ಬಳಕೆಗೆ ಬಾರದ ಬಸ್ ನಿಲ್ದಾಣ

ಮಡಿಕೇರಿ: ನಗರದ ರೇಸ್ ಕೋರ್ಸ್ ರಸ್ತೆಯ ಬಳಿ ನೂತನವಾಗಿ ನಗರಸಭೆ ವತಿಯಿಂದ ನಿರ್ಮಿಸಲಾದ ಬಸ್ ನಿಲ್ದಾಣ ಬಳಕೆಗೆ ಬಾರದೆ ಪ್ರಯಾಣಿಕರು, ಸಾರ್ವಜನಿಕರು ಬವಣೆ ಪಡುವಂತಾಗಿದೆ.

2018ರಲ್ಲಿ ಜಿಲ್ಲೆಯ ವಿವಿಧೆಡೆ ಪ್ರಕೃತಿ ವಿಕೋಪ ಸಂಭವಿಸಿತ್ತು. ಈ ಸಂದರ್ಭದಲ್ಲಿ ನಗರದ ಖಾಸಗಿ ಬಸ್ ನಿಲ್ದಾಣದ ಹಿಂಭಾಗವಿದ್ದ ಗುಡ್ಡ ಜರಿದು ಬಸ್ ನಿಲ್ದಾಣದ ಒಳಭಾಗದಲ್ಲಿ ಮಣ್ಣಿನ ರಾಶಿ ಶೇಖರಣೆಯಾಗಿತ್ತು. ಅಲ್ಲದೆ ಅಕ್ಕಪಕ್ಕದಲ್ಲಿದ್ದ ಮಳಿಗೆಗಳು ಸಹ ಕುಸಿದು ಬಿದ್ದಿದ್ದವು. ನಂತರ ಎಚ್ಚೆತ್ತುಕೊಂಡ ಜಿಲ್ಲಾಡಳಿತ ನಿಲ್ದಾಣವನ್ನು ನೆಲಸಮಗೊಳಿಸಿತು.

ಬಸ್ ನಿಲ್ದಾಣವಿಲ್ಲದೆ ಗೋಣಿಕೊಪ್ಪ, ವಿರಾಜಪೇಟೆ, ಸಿದ್ದಾಪುರ, ಸೋಮವಾರಪೇಟೆಗೆ ತೆರಳುವ ಬಸ್‌ಗಳು ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿ ನಿಲ್ಲುತ್ತಿವೆ. ಚಾಲಕರು ನಿಗದಿತ ಸಮಯಕ್ಕಿಂತ ಮುನ್ನ ಬಂದು ಬಸ್ ನಿಲ್ಲಿಸಿ, ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಾರೆ. ಆದರೆ, ಬಸ್ ಸಿಗದ ಪ್ರಯಾಣಿಕರು ಕಾದು ಬಿಸಿಲಲ್ಲಿ ಬೆಂದು ಬೆಂಡಾಗುತ್ತಿದ್ದಾರೆ.

ನೂತನ ಬಸ್ ನಿಲ್ದಾಣಕ್ಕೆ 1 ಕಿ.ಮೀ.: ಇತ್ತೀಚೆಗೆ ನಗರಸಭೆ ವತಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಗರದ ರೇಸ್ ಕೋರ್ಸ್ ರಸ್ತೆಯ ಬಳಿ ನೂತನವಾಗಿ ಬಸ್ ನಿಲ್ದಾಣ ನಿರ್ಮಿಸಲಾಗಿದೆ. ಆದರೆ, ನಗರದಿಂದ 1 ಕಿ.ಮೀ. ದೂರದಲ್ಲಿರುವ ನಿಲ್ದಾಣದಿಂದ ನಗರಕ್ಕೆ ಆಟೋಗಳನ್ನು ಏರಿ ಬರುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಆದ್ದರಿಂದ ಖಾಸಗಿ ಬಸ್ ಚಾಲಕರು ನಗರದ ಹಳೇ ಬಸ್ ನಿಲ್ದಾಣದಲ್ಲಿ ಬಸ್‌ಗಳನ್ನು ಸರದಿ ಸಾಲಿನಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ನಂತರ ತೆರಳುತ್ತಿದ್ದಾರೆ.

ರಸ್ತೆ ವಿಸ್ತರಣೆ ಕಾರ್ಯ ಪೂರ್ಣ: ಖಾಸಗಿ ಬಸ್ ಸಂಚರಿಸುವ ರೇಸ್ ಕೋರ್ಸ್ ರಸ್ತೆಯ ವಿಸ್ತರಣೆ ಹಾಗೂ ಡಾಂಬರೀಕರಣ ಕಾರ್ಯ ಮುಗಿದಿದೆ. ಕೆಲವು ರಸ್ತೆ ಕಾಮಗಾರಿಗಳು ಪೂರ್ಣಗೊಳ್ಳದ ಕಾರಣ ನಿಲ್ದಾಣ ಬಳಕೆಗೆ ಬರುತ್ತಿಲ್ಲ. ನೂತನ ಬಸ್ ನಿಲ್ದಾಣ ಕೇವಲ ಬಸ್ ನಿಲ್ಲಿಸಲು ಮಾತ್ರ ಬಳಸಲಾಗುತ್ತಿದೆ. ಈ ಹಿನ್ನೆಲೆ ಲೌಡ್ ಸ್ಪೀಕರ್‌ನಲ್ಲಿ ಸಾರ್ವಜನಿಕರ ಅಭಿಪ್ರಾಯ ಅನಾವರಣಗೊಂಡಿದೆ.

ಚುನಾವಣೆ ನೀತಿ ಸಂಹಿತೆ ನಂತರ ಪೂರ್ಣ
ರಸ್ತೆ ವಿಸ್ತರಣೆ ಕಾರ್ಯ ಆಗುತ್ತಿದೆ. ಖಾಸಗಿ ಬಸ್ ಮಾಲೀಕರ ಸಂಘದೊಂದಿಗೆ ಇತ್ತೀಚೆಗೆ ಸಭೆ ನಡೆಸಲಾಗಿದ್ದು, ಸಲಹೆ ನೀಡಿದ್ದಾರೆ. ಚುನಾವಣೆಯ ನೀತಿ ಸಂಹಿತೆ ನಂತರ ಪೂರ್ಣಗೊಳ್ಳಲಿದೆ.
ಅನೀಸ್ ಕಣ್ಮಣಿ ಜಾಯ್, ಜಿಲ್ಲಾಧಿಕಾರಿ

ಆದಷ್ಟು ಬೇಗ ಬಸ್‌ಗಳ ಸಂಚಾರಕ್ಕೆ ಅನುವು
ನಗರೋತ್ಥಾನದ ಮೂರನೇ ಹಂತದ ಕಾಮಗಾರಿಗಾಗಿ 85.62 ಲಕ್ಷ ರೂ. ಅಂದಾಜು ಮೌಲ್ಯವನ್ನು ಇಡಲಾಗಿದೆ. ಈಗಾಗಲೇ ರಾಜಾಸೀಟ್‌ನಿಂದ ಖಾಸಗಿ ಬಸ್ ನಿಲ್ದಾಣದವರೆಗೆ ರಸ್ತೆ ವಿಸ್ತರಣೆ ಮತ್ತು ಡಾಂಬರೀಕರಣ ಮಾಡಲಾಗಿದೆ. ಆದಷ್ಟು ಬೇಗ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. -ರಮೇಶ್, ಪೌರಾಯುಕ್ತ, ನಗರಸಭೆ

ಫುಟ್‌ಪಾತ್‌ಗಳ ಕೆಲಸ ಇನ್ನೂ ಮುಗಿದಿಲ್ಲ
ಈಗಾಗಲೇ ರೇಸ್‌ಕೋರ್ಸ್ ರಸ್ತೆಯ ವಿಸ್ತರಣೆ ಮೂಲಕ ಡಾಂಬರೀಕರಣ ಮಾಡಲಾಗಿದೆ. ಆದರೆ, ಒಳಚರಂಡಿ ವ್ಯವಸ್ಥೆ, ಫುಟ್‌ಪಾತ್‌ಗಳ ಕೆಲಸ ಇನ್ನೂ ಆಗಿಲ್ಲ. ಅಲ್ಲದೆ, ಹಳೇ ಬಸ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ಒಂದು ಶೌಚಗೃಹ, ಬಸ್ ನಿಲ್ಲಿಸಲು ವ್ಯವಸ್ಥೆ ಮಾಡಿ ಎಂದು ಈ ಹಿಂದಿನ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿತ್ತು. ಇನ್ನೂ ಮಾಡಲಿಲ್ಲ. ಇದರಿಂದ ಬಸ್ ಚಾಲಕರೊಂದಿಗೆ ಸಾರ್ವಜನಿಕರು ಕೂಡ ತೊಂದರೆ ಅನುಭವಿಸುವಂತಾಗಿದೆ.
ರಮೇಶ್ ಜೋಯಪ್ಪ, ಅಧ್ಯಕ್ಷರು, ಖಾಸಗಿ ಬಸ್ ಮಾಲೀಕರ ಸಂಘ

ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ
ಯಾವುದೇ ಕೆಲಸಗಳು ಆಗಬೇಕಾದರೆ ನಗರದ ಹೃದಯ ಭಾಗದಲ್ಲಿರುವ ಅಂಚೆ ಕಚೇರಿ, ಬ್ಯಾಂಕ್, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ ಕಚೇರಿಗೆ ತೆರಳಬೇಕಾಗುತ್ತದೆ. ಆದರೆ, ಈಗಿನ ಹಳೇ ಖಾಸಗಿ ಬಸ್ ನಿಲ್ದಾಣ ದೂರವಾಗಿದೆ. ಹಳೇ ಬಸ್ ನಿಲ್ದಾಣದಿಂದ ಕಚೇರಿಗಳಿಗೆ ಆಟೋಗಳ ಮೂಲಕ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ನೀಡಬೇಕು.
-ಸಂತೋಷ್, ನಾಗರಿಕ

ಪ್ರಯಾಣಿಕರ ಗೋಳು ಕೇಳುವವರಿಲ್ಲ
ಮಡಿಕೇರಿಯಲ್ಲಿ ಖಾಸಗಿ ಬಸ್ ನಿಲ್ದಾಣ ನಿರ್ಮಾಣವಾಗಿದ್ದರೂ, ಬಹುತೇಕ ಖಾಸಗಿ ಬಸ್‌ಗಳು ಬಸ್ ನಿಲ್ದಾಣಕ್ಕೆ ಬರದೆ, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಹಿಂದೆ ಇದ್ದ ಬಸ್ ನಿಲ್ದಾಣದ ಪಕ್ಕ ಬಸ್‌ಗಳು ನಿಲ್ಲುತ್ತಿದ್ದು, ಪ್ರಯಾಣಿಕರು ಎಲ್ಲಿಗೆ ಹೋಗಿ ಬಸ್ ಹತ್ತುವುದು ಎಂಬ ಮಾಹಿತಿ ಇಲ್ಲದೆ ಪರದಾಡುವಂತಾಗಿದೆ. ಪ್ರಯಾಣಿಕರ ಗೋಳನ್ನು ಕೇಳುವವರು ಇಲ್ಲದಂತಾಗಿದೆ.
-ಕೆ.ಪಿ.ದಿನೇಶ್, ಹೊಸತೋಟ ಗ್ರಾಮ

ಹೊಸ ಬಸ್ ನಿಲ್ದಾಣಕ್ಕೆ ಜನರು ಹೋಗುತ್ತಿಲ್ಲ
ಈ ಹಿಂದೆ ಇದ್ದ ಖಾಸಗಿ ಬಸ್ ನಿಲ್ದಾಣದ ಬದಿಯಲ್ಲಿ ಬಸ್‌ಗಳು ನಿಲ್ಲುತ್ತಿದ್ದು, ಜನರು ರಸ್ತೆಯ ಪಕ್ಕದಲ್ಲೇ ನಿಲ್ಲಬೇಕಾಗಿದೆ. ವಿದ್ಯಾರ್ಥಿಗಳು, ವೃದ್ಧರು, ಮಹಿಳೆಯರು ಬಿಸಿಲಿನಲ್ಲಿ ನಿಂತು ತೊಂದರೆ ಅನುಭವಿಸುತ್ತಿದ್ದಾರೆ. ಹೊಸ ಬಸ್ ನಿಲ್ದಾಣಕ್ಕೆ ಜನರು ಹೋಗುತ್ತಿಲ್ಲ. ಈ ಕಾರಣದಿಂದ ಪ್ರಯಾಣಿಕರು ಅಲ್ಲಿಗೆ ಹೋಗುತ್ತಿಲ್ಲ. ಕೂಡಲೇ ಹೊಸ ಬಸ್ ನಿಲ್ದಾಣ ಪ್ರಯಾಣಿಕರ ಉಪಯೋಗಕ್ಕೆ ಬರುವಂತಾಗಬೇಕು.
ಎ.ಜೆ.ಕೃಷ್ಣಪ್ಪ, ದೊಡ್ಡತೋಳೂರು

ತಾತ್ಕಾಲಿಕ ವ್ಯವಸ್ಥೆ ಮಾಡುವುದು ಒಳಿತು
ಹಳೇ ಬಸ್ ನಿಲ್ದಾಣ ನಗರ ಪ್ರದೇಶದ ಮಧ್ಯದಲ್ಲಿದ್ದ ಕಾರಣ ವಾಣಿಜ್ಯ ಚಟುವಟಿಕೆಗಳು ಹಳೇ ಬಸ್ ನಿಲ್ದಾಣದಲ್ಲಿಯೇ ನಡೆಯುತ್ತಿತ್ತು. ಹೊಸ ಬಸ್ ನಿಲ್ದಾಣ ದೂರವಾದ ಕಾರಣ ಸಾರ್ವಜನಿಕರು ಅಲ್ಲಿಗೆ ತೆರಳಲು ಹಿಂದೇಟು ಹಾಕುತ್ತಾರೆ. ಅಲ್ಲದೆ ನೂತನ ಬಸ್ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹಳೇ ನಿಲ್ದಾಣದಲ್ಲಿಯೇ ತಾತ್ಕಾಲಿಕ ವ್ಯವಸ್ಥೆ ಮಾಡುವುದು ಒಳಿತು.
-ಚಂಗಪ್ಪ ಚೋಯಮಾಡಂಡ, ಕಬ್ಬಿನಕಾಡು

ಹೊಸ ಬಸ್ ನಿಲ್ದಾಣ ದೂರ
ಹಳೇ ಬಸ್ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಗೊಳ್ಳದೆ ಇರಲು ಜಿಲ್ಲಾಡಳಿತದ ನಿರ್ಲಕ್ಷ್ಯವೇ ಮೂಲ ಕಾರಣ. ಪ್ರಕೃತಿ ವಿಕೋಪ ಸಂಭವಿಸಿದ ಮೇಲೆ ಹಳೇ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ. ಹೊಸ ನಿಲ್ದಾಣವನ್ನು ಸೂಕ್ತ ರೀತಿಯಲ್ಲಿ ಆಧುನೀಕರಣಗೊಳಿಸದಿದ್ದರೆ ಸಾರ್ವಜನಿಕರು ಅಲ್ಲಿಗೆ ತೆರಳಲು ಹಿಂದೇಟು ಹಾಕುತ್ತಾರೆ. ಹೊಸ ಬಸ್ ನಿಲ್ದಾಣ ಹಳೇ ನಿಲ್ದಾಣಕ್ಕಿಂತ ದೂರವಾಗಿರುವದರಿಂದ ಸಾರ್ವಜನಿಕರ ಬಳಕೆಗೆ ಅನುಪಯುಕ್ತವಾಗಿದೆ.
-ಪವನ್ ನೆಲ್ಲಮಕ್ಕಡ, ಕಾಕೋಟುಪರಂಬು

ಕಾಮಗಾರಿಗಳು ತ್ವರಿತವಾಗಿ ಆಗಲಿ
ಖಾಸಗಿ ಬಸ್ ನಿಲ್ದಾಣವನ್ನು ತರಾತುರಿಯಲ್ಲಿ ಮಾಡಿರುವ ಹಿನ್ನೆಲೆ ಅದು ಚಾಲ್ತಿಗೆ ಬರಬೇಕು ಎಂಬ ಮನಸ್ಥಿತಿ, ಕಾಳಜಿ ಯಾರಿಗೂ ಇಲ್ಲ. ಕಾಮಗಾರಿಗಳು ತ್ವರಿತವಾಗಿ ಆಗಬೇಕು. ಜನಸ್ಪಂದನ ಮಟ್ಟಕ್ಕೆ ಇರಬೇಕು. ಹೊಸ ಖಾಸಗಿ ಬಸ್ ನಿಲ್ದಾಣ ಕಾಮಗಾರಿ ರಾಜಕೀಯಕ್ಕೆ ಬಲಿಯಾಗದೆ ಸಾರ್ವಜನಿಕರ ಬಳಕೆ ಬರುವಂತಾಗಬೇಕು.
ಅಮಿನ್ ಮೋಹಿಸಿನ್, ನಗರಸಭಾ ಸದಸ್ಯ

ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಇಲ್ಲ
ಸ್ಥಳೀಯ ಜನಪ್ರತಿನಿಧಿಗಳ ಪ್ರತಿಷ್ಠೆಯಿಂದ ಹೊಸದಾಗಿ ನಿರ್ಮಾಣವಾಗಿರುವ ಖಾಸಗಿ ಬಸ್ ನಿಲ್ದಾಣ ಸ್ಥಳಾಂತರವಾಗಿಲ್ಲ. ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲಿ ನಿಲ್ದಾಣವನ್ನು ನೆಲಸಮ ಮಾಡಿದ್ದ ಜಿಲ್ಲಾಡಳಿತ, ಇಂದು ಸಾರ್ವಜನಿಕರಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ. ನೆರಳಿನ ವ್ಯವಸ್ಥೆ, ಶೌಚಗೃಹದ ವ್ಯವಸ್ಥೆ ಇಲ್ಲ. ಮತ್ತೊಂದೆಡೆ ನೂತನ ಬಸ್ ನಿಲ್ದಾಣ ನಿರ್ಮಾಣವಾಗಿದ್ದರೂ ಇನ್ನೂ ಬಳಕೆಗೆ ಬಾರದೆ ಇರುವುದು ವಿಪರ್ಯಾಸ.
ಅನಿಲ್, ಶನಿವಾರಸಂತೆ

ನೂತನ ಬಸ್ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆಯಿಲ್ಲ
ಚುನಾವಣೆ ಹಿನ್ನೆಲೆ ತರಾತುರಿಯಲ್ಲಿ ಅಂದು ಉದ್ಘಾಟನೆ ಮಾಡಲಾಯಿತು. ಆದರೆ, ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲದೇ ಇರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ನೂತನ ಬಸ್ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆಗಳು ಆಗಿಲ್ಲ. ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣ ಕೆಲವೆಡೆ ಪೂರ್ಣಗೊಂಡಿಲ್ಲ. ನಗರಸಭೆ ಮತ್ತು ಜಿಲ್ಲಾಡಳಿತದ ವೈಫಲ್ಯವೇ ಇದಕ್ಕೆ ಕಾರಣ.
ಹರೀಶ್.ಜಿ.ಆಚಾರ್ಯ, ಜಿಲ್ಲಾಧ್ಯಕ್ಷ, ವೀರನಾಡು ರಕ್ಷಣಾ ವೇದಿಕೆ