ಶಿರಸಿ: ಅಡಕೆ ಮತ್ತು ಕಾಳು ಮೆಣಸು ಕೊಳೆ ರೋಗದಿಂದಾಗಿ ಕಂಗಾಲಾದ ಬೆಳೆಗಾರರೆಲ್ಲ ಒಂದಾಗಿದ್ದಾರೆ. ಸರ್ಕಾರದಿಂದ ಪರಿಹಾರಕ್ಕಾಗಿ ಆಗ್ರಹಿಸಿ ಪಕ್ಷ ಭೇದ ಮರೆತು ಶಾಸಕದ್ವಯರ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಮೆರವಣಿಗೆ ನಡೆಸಿದ್ದಾರೆ. ಉಪವಿಭಾಗಾಧಿಕಾರಿ ಕಚೇರಿ ಎದುರು ಕೊಳೆ ಬಂದ ಅಡಕೆ, ಕಾಳು ಮೆಣಸನ್ನು ರಾಶಿ ಹಾಕಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇಲ್ಲಿಯ ಶ್ರೀಪಾದ ಹೆಗಡೆ ಕಡವೆ ಕಲ್ಯಾಣ ಮಂಟಪದಲ್ಲಿ ಸೇರಿದ ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕಿನಿಂದ ಆಗಮಿಸಿದ್ದ ನಾಲ್ಕು ಸಾವಿರಕ್ಕೂ ಅಧಿಕ ರೈತರು ತಮ್ಮ ಕಷ್ಟ ಹೇಳಿಕೊಂಡರು.
‘ಐದು ವರ್ಷಗಳ ಹಿಂದೆ ಕೊಳೆ ರೋಗದಿಂದ ಬೆಳೆಹಾನಿಯಾದ ಎರಡು ಪಟ್ಟು ಈ ವರ್ಷ ಹಾನಿ ಸಂಭವಿಸಿದೆ. ಕೆಲವೆಡೆ ಶೇ.80ರಷ್ಟು ಅಡಕೆ ಈಗಾಗಲೇ ಉದುರಿಹೋಗಿದೆ. ಕಾಳು ಮೆಣಸು ಹಾನಿಯಾಗಿ ಬಳ್ಳಿಗಳೂ ಸಾವಿಗೀಡಾಗಿದೆ. ಈಗ ಸರ್ಕಾರ ಮಧ್ಯ ಪ್ರವೇಶಿಸಿ ಪರಿಹಾರ ನೀಡಿದರಷ್ಟೇ ರೈತರ ಬದುಕಿಗೆ ಮುಂದಿರುವ ದಾರಿ’ ಎಂಬ ಒಕ್ಕೊರಲ ಆಗ್ರಹ ಈ ವೇಳೆ ಕೇಳಿಬಂತು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ರೈತರು ಕಷ್ಟದಲ್ಲಿದ್ದಾಗ ಜಿಲ್ಲೆಯ ಸಹಕಾರಿ ಸಂಘಗಳು ಧ್ವನಿ ಎತ್ತಿವೆ. ಆದರೆ, ಈ ಬಾರಿಯ ಬೆಳೆ ಹಾನಿ ಸಹಕಾರಿ ಸಂಘಗಳಿಗೂ ಆತಂಕ ಮೂಡಿಸಿದೆ. ರಾಜ್ಯದ ರೈತರು ಅನುಭವಿಸುತ್ತಿರುವ ಸಂಕಷ್ಟಕ್ಕಿಂತ ಜಿಲ್ಲೆಯ ರೈತರು ಅನುಭವಿಸಿದ ಕಷ್ಟ ಅಧಿಕ. ಜಿಲ್ಲೆಯ ಜನತೆ ಸರಳ ಮತ್ತು ಸುಸಂಸ್ಕೃತರು. ಅವರು ಮೌನವಾಗಿದ್ದಾರೆ ಎಂದರೆ ಜಿಲ್ಲೆಯಲ್ಲಿ ಸಮೃದ್ಧಿ ಇದೆ ಎಂದು ಸರ್ಕಾರ ಭಾವಿಸಬಾರದು. ಆಸಾಮಿ ಖಾತೆ ಸಾಲವನ್ನು ಕೃಷಿ ಸಾಲ ಎಂದು ಪರಿಗಣಿಸಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಪ್ರಕಟಿಸಿದ್ದ 50 ಸಾವಿರ ರೂ. ಸಾಲಮನ್ನಾ ಹಣ ರಾಜ್ಯ ಸರ್ಕಾರದಿಂದ ಇನ್ನೂ ಬರದೇ ಸಹಕಾರಿ ಸಂಘಗಳು ಅತಂತ್ರವಾಗಿದೆ. ಈಗಿನ ಸರ್ಕಾರ ಪ್ರಕಟಿಸಿರುವ ಒಂದು ಲಕ್ಷ ರೂ. ಸಾಲಮನ್ನಾ ಗೊಂದಲ ಮೂಡಿಸಿದೆ. ಬಹುತೇಕ ರೈತರ ಪಹಣಿಪತ್ರಿಕೆಯಲ್ಲಿ ಕುಟುಂಬದ ಹಿರಿಯ ವ್ಯಕ್ತಿಯ ಹೆಸರು ಮಾತ್ರ ಇರುವ ಕಾರಣ ಉಳಿದ ಕುಟುಂಬದ ಸದಸ್ಯರು ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ’ ಎಂದರು.
ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ‘50 ಸಾವಿರ ರೂ. ಸಾಲಮನ್ನಾ ಯೋಜನೆಯಿಂದಾಗಿ ಮಧ್ಯವರ್ತಿ ಬ್ಯಾಂಕ್ ಮತ್ತು ಪ್ರಾಥಮಿಕ ಸಹಕಾರಿ ಸಂಘಗಳು ಸಮಸ್ಯೆ ಎದುರಿಸುವಂತಾಗಿದೆ. ಜಿಲ್ಲೆಯ ಸಹಕಾರಿ ಸಂಘಗಳಲ್ಲಿ ಸಾಲ ಮರುಪಾವತಿ ದಿನಾಂಕ ಮೇ 31 ಆಗಿದ್ದರಿಂದ ಸಾಲ ಮನ್ನಾ ಹಣ ಬಿಡುಗಡೆಯಾಗದೇ ಸಮಸ್ಯೆ ಉಂಟಾಗಿದೆ. ಈ ಗೊಂದಲ ಬೇಡ ಎನ್ನುವ ಕಾರಣಕ್ಕೆ ಸಾಲಮನ್ನಾ ಯೋಜನೆಯಲ್ಲಿ ರೈತರ ಖಾತೆಗೆ ನೇರವಾಗಿ ಹಣ ಜಮಾ ಮಾಡುವಂತೆ ನಾನು ಆಗ್ರಹಿಸಿದ್ದೆ. ರೈತರ ವಿಷಯದಲ್ಲಿ ಪಕ್ಷ ಭೇದ ಮರೆತು ನಾವೆಲ್ಲ ಕೂಡಲೇಬೇಕು. ವಿರೋಧ ಪಕ್ಷದ ಪ್ರಮುಖರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಬಹಿರಂಗ ಹೋರಾಟಕ್ಕಿಳಿದರೆ ರೈತಪರ ಹೋರಾಟವಾಗಿದ್ದರಿಂದ ಅವರಿಗೆ ನನ್ನ ಸಹಕಾರ ಇದೆ. ಸಾಲಮನ್ನಾದಿಂದ ಉಂಟಾದ ಸಮಸ್ಯೆಯ ಬಗೆಗೆ ಅಪೆಕ್ಸ್ ಬ್ಯಾಂಕ್ ನಿಯೋಗದ ಮೂಲಕ ತೆರಳಿ ಮುಖ್ಯಮಂತ್ರಿಗಳಿಗೆ ಈಗಾಗಲೇ ಮನವರಿಕೆ ಮಾಡಿದ್ದೇನೆ’ ಎಂದರು.
ಜೆಡಿಎಸ್ ಪ್ರಮುಖ ಡಾ. ಶಶಿಭೂಷಣ ಹೆಗಡೆ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ, ಟಿಎಸ್ಎಸ್ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ, ಟಿಆರ್ಸಿ ಬ್ಯಾಂಕ್ ಅಧ್ಯಕ್ಷ ರಾಮಕೃಷ್ಣ ಹೆಗಡೆ, ಕೆಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭಾಸ್ಕರ ಹೆಗಡೆ ಕಾಗೇರಿ, ಜಿ. ವಿ. ಜೋಶಿ ಕಾಗೇರಿ, ಜಿ.ಪಂ. ಸದಸ್ಯರಾದ ಜಿ.ಎನ್. ಹೆಗಡೆ ಮುರೇಗಾರ, ಉಷಾ ಹೆಗಡೆ, ಬಸವರಾಜ ದೊಡ್ಮನಿ ಇತರರಿದ್ದರು.