More

  ಕೋಲಾಹಲ, ತೋಳೇರಿಸಿದ ಶಾಸಕರು, ಅವಾಚ್ಯ ಪದಗಳ ಬಳಕೆ : ಸರ್ಕಾರದಿಂದ ಎಚ್ಚರಿಕೆ ಹೆಜ್ಜೆ

  ಬೆಂಗಳೂರು: ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ವಿಚಾರವಾಗಿ ಹೊತ್ತಿಕೊಂಡ ‘ರಾಜಕೀಯ ಕಿಡಿ’ ಆಡಳಿತ- ಪ್ರತಿಪಕ್ಷದ ನಡುವೆ ನಿಗಿನಿಗಿ ವಾತಾವರಣ ಸೃಷ್ಟಿಸಿದೆ. ವಿಧಾನ ಮಂಡಲದ ಉಭಯ ಸದನಗಳ ಒಳಹೊರಗು ಬಿಜೆಪಿ ಹೋರಾಟ ತೀವ್ರಗೊಳಿಸಿದ್ದರೆ, ಪರಿಸ್ಥಿತಿ ನಿಭಾಯಿಸಲು ಸರ್ಕಾರ ಎಚ್ಚರಿಕೆ ಹೆಜ್ಜೆ ಇಟ್ಟಿದೆ.

  ಬುಧವಾರ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ ನಡೆಸಿದ್ದು ಒಂದು ಕಡೆಯಾದರೆ, ಆ ಪಕ್ಷದ ಶಾಸಕರು ಪಾದಯಾತ್ರೆ ಮೂಲಕ ಸದನಕ್ಕೆ ಆಗಮಿಸಿ ಧರಣಿ ನಡೆಸಿ, ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡಿದರು. ಇದರಿಂದ ವಿಧಾನ ಮಂಡಲದ ಉಭಯ ಸದನಗಳ ಕಲಾಪವೇ ಆಹುತಿಯಾಯಿತು. ಈ ನಡುವೆ ಪ್ರತಿಪಕ್ಷದ ಅಬ್ಬರ, ಆಡಳಿತ ಪಕ್ಷದ ಪ್ರತಿರೋಧದ ನಡುವೆ ಅವಾಚ್ಯ ಪದಗಳ ಬಳಕೆ, ಕೈಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಪಾಕ್ ಪರ ಘೋಷಣೆ ಕೂಗಿದವರನ್ನು ಬಂಧಿಸಿಲ್ಲವೇಕೆ ಎಂದು ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಸರ್ಕಾರವನ್ನು ತಿವಿಯುವ ಪ್ರಯತ್ನ ನಡೆಸಿತು. ಸರ್ಕಾರದ ಸಮರ್ಥನೆ ಹಾಗೂ ಸಮಜಾಯಿಷಿಗೆ ತೃಪ್ತರಾಗದೆ ಧರಣಿ ಮುಂದುವರಿಸಿದ ಕಾರಣ ಸ್ಪೀಕರ್ ಕಲಾಪವನ್ನು ಗುರುವಾರಕ್ಕೆ ಮುಂದೂಡಬೇಕಾಯಿತು.

  ಈ ನಡುವೆ ಚರ್ಚೆ ಸಂದರ್ಭದಲ್ಲಿ, ಬಿಜೆಪಿ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್, ಪಾಕಿಸ್ತಾನ್ ಜಿಂದಾಬಾದ್ ಕೂಗಿದವರು ತಾ. ಗಂ….., ನಮಕ್ ಹರಾಮ್ಳು ಅವರಿಗೆ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದರು. ಅವರ ಮಾತನ್ನು ಬೆಂಬಲಿಸಿದ ಸ್ಪೀಕರ್ ಯು.ಟಿ. ಖಾದರ್, ಬೋ…ಮಕ್ಕಳು ಎಂಬುದಕ್ಕಿಂತ ಜಾಸ್ತಿ ಬೈಯಿರಿ. ಏನೇನು ಪದ ಬಳಸುತ್ತೀರೋ ಬಳಸಿ ನಿಮಗೆ ಒಪ್ಪಿಗೆ ಕೊಡುತ್ತೇನೆ ಎಂದರು. ಈ ಬೈಗುಳಕ್ಕೆ ಕಾಂಗ್ರೆಸ್​ನ ಬಸವರಾಜ ರಾಯರೆಡ್ಡಿ ಆಕ್ಷೇಪ ಎತ್ತಿದರು.

  ಇನ್ನೊಂದೆಡೆ, ವಿಧಾನ ಪರಿಷತ್​ನಲ್ಲಿ ಮಾತ್ರ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಕಲಾಪದ ಆರಂಭದಲ್ಲೇ ಆಡಳಿತ- ಪ್ರತಿಪಕ್ಷದ ನಡುವೆ ತೀವ್ರ ಜಟಾಪಟಿ ನಡೆಯಿತು. ಬಿಜೆಪಿಯ ರವಿಕುಮಾರ್​ರ ‘ಇದು ದೇಶದ್ರೋಹಿ ಸರ್ಕಾರ’ ಎಂಬ ಟೀಕೆಯಿಂದ ಸಿಡಿದ ಕಾಂಗ್ರೆಸ್​ನ ಅಬ್ದುಲ್ ಜಬ್ಬಾರ್, ‘ಅವನ ಬಾಯಿ ಬಂದ್ ಮಾಡಿ’ ಎಂದು ಹೇಳಿದ್ದು ಕೋಲಾಹಲಕ್ಕೆ ಎಡೆ ಮಾಡಿತು. ಏಕವಚನ ಪ್ರಯೋಗ ಮಾಡಿದ ಜಬ್ಬಾರ್ ಕಡೆಗೆ ರವಿಕುಮಾರ್ ಸೇರಿ ಬಿಜೆಪಿ ಸದಸ್ಯರು ತೋಳೇರಿಸಿ ಧಾವಿಸಿ ಬಂದರು. ಅತ್ತ ಆಡಳಿತ ಪಕ್ಷದವರು ಕ್ರುದ್ಧಗೊಂಡರು.

  ಪ್ರತಿರೋಧ : ಸರ್ಕಾರದ ವಿರುದ್ಧ ಮೇಲಿಂದ ಮೇಲೆ ಮಾತಿನ ಪ್ರಹಾರ ನಡೆಯುತ್ತಿದ್ದಂತೆ ಆಡಳಿತ ಪಕ್ಷದ ಶಾಸಕರು, ಸಚಿವರು ತಾಳ್ಮೆ ಕಳೆದುಕೊಂಡು ಪ್ರತಿರೋಧ ಒಡ್ಡಲು ಆರಂಭಿಸಿದರು. ಪುಲ್ವಾಮಾ ಪ್ರಕರಣ, ಪಠಾಣ್ ಕೋಟ್, ಸರ್ಜಿಕಲ್ ಸ್ಟ್ರೈಕ್, ಸತ್ಯಪಾಲ್ ಮಲ್ಲಿಕ್ ವಿಷಯಗಳೂ ಚರ್ಚೆಗೆ ಬಂದು ಪರಸ್ಪರ ಟೀಕೆ, ಟಿಪ್ಪಣಿಗಳು ನಡೆದವು.

  ಪರಿಷತ್​ನಲ್ಲೂ ಗದ್ದಲ : ಪಾಕಿಸ್ತಾನ ಪರ ಘೊಷಣೆ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಫೂಜಾರಿ, ವಿಧಾನಸೌಧದಲ್ಲಿಯೇ ರಾಷ್ಟ್ರದ್ರೋಹ ಬಗೆಯುವ ಘೋಷಣೆ ಕೂಗಿದರೆ ಅದನ್ನು ಸಹಿಸಿಕೊಳ್ಳಲು ಸಾದ್ಯವಿಲ್ಲ. ದೇಶದ ಇತಿಹಾಸದಲ್ಲಿಯೇ ಈ ಘಟನೆ ಕಪು್ಪಚುಕ್ಕೆಯಾಗಿದೆ ಎಂದರು. ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ಪ್ರತಿಕ್ರಿಯಿಸಿ, ಚುನಾವಣೆ ವೇಳೆ ಗೆದ್ದ ಅಭ್ಯರ್ಥಿ ಪರ ಜಯಘೊಷ ಹಾಕುವಾಗ ಅದನ್ನು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದರು. ಬಿಜೆಪಿ ಎನ್. ರವಿಕುಮಾರ್ ಪ್ರತಿಕ್ರಿಯಿಸಿ ಇದು ಸುಳ್ಳಲ್ಲ, ವಿಡಿಯೋ ಇದೆ. ನಾಸೀರ್ ಹುಸೇನ್ ತಕ್ಷಣ ಖಂಡಿಸಬೇಕಿತ್ತು, ಅವರು ಖಂಡಿಸಲಿಲ್ಲ ಎಂದರು. ಈ ವೇಳೆ ನಾನು ಆ ವಿಡಿಯೋ ನೋಡಿದೆ, ಎರಡು ಮೂರು ಬಾರಿ ಕೇಳಿದೆ ಎಂದು ಎಚ್.ಕೆ. ಪಾಟೀಲ್ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು. ಜತೆಗೆ ತನಿಖೆ ಆಗಲಿದೆ. ಎಫ್​ಎಸ್​ಎಲ್ ವರದಿ ಪಡೆದು ತನಿಖೆಯ ನಂತರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸಮಜಾಯಿಷಿ ನೀಡಿದರೂ ಬಿಜೆಪಿ ಸದಸ್ಯರ ಆಕ್ರೋಶ ತಣಿಯಲಿಲ್ಲ. ಸರ್ಕಾರದ ನಿಲುವು ಪ್ರಕಟಿಸಬೇಕೆಂದು ಪಟ್ಟುಹಿಡಿದರು. ಈ ವೇಳೆ ಕೋಲಾಹಲ ಉಂಟಾಯಿತು. ಪರಸ್ಪರ ಧಿಕ್ಕಾರ ಕೂಗಿಕೊಂಡರು. ಕೊನೆಗೆ ಸಭಾಪತಿ ಕಲಾಪವನ್ನೇ ಮುಂದೂಡಬೇಕಾಯಿತು.

  ಆರ್. ಅಶೋಕ್ ಎತ್ತಿದ ಪ್ರಶ್ನೆಗಳು

  1. ಏಳು ಕೋಟಿ ಕನ್ನಡಿಗರ ಆತ್ಮ ವಿಧಾನಸೌಧ. ಇಲ್ಲೇ ಪಾಕಿಸ್ತಾನ್ ಜಿಂದಾಬಾದ್ ಎಂದು ಘೊಷಣೆ ಕೂಗಿರುವುದರಿಂದ ರಾಜ್ಯದಲ್ಲಿ ಆತಂಕ ಉಂಟಾಗಿದೆ. ಆ ರೀತಿ ಘೊಷಣೆ ಕೂಗಿದವರನ್ನು ರೆಡ್ ಕಾರ್ಪೆಟ್ ಹಾಕಿ ವಿಧಾನಸೌಧಕ್ಕೆ ಕರೆತಂದವರು ಯಾರು?

  2. 500 ಪೊಲೀಸರು, ಐಪಿಎಸ್, ಐಎಎಸ್ ಅಧಿಕಾರಿಗಳು ಇರುವ ಈ ಸ್ಥಳದಲ್ಲಿ ಆ ರೀತಿ ಘೊಷಣೆ ಕೂಗಲು ಎಷ್ಟು ಧೈರ್ಯವಿರಬೇಕು? ಘೊಷಣೆ ಕೂಗಿದವರು ವಿಧಾನಸೌಧದಿಂದ ಹೊರಹೋಗಲು ವಾಹನ ಮಾಡಿಕೊಟ್ಟವರು ಯಾರು?

  3. ಪಾಕಿಸ್ತಾನದ ಪರ ಘೊಷಣೆ ಕೂಗಿದವರು ಪಾಕಿಸ್ತಾನದವರೇ ಇರಬೇಕು. ಬೇರೆಯವರು ಆ ರೀತಿ ಘೊಷಣೆ ಕೂಗುವುದಿಲ್ಲ. ಇಷ್ಟೆಲ್ಲ ನಡೆದಿದ್ದರೂ ಸರ್ಕಾರ ಏನೂ ಆಗಿಲ್ಲ ಎಂಬಂತಿದೆ. ಒಂದು ಸಣ್ಣ ಕೇಸ್ ಕೂಡ ದಾಖಲಿಸಿಲ್ಲ ಏಕೆ?

  4. ಪಿಎಫ್​ಐ ಮೇಲಿನ ಕೇಸುಗಳನ್ನು ವಜಾ ಮಾಡಿದ್ದಾರೆ. ಕೋಲಾರ, ಶಿವಮೊಗ್ಗದಲ್ಲಿ ಮಚ್ಚು, ಲಾಂಗುಗಳ ಫ್ಲೆಕ್ಸ್ ಹಾಕಲಾಗಿದೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಚರ್ಚೆ ಮಾಡಬೇಕಿತ್ತು. ಸರ್ಕಾರ ಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಅನಿಸುತ್ತಿದೆಯೇ?

  5. ಪಾಕ್ ಪರ ಘೊಷಣೆ ಕೂಗಿದ್ದನ್ನು ಸಹಿಸಿಕೊಂಡರೆ ಬದುಕಿದ್ದೂ ವ್ಯರ್ಥ. ಸರ್ಕಾರವೂ ಹಗುರವಾಗಿ ತೆಗೆದುಕೊಂಡಿದ್ದು, ಘೋಷಣೆ ಕೂಗಿದವರಿಗೆ ಬಿರಿಯಾನಿ ಕೊಟ್ಟು ಕಳಿಸಿದ್ದು ಯಾರು?

  ಕಾಂಗ್ರೆಸ್ ದೇಶದ್ರೋಹಿಗಳ ರಕ್ಷಣೆಯ ಗ್ಯಾರಂಟಿ ಘೋಷಿಸಲಿ: ಬಿ.ವೈ ವಿಜಯೇಂದ್ರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts