ಬಾಲಾಕೋಟ್​ನಲ್ಲಿ ಭಾರತ ನಡೆಸಿದ್ದ ದಾಳಿಯಲ್ಲಿ ಸತ್ತವರೆಷ್ಟು? ಗಾಯಗೊಂಡವರೆಷ್ಟು: ಸವಿಸ್ತಾರ ವರದಿ ಮಾಡಿದ ಇಟಾಲಿಯನ್​ ಪತ್ರಕರ್ತೆ

ನವದೆಹಲಿ: ಫೆ.14ರಂದು ಪುಲ್ವಾಮಾದಲ್ಲಿ ಉಗ್ರರ ದಾಳಿಯಾಗಿ ಸುಮಾರು 40 ಜನ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ವಾಯಪಡೆ ಪಾಕ್​ನ ಬಾಲಾಕೋಟ್​ನಲ್ಲಿರುವ ಜೈಷ್​ ಎ ಮೊಹಮ್ಮದ್​ ಉಗ್ರನೆಲೆಯ ಮೇಲೆ ಏರ್​ಸ್ಟ್ರೈಕ್​ ನಡೆಸಿತ್ತು. ಆದರೆ ಆ ದಾಳಿಯಲ್ಲಿ ಇದುವರೆಗೆ ಎಷ್ಟು ಜನ ಸತ್ತಿದ್ದಾರೆಂಬ ಖಚಿತ ಮಾಹಿತಿ ಸಿಕ್ಕಿಲ್ಲ.

ಪಾಕಿಸ್ತಾನವಂತೂ ಪದೇಪದೆ ಭಾರತದ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ, ಯಾರ ಜೀವವೂ ಹೋಗಿಲ್ಲ ಎಂಬುದನ್ನೇ ಪ್ರತಿಪಾದಿಸುತ್ತಿದೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ದಾಳಿಯಾದ ಸ್ಥಳವನ್ನು ದರ್ಶನ ಮಾಡಿಸಿತ್ತು. ಹಾಗೇ ಭಾರತೀಯ ಮಾಧ್ಯಮದವರು ಬರಲು ಇಚ್ಛಿಸಿದರೆ ಕರೆದುಕೊಂಡು ಹೋಗುವುದಾಗಿಯೂ ಹೇಳಿದೆ.

ಆದರೆ ಈಗ ವಿದೇಶಿ ಮಾಧ್ಯಮವೊಂದು ಪಾಕ್​ನ ಬಾಲಾಕೋಟ್​ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಗೆ 170ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ ಎಂದು ವರದಿ ಮಾಡಿದೆ.

ಇಟಾಲಿಯನ್​ ಪತ್ರಕರ್ತೆ ಫ್ರಾನ್ಸೆಸ್ಕೋ ಮೆರಿನೋ ಎಂಬುವರು ವರದಿ ಮಾಡಿದ್ದಾರೆ. ಅವರು ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿ, ಭಾರತದ ವಾಯುದಾಳಿಯಿಂದ ಬಾಲಾಕೋಟ್​ನಲ್ಲಿ ಯಾವುದೇ ಹಾನಿಯಾಗಿಲ್ಲ ಎಂದು ಪಾಕಿಸ್ತಾನ ಸುಳ್ಳು ಹೇಳುತ್ತಿದೆ ಎಂದು ಹೇಳಿದ್ದಾರೆ.

ಈ ದಾಳಿಯಿಂದ ಆದ ನೈಜ ಹಾನಿಯ ವಿಚಾರದಲ್ಲಿ ವಿಶ್ವದ ಕಣ್ಣಿಗೆ ಪಾಕಿಸ್ತಾನ ಮಣ್ಣೆರಚಿದೆ. ಫೆ.26ರಂದು ನಸುಕಿನಲ್ಲಿ ಏನಾಯಿತು ಎಂಬುದನ್ನು ಹೊರಗೆಲ್ಲೂ ಹೇಳುತ್ತಿಲ್ಲ. ಅಂದು ಭಾರತೀಯ ಯೋಧರು ಯಶಸ್ವಿಯಾಗಿ ಬಾಂಬ್​ ದಾಳಿ ನಡೆಸಿ ಹೋದ ಎರಡು ತಾಸಿನ ಬಳಿಕ ಅಂದರೆ ಮುಂಜಾನೆ 6ಗಂಟೆಗೆಲ್ಲ ಪಾಕ್ ಸೇನೆ ಬಾಲಾಕೋಟ್​ಗೆ ತೆರಳಿದೆ. ದಾಳಿಯಲ್ಲಿ ಗಾಯಗೊಂಡವರನ್ನು ಕೂಡಲೇ ಹರ್ಕಾರ್​ ಉಲ್​ ಮುಜಾಹಿದ್ದೀನ್ ಶಿಬಿರಕ್ಕೆ ಸಾಗಿಸಿ ಅಲ್ಲಿ ಪಾಕ್​ ಸೈನ್ಯದ ವೈದ್ಯರೇ ಅವರಿಗೆಲ್ಲ ಚಿಕಿತ್ಸೆ ನೀಡಿದ್ದಾರೆ ಎಂದು ಮೆರಿನೋ ತಮ್ಮ ವರದಿಯಲ್ಲಿ ಬರೆದಿದ್ದಾರೆ.

ದಾಳಿಯಿಂದಾಗಿ ಅಂದಾಜು 130ರಿಂದ 170 ಉಗ್ರರು ಮೃತಪಟ್ಟಿದ್ದಾರೆ. ಅದರಲ್ಲಿ 11 ಜನ ಜೈಷ್​ ಎ ಮೊಹಮ್ಮದ್​ ಸಂಘಟನೆಯಲ್ಲಿ ತರಬೇತುದಾರರು. ಬಾಂಬ್​ ತಯಾರಿಕೆಯಿಂದ ಹಿಡಿದು, ಶಸ್ತ್ರಾಸ್ತ್ರಗಳಿಂದ ದಾಳಿ ಮಾಡುವುದನ್ನೂ ಅವರು ಕಲಿಸುತ್ತಿದ್ದರು. ಈ ಎಲ್ಲ ವಿಷಯಗಳೂ ನನ್ನ ಬಲವಾದ ಮೂಲಗಳಿಂದಲೇ ಬಂದಿರುವಂಥದ್ದು. ಸುಮಾರು ಒಂದು ವಾರದಿಂದ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ ಎಂದೂ ಪತ್ರಕರ್ತೆ ಬರೆದುಕೊಂಡಿದ್ದಾರೆ.

ಏರ್​ಸ್ಟ್ರೈಕ್​ನಲ್ಲಿ ಒಟ್ಟು 45 ಜನರು ಗಂಭೀರ ಗಾಯಗೊಂಡಿದ್ದರು. ಅದರಲ್ಲಿ ಕೆಲವರಿಗೆ ಇನ್ನೂ ಸೈನ್ಯದ ಶಿಬಿರದಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿದೆ. ಯಾರು ಗುಣಮುಖರಾಗಿದ್ದಾರೋ ಅವರನ್ನೆಲ್ಲ ಪಾಕ್​ ಸೇನೆ ತನ್ನ ಬಂಧನದಲ್ಲೇ ಇಟ್ಟುಕೊಂಡಿದೆ. ಗುಡ್ಡದ ಮೇಲಿದ್ದ ಜೈಷ್​ ಎ ಮೊಹಮ್ಮದ್​ ತರಬೇತಿ ಶಿಬಿರವೂ ಕೂಡ ಸೇನೆಯ ವಶದಲ್ಲೇ ಇದೆ. ಸ್ಥಳೀಯ ಪೊಲೀಸರಿಗೂ ಆ ರಸ್ತೆಯಲ್ಲಿ ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ.

One Reply to “ಬಾಲಾಕೋಟ್​ನಲ್ಲಿ ಭಾರತ ನಡೆಸಿದ್ದ ದಾಳಿಯಲ್ಲಿ ಸತ್ತವರೆಷ್ಟು? ಗಾಯಗೊಂಡವರೆಷ್ಟು: ಸವಿಸ್ತಾರ ವರದಿ ಮಾಡಿದ ಇಟಾಲಿಯನ್​ ಪತ್ರಕರ್ತೆ”

  1. Our illiterate politicians are like Rajas during British era. They damage national interest for self . We are divided. By poking proof we can understand our level of interest and national intrest

Comments are closed.