ವರದಕ್ಷಿಣೆ ಕೊಟ್ಟಿಲ್ಲವೆಂದು ಸೌದಿ ಅರೇಬಿಯಾದಿಂದಲೇ ಪತ್ನಿಗೆ ತ್ರಿವಳಿ ತಲಾಕ್​!

ಬಹ್ರೈಚ್​: ವರದಕ್ಷಿಣೆ ನೀಡಿಲ್ಲವೆಂದು ಪತ್ನಿಗೆ ಫೋನ್​ ಮೂಲಕವೇ ತ್ರಿವಳಿ ತಲಾಕ್​ ನೀಡಿದ್ದ ವ್ಯಕ್ತಿಯ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತ್ರಿವಳಿ ತಲಾಕ್​ ಕುರಿತು ಸುಪ್ರೀಂ ಕೋರ್ಟ್​ ಸುಗ್ರೀವಾಜ್ಞೆ ಹೊರಡಿಸಿದ ಒಂದು ವಾರದಲ್ಲೇ ಈ ಘಟನೆ ನಡೆದಿದ್ದು, ನನ್ನ ಮಗಳಿಗೆ ಅತ್ತೆ, ಮಾವನಿಂದಲೂ ಕಿರುಕುಳವಾಗುತ್ತಿತ್ತು ಎಂದು ಸಂತ್ರಸ್ತ ಮಹಿಳೆಯ ತಾಯಿ ಹೇಳಿಕೊಂಡಿದ್ದಾರೆ.

ಎಂಟು ತಿಂಗಳ ಹಿಂದೆ ನಾನು ಮದುವೆಯಾಗಿದ್ದೆ. ವರದಕ್ಷಿಣೆ ವಿಚಾರವಾಗಿ ನನ್ನ ಅತ್ತೆ ನನಗೆ ಹೊಡೆಯುತ್ತಿದ್ದರು. ತಾಯಿ ಮನೆಯಿಂದ 50 ಸಾವಿರ ರೂ. ಮತ್ತು ಬೈಕ್​ ತೆಗೆದುಕೊಂಡು ಬರುವಂತೆ ಒತ್ತಾಯಿಸುತ್ತಿದ್ದರು ಎಂದು ಸಂತ್ರಸ್ತೆ ನೂರಿ ಹೇಳಿಕೊಂಡಿದ್ದಾರೆ.

ಘಟನೆ ಕುರಿತು ಮಾಹಿತಿ ನೀಡಿರುವ ಸಂತ್ರಸ್ತೆಯ ತಾಯಿ, ವರದಕ್ಷಿಣೆ ಹೊಂದಿಸಿಲ್ಲ ಎಂಬ ಕಾರಣಕ್ಕೆ ನನ್ನ ಅಳಿಯ ಸೌದಿ ಅರೇಬಿಯಾದಿಂದಲೇ ಮಗಳಿಗೆ ವಿಚ್ಛೇದನ ನೀಡಿದ್ದಾನೆ. ಆಕೆಯ ಅತ್ತೆ ಮಾವ ಕೂಡ ಆಕೆಯನ್ನು ಸರಿಯಾಗಿ ನೋಡಿಕೊಂಡಿಲ್ಲ. ನನ್ನ ಮಗಳಿಗೆ ನ್ಯಾಯ ಕೊಡಿಸಿ ಎಂದು ಕೇಳಿಕೊಂಡಿದ್ದಾರೆ.

ಮುಸ್ಲಿಂ ಮಹಿಳಾ ಕಾಯ್ದೆ ಮತ್ತು ಇತರ ಐಪಿಸಿ ಸೆಕ್ಷನ್​ನಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಸೌದಿ ಅರೇಬಿಯಾದಲ್ಲಿದ್ದು, ಪ್ರಕರಣದ ಕುರಿತು ತನಿಖೆ ನಡೆಸಿ ಅವಶ್ಯವಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. (ಏಜೆನ್ಸೀಸ್)