊಂಡೆ. ನಾನು ನೋಟ್ಸ್ ಮಾಡಿ ಇಟ್ಕೊಂಡಿದ್ದನ್ನು ಮಗ ಹರಿದು ಹಾಕ್ತಿದ್ದ. ಹೀಗಾಗಿ, ನಾನು ನೋಟ್ಸ್ ಮಾಡೋದೆ ಬಿಟ್ಟೆ. ಮೊಬೈಲ್​ನಲ್ಲಿಯೇ ಓದೋದು, ಕೇಳೋದು ಮಾಡಿ ಅಧ್ಯಯನ ಮಾಡಿದೆ. ಒಂದು ಕೈಯಲ್ಲಿ ಅವನಿಗೆ ಹಾಲು ಕುಡಿಸ್ತಾ ಇದ್ರೆ ಇನ್ನೊಂದು ಕೈಲಿ ಮೊಬೈಲ್ ಹಿಡ್ಕೊಂಡು ಓದ್ಕೊತಿದ್ದೆ. ನಮಗೆ ನಿರ್ಧಾರ ಗಟ್ಟಿಯಾಗಿದ್ರೆ, ಅಚಲವಾಗಿದ್ರೆ ಯಾವುದೂ ಅಡೆತಡೆ ಅಂತ ಅನ್ನಿಸಲ್ಲ. ಇದು ನಮಗೆ ಬೇಕೇಬೇಕು ಅಂತ ಇದ್ರೆ ಎಲ್ಲವೂ ಅದರಷ್ಟಕ್ಕೇ ಅದು ಸೆಟ್​ರೈಟ್ ಆಗುತ್ತದೆ. ‘ನನಗೆ ಮಗುವಾಗಿದೆ ಆಗಲ್ಲ, ನನಗೆ ವಯಸ್ಸಾಗಿದೆ ಮಾಡೋಕೆ ಆಗಲ್ಲ’ ಅಂತೆಲ್ಲ ಅಂದ್ಕೊಂಡ್ರೆ ಆಗಲ್ಲ. ಮಾಡಬೇಕು ಅಂದ್ರೆ ಆಗುತ್ತೆ ಅಷ್ಟೆ’ ಎನ್ನುತ್ತಾರೆ.


ಪಬ್ಲಿಕ್ ಅಡ್ಮಿನಿಸ್ಟ್ರೇಷನ್​ನಲ್ಲಿ ಯಶಸ್ಸು

ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ದೊಡ್ಡಯಾಚನಹಳ್ಳಿಯಲ್ಲಿ ಜನಿಸಿದ ಇವರು ಪ್ರಸ್ತುತ ಮೈಸೂರಿನ ಶಂಕರ್ ನಗರದ ವಿಜಯನಗರ ರೈಲ್ವೆ ಬಡಾವಣೆಯಲ್ಲಿದ್ದಾರೆ. ತಂದೆ ಶಂಕರೇ ಗೌಡ ಎಲ್​ಐಸಿ ಅಭಿವೃದ್ಧಿ ಅಧಿಕಾರಿಯಾಗಿದ್ದರು. ಬೆಂಗಳೂರಿನ ಸತ್ಯಸಾಯಿ ವಿವಿಯಲ್ಲಿ ರಸಾಯನಶಾಸ್ತ್ರದಲ್ಲಿ ಪದವಿ ಮತ್ತು ಆಂಧ್ರಪ್ರದೇಶದ ಪುಟ್ಟಪರ್ತಿಯ ಶ್ರೀ ಸತ್ಯಸಾಯಿ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಎರಡನೇ ಪ್ರಯತ್ನದಲ್ಲಿ 211ನೇ ರ್ಯಾಂಕ್ ಪಡೆದಿದ್ದಾರೆ. ‘ಆಪ್ಷನಲ್ ವಿಷಯ ಪದವಿಯಲ್ಲಿ ಮಾಡಿದ್ದ ವಿಷಯವಾಗಿರಲಿಲ್ಲ. ಹೀಗಾಗಿ, ದೆಹಲಿಯಲ್ಲಿ ವಾಜೀರಾಂ ಸಂಸ್ಥೆ ಸೇರಿಕೊಂಡೆ. ಆಪ್ಷನಲ್ ಕೋಚಿಂಗ್ ತಗೊಂಡೆ. ಮೊದಲ ಪ್ರಯತ್ನ ದೆಹಲಿಯಲ್ಲೇ ಮಾಡಿದೆ. ನಂತರ ಬೆಂಗಳೂರಿಗೆ ಬಂದೆ. 2016ನಲ್ಲಿ ಮೇನ್ಸ್ ಅಷ್ಟು ಚೆನ್ನಾಗಿ ಆಗಿರಲಿಲ್ಲ. ಕಟ್​ಆಫ್​ಗಿಂತ ಸ್ವಲ್ಪ ಮೇಲಕ್ಕೆ ಇತ್ತು. ಇಂಟರ್​ವ್ಯೂ ಕೂಡ ಕಡಿಮೆ ಆಯ್ತು. ಎರಡನೇ ಪ್ರಯತ್ನದಲ್ಲಿ 18 ದಿನ ಓದಿದ್ದೆ. ಈ ಬಾರಿ, ಜನರಲ್ ಸ್ಟಡೀಸ್ ಮತ್ತು ಪ್ರಬಂಧಕ್ಕೆ ಹೇಗೆ ಬರೆಯಬೇಕು ಎಂದು ಇನ್​ಸೈಟ್ಸ್ ಸಂಸ್ಥೆಯ ವಿನಯ್ ಸರ್ ಮಾರ್ಗದರ್ಶನ ನೀಡಿದ್ರು. ಇದು ತುಂಬ ಹೆಲ್ಪ್ ಆಯಿತು. ಹೀಗಾಗಿ, ಈ ರ್ಯಾಂಕ್ ಬಂತು. ಟೆಸ್ಟ್ ಸೀರೀಸ್ ತಗೊಂಡಿದ್ದೆ. ಇತ್ತೀಚೆಗೆ ಸಾರ್ವಜನಿಕ ಆಡಳಿತ ತೆಗೆದುಕೊಂಡವರು ಸ್ವಲ್ಪ ಹಿನ್ನಡೆ ಅನುಭವಿಸ್ತಾ ಇದ್ದಾರೆ. ಇದು ಆಡಳಿತಕ್ಕೆ ನೇರವಾಗಿ ಸಂಬಂಧಿಸಿದ ವಿಷಯ. ಹೀಗಾಗಿ, ಮೊದಲು ತುಂಬ ಜನ ತಗೊಂಡ್ರು. ಅದರಿಂದ ಸ್ಟಾ್ಯಂಡರ್ಡ್ ಜಾಸ್ತಿ ಮಾಡಿದ್ರು. ಆಗ 2013-15ರ ಅವಧಿಯಲ್ಲಿ ಈ ವಿಷಯ ತೆಗೆದುಕೊಂಡೋರು ಪಾಸಾಗಿದ್ದು ಕಡಿಮೆ. ನನಗೆ ಮೊದಲು ಗೊತ್ತಾಗಿದ್ರೆ ಬಹುಶಃ ತೆಗೆದುಕೊಳ್ತಾನೇ ಇರಲಿಲ್ಲ. ಈಗ ಹೆಚ್ಚು ಜನ ತಗೊಳ್ತಾ ಇಲ್ಲ. ಟ್ರೆಂಡ್ ಹೋಗಿದೆ. ನನಗೂ ಫಿಯರ್ ಇತ್ತು. ಆದರೆ, ಈ ಬಾರಿ ಕ್ಲಿಯರ್ ಆಗಿದೆ. ಅಂಕ ಬಂದ ಮೇಲೆ ಯಾವ ರೀತಿ ಪ್ಯಾಟರ್ನ್ ಮೇಲೆ ಕೊಟ್ಟಿದ್ದಾರೆ ಅಂತ ಗೊತ್ತಾಗುತ್ತೆ’ ಎನ್ನುತ್ತಾರೆ ಪೃಥ್ವಿಕ್.


ಸಮೂಹ ಚರ್ಚೆ ಅನುಕೂಲವಾಯ್ತು

ಯುಪಿಎಸ್​ಸಿ ಪರೀಕ್ಷೆಯಲ್ಲಿ 119ನೇ ರ್ಯಾಂಕ್ ಪಡೆದುಕೊಂಡಿರುವ ಇವರು ಮೂಲತಃ ಉಡುಪಿಯವರು. ಬೆಳೆದಿದ್ದು ಬೆಂಗಳೂರಿನಲ್ಲಿ. ತಂದೆ ಗೋಪಾಲಕೃಷ್ಣ ಸೋಮಯಾಜಿ, ತಾಯಿ ಗೀತಾ. ಕ್ರೖೆಸ್ಟ್ ಜೂನಿಯರ್ ಕಾಲೇಜ್​ನಲ್ಲಿ ಪಿಯುಸಿ ಪೂರ್ಣಗೊಳಿಸಿದರು. ನಂತರ ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ಒಂದೂವರೆ ವರ್ಷ ಕೆಲಸ ಮಾಡಿದರು. ನಂತರ ಕೆಲಸ ತೊರೆದು ಗಂಭೀರವಾಗಿ ಯುಪಿಎಸ್​ಸಿ ಅಭ್ಯಾಸ ಆರಂಭಿಸಿದರು. ‘ಜಿಯಾಗ್ರಫಿ ಮುಖ್ಯ ವಿಷಯವಾಗಿಟ್ಟುಕೊಂಡು ಪರೀಕ್ಷೆ ಬರೆದಿದ್ದೆ. ಎರಡನೇ ಪ್ರಯತ್ನದಲ್ಲಿ ಇಂಟರ್​ವ್ಯೂವರೆಗೂ ಹೋಗಿದ್ದೆ. ಆಪ್ಷನಲ್​ನಲ್ಲಿ ಕಡಿಮೆ ಆಗಿ ಕ್ಲಿಯರ್ ಆಗಿರಲಿಲ್ಲ. ಎಲ್ಲ ನಾಲ್ಕು ಪ್ರಯತ್ನಗಳಲ್ಲಿ ಪ್ರಿಲಿಮ್್ಸ ಪಾಸಾಗಿತ್ತು. ಮೊದಲು ನಾನು ಒಬ್ಬಳೇ ಸಿದ್ಧತೆ ಮಾಡ್ಕೋತಾ ಇದ್ದೆ. ಮೇನ್ಸ್​ನಲ್ಲಿ ವಿವಿಧ ಆಲೋಚನೆಗಳು, ಹೊಸ ಚಿಂತನೆಗಳ ಅಗತ್ಯ ಇರುತ್ತೆ. ಹೀಗಾಗಿ, ಚೇಂಜ್ ಮಾಡಿಕೊಂಡು ಇನ್​ಸೈಟ್ಸ್ ಆನ್ ಇಂಡಿಯಾದಲ್ಲಿ ಗ್ರೂಪ್ ಮಾಡ್ತಾರೆ, ಅಲ್ಲಿ ಸೇರಿಕೊಂಡೆ. ಮೇನ್ಸ್ ಟೆಸ್ಟ್ ಸೀರೀಸ್ ಬರೆದ ಮೇಲೆಯೂ ಅಲ್ಲಿ ಇನ್ವಾಲ್ವ್ ಆದರೆ ನಾವು ನಾವೇ ವಿಶ್ಲೇಷಣೆ ಮಾಡಿಕೊಳ್ಳೋಕೆ ಅವಕಾಶ ಸಿಗುತ್ತೆ. ಅಲ್ಲಿ ಚೇಂಜ್ ಸಿಗ್ತು. ಇಂಟರ್​ವ್ಯೂನಲ್ಲಿಯೂ ಅಷ್ಟೆ. ಒಬ್ಬರಿಗೊಬ್ಬರು ಡಿಎಎಫ್ (ಡೀಟೇಲ್ಡ್ ಅಪ್ಲಿಕೇಷನ್ ಫಾಮ್ರ್) ನೋಡಿ ಪ್ರಶ್ನೆ ರೂಪಿಸಿಕೊಂಡು ಅಲ್ಲಿಯೇ ಉತ್ತರ ನೀಡುತ್ತ ಸಿದ್ಧವಾಗಿದ್ದೆವು. ಇದೆಲ್ಲ ತುಂಬ ಅನುಕೂಲವಾಯಿತು. ಜಿಯಾಗ್ರಫಿ ಆಪ್ಷನಲ್ ಟ್ರೆಂಡ್ ಈಗಿಲ್ಲ. ಆದ್ರೂ ಕ್ಲಿಯರ್ ಆಯಿತು. ಇಂಟರ್​ವ್ಯೂನಲ್ಲಿ ಡಿಎಎಫ್ ಆಧಾರಿತವಾಗಿಯೇ ಶೇ.70ರಷ್ಟು ಪ್ರಶ್ನೆಗಳು ಬಂದ್ವು’ ಎನ್ನುತ್ತಾರೆ ಶ್ವೇತಾ.


ಸಾಫ್ಟ್​ವೇರ್ ಬಿಟ್ಟು ಸಿವಿಲ್ ಸರ್ವೀಸ್

ಕಡೂರು ತಾಲೂಕು ಸಖರಾಯಪಟ್ಟಣದ ಇವರು ಬೆಂಗಳೂರಿನ ಆರ್. ವಿ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್​ನಲ್ಲಿ ಬಿಇ ಪದವಿ ಪಡೆದರು, ಒಂದು ವರ್ಷ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡಿದರು. ನಂತರ ಕೆಲಸ ತೊರೆದು ಯುಪಿಎಸ್​ಸಿ ಅಭ್ಯಾಸದಲ್ಲಿ ತೊಡಗಿದರು. ಪ್ರಿಲಿಮ್ಸ್​ನಲ್ಲಿ ಉತ್ತಮವಾಗಿ ಮಾಡಿದ್ದರೂ ಮೊದಲ ಪ್ರಯತ್ನದಲ್ಲಿ ಸಫಲರಾಗಲಿಲ್ಲ. 2ನೇ ಪ್ರಯತ್ನದಲ್ಲಿ 654ನೇ ರ್ಯಾಂಕ್ ಪಡೆದಿದ್ದಾರೆ. ತಂದೆ ಪಿ.ಎಲ್.ಶಿವಮೂರ್ತಿ ಬಾಳೆಹೊನ್ನೂರಿನ ಕಾಫಿ ಬೋರ್ಡ್ ಉದ್ಯೋಗಿ. ‘ನಾನು ಆರಂಭದಿಂದಲೂ ಹಾಸ್ಟೆಲ್​ನಲ್ಲಿಯೇ ಇದ್ದಿದ್ದು. ಟಿವಿ ಇಲ್ಲ. ಪತ್ರಿಕೆ ಓದೋ ಅಭ್ಯಾಸ ಶುರುವಾಯ್ತು. ಅದು ಇಂಜಿನಿಯರಿಂಗ್ ಓದೋವಾಗ್ಲೂ ಮುಂದುವರೀತು. ಇಂಜಿನಿಯರಿಂಗ್ ಓದುವಾಗಲೂ ಯುಪಿಎಸ್​ಸಿ ಸೆಳೆತ ಇದ್ದರೂ ಕಂಪ್ಯೂಟರ್ ಸೈನ್ಸ್ ತಗೊಂಡಿದ್ದ ಕಾರಣ ಉತ್ತಮ ಉದ್ಯೋಗ ಸಿಗ್ತು ಎಂದು ಗುರ್ಗಾಂವ್​ಗೆ ಹೋದೆ. ಅಲ್ಲಿಂದ ದೆಹಲಿ ಸಮೀಪ. ಒಂದು ವರ್ಷ ಕೆಲಸ ಮಾಡಿದ ಬಳಿಕ, ನನ್ನ ದಾರಿ ಸ್ಪಷ್ಟವಾಯಿತು. ನನ್ನದು ಸಾಫ್ಟ್​ವೇರ್ ಕ್ಷೇತ್ರವಲ್ಲ, ಸಿವಿಲ್ ಸರ್ವೀಸ್​ಗೇ ಸೇರಬೇಕೆಂದು ದೆಹಲಿಯ ವಾಜೀರಾಂ ಸಂಸ್ಥೆಯಲ್ಲಿ ವಾರಾಂತ್ಯದ ಕ್ಲಾಸ್ ಸೇರಿಕೊಂಡೆ. ಇಂಜಿನಿಯರಿಂಗ್ ಮುಗ್ಸಿ ನೇರವಾಗಿ ಸಿವಿಲ್ ಸರ್ವೀಸ್​ಗೆ ಬಂದಿದ್ರೆ ಸಾಫ್ಟ್​ವೇರ್ ಕಂಪನಿ ಬಗ್ಗೆ ಆಸಕ್ತಿ ಉಳಿತಿತ್ತೋ ಏನೋ. ಆದ್ರೆ, ಒಂದು ವರ್ಷ ಕೆಲಸ ಮಾಡಿದ ಮೇಲೆ ನನಗೆ ನನ್ನ ಕ್ಷೇತ್ರ ಮನದಟ್ಟಾಯ್ತು. ಆಂಥ್ರೋಪಾಲಜಿ ಆಪ್ಷನ್ ತೆಗೆದುಕೊಂಡು ಯಶಸ್ವಿಯಾಗಿದ್ದೇನೆ’ ಎನ್ನುತ್ತಾರೆ ಪ್ರೀತಂ.

Leave a Reply

Your email address will not be published. Required fields are marked *