ಪತಿ ದಿಢೀರ್​ ತಲಾಕ್​ ಕೊಟ್ಟ, ಪೊಲೀಸರ ಸೂಚನೆ ಮೇರೆಗೆ ಮನೆಯಲ್ಲೇ ಉಳಿದ ಮಹಿಳೆಗೆ ಮುಂದೆ ಆಗಿದ್ದೇನು…?

ನವದೆಹಲಿ: ಕೇಂದ್ರ ಸರ್ಕಾರ ದಿಢೀರ್​ ತ್ರಿವಳಿ ತಲಾಕ್​ ಅನ್ನು ಅಪರಾಧವನ್ನಾಗಿಸಿ ಕಾಯ್ದೆ ರೂಪಿಸಿದೆ. ಈ ಕಾಯ್ದೆ ಮುಸ್ಲಿಂ ಮಹಿಳೆಯರ ಪಾಲಿಗೆ ವರದಾನವಾಗುತ್ತದೆ ಎಂದೇ ಭಾವಿಸಲಾಗುತ್ತಿದೆ. ಆದರೆ, ಇಲ್ಲೊಬ್ಬ ಮಹಿಳೆಗೆ ಈ ಕಾಯ್ದೆ ಮಾರಕವಾಗಿ ಪರಿಣಮಿಸಿ, ಆಕೆಯ ಪ್ರಾಣವನ್ನೇ ಕಸಿದುಕೊಂಡಿದೆ!

ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಕುಗ್ರಾಮದಲ್ಲಿದ್ದ ಮುಸ್ಲಿಂ ಕುಟುಂಬದ ನಫೀಸ್​ ಮತ್ತು ಸಯೀದಾ ಆರು ವರ್ಷಗಳ ಹಿಂದೆ ನಿಖಾ ಮಾಡಿಕೊಂಡಿದ್ದರು. ದಂಪತಿಗೆ 5 ವರ್ಷದ ಮಗಳು ಇದ್ದಾಳೆ. ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದ ನಫೀಸ್​ ಇದ್ದಕ್ಕಿದ್ದಂತೆ ಪತ್ನಿಗೆ ಫೋನ್​ ಮಾಡಿ, ದಿಢೀರ್​ ತಲಾಕ್​ ನೀಡಿದ್ದ. ದಿಢೀರ್​ ತಲಾಕ್​ ರದ್ದುಗೊಳಿಸಿದ ಕಾಯ್ದೆ ಜಾರಿಗೆ ಬಂದಿರುವುದು ತಿಳಿದಿದ್ದ ಸಯೀದಾ ಪೊಲೀಸ್​ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಲು ಪ್ರಯತ್ನಿಸಿದ್ದಳು. ಆದರೆ, ದೂರು ಸ್ವೀಕರಿಸಲು ನಿರಾಕರಿಸಿದ್ದ ಪೊಲೀಸರು ಪತಿಯ ಮನೆಯಲ್ಲೇ ಉಳಿದುಕೊಳ್ಳುವಂತೆ ತಿಳಿಸಿ ಕಳುಹಿಸಿದ್ದರು.

ವಿಷಯ ತಿಳಿದ ನಫೀಸ್​ ಆ.15ರಂದು ತನ್ನ ಮನೆಗೆ ಬಂದಿದ್ದ. ಆಗ ಪೊಲೀಸರು ವಿಚಾರಣೆಗೆ ದಂಪತಿಯನ್ನು ಠಾಣೆಗೆ ಕರೆಯಿಸಿಕೊಂಡಿದ್ದರು. ತ್ರಿವಳಿ ತಲಾಕ್​ ಶಿಕ್ಷಾರ್ಹ ಅಪರಾಧವಾಗಿರುವ ಕಾಯ್ದೆಯನ್ನು ಪ್ರಸ್ತಾಪಿಸಿದ ಪೊಲೀಸರು ನಫೀಸ್​ಗೆ ಎಚ್ಚರಿಕೆ ಕೊಟ್ಟು, ಪತ್ನಿಯನ್ನು ಜತೆಯಲ್ಲಿ ಕರೆದೊಯ್ಯುವಂತೆ ಸೂಚಿಸಿದ್ದರು.

ಅದರಂತೆ ಪತ್ನಿಯನ್ನು ಮನೆಗೆ ಕರೆದುಕೊಂಡ ಬಂದ ನಫೀಸ್​ ಸಂಜೆ ವೇಳೆಗೆ ತಾನು ಈಗಾಗಲೆ ತಲಾಕ್​ ಕೊಟ್ಟಿರುವುದರಿಂದ, ಮನೆಯಿಂದ ಹೊರಹೋಗುವಂತೆ ಸಯೀದಾಗೆ ಒತ್ತಾಯಿಸಿದ್ದ. ಮಾತಿಗೆ ಮಾತು ಬೆಳೆದು, ಜಗಳ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಆಗ ತಲೆಗೂದಲು ಹಿಡಿದೆಳೆದು ಆಕೆಯನ್ನು ನಫೀಸ್​ ಗಟ್ಟಿಯಾಗಿ ಹಿಡಿದುಕೊಂಡಿದ್ದ. ಬಳಿಕ ಆತನ ಮನೆಯವರು ಆಕೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು ಎನ್ನಲಾಗಿದೆ. ತನ್ನ 5 ವರ್ಷದ ಪುತ್ರಿಯ ಎದುರೇ ಸಯೀದಾ ಜೀವಂತವಾಗಿ ಬೆಂಕಿಯಲ್ಲಿ ಬೆಂದು ಹೋದಳು ಎನ್ನಲಾಗಿದೆ.

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು 5 ವರ್ಷದ ಬಾಲಕಿಯ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಇದರ ಪ್ರಕಾರ ನಫೀಸ್​ ತನ್ನ ಪತ್ನಿಯನ್ನು ಗಟ್ಟಿಯಾಗಿ ಹಿಡಿದುಕೊಂಡರೆ, ಆತನ ಇಬ್ಬರು ಸಹೋದರಿಯರು ಸಯೀದಾ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹೆಚ್ಚಿದ್ದಾರೆ. ಇದನ್ನು ಆಧರಿಸಿ ನಫೀಸ್​ ಮತ್ತಾತನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *