ರಫೆಲ್​ ಡೀಲ್​ ವಿರುದ್ಧ ಸೋನಿಯಾ ನೇತೃತ್ವದಲ್ಲಿ ಸಂಸದರ ಪ್ರತಿಭಟನೆ

ನವದೆಹಲಿ: ಫ್ರಾನ್ಸ್ ಜತೆಗಿನ ರಫೆಲ್ ಯುದ್ಧ ವಿಮಾನ ಒಪ್ಪಂದದಲ್ಲಿ ಹಗರಣ ನಡೆದಿದ್ದು, ಈ ಹಗರಣದ ತನಿಖೆಯನ್ನು ಜಂಟಿ ಸಂಸದೀಯ ಸಮಿತಿಯಿಂದ (JPC)ಯಿಂದ ನಡೆಸಬೇಕು ಎಂದು ಆಗ್ರಹಿಸಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಂಸದರು ಪ್ರತಿಭಟನೆ ನಡೆಸಿದರು.

ಸೋನಿಯಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್​ ಹಿರಿಯ ನಾಯಕರಾದ ರಾಜ್​ ಬಬ್ಬರ್​, ಗುಲಾಮ್​ ನಬಿ ಆಜಾದ್​, ಆನಂದ್​ ಶರ್ಮಾ, ಅಂಬಿಕಾ ಸೋನಿ, ಸಿಪಿಐ ಸಂಸದ ಡಿ. ರಾಜಾ, ಆಪ್​ ಸಂಸದ ಸುಶೀಲ್​ ಗುಪ್ತಾ ಮತ್ತು ಇತರ ಸಂಸದರು ಸಂಸತ್​ ಭವನದ ಮಹಾತ್ಮಾಗಾಂಧಿ ಪ್ರತಿಮೆ ಮುಂಭಾಗದಲ್ಲಿ ಭಿತ್ತಿಪತ್ರ ಹಿಡಿದು ಪ್ರತಿಭಟನೆ ನಡೆಸಿದರು.

ರಫೆಲ್​ ಒಪ್ಪಂದವನ್ನು ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್​ ಸಂಸದರು ಗುರುವಾರ ಲೋಕಸಭೆಯಲ್ಲಿ ಆಗ್ರಹಿಸಿದ್ದರು. ಕಾಂಗ್ರೆಸ್​ ಸಂಸದರು ಪಟ್ಟು ಸಡಿಲಿಸದ ಕಾರಣ ಲೋಕಸಭೆಯ ಕಲಾಪವನ್ನು ಮುಂದೂಡಲಾಗಿತ್ತು.

ಇತ್ತೀಚೆಗೆ ಮಾಜಿ ಕೇಂದ್ರ ಸಚಿವರಾದ ಯಶವಂತ್​ ಸಿನ್ಹಾ ಮತ್ತು ಅರುಣ್​ ಶೌರಿ ರಫೆಲ್​ ಒಪ್ಪಂದ ಬೋಫೋರ್ಸ್​ ಹಗರಣಕ್ಕಿಂತಲೂ ದೊಡ್ಡ ಪ್ರಮಾಣದ ಹಗರಣವಾಗಿದೆ ಎಂದು ತಿಳಿಸಿದ್ದರು. ಆ ನಂತರ ಕಾಂಗ್ರೆಸ್​ ಪಕ್ಷ ಎನ್​ಡಿಎ ಸರ್ಕಾರದ ಅವಧಿಯಲ್ಲಾದ ರಫೆಲ್​ ಒಪ್ಪಂದವನ್ನು ವಿರೋಧಿಸುತ್ತಿದ್ದು, ಸಮಗ್ರ ತನಿಖೆಗೆ ಆಗ್ರಹಿಸುತ್ತಿದೆ.

ಏನಿದು ರಾಫೆಲ್ ಡೀಲ್?

2007ರಲ್ಲಿ ಯುಪಿಎ ಸರ್ಕಾರ ವಾಯುಪಡೆಗಾಗಿ 126 ಯುದ್ಧ ವಿಮಾನಗಳ ಖರೀದಿಗೆ ಅನುಮತಿ ನೀಡಿತ್ತು. ಬಿಡ್ಡಿಂಗ್ ಪ್ರಕ್ರಿಯೆಯೂ ಆರಂಭವಾಗಿತ್ತು. ಫ್ರಾನ್ಸ್​ನ ಡಸಲ್ಟ್ ಏವಿಯೇಷನ್ ಕಂಪನಿ ಕಡಿಮೆ ಮೊತ್ತ ಬಿಡ್ ಮಾಡುವ ಮೂಲಕ ಒಪ್ಪಂದ ತನ್ನದಾಗಿಸಿಕೊಂಡಿತ್ತು. ಬಳಿಕ ರಾಫೆಲ್ ಯುದ್ಧವಿಮಾನದ ತಾಂತ್ರಿಕ ಪರೀಕ್ಷೆ, ಪರಿಶೀಲನೆಯನ್ನು ಭಾರತಿಯ ವಾಯುಪಡೆ ಕೈಗೊಂಡಿತ್ತು. 2011ರ ವರೆಗೂ ಈ ಪ್ರಕ್ರಿಯೆ ನಡೆಯಿತು. ರಾಫೆಲ್ ವಿಮಾನ ಭಾರತೀಯ ವಾಯುಪಡೆ ಸೇರಲು ಅರ್ಹ ಎಂದು 2012ರಲ್ಲಿ ಘೋಷಿಸಲಾಯಿತು. ಬಳಿಕ ವಿಮಾನ ಕಂಪನಿ ಜತೆ ಕೇಂದ್ರ ಸರ್ಕಾರ ಮಾತುಕತೆ ಆರಂಭಿಸಿತು. ಹಲವು ತಾಂತ್ರಿಕ ಕಾರಣಗಳಿಂದಾಗಿ 2014ರ ವರೆಗೂ ಮಾತುಕತೆ ಮುಂದುವರಿಯಿತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ 2015ರಲ್ಲಿ ಫ್ರಾನ್ಸ್​ಗೆ ಭೇಟಿ ನೀಡಿ, ರಾಫೆಲ್ ಯುದ್ಧವಿಮಾನ ಕುರಿತು ಹೊಸ ಒಪ್ಪಂದ ಮಾಡಿಕೊಂಡರು. ಹಾರಾಟಕ್ಕೆ ಸಿದ್ಧವಾಗಿರುವ 36 ವಿಮಾನಗಳನ್ನು ಭಾರತಕ್ಕೆ ನೀಡುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎನ್ನಲಾಗಿತ್ತು. ಆದರೆ ಈ ವಹಿವಾಟಿನಲ್ಲಿ ಪಾರದರ್ಶಕತೆಯಿಲ್ಲ ಎಂದು ಕಾಂಗ್ರೆಸ್ ಸಹಿತ ಪ್ರತಿಪಕ್ಷಗಳು ವಾಗ್ದಾಳಿ ನಡೆಸಿದ್ದವು. 54,000 ಕೋಟಿ ರೂ.ಗೆ 126 ವಿಮಾನಗಳನ್ನು ಖರೀದಿಸುವ ಕುರಿತು ಯುಪಿಎ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಎನ್​ಡಿಎ ಸರ್ಕಾರ 36 ಯುದ್ಧವಿಮಾನಗಳಿಗೆ 58,000 ಕೋಟಿ ರೂ. ಪಾವತಿಸಲು ಮುಂದಾಗಿದೆ. ಪ್ರತಿ ವಿಮಾನವನ್ನು 428 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಯುಪಿಎ ನಿರ್ಧರಿಸಿತ್ತು. ಆದರೆ ಎನ್​ಡಿಎ ಸರ್ಕಾರ ಅದೇ ವಿಮಾನಕ್ಕೆ 1,555 ಕೋಟಿ ರೂ. ಪಾವತಿಸಲು ಮುಂದಾಗಿದೆ ಎಂದು ಕಾಂಗ್ರೆಸ್ ಈಗ ಆರೋಪ ಮಾಡುತ್ತಿದೆ. ಆದರೆ 36 ವಿಮಾನಗಳಿಗೆ ಎಷ್ಟು ಮೊತ್ತ ವೆಚ್ಚ ಮಾಡಲಾಗುತ್ತದೆ ಎಂಬುದನ್ನು ಕೇಂದ್ರ ಸರ್ಕಾರ ಇನ್ನೂ ಸ್ಟಷ್ಟಪಡಿಸಿಲ್ಲ. (ಏಜೆನ್ಸೀಸ್​)