ಯುಪಿಎ ಸೇರಿದ ಆರ್​ಎಲ್​ಎಸ್​ಪಿ ಅಧ್ಯಕ್ಷ ಉಪೇಂದ್ರ ಕುಶ್ವಾಹ

>

ನವದೆಹಲಿ: ಇತ್ತೀಚೆಗೆ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್​ಡಿಎಯಿಂದ ಹೊರಬಂದಿದ್ದ ರಾಷ್ಟ್ರೀಯ ಲೋಕ ಸಮತಾ ಪಕ್ಷದ ಅಧ್ಯಕ್ಷ ಉಪೇಂದ್ರ ಕುಶ್ವಾಹ ಗುರುವಾರ ಯುಪಿಎಗೆ ಸೇರ್ಪಡೆಯಾಗಿದ್ದು, ಬಿಹಾರದಲ್ಲಿ ಮಹಾಘಟಬಂಧನ್​ ಜತೆ ಕೈಜೋಡಿಸಿದ್ದಾರೆ.

ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶ್ವಾಹ ಯುಪಿಎಗೆ ಸೇರ್ಪಡೆಗೊಂಡರು. ಜತೆಗೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಕಾಂಗ್ರೆಸ್​, ಆರ್​ಜೆಡಿ, ಹಿಂದುತ್ವ ಆವಾಮ್​ ಮೋರ್ಚಾ ಜತೆ ಚುನಾವಣೆ ಎದುರಿಸಲು ಸಮ್ಮತಿ ಸೂಚಿಸಿದ್ದು, ಮಹಾಘಟಬಂಧನಕ್ಕೆ ಬೆಂಬಲಿಸಿದ್ದಾರೆ.

ಆರ್​ಜೆಡಿ ಮತ್ತು ಬಿಹಾರದ ಮಾಜಿ ಸಿಎಂ ಜಿತಿನ್​ ರಾಮ್​ ಮಾಂಝಿ ಅವರ ಹಿಂದುತ್ವ ಆವಾಮಿ ಮೋರ್ಚಾ (ಸೆಕ್ಯುಲರ್​) ಈಗಾಗಲೇ ಕಾಂಗ್ರೆಸ್​ನೊಂದಿಗೆ ಕೈಜೋಡಿಸಿದ್ದು, ಯುಪಿಎ ಭಾಗವಾಗಿವೆ. ಈ ಮೂರು ಪಕ್ಷಗಳ ಜತೆಗೆ ಕುಶ್ವಾಹ ಕೈಜೋಡಿಸಿರುವುದರಿಂದ ಬಿಹಾರದಲ್ಲಿ ಎನ್​ಡಿಎಗೆ ತೀವ್ರ ಪೈಪೋಟಿ ಎದುರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆಗಿನ ವೈಮನಸ್ಯ ಹಾಗೂ ಲೋಕಸಭೆ ಚುನಾವಣೆ ಸೀಟು ಹಂಚಿಕೆಯಲ್ಲಿನ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕುಶ್ವಾಹ ಎನ್​ಡಿಎದಿಂದ ಹೊರಬಂದಿದ್ದರು.

ಎಐಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರದ್​ ಯಾದವ್​, ತೇಜಸ್ವಿ ಯಾದವ್​, ಅಹ್ಮದ್​ ಪಟೇಲ್​ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು. (ಏಜೆನ್ಸೀಸ್​)