ರಸ್ತೆಗಾಗಿ ಹೋರಾಟದ ಹಾದಿಯಲ್ಲಿ ಗ್ರಾಮಸ್ಥರು

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರಿಂದ ಗ್ರಾಮೀಣ ಭಾಗದ ಸಹಸ್ರಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ಉಪ್ಪೂರು ಜಾತಬೆಟ್ಟು ರಸ್ತೆ ಭಾರಿ ವಾಹನಗಳ ಸಂಚಾರದಿಂದ ಹಾಳಾಗಿ ಸಂಚಾರಕ್ಕೆ ತೊಡಕಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕರು ಹೋರಾಟದ ಹಾದಿಯ ಸಿದ್ಧತೆಯಲ್ಲಿದ್ದಾರೆ.

ಚಿತ್ತಾರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭಾನುವಾರ ಮುಂದಿನ ನಡೆಯ ಕುರಿತು ರಾಜಕೀಯ ಪಕ್ಷಭೇದ ಮರೆತು ಸಾರ್ವಜನಿಕ ಸಮಾಲೋಚನಾ ಸಭೆ ಮಾಡಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲಾಯಿತು.

ಅತಿ ಕಿರಿದಾದ ಈ ರಸ್ತೆ ಇಂದಿನ ವಾಹನ ಸಂಖ್ಯೆಗೆ ಅನುಗುಣವಾಗಿ ಇಲ್ಲದಾಗಿದೆ. ಏಕಮುಖ ರಸ್ತೆಯಂತಿರುವ ಇಲ್ಲಿ ಶಾಲಾ ವಾಹನ ಸಂಚಾರಕ್ಕೂ ತೊಡಕಾಗುತ್ತಿದೆ. 1963ರಲ್ಲಿ ಮಾಜಿ ಶಾಸಕ ಜಯಪ್ರಕಾಶ್ ಶೆಟ್ಟಿಯವರ ಅವಿರತ ಶ್ರಮದಿಂದ ಈ ರಸ್ತೆ ನಿರ್ಮಾಣವಾಗಿತ್ತು. ರಸ್ತೆಯ ನಿರ್ವಹಣೆ ಸರಿ ಇಲ್ಲದ ಕುರಿತು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ತೀರ ಹದಗೆಟ್ಟ ರಸ್ತೆಯಲ್ಲಿ ಇಲ್ಲಿನ ಹಾಲು ಉತ್ಪಾದನಾ ಘಟಕಕ್ಕೆ ನೀರು ಸರಬರಾಜು ಮಾಡುವ ಭಾರಿ ವಾಹನ ಮತ್ತು ಘಟಕದ ವಾಹನ ಸಂಚಾರದಿಂದ ನಿತ್ಯ ಸಂಚಾರಿಗಳು ನಡೆದಾಡಲೂ ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಇಲಾಖೆಗೆ ಮನವಿ ನೀಡಿ ಸ್ಪಂದಿಸದಲ್ಲಿ ಹೋರಾಟದ ಹಾದಿ ಹಿಡಿಯುವ ಬಗ್ಗೆ ಚರ್ಚಿಸಲಾಯಿತು.

ಸಭೆ ಆರಂಭವಾಗುವಾಗ ಇಲ್ಲಿ ಸಂಚರಿಸುವ ಟ್ಯಾಂಕರ್‌ಗಳ ಡ್ರೈವರ್‌ಗಳು ಹಾಗೂ ಮಾಲೀಕರು ಆಗಮಿಸಿ ಸಭೆಯ ಕಲಾಪಗಳನ್ನು ತಿಳಿಯಲು ಯತ್ನಿಸಿದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆಯಿತು. ಗ್ರಾಮದ ಪ್ರಮುಖರಾದ ಗ್ರೆಗೋರಿ ಡಿಸಿಲ್ವ, ದಯಾನಂದ ಕರ್ಕೇರ, ಅರುಣ ಕರ್ಕೇರ, ಗ್ರಾಪಂ ಅಧ್ಯಕ್ಷೆ ಆರತಿ, ಸದಸ್ಯರಾದ ಪ್ರವೀಣ ಕುಮಾರ್, ಪದ್ಮನಾಭ ರಾವ್, ಉಮೇಶ್ ಜತ್ತನ್ನ, ಕೃಷ್ಣರಾಜ ಕೋಟ್ಯಾನ್ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

ಊರಿನ ಹಿತಕ್ಕಾಗಿ ರಸ್ತೆಯ ವಿಷಯದಲ್ಲಿ ಯಾವುದೇ ರಾಜಕೀಯ ಇಲ್ಲದೆ, ಯಾವುದೇ ಕಾನೂನಿಗೆ ವಿರುದ್ಧವಾಗಿರದೆ ನಮ್ಮ ಬೇಡಿಕೆಯನ್ನು ಆಡಳಿತದ ಅಧಿಕಾರಿಗಳ ಮುಂದೆ ಇಡಲಿದ್ದೇವೆ.
– ಹೂವಯ್ಯ ಸೇರ್ವೆಗಾರ್ , ಗ್ರಾಮದ ಹಿರಿಯ ನಿವಾಸಿ

ಶಾಸಕರ ಗಮನ ಸೆಳೆದು ರಸ್ತೆಯ ವಿಸ್ತರಣೆಯಾಗುವುದಾದರೆ ಸಾರ್ವಜನಿಕರು ಜಾಗ ಬಿಟ್ಟುಕೊಡಲು ಸಹಕಾರ ನೀಡಬೇಕು.
– ರಾಜು ಪೂಜಾರಿ, ಸದಸ್ಯರು ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘ

Leave a Reply

Your email address will not be published. Required fields are marked *