ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ ಈ ಹಿಂದೆ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿರುವಂತೆ 5300 ಕೋಟಿ ರೂ. ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಪತ್ರ(Upper Bhadra; 5,300 crore release of Rs. CM’s letter to the Prime Minister again) ಬರೆದು ಮನವಿ ಮಾಡಿದ್ದಾರೆ.
ಈ ಹಿಂದೆ ಅನುದಾನ ಹಂಚಿಕೆ ವಿಚಾರದಲ್ಲಿ ಕೇಂದ್ರದ ಜತೆ ಜಟಾಪಟಿಗೆ ಇಳಿದಾಗಲೂ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ ಘೋಷಿಸಿದ ನೆರವು ನೀಡದೇ ಇರುವುದನ್ನು ಕಾಂಗ್ರೆಸ್ ದೊಡ್ಡ ಸುದ್ದಿ ಮಾಡಿತ್ತು.
ಈಗ ಸಿದ್ದಾಮಯ್ಯ ಅವರು ಪ್ರಧಾನಿ, ಕೇಂದ ಹಣಕಾಸು ಸಚಿವರಿಗೆ ಮತ್ತೊಂದು ಪತ್ರ ಬರೆದು ನೆನಪಿಸಿದ್ದಾರಲ್ಲದೆ, ತಕ್ಷಣ ಘೋಷಿತ ಆರ್ಥಿಕ ನೆರವು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ.
ಮಧ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯು ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಹನಿ ನೀರಾವರಿ ಮೂಲಕ 2,25,515 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಿದೆ. ಮತ್ತು ಈ ಜಿಲ್ಲೆಗಳಲ್ಲಿ 367 ಸಣ್ಣ ನೀರಾವರಿ ಕೆರೆಗಳನ್ನು ತುಂಬುವ ಮೂಲಕ ಅಂತರ್ಜಲ ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ. ರಾಜ್ಯ ಸರ್ಕಾರದಿಂದ ಈ ಯೋಜನೆಗೆ ಇದುವರೆಗೆ 10,121.75 ಕೋಟಿ ರೂ. ವೆಚ್ಚ ಮಾಡಲಾಗಿದೆ.
ಕೇಂದ್ರದ ನೆರವು ಬಿಡುಗಡೆಯಾಗದ ಕಾರಣ ಯೋಜನೆಯ ಪ್ರಗತಿ ಕುಂಠಿತವಾಗಿದೆ. ಯೋಜನೆಯ ಪ್ರಗತಿ ವೇಗಗೊಳಿಸಲು 2023-24ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾದ ಕೇಂದ್ರ ಸಹಾಯವನ್ನು ಬಿಡುಗಡೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಹೇಳಿದ್ದಾರೆ.
2023-24ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಸಹಾಯಧನ ಘೋಷಿಸಲಾಗಿದೆ. ಅಲ್ಲದೆ, ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಗೆ ಸೇರಿಸುವ ಪ್ರಕ್ರಿಯೆಯು ವಿಳಂಬವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಗಮನಸೆಳೆದಿದ್ದಾರೆ.