ಶತಮಾನ ಕಂಡ ಮಾದರಿ ಶಾಲೆ

ಬಿ.ನರಸಿಂಹ ನಾಯಕ್ ಬೈಂದೂರು

ಇತ್ತೀಚಿನ ದಿನಗಳಲ್ಲಿ ಕೆಲವು ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದ್ದರೂ, ಅಂಜದೇ ಅಳುಕದೇ ಮುನ್ನುಗ್ಗುತ್ತಿರುವ ಈ ಸರ್ಕಾರಿ ಶಾಲೆಗೆ 133 ವರ್ಷಗಳ ಇತಿಹಾಸವಿದೆ.

ಇಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶ, ವಿದೇಶದಲ್ಲಿ ಉದ್ಯೋಗ, ವ್ಯವಹಾರ ಮಾಡಿಕೊಂಡಿದ್ದಾರೆ. ಈ ಶಾಲೆ ಆರಂಭದಲ್ಲಿ ಸುಮಾರು 1600ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದರು ಎಂಬುದು ದಾಖಲೆಗಳಿಂದ ತಿಳಿದು ಬರುತ್ತದೆ. ಅಂದ ಹಾಗೆ ಈ ಶಾಲೆ ಇರುವುದು ಉಪ್ಪುಂದದಲ್ಲಿ. ಹೆಸರಿಗೆ ತಕ್ಕಂತೆ ಇತರರಿಗೆ ಮಾದರಿಯಾದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ.
ಕೆಲವು ವರ್ಷಗಳ ಹಿಂದೆ ಈ ಭಾಗಗಳಲ್ಲಿ ಐದಾರು ಇಂಗ್ಲಿಷ್ ಶಾಲೆಗಳು ಆರಂಭವಾಗಿದ್ದು, ಪಾಲಕರ ಆಂಗ್ಲಭಾಷಾ ವ್ಯಾಮೋಹದಿಂದ ಈ ಶಾಲೆಗೆ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತ 250ಕ್ಕೆ ಬಂದು ನಿಂತಿತ್ತು. ಏಳು ವರ್ಷದ ಹಿಂದೆ ಶಿಕ್ಷಕರು 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸಲು ಪ್ರಾರಂಭಿಸಿದರು. 2017-18ನೇ ಶೈಕ್ಷಣಿಕ ವರ್ಷದಲ್ಲಿ ಹಳೇ ವಿದ್ಯಾರ್ಥಿಗಳಲ್ಲಿ ಕೆಲವರು ಒಟ್ಟಾಗಿ ಉಪ್ಪುಂದ ಎಜುಕೇಶನಲ್ ಟ್ರಸ್ಟ್ ಎಂಬ ಸಂಸ್ಥೆ ಹುಟ್ಟುಹಾಕಿ ಜತೆಗೆ ಎಸ್‌ಡಿಎಂಸಿ ಸಹಕಾರ ಪಡೆದು ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗೆ ಚಾಲನೆ ನೀಡಿದರು. ಆ ವರ್ಷ 118 ವಿದ್ಯಾರ್ಥಿಗಳು ಶಾಲೆಗೆ ಸೇರ್ಪಡೆಗೊಂಡರು. ಈಗ ಸುಮಾರು 430ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಈ ಶಾಲೆ ಹೊಂದಿದೆ.

ಎಲ್‌ಕೆಜಿಯಿಂದ 7ನೇ ತರಗತಿ ವರೆಗೆ ಇರುವ ಈ ಶಾಲೆಯಲ್ಲಿ ಅನುಭವಿ ಪದವೀಧರ ಮುಖ್ಯಶಿಕ್ಷಕರು, ನುರಿತ ಹತ್ತು ಶಿಕ್ಷಕರು, ಎಂಟು ಗೌರವ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳಿಗೆ ಕೇವಲ ಪಾಠವಲ್ಲದೇ ಪಠ್ಯೇತರ ಚಟುವಟಿಕೆ, ಶಿಸ್ತು, ಸಂಸ್ಕಾರ ಹಾಗೂ ಸಮಯಪಾಲನೆಗಳನ್ನೂ ಕಲಿಸುತ್ತಿದ್ದಾರೆ. ಎರಡು ಬಸ್ ಸೌಲಭ್ಯ, ಶುದ್ಧ ಕುಡಿಯುವ ನೀರಿನ (ವಾಟರ್ ಫಿಲ್ಟರ್) ಘಟಕ, ಸ್ಮಾರ್ಟ್‌ಕ್ಲಾಸ್, ಸುಸಜ್ಜಿತ ಕಂಪ್ಯೂಟರ್ ತರಗತಿ, ವಿಶಾಲ ಆಟದ ಮೈದಾನ ಇಲ್ಲಿದ್ದು, ಜವಾಬ್ದಾರಿ ಹೊಣೆಹೊತ್ತ ಎಸ್‌ಡಿಎಂಸಿ ಹಾಗೂ ಜಿಲ್ಲಾ ಪ್ರಶಸ್ತಿ ವಿಜೇತ ಹಳೇ ವಿದ್ಯಾರ್ಥಿ ಸಂಘ ಈ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಟೊಂಕಕಟ್ಟಿ ನಿಂತಿದೆ.

ಯುವಕರಿಂದ ಶಾಲೆಗೆ ಬಣ್ಣ: ಹಲವಾರು ವರ್ಷಗಳಿಂದ ಶಾಲಾ ಗೋಡೆಗಳ ಬಣ್ಣ ಮಾಸಿ ಹೋಗಿದ್ದು, ಕಳೆದ 15 ದಿನಗಳಿಂದ ಇಲ್ಲಿನ ಫಿಶರೀಶ್ ಕಾಲನಿಯ 50 ಯುವ ಶಿಕ್ಷಣಾಭಿಮಾನಿಗಳ ತಂಡ ತಮ್ಮ ಸ್ವಂತ ಖರ್ಚಿನಿಂದ ಕಟ್ಟಡಗಳಿಗೆ ಸುಣ್ಣ-ಬಣ್ಣ ಬಳಿದು ಶಾಲೆಯ ಶೋಭೆ ಹೆಚ್ಚಿಸಿದ್ದಾರೆ.

ಮಣಿಪಾಲ್ ಮಹಾಮ್ಮಾಯಿ ಫೌಂಡೇಶನ್ ಕೊಡುಗೆಯಾಗಿ 7ನೇ ತರಗತಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಇಂಗ್ಲಿಷ್ ಸ್ಪೋಕನ್ ಕ್ಲಾಸ್ ಹಾಗೂ ಸಿಸಿ ಕ್ಯಾಮರಾ ಅಳವಡಿಸಿದ ಬೈಂದೂರು ವಲಯದ ಏಕೈಕ ಸರ್ಕಾರಿ ಪ್ರಾಥಮಿಕ ಶಾಲೆ ಎಂಬ ಖ್ಯಾತಿ ನಮ್ಮ ಶಾಲೆ ಹೆಸರಿನಲ್ಲಿದೆ. ಶೈಕ್ಷಣಿಕವಾಗಿ ಎಲ್ಲ ರೀತಿಯ ಸೌಲಭ್ಯವಿರುವ ಶಾಲೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ.
|ವೆಂಕಪ್ಪ ಉಪ್ಪಾರ್, ಮುಖ್ಯಶಿಕ್ಷಕ

ಈಗಾಗಲೇ ಶಾಲೆಯ ಅನೇಕ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ, ಯೋಗ, ಕ್ರೀಡೆ ಮೂಲಕ ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಮಕ್ಕಳ ಪ್ರತಿಭೆಗೆ ಹಿಡಿದ ಕನ್ನಡಿ. ಹಾಗೆಯೇ ವಿಜ್ಞಾನ ಮಾದರಿ ತಯಾರಿಯಲ್ಲೂ ಮಕ್ಕಳು ಮುಂದಿದ್ದಾರೆ. ಈ ನಿಟ್ಟಿನಲ್ಲಿ ಸದ್ಯ ಇಲ್ಲಿ ಕೊರತೆಯಿರುವ ಸುಸಜ್ಜಿತ ಪ್ರಯೋಗಾಲಯ, ಹೆಚ್ಚುವರಿ ತರಗತಿ ಕೋಣೆಗಳು, ಗ್ರಂಥಾಲಯ, ಪೀಠೋಪಕರಣ ವ್ಯವಸ್ಥೆ ಮತ್ತು ಭೋಜನ ಶಾಲೆ ಮಾಡಬೇಕಿದೆ.
|ಮಂಜುನಾಥ ಖಾರ್ವಿ, ಹಳೇ ವಿದ್ಯಾರ್ಥಿ

ನಾವು ಕಲಿತ ಶಾಲೆ ಎಂಬ ಅಭಿಮಾನದಿಂದ ಸ್ನೇಹಿತರೆಲ್ಲರ ಸಹಕಾರ ಪಡೆದು ಉಚಿತವಾಗಿ ಶಾಲೆ ಗೋಡೆಗಳಿಗೆ ಸುಣ್ಣ, ಬಣ್ಣ ಬಳಿದು ಆಕರ್ಷಕಗೊಳಿಸಲಾಗಿದೆ. ಇದನ್ನು ಯಾವುದೇ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥದಿಂದ ನಮ್ಮ ಶಾಲೆಗೆ ಅಳಿಲಸೇವೆ ಮಾಡಿದ ಆತ್ಮತೃಪ್ತಿ ನಮಗಿದೆ.
|ಶ್ರೀಧರ ಖಾರ್ವಿ, ಹಳೇ ವಿದ್ಯಾರ್ಥಿ