ಮುಳಬಾಗಿಲು: ನಗರದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜಯವಾಣಿ, ಸುರಕ್ಷಾ ಟ್ರಸ್ಟ್ ಹಾಗೂ ಶಾಲೆಯ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದರ ೧೬೨ನೇ ಜಯಂತಿ ಅಂಗವಾಗಿ ಸೋಮವಾರ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಗೆ ಉತ್ತಮ ಸ್ಪಂದನೆ ವ್ಯಕ್ತವಾಯಿತು.
`ಭವಿಷ್ಯದ ಭಾರತ ನಿರ್ಮಾಣದಲ್ಲಿ ಯುವ ಜನರ ಪಾತ್ರ’ ವಿಚಾರ ಕುರಿತ ಸ್ಪರ್ಧೆಯಲ್ಲಿ ವಿವಿಧ ಶಾಲಾ-ಕಾಲೇಜುಗಳಿಂದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬೆಳಗ್ಗೆ 11 ಗಂಟೆಗೆ ಸ್ಪರ್ಧೆ ಆರಂಭವಾಯಿತು. ಪಾಲ್ಗೊಂಡಿದ್ದ 50 ಮಂದಿ ಪೈಕಿ ಕೆಲವರು ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಪ್ರಬಂಧ ಬರೆದರು. ಎರಡೂ ಮಾಧ್ಯಮದ ಪ್ರಥಮ, ದ್ವಿತೀಯ, ತೃತೀಯ ಹಾಗೂ ಮೆಚ್ಚುಗೆ ಪಡೆದ ವಿಜೇತರನ್ನು ಆಯ್ಕೆ ಮಾಡಲಾಯಿತು.
ಸ್ಪರ್ಧಾ ವಿಜೇತರ ವಿವರ
ಸ್ವಾಮಿ ವಿವೇಕಾನಂದ ಶಾಲೆಯ ಧ್ರುವ ಚರಣ್, ಜ್ಞಾನಜ್ಯೋತಿ ಶಾಲೆಯ ಮೌನ ಪ್ರಥಮ, ಸ್ವಾಮಿ ವಿವೇಕಾನಂದ ಶಾಲೆಯ ಮೇಘನಾ, ಜ್ಞಾನಜ್ಯೋತಿ ಶಾಲೆಯ ಹಾಸಿನಿ ದ್ವಿತೀಯ, ಜ್ಞಾನ ಜ್ಯೋತಿ ಶಾಲೆಯ ನವ್ಯಾ, ಸ್ವಾಮಿ ವಿವೇಕಾನಂದ ಶಾಲೆಯ ಎಂ.ವರ್ಷಿತಾ ತೃತೀಯ ಬಹುಮಾನ ಪಡೆದುಕೊಂಡರು.
ವಿಜೇತರಿಗೆ ತಹಸೀಲ್ದಾರ್ ಗೀತಾ, ಶಾಲೆಯ ವ್ಯವಸ್ಥಾಪಕ ಸುರೇಂದ್ರಗೌಡ, ಸಮಾಜ ಸೇವಕ ಸತೀಶ್, ನಿವೃತ್ತ ಮುಖ್ಯ ಶಿಕ್ಷಕ ಚನ್ನರಾಯಪ್ಪ ಬಹುಮಾನ, ಪ್ರಮಾಣಪತ್ರ ವಿತರಿಸಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ವಿವೇಕಾನಂದ ಶಾಲೆವತಿಯಿಂದ ಪರೀಕ್ಷಾ ಬೈಂsಡ್ ವಿತರಿಸಲಾಯಿತು.
* ಗಣ್ಯರ ಹಾದಿಯಲ್ಲಿ ಸಾಗಿ
ಯಾವುದೇ ಕ್ಷೇತ್ರ ಅಭಿವೃದ್ಧಿ ಹೊಂದಲು ಯುವಕರ ಪಾತ್ರ ಬಹಳ ಮುಖ್ಯ, ಗಣ್ಯರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗಿದಾಗ ಗುರಿ ಸಾಧನೆ ಮಾಡಬಹುದು ಎಂದು ತಹಸೀಲ್ದಾರ್ ಗೀತಾ ಅಭಿಪ್ರಾಯಪಟ್ಟರು.
ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಮಾಣಪತ್ರ, ಬಹುಮಾನ ಗೆಲ್ಲುವುದು ಮುಖ್ಯವಲ್ಲ, ಪಾಲ್ಗೊಂಡಿರುವ ಸ್ಪರ್ಧೆ ಯಾವುದು, ಯಾವುದರ ಬಗ್ಗೆ ಪ್ರಬಂಧ ಬರೆದಿದ್ದೇವೆ ಎಂಬುದನ್ನು ಗ್ರಹಿಸಬೇಕು. ಕಾಲಕ್ಕೆ ತಕ್ಕಂತೆ ವಿಜಯವಾಣಿಯಿಂದ ಸೂಕ್ತ ವಿಚಾರ ಕುರಿತು ಪ್ರಬಂಧ ಏರ್ಪಡಿಸಿದ್ದಾರೆ. ಸಮಾಜವನ್ನು ಸಂಘಟನೆ ಮಾಡುವುದು, ಯುವಕರನ್ನು ಎಚ್ಚರಿಸುವ ನಿಟ್ಟಿನಲ್ಲಿ ವಿಜಯವಾಣಿ ಕಾರ್ಯಕ್ರಮ ಶ್ಲಾಘನೀಯ ಎಂದರು.
* ರೋಮಾಂಚನಗೊಳಿಸುವ ಘೋಷಣೆ
ಸ್ವಾಮಿ ವಿವೇಕಾನಂದ ಅವರು ವಿಚಾರಧಾರೆಗಳಿಂದಲೇ ಭಾರತವನ್ನು ಜಗತ್ತಿನ ಮಟ್ಟದಲ್ಲಿ ಎತ್ತಿ ತೋರಿಸಿದ್ದಾರೆ. ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಘೋಷ್ಯ ವಾಕ್ಯವು ಮೈ ರೋಮಂಚನವಾಗಿಸುತ್ತದೆ. ಮನಸ್ಸಿನಲ್ಲಿ ಅಂದುಕೊಂಡು ಯೋಜನೆ ರೂಪಿಸಿಕೊಳ್ಳಬಾರದು, ಅದನ್ನು ಕಾರ್ಯರೂಪಕ್ಕೆ ತರಬೇಕು, ಆಗ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತಹಸೀಲ್ದಾರ್ ಗೀತಾ ಹೇಳಿದರು. ಸ್ವಾಮಿ ವಿವೇಕಾನಂದರ ವೇದವಾಕ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
* ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ
ಮಹನೀಯರ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಮಾದರಿಯಾಗಿದೆ. ಸ್ವಾಮಿ ವಿವೇಕಾನಂದರ ವಿಚಾರಗಳು ಸಾಗರದಷ್ಟಿವೆ. ಅವರ ವಿಚಾರಧಾರೆಗಳನ್ನು ವಿಶ್ವವೇ ಒಪ್ಪಿಕೊಂಡಿದೆ. ಅವರ ಬಗ್ಗೆ ತಿಳಿದುಕೊಳ್ಳಲು ಒಂದೆರಡು ದಿನ ಸಾಲದು. ಅವರ ತತ್ವ-ಆದರ್ಶಗಳನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಬೇಕು ಎಂದು ವಕೀಲ ಜಯಪ್ಪ ಸಲಹೆ ನೀಡಿದರು.
* ಪರಿಸರ ಕಾಳಜಿ ಇರಲಿ
ಇತ್ತೀಚಿನ ದಿನಗಳಲ್ಲಿ ಕೃತಕ ತಂತ್ರಜ್ಞಾನವು ಯುವಕರ ಮೇಲೆ ಪರಿಣಾಮ ಬೀರುತ್ತಿದೆ, ಈ ಸಂದರ್ಭದಲ್ಲಿ ಎಚ್ಚರಗೊಳಿಸಲು ಆಯ್ಕೆ ವಿಚಾರ ಸೂಕ್ತವಾಗಿದೆ. ಪರಿಣಾಮ ಬೀರುವ ವಿಚಾರಗಳತ್ತ ಗಮನ ಹರಿಸಬಾರದು ಎಂದು ನಿವೃತ್ತ ಮುಖ್ಯಶಿಕ್ಷಕ ಚನ್ನರಾಯಪ್ಪ ಎಚ್ಚರಿಸಿದರು. ಮನುಷ್ಯನ ವರ್ತನೆಯಿಂದ ಪರಿಸರ ನಾಶವಾಗುತ್ತಿದೆ, ಮಕ್ಕಳು ಕಾಳಜಿವಹಿಸಿ ಪರಿಸರ ಉಳಿಸಿ, ರಕ್ಷಿಸಲು ಮುಂದಾಗಬೇಕು ಎಂದು ಹೇಳಿದರು.
* ನಿತ್ಯ ಸ್ಮರಿಸೋಣ
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಸುರೇಂದ್ರಗೌಡ ಮನಾತನಾಡಿ, ವಿವೇಕಾನಂದರ ಜಯಂತಿಯು ಒಂದು ದಿನಕ್ಕೆ ಸಿಮೀತಗೊಳ್ಳಬಾರದು. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ನಿತ್ಯ ಸ್ಮರಿಸಬೇಕು, ಆ ಮೂಲಕ ನಿತ್ಯ ಆಚರಿಸಬೇಕು ಎಂದು ಹೇಳಿದರು. ಮನಸ್ಸಿನಲ್ಲಿನ ಕಲ್ಮಶಗಳನ್ನು ನಿವಾರಣೆ ಮಾಡಿಕೊಂಡು ವಿವೇಕಾನಂದರ ವಿಚಾರಗಳನ್ನು ಮೆಲುಕು ಹಾಕುವುದರಿಂದ ಮನಸ್ಸು ಶುದ್ಧವಾಗುತ್ತದೆ. ಆ ಮೂಲಕ ಎಚ್ಚರಗೊಳ್ಳಬಹುದು ಎಂದು ತಿಳಿಸಿದರು.
ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಶ್ರೀನಿವಾಸ್, ಯುವ ಮುಖಂಡ ಸತೀಶ್, ಜ್ಞಾನಜ್ಯೋತಿ ಶಾಲೆಯ ಶಿಕ್ಷಕಿ ತ್ರೇಜಾವಾಣಿ, ದೈಹಿಕ ಶಿಕ್ಷಣ ಶಿಕ್ಷಕ ವಿ.ನಾಗೇಶ್ ನಾಯಕ, ವಿಜಯವಾಣಿ ಜಿಲ್ಲಾ ವರದಿಗಾರರಾದ ಎನ್.ಮುನಿವೆಂಕಟೇಗೌಡ, ಕೆ.ಎಸ್.ಸುದರ್ಶನ್, ಪ್ರಸರಣ ವಿಭಾಗದ ನರಸಿಂಹಮೂರ್ತಿ, ಜಾಹೀರಾತು ವಿಭಾಗದ ವಿಶ್ವನಾಥ್, ತಾಲೂಕು ವರದಿಗಾರ ಎ.ಅಪ್ಪಾಜೀಗೌಡ ಇದ್ದರು.