ಕೋತಿಗಳ ಇಟ್ಟಿಗೆ ಏಟಿಗೆ ವೃದ್ಧನ ಸಾವು, ಮಂಗಗಳ ವಿರುದ್ಧ ಎಫ್‌ಐಆರ್‌ಗೆ ಒತ್ತಾಯ

ಬಾಘಪತ್‌: ಮಂಗಗಳಿಂದ ಕಲ್ಲು ಎಸೆತಕ್ಕೆ ಗುರಿಯಾಗಿ ವ್ಯಕ್ತಿಯೋರ್ವ ಮೃತಪಟ್ಟಿರುವ ವಿಚಿತ್ರ ಘಟನೆ ಉತ್ತರಪ್ರದೇಶದ ಬಾಘಪತ್‌ನಲ್ಲಿ ನಡೆದಿದ್ದು, ಮಂಗಗಳ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಮೃತನ ಕುಟುಂಬಸ್ಥರು ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೊಬರ್‌ 17ರಂದು ಬಾಘಪತ್‌ ಜಿಲ್ಲೆಯ ತಿಕ್ರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತನನ್ನು 70 ವರ್ಷದ ಧರಂಪಾಲ್‌ ಎಂದು ಗುರುತಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸ್​ ಸರ್ಕಲ್‌ ಇನ್ಸ್​ಪೆಕ್ಟರ್​ ರಮಲ ರಾಜೀವ್‌ ಪ್ರತಾಪ್‌ ಸಿಂಗ್‌, ಇಟ್ಟಿಗೆಗಳನ್ನು ಜೋಡಿಸಿರುವ ಕಡೆ ವ್ಯಕ್ತಿ ಮಲಗಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದ ಕೋತಿಗಳು ಇಟ್ಟಿಗೆ ಮೇಲೆ ಎಗರಿವೆ. ಇದರಿಂದಾಗಿ ಜೋಡಿಸಿದ್ದ ಇಟ್ಟಿಗೆಗಳು ಮಲಗಿದ್ದ ವ್ಯಕ್ತಿಯ ಮೇಲೆ ಬಿದ್ದಿದ್ದರಿಂದ ಆತ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.

ಆದರೆ, ಮೃತನ ಸಹೋದರ ಕೃಷ್ಣಪಾಲ್‌ ಸಿಂಗ್‌ ಹೇಳುವುದೇ ಬೇರೆ, ಆತನ ಸೋದರ ಧರಂಪಾಲ್‌ ಹೋಮಕ್ಕಾಗಿ ಕಟ್ಟಿಗೆಯನ್ನು ಸಂಗ್ರಹಿಸಲೆಂದು ತೆರಳಿದ್ದ ವೇಳೆ ಮಂಗಗಳು ಆತನ ಮೇಲೆ ದಾಳಿ ಮಾಡಿವೆ. ನಂತರ ಇಟ್ಟಿಗೆಗಳನ್ನು ಆತನ ತಲೆ ಮತ್ತು ಎದೆ ಭಾಗಕ್ಕೆ ಎಸೆದಿವೆ ಎಂದಿದ್ದಾರೆ.

ಈ ಕುರಿತು ನಾವು ಪೊಲೀಸರಿಗೆ ಮಂಗಗಳ ವಿರುದ್ಧ ದೂರನ್ನು ನೀಡಿದರೂ ಕೂಡ ಪೊಲೀಸರು ಇದೊಂದು ಆಕಸ್ಮಿಕ ಘಟನೆ ಎಂದು ತಳ್ಳಿಹಾಕುತ್ತಿದ್ದಾರೆ. ಆದ್ದರಿಂದ ನಾವು ಹಿರಿಯ ಅಧಿಕಾರಿಯನ್ನು ಭೇಟಿ ಮಾಡಿ ಘಟನೆ ಕುರಿತಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)