ಬಿಎಸ್‌ಪಿಗೆ ಮತ ಹಾಕಲು ಹೋಗಿ ಬಿಜೆಪಿಗೆ ಮತ ಚಲಾಯಿಸಿದ ಯುವಕ ಮಾಡಿಕೊಂಡಿದ್ದನ್ನು ಕೇಳಿದರೆ ಶಾಕ್‌ ಆಗ್ತೀರಾ!

ನವದೆಹಲಿ: ಎರಡನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿಗೆ ಮತ ಚಲಾಯಿಸಲು ಹೋಗಿ ಅಕಸ್ಮಾತ್‌ ಆಗಿ ಬಿಜೆಪಿಗೆ ಮತ ಚಲಾಯಿಸಿದ್ದಕ್ಕೆ ನೊಂದ ಬಿಎಸ್‌ಪಿ ಕಾರ್ಯಕರ್ತ ತನ್ನ ಬೆರಳನ್ನೇ ಕತ್ತರಿಸಿಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಬುಲಂದ್ ಶಹರ್ ಮೂಲದ 25 ವರ್ಷದ ದಲಿತ ಯುವಕ ಪವನ್‌ ಕುಮಾರ್‌ ಎಂಬಾತ ಮತ ಚಲಾಯಿಸಲು ತೆರಳಿದ್ದಾಗ ಬಿಎಸ್‌ಪಿ ಚಿಹ್ನೆಯಿದ್ದ ಬಟನ್‌ ಒತ್ತುವ ಬದಲಾಗಿ ಬಿಜೆಪಿಗೆ ಮತ ಚಲಾಯಿಸಿದ್ದಾನೆ. ಇದರಿಂದಾಗಿ ನಿರಾಸೆಗೊಂಡ ಆತ ಕೋಪದಿಂದ ತನ್ನ ಕೈ ಬೆರಳನ್ನು ಕತ್ತರಿಸಿಕೊಂಡಿದ್ದಾನೆ.

ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿ ಚಿಕಿತ್ಸೆ ನಂತರ ಮರಳಿದ್ದಾನೆ. ಈ ಕುರಿತು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು, ಬೆರಳು ಕತ್ತರಿಸಿಕೊಂಡಿದ್ದರ ಹಿಂದಿನ ಘಟನೆಯನ್ನು ವಿವರಿಸಿದ್ದಾನೆ.

ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿಯ ಮೈತ್ರಿ ಅಭ್ಯರ್ಥಿಯಾಗಿ ಯೋಗೇಶ್‌ ಶರ್ಮಾ ಕಣದಲ್ಲಿದ್ದರೆ, ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಸಂಸದ ಭೋಲಾ ಸಿಂಗ್ ಸ್ಪರ್ಧಿಸಿದ್ದರು. ಪವನ್‌ ಮತ ಚಲಾಯಿಸಲು ಶಿಕಾರ್​​ಪುರ್ ಮತಗಟ್ಟೆ ಕೇಂದ್ರಕ್ಕೆ ತೆರಳಿ ಬಿಎಸ್​​ಪಿಗೆ ಮತ ಚಲಾಯಿಸಲು ಹೋಗಿ ಕಣ್ತಪ್ಪಿ ಬಿಜೆಪಿಗೆ ವೋಟು ಹಾಕಿದ್ದಾನೆ. (ಏಜೆನ್ಸೀಸ್)