ಗಂಗರ ಕಾಲದ ಅಪ್ರಕಟಿತ ಶಾಸನ ಪತ್ತೆ

blank

1200 ವರ್ಷ ಹಳೆಯದು – ಶಾಸನತಜ್ಞ ಕೆ.ಧನಪಾಲ್, ತಂಡದಿಂದ ವೀರಗಲ್ಲುಗಳ ಶೋಧ

 

ಶಿಡ್ಲಘಟ್ಟ: ಪುರಾತತ್ವ ಇಲಾಖೆಯಿಂದ ಶಿಡ್ಲಘಟ್ಟ ತಾಲೂಕಿನಲ್ಲಿ ಗ್ರಾಮವಾರು ಸರ್ವೇಗಾಗಿ ಆಗಮಿಸಿರುವ ಶಾಸನತಜ್ಞ ಕೆ.ಧನಪಾಲ್ ನೇತೃತ್ವದ ತಂಡ 1,200 ವರ್ಷಗಳಷ್ಟು ಹಿಂದಿನ ಗಂಗರ ಕಾಲದ ಅಪ್ರಕಟಿತ ಶಾಸನ ಸಹಿತ ವೀರಗಲ್ಲುಗಳನ್ನು ತಾಲೂಕಿನ ಕೊತ್ತನೂರು ಮತ್ತು ಗೆಜ್ಜಿಗಾನಹಳ್ಳಿಗಳಲ್ಲಿ ಪತ್ತೆ ಹಚ್ಚಿದೆ. ಕೊತ್ತನೂರು ಗ್ರಾಮದ ರೈತ ಕೆ.ಎಂ.ಮೂರ್ತಿ ಅವರ ಮಾವಿನ ತೋಪಿನ ಬಳಿ ಶಾಸನ ಮತ್ತು ವೀರಗಲ್ಲುಗಳು ಪತ್ತೆಯಾಗಿವೆ.
ಶಾಸನದ ಲಿಪಿ ಹಳಗನ್ನಡದ್ದಾಗಿದೆ. ಅದರ ಲಿಪಿಯ ಶೈಲಿಯಿಂದ ಇದು ಗಂಗರ ಕಾಲದ್ದೆಂದು ಹೇಳಬಹುದಾಗಿದೆ. ಈ ಹಳಗನ್ನಡ ಶಾಸನದಲ್ಲಿ ಸ್ವಸ್ತಿಶ್ರೀ ಕೊತ್ತನ್ನರ್ ಎಂದು ಪ್ರಾರಂಭವಾಗುವ ವಾಕ್ಯದಲ್ಲಿ ಗ್ರಾಮದ ಹೆಸರು ಕೊತ್ತನೂರು ಎಂಬ ಪದವು, ಈ ಗ್ರಾಮದ ಇತಿಹಾಸವನ್ನು 1,200 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ಯುತ್ತದೆ ಎಂದು ಕೆ.ಧನಪಾಲ್ ತಿಳಿಸಿದರು. ವೀರಗಲ್ಲಿನಲ್ಲಿ ವೀರನು ವೀರಾಸನದಲ್ಲಿ ನಿಂತಿದ್ದು, ಒಂದು ಕೈಯಲ್ಲಿ ಬಾಕು ಹಿಡಿದಿದ್ದು, ಮತ್ತೊಂದು ಕೈಯಲ್ಲಿ ಬಿಲ್ಲನ್ನು ಹಿಡಿದಿರುವನು. ಆತನ ಹೊಟ್ಟೆ ಮತ್ತು ಭುಜಕ್ಕೆ ಎರಡು ಬಾಣಗಳು ನೆಟ್ಟಿರುವುದನ್ನು ಚಿತ್ರಿಸಲಾಗಿದೆ.
ತಾಲೂಕಿನ ಗೆಜ್ಜಿಗಾನಹಳ್ಳಿಯಲ್ಲಿ ಆರು ಶಾಸನ ಮತ್ತು ವೀರಗಲ್ಲುಗಳು ಪತ್ತೆಯಾಗಿವೆ. ಅದರಲ್ಲಿನ ಒಂದು ಶಾಸನಸಹಿತ ವೀರಗಲ್ಲಿನಲ್ಲಿ ತನ್ನ ಗ್ರಾಮಕ್ಕೆ ವೈರಿಗಳು ನುಗ್ಗಿ ಗೋವುಗಳನ್ನು ಅಪಹರಿಸಲು ಪ್ರಯತ್ನಿಸಿದಾಗ ವೀರನು ಹೋರಾಡಿ ಮಡಿದಿದ್ದಾನೆ ಎಂಬ ಸಂಗತಿಯನ್ನು ಹಳಗನ್ನಡದ ಲಿಪಿಯಲ್ಲಿ ಬರೆಯಲಾಗಿದೆ. ವೀರನ ಕುರಿತಾದ ಈ ವೀರಗಲ್ಲನ್ನು ಈ ಪ್ರಾಂತ್ಯದ ಮುಖಂಡ ಹಾಕಿಸಿರುವುದಾಗಿ ಬರೆದಿರುವರು. ವೀರನು ಹೋರಾಡುವಾಗ ವೈರಿಗಳ ರುಂಡವನ್ನು ಕತ್ತರಿಸುವುದನ್ನು ಶಿಲ್ಪಿ ಸುಂದರವಾಗಿ ಕೆತ್ತಿದ್ದಾನೆ. ಗೆಜ್ಜಿಗಾನಹಳ್ಳಿಯಲ್ಲಿ ನಾವು ಐತಿಹಾಸಿಕ ಮಹತ್ವದ ಆರು ಶಾಸನ ಮತ್ತು ವೀರಗಲ್ಲುಗಳನ್ನು ನೋಡಿದೆವು. ಇವು ಅಸ್ತವ್ಯಸ್ತವಾಗಿ ಅಲ್ಲಲ್ಲಿ ಬಿದ್ದಿವೆ. ಇವುಗಳನ್ನು ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿಯವರು ಸಂರಕ್ಷಿಸಬೇಕು ಎಂದು ತಿಳಿಸಿದರು.
ಇತಿಹಾಸ ಸಂಶೋಧಕ ಡಾ.ವಿಜಯಶಂಕರ್, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎ.ಎಂ.ತ್ಯಾಗರಾಜ್, ರೈತರಾದ ಮೂರ್ತಿ, ರಾಜಣ್ಣ, ವೆಂಕಟರೆಡ್ಡಿ ಇದ್ದರು.ಅಪ್ರಕಟಿತ ಶಾಸನಗಳು

ಅಪ್ರಕಟಿತ ಶಾಸನಗಳು

ಇಪ್ಪತ್ತನೇ ಶತಮಾನದ ಆದಿಯಲ್ಲಿ ಮೈಸೂರು ಅರಸರ ಒತ್ತಾಸೆಯ ಮೇರೆಗೆ ಬಿ.ಎಲ್.ರೈಸ್ ಎಂಬ ಬ್ರಿಟಿಷ್ ವಿದ್ವಾಂಸರ ನೇತೃತ್ವದಲ್ಲಿ ಹಳೇ ಮೈಸೂರಿನಾದ್ಯಂತ ಶಾಸನಗಳ ಸರ್ವೇ ನಡೆಸಿ, ಓದಿ, ಎಪಿಗ್ರಾಫಿಯಾ ಕರ್ನಾಟಿಕ ಸಂಪುಟಗಳಲ್ಲಿ ದಾಖಲಿಸಿದ್ದಾರೆ. ಇದರಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಶಾಸನ ಸಂಪುಟವನ್ನು 1905ರಲ್ಲಿ ಪ್ರಕಟಿಸಲಾಯಿತು. ಇವನ್ನು ಪ್ರಕಟಿತ ಶಾಸನಗಳು ಎನ್ನುತ್ತೇವೆ. ಈಗಿನ ಇತಿಹಾಸ ತಜ್ಞರು ರೈಸ್ ಅವರಿಗೆ ಸಿಗದ್ದನ್ನು ಹುಡುಕಿ ಶಾಸನಗಳನ್ನು ಓದಿ, ದಾಖಲು ಮಾಡುವ ಶಾಸನಗಳನ್ನು ಅಪ್ರಕಟಿತ ಶಾಸನಗಳು ಎನ್ನುತ್ತಾರೆ ಎಂದು ಶಾಸನತಜ್ಞ ಕೆ.ಆರ್.ನರಸಿಂಹನ್ ವಿವರಿಸಿದರು.

 

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…