ಉತ್ತರ ಪ್ರದೇಶದಲ್ಲಿ ತಲೆ ಎತ್ತಲಿವೆ ನಾಲ್ಕು ಪ್ರತಿಮೆಗಳು

ಲಖನೌ: ಗುಜರಾತ್​ನಲ್ಲಿ ಜಗತ್ತಿನ ಎತ್ತರದ ಪಟೇಲ್​ ಪ್ರತಿಮೆ ಅನಾವರಣಗೊಳ್ಳುತ್ತಲೇ ದೇಶದಲ್ಲಿ ಪ್ರತಿಮೆಗಳ ಪರ್ವ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಬಿಜೆಪಿಯದ್ದೇ ಸರ್ಕಾರವಿರುವ ಉತ್ತರ ಪ್ರದೇಶದಲ್ಲೇ ಅಂಥ ನಾಲ್ಕು ಪ್ರತಿಮೆಗಳು ನಿರ್ಮಾಣವಾಗುತ್ತಿವೆ.

ಅದರೆ, ಅವೆಲ್ಲವೂ ಪಟೇಲ್​ ಪ್ರತಿಮೆಯಷ್ಟು ಎತ್ತರವಿರುವುದಿಲ್ಲ. 3 ಸಾವಿರ ಕೋಟಿ ರೂಪಾಯಿಯಷ್ಟು ದೊಡ್ಡ ಯೋಜನೆಯೂ ಅಲ್ಲ. ಈ ಕುರಿತು ಮಾಹಿತಿ ನೀಡಿರುವ ಉತ್ತರ ಪ್ರದೇಶದ ಸಂಸ್ಕೃತಿ ಇಲಾಖೆ ಅಧಿಕಾರಿ ಶಿಶಿರ್​, “ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಮತ್ತು ಸ್ವಾಮಿ ವಿವೇಕಾನಂದ ಅವರ ಪ್ರತಿಮೆ ಸೇರಿದಂತೆ ಒಟ್ಟು ನಾಲ್ಕು ಪ್ರತಿಮೆಗಳನ್ನು ಸ್ಥಾಪಿಸಲು ಸರ್ಕಾರ ಉದ್ದೇಶಿಸಿದೆ. 25 ಅಡಿ ಎತ್ತರದ ಅಟಲ್​ಜೀ ಪ್ರತಿಮೆಯನ್ನು ಲೋಕಭವನದ ಎದುರು, ವಿವೇಕಾನಂದರ ಪ್ರತಿಮೆಯನ್ನು ರಾಜಭವನದ ಎದುರು ಸ್ಥಾಪಿಸಲಾಗುವುದು,” ಎಂದು ಅವರು ಹೇಳಿದ್ದಾರೆ.

ಇನ್ನು ನಾಥ ಪರಂಪರೆಯ ಸ್ವಾಮೀಜಿಗಳಾದ ಮಹಾಂತ್​ ಅವೈದ್ಯನಾಥ್​ ಮತ್ತು ಮಹಾಂತ್​ ದಿಗ್ವಿಜಯನಾಥ್​ ಅವರ 12.5 ಅಡಿ ಎತ್ತರದ ಪ್ರತಿಮೆಗಳು ಘೋರಕ್​ಪುರದಲ್ಲಿ ಸ್ಥಾಪನೆಯಾಗಲಿವೆ. ಈ ನಾಲ್ಕೂ ಪ್ರತಿಮೆಗಳ ನಿರ್ಮಾಣಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಈಗಾಗಲೇ ಒಪ್ಪಿಗೆ ನೀಡಿದ್ದು, ನಿರ್ಮಾಣ ಕಾರ್ಯವೂ ಆರಂಭವಾಗಿದೆ ಎಂದು ಸಂಸ್ಕೃತಿ ಇಲಾಖೆ ಮೂಲಗಳು ತಿಳಿಸಿವೆ.

ಈ ನಡುವೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಟೀಕಿಸಿರುವ ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಿಎಂ ಅಖಿಲೇಶ್​ ಯಾದವ್​, ” ಮುಖ್ಯಮಂತ್ರಿಗಳು ಅಭಿವೃದ್ಧಿ ಮತ್ತು ಕೆಲಸ ಕಾರ್ಯಗಳ ಬಗ್ಗೆ ಮಾತನಾಡಲಿ,” ಎಂದು ಸಲಹೆ ನೀಡಿದ್ದಾರೆ.