ಹನೂರು: ಪಟ್ಟಣದ ಪಿಎಂಶ್ರೀ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಶನಿವಾರ ಶಾಲಾ ದಾಖಲಾತಿ ಆಂದೋಲನ ಜಾಥಾ ನಡೆಸಿದರು.
ಶಾಲೆ ಆವರಣದಲ್ಲಿ ಮುಖ್ಯ ಶಿಕ್ಷಕ ಶಿವಲಿಂಗನಾಯ್ಕ ಜಾಥಾಗೆ ಚಾಲನೆ ನೀಡಿ ಮಾತನಾಡಿ, ಶಿಕ್ಷಣ ದೇಶದ ಭವಿಷ್ಯದ ಅಡಿಗಲ್ಲು. ವಿದ್ಯಾರ್ಥಿಗಳು ಇದರ ರೂವಾರಿಗಳು. ಹಾಗಾಗಿ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದ್ದು, ಹಲವು ಸವಲತ್ತುಗಳನ್ನು ನೀಡುವುದರ ಮೂಲಕ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಆದ್ದರಿಂದ ಪಾಲಕರು ಈ ಬಗ್ಗೆ ಮನದಟ್ಟು ಮಾಡಿಕೊಂಡು ಮಕ್ಕಳನ್ನು ಶಾಲೆಗೆ ದಾಖಲಿಸಿ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.
ಯಾವುದೇ ಮಗು ಶಾಲೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. 2024-25ನೇ ಸಾಲಿನಲ್ಲಿ ಪಿಎಂಶ್ರೀ ಶಾಲೆಯಾಗಿ ಆಯ್ಕೆಯಾಗಿದ್ದು, ಎಲ್‌ಕೆಜಿ ತರಗತಿಯನ್ನು ಆರಂಭಿಸಲಾಗಿದೆ. ಹಾಗಾಗಿ 4 ವರ್ಷದ ಮಕ್ಕಳನ್ನು ಶಾಲೆಗೆ ದಾಖಲು ಮಾಡಬಹುದಾಗಿದ್ದು, ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ಬಳಿಕ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಶಿಕ್ಷಕರೊಂದಿಗೆ ತೆರಳಿದ ವಿದ್ಯಾರ್ಥಿಗಳು ಶಿಕ್ಷಣದ ಮಹತ್ವದ ಬಗ್ಗೆ ಘೋಷಣೆಗಳನ್ನು ಕೂಗಿ ಹಾಗೂ ಕರಪತ್ರವನ್ನು ಹಂಚಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಶಿಕ್ಷಕರಾದ ಶುಭಾಮಂಗಳಾ, ಕಲಾವತಿ, ಅನಿತಾ, ಧರ್ಮಲಿಂಗಂ, ರಾಜು ಇದ್ದರು.
