ಹನುಮಂತ ಜಾಟ್‌ ಸಮುದಾಯಕ್ಕೆ ಸೇರಿದವನು: ಯುಪಿ ಬಿಜೆಪಿ ಸಚಿವ

ಲಖನೌ: ಹನುಮ ಯಾವ ಜಾತಿಗೆ ಸೇರಿದವರು ಎನ್ನುವ ಕುರಿತು ಭಾರಿ ಚರ್ಚೆಯಾಗುತ್ತಿದ್ದು, ಹನುಮಂತ ಜಾಟ್‌ ಸಮುದಾಯಕ್ಕೆ ಸೇರಿದವನು ಎಂದು ಉತ್ತರಪ್ರದೇಶದ ಧಾರ್ಮಿಕ ವ್ಯವಹಾರಗಳ ಖಾತೆ ಸಚಿವ ಲಕ್ಷ್ಮಿ ನಾರಾಯಣ್‌ ಚೌಧರಿ ಹೇಳಿದ್ದಾರೆ.

ಹಿಂದು ದೇವತೆ ಹನುಮನ ಲಕ್ಷಣಗಳು ಜಾಟ್‌ ಸಮುದಾಯದ ವ್ಯಕ್ತಿಗೆ ಹೋಲುತ್ತವೆ. ನಾನು ಹನುಮಂತ ಜಾಟ್‌ ಎಂದು ಭಾವಿಸುತ್ತೇನೆ. ಯಾಕೆಂದರೆ ಯಾರಾದರೂ ತೊಂದರೆಗೆ ಸಿಲುಕಿದ್ದಾರೆ ಎಂದರೆ ಜಾಟ್‌ ಸಮುದಾಯವರು ಸಮಸ್ಯೆ ಅಥವಾ ಮನುಷ್ಯರು ಯಾರೆಂದು ತಿಳಿಯದೆಯೇ ಅಲ್ಲಿಗೆ ಧುಮುಕುತ್ತಾರೆ. ಇದೇ ರೀತಿ ಹನುಮಂತನ ನಡವಳಿಕೆಯು ಕೂಡ ಇದನ್ನು ಹೋಲುವಂತೆಯೇ ಇದೆ. ಅಂದು ಸೀತಾಮಾತೆಯನ್ನು ರಾವಣ ಅಪಹರಿಸಿದ್ದಾಗ ಹನುಮ ಕೂಡ ರಾಮನ ಅನುಯಾಯಿಯಾಗಿ ಸಹಾಯಕ್ಕೆ ನಿಂತಿದ್ದ ಎಂದು ತಿಳಿಸಿದರು.

ವ್ಯಕ್ತಿಯ ವಂಶಾವಳಿಯನ್ನು ಆತನ ನಡವಳಿಕೆಯ ಆಧಾರದಿಂದಲೂ ಗುರುತಿಸಬಹುದು. ಸನಾತನ ಧರ್ಮದಲ್ಲಿ ಯಾರು ನಂಬಿಕೆಯನ್ನಿಟ್ಟುಕೊಂಡಿರುತ್ತಾರೋ ಅವರು ಖಂಡಿತವಾಗಿಯು ಹನುಮನ ಪೂಜೆ ಮಾಡುತ್ತಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈಗಾಗಲೇ ಈ ಕುರಿತು ವಿವರಿಸಿದ್ದಾರೆ. ಒಬ್ಬ ವ್ಯಕ್ತಿಯ ವರ್ತನೆಯನ್ನು ಗಮನಿಸಿದರೆ ಆತನ ವಂಶಾವಳಿ ಯಾವುದೆಂದು ನಾವು ತೀರ್ಮಾನಿಸಬಹುದು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.

ಹನುಮಂತ ಮುಸ್ಲಿಂ ಸಮುದಾಯದವನು

ಇನ್ನು ಗುರುವಾರವಷ್ಟೇ ಉತ್ತರಪ್ರದೇಶದ ಬಿಜೆಪಿ ಎಂಎಲ್‌ಸಿ ಬುಕ್ಕಾಲ್‌ ನವಾಬ್, ಹನುಮಂತ ಮುಸ್ಲಿಂ ಎಂದು ಹೇಳುವ ಮೂಲಕ ಹನುಮನಿಗೆ ಹೊಸ ಗುರುತನ್ನು ನೀಡಿದ್ದರು. ಹನುಮಂತ ಮುಸ್ಲಿಂ ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿಯೇ ಇಸ್ಲಾಂ ಧರ್ಮದಲ್ಲಿನ ಜನರ ಹೆಸರುಗಳು ಹನುಮಂತನಿಗೆ ಹೋಲುತ್ತವೆ. ಅವೆಂದರೆ ರೆಹಮಾನ್, ರಮ್‌ಜಾನ್‌, ಫರ್ಮನ್, ಝೀಶನ್ ಮತ್ತು ಕುರ್ಬನ್ ಎಂಬಂತಹ ಹೆಸರುಗಳು ಇಸ್ಲಾಂನಲ್ಲಿ ಮಾತ್ರ ಕಂಡುಬರುತ್ತವೆ ಎಂದು ಸಮರ್ಥಿಸಿಕೊಂಡಿದ್ದರು.

ಇದಕ್ಕೂ ಮುನ್ನ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್‌ ಕೂಡ ರಾಜಸ್ಥಾನದ ಚುನಾವಣೆ ಪ್ರಚಾರವೊಂದರಲ್ಲಿ ಹನುಮಂತ ದಲಿತ ಎಂದು ಹೇಳಿದ್ದರು. (ಏಜೆನ್ಸೀಸ್)