ಗ್ರಾಮೀಣ ಸೊಗಡು ಅನಾವರಣ

ಅವಿನ್ ಶೆಟ್ಟಿ ಉಡುಪಿ
ಮಣಿಪಾಲ ಗೀತ ಮಂದಿರದಲ್ಲಿ ಕಲಾವಿದರ ಕುಂಚದಿಂದ ಮೂಡಿಬಂದ ಗ್ರಾಮೀಣ ಸಂಸ್ಕೃತಿ ಸೊಗಡಿನ ಚಿತ್ರಕಲೆ ಪ್ರದರ್ಶನ ‘ವಿಲೇಜ್ ಲೈಫ್’ ಹಳ್ಳಿ ಸಂಸ್ಕೃತಿ ಅನಾವರಣಕ್ಕೆ ವೇದಿಕೆಯಾಗಿದೆ. ಶನಿವಾರದಿಂದ ಆರಂಭವಾದ ಚಿತ್ರಕಲೆ ಪ್ರದರ್ಶನ ಮಾ.11ರವರೆಗೆ ನಡೆಯಲಿದೆ.

ಪ್ರದರ್ಶನದಲ್ಲಿ ಒಟ್ಟು 24 ಕಲಾಕೃತಿಗಳಿದ್ದು, ಒಂದಕ್ಕಿಂತ ಒಂದು ಆಕರ್ಷಣೀಯ. ಅಕ್ರಾಲಿಕ್ ಕ್ಯಾನ್ವಾಸ್‌ನ 18 ಕಲಾಕೃತಿ ಮತ್ತು 6 ಚಾರ್ಕೋಲ್ ಪೇಪರ್ ಮಾಧ್ಯಮದಲ್ಲಿ ರಚಿಸಲ್ಪಟ್ಟ ಕಲಾಕೃತಿಗಳ ಮನಸೂರೆಗೊಳ್ಳುತ್ತಿವೆ. ಪ್ರದರ್ಶನ ಕಲಾಕೃತಿಗಳ ಮೇಲ್ಭಾಗದಲ್ಲಿ ಗ್ರಾಮೀಣ ಮನೆಗಳ ರೀತಿಯ ಮಾಡನ್ನು ರಚಿಸಿದ್ದು, ವಿಶೇಷ ಆಕರ್ಷಣೆಯಾಗಿದೆ.

ಹಳ್ಳಿ ಜೀವನ ಚಿತ್ರಣ: ಹಳ್ಳಿ ಜೀವನ ಸಮಗ್ರ ಚಿತ್ರಣ ಇಲ್ಲಿ ಮೈದಳೆದಿದೆ. ಶ್ರದ್ಧಾ-ಭಕ್ತಿ, ವೃತ್ತಿ-ದಿನಚರಿ, ಬಾಲ್ಯದ ಮೋಜಿನ ಆಟ, ಕಠಿನ ಪರಿಶ್ರಮ, ಹಳ್ಳಿ ತಿನಸುಗಳ ಮರೆಯಲಾಗದ ಅವಿಸ್ಮರಣೀಯ ಕ್ಷಣದ ಚಿತ್ರಣ ಮನಕ್ಕೆ ಮುದ ನೀಡುವಂತಿದೆ. ಅಕ್ಕಿ ಮುಡಿ ಕಟ್ಟುವುದು, ಗುಟ್ನ ಆಡುವ ಬಾಲಕಿಯರು, ಹೂ ಕಟ್ಟುವ ಮಹಿಳೆ, ದನ-ಕರುಗಳೊಂದಿಗೆ ಸಾಗುವ ಮಹಿಳೆ, ಮೊಸರು ಕಡಿಯುವ ಗೃಹಿಣಿ, ಮೀನು ಹಿಡಿಯುವ ಮಕ್ಕಳು, ಐಸ್ ಕ್ಯಾಂಡಿ, ಮುಂಜಾನೆ ಎತ್ತಿನಗಾಡಿ ಪ್ರಯಾಣ, ಮಗುವಿನ ಎಣ್ಣೆ ಸ್ನಾನ, ತೋರಣ ಕಟ್ಟುವುದು, ಚಿಮಣಿ ದೀಪದಲ್ಲಿ ಓದುವ ಬಾಲಕಿ, ಮಡಲು ನೇಯುವುದು, ಚಿಟ್ಟೆ ಹಿಡಿಯುವ ಕ್ಷಣ, ಭೂತ ಕೋಲ, ಚೆನ್ನಮಣೆ ಆಟ ಮೊದಲಾದ ಚಿತ್ರಗಳು ಅತ್ಯಾಕರ್ಷಕವಾಗಿವೆ.

24 ಕಲಾವಿದರ ಚಿತ್ರಕಲೆ: ಡಿ.ವಿ. ಶೆಟ್ಟಿಗಾರ್ ಮಣಿಪಾಲ, ಡಾ.ಜಿ.ಎಸ್. ಕೆ. ಭಟ್ ಪೆರ್ಡೂರು, ಆಶಾ ತೋಳಾರ್ ಕುಂದಾಪುರ, ಜಯಾ ಎಸ್. ಕುಡ್ವ ಮಣಿಪಾಲ, ನಿರ್ಮಲ ಸಿ. ಶೆಟ್ಟಿ ಮುಂಬೈ, ಸುಮ ಪುತ್ರನ್ ಕೋಟೇಶ್ವರ, ಡಾ.ಜಿ. ಶಿವಪ್ರಕಾಶ್ ಮಣಿಪಾಲ, ಸುಷ್ಮಾ ಎಸ್. ಕೋಟೇಶ್ವರ, ಗುರುಪ್ರಸಾದ್ ಯು. ಆತ್ರಾಡಿ, ಜೈ ನೇರಳಕಟ್ಟೆ ಕುಂದಾಪುರ, ಜಿ. ಯಶಾ ಪೆರ್ಡೂರು, ಪ್ರಸಾದ್ ಆರ್. ಮಣಿಪಾಲ, ಅನುಷಾ ಆಚಾರ್ಯ ಪರ್ಕಳ, ಪವಿತ್ರ ಸಿ. ಆಚಾರ್ಯ ಶಿವಮೊಗ್ಗ, ಅಭಿನಯ ಎನ್. ಹಿರಿಯಡ್ಕ, ಕೆರೋಲಿನ್ ಉಡುಪಿ, ನಯನಾ ಬಿ. ಮಾಬುಕಳ, ರೋಶ್ನಿ ಕುಂದಾಪುರ, ಶಹನಾಜ್ಹ್ ಎಚ್. ಯೆಲ್ಲನೂರ್ ಉಡುಪಿ, ಸುನಿಧಿ ಶೆಟ್ಟಿ ಚಿಕ್ಕಮಗಳೂರು, ಮಹಾಲಕ್ಷ್ಮೀ ಹೆಬ್ಬಾರ್ ಕೋಟೇಶ್ವರ, ಮಾಧವಿ ಮುನ್ನಲುರಿ ಮುಂಬೈ, ಪಲ್ಲವಿ ಜೆ. ಅಡಿಗ ಹಾಲಾಡಿ, ಹೃತಿಕ್ ಜೆ. ಶೆಟ್ಟಿ ಕೆ. ಕುಂದಾಪುರ ರಚಿಸಿದ ಚಿತ್ರಗಳು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ.

ಉದ್ಘಾಟನೆ ಕಾರ್ಯಕ್ರಮ: ಮಣಿಪಾಲ ಮತ್ತು ಕುಂದಾಪುರ ತ್ರಿವರ್ಣ ಕಲಾ ಕೇಂದ್ರ ಮತ್ತು ಕೇಂದ್ರದ ಹಿರಿಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದ್ದ ‘ವಿಲೇಜ್ ಲೈಫ್’ ಚಿತ್ರಕಲಾ ಪ್ರದರ್ಶನವನ್ನು ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಳ ಧರ್ಮದರ್ಶಿ ಡಾ.ನಿ.ಬಿ. ವಿಜಯ ಬಲ್ಲಾಳ್ ಉದ್ಘಾಟಿಸಿ ಶುಭ ಹಾರೈಸಿದರು. ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಉದ್ಯಮಿ ಮನೋಹರ್ ಶೆಟ್ಟಿ, ಡಾ.ಗೌರಿ, ನಗರಸಭೆ ಸದಸ್ಯ ಮಂಜುನಾಥ ಮಣಿಪಾಲ, ತ್ರಿವರ್ಣ ಕಲಾ ಕೇಂದ್ರದ ನಿರ್ದೇಶಕ ಹರೀಶ್ ಸಾಗ ಉಪಸ್ಥಿತರಿದ್ದರು.

ವಿಲೇಜ್ ಲೈಫ್ ಚಿತ್ರಕಲಾ ಪ್ರದರ್ಶನ ಸಂದರ್ಭಕ್ಕೊಂದು ಹೊಸ ಅನುಭವಗಳ ಮತ್ತು ಅವಿಸ್ಮರಣೀಯ ಕ್ಷಣಗಳ ಮೆಲುಕು ಹಾಕುವ ಪ್ರಯತ್ನ.
– ಹರೀಶ್ ಸಾಗ, ನಿರ್ದೇಶಕ, ತ್ರಿವರ್ಣಾ ಕಲಾ ಕೇಂದ್ರ.

ಒಂದು ವರ್ಷದಿಂದ ಚಿತ್ರಕಲೆ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದೇನೆ. ಚಿತ್ರಕಲೆ ಹವ್ಯಾಸ ಖುಷಿಯಾಗುತ್ತದೆ. ಭಾವನೆ, ನೆನಪುಗಳನ್ನು ಚಿತ್ರಕಲೆ ಮೂಲಕ ಅಭಿವ್ಯಕ್ತಪಡಿಸಬಹುದು. ಕಲಾವಿದರಿಗೆ ಇಂಥ ಪ್ರದರ್ಶನ ಉತ್ತಮ ವೇದಿಕೆಯಾಗಿದೆ.
– ಅನುಷಾ ಆಚಾರ್ಯ, ಉದ್ಯೋಗಿ, ಎಸ್‌ಸಿಡಿಸಿಸಿ ಬ್ಯಾಂಕ್ ಪರ್ಕಳ