ಮುಖ್ಯಗುರು ಅಮಾನತಿಗೆ ಆಗ್ರಹ

ಗೊಳಸಂಗಿ: ಕರ್ತವ್ಯ ಲೋಪವೆಸಗಿದ್ದ ಸಮೀಪದ ಉಣ್ಣಿಬಾವಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಎಸ್.ಸಿ. ಸಜ್ಜನ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ನಿಡಗುಂದಿ ತಾಲೂಕು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಶಾಲೆ ಆವರಣದಲ್ಲಿ ಪ್ರತಿಭಟಿಸಿದರು.

ಸುದ್ದಿ ತಿಳಿದು ಶಾಲೆಗೆ ದೌಡಾಯಿಸಿದ ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ ಎದುರು ಕರವೇ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕರವೇ ತಾಲೂಕು ಘಟಕದ ಅಧ್ಯಕ್ಷ ಆನಂದ ಹಡಗಲಿ, ಉಪಾಧ್ಯಕ್ಷ ಸತೀಶ ನರಸರೆಡ್ಡಿ ಮಾತನಾಡಿ, ಮುಖ್ಯಗುರು ಎಸ್.ಸಿ. ಸಜ್ಜನರಿಗೆ ಸಮಯ ಪರಿಪಾಲನೆ ಗೊತ್ತಿಲ್ಲ. ತಾವು ಗೈರು ಇದ್ದ ದಿನವೂ ಸೇರಿ ಭಾನುವಾರ ಕೂಡ ಶಿಕ್ಷಕರ ಹಾಜರಾತಿ ಪುಸ್ತಕದಲ್ಲಿ ಹಾಜರಾತಿ ಹಾಕುತ್ತಿದ್ದರು. ಶಾಲೆ ಅಭಿವೃದ್ಧಿಗೆ ಕಾಳಜಿ ವಹಿಸದೆ ಅನಗತ್ಯವಾಗಿ ವರ್ಷಕ್ಕೂ ದೀರ್ಘ ಕಾಲದ ರಜೆ ಪಡೆದಿದ್ದಾರೆ. ಕಳೆದ ಜೂ.11 ರಂದು ಪುನಃ ಕರ್ತವ್ಯಕ್ಕೆ ಹಾಜರಾಗಲು ಬಂದಾಗಲೂ ಅವಕಾಶ ನೀಡದೇ ಪ್ರತಿಭಟಿಸಿದ್ದೇವು. ಈಗ ಮತ್ತೆ ತಾವು ಡಿ.3 ರಂದು ಶಾಲೆಗೆ ಹಾಜರಾಗಲು ಆದೇಶ ನೀಡಿರುವುದು ಸರಿಯಲ್ಲ. ಅವರನ್ನು ಶಾಲೆಗೆ ಸೇರಿಸುವುದಿಲ್ಲ. ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬಿಇಒ ಮಂಜುನಾಥ ಗುಳೇದಗುಡ್ಡ, ಕರವೇ ಕಾರ್ಯಕರ್ತರು ಮಾಡಿದ ಆರೋಪವನ್ನು ಇಲಾಖೆಯ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಿಡಗುಂದಿ ವಲಯ ಶಿಕ್ಷಣ ಸಂಯೋಜಕ ವೀರಣ್ಣ ಜುಳಜುಳೆ, ಪ್ರಭಾರ ಮುಖ್ಯಗುರು ಎಂ.ಬಿ. ಮಿರಗಿ, ಕರವೇ ಗ್ರಾಮಘಟಕದ ಅಧ್ಯಕ್ಷ ಎಚ್.ಎಚ್. ಪಟೇಲ, ನಾಗಭೂಷಣ ನರಸರೆಡ್ಡಿ, ಮಲ್ಲೇಶಪ್ಪ ಕೋನರೆಡ್ಡಿ, ಸುರೇಶ ನರಸರೆಡ್ಡಿ, ಇಮಾಮಪೀರ ಮುಲ್ಲಾ, ವಿಶ್ವನಾಥ ನರಸರೆಡ್ಡಿ, ಸಂಗನಗೌಡ ಕೋನರೆಡ್ಡಿ, ರಾಜು ಮಯ್ಯಾಪುರ, ಮುತ್ತುರಾಜ್ ಹಾಲಿಹಾಳ, ಬಸವರಾಜ್ ಕೋನರೆಡ್ಡಿ, ಸಂತೋಷ ಕೋನರೆಡ್ಡಿ, ರಮೇಶ ನರಸರೆಡ್ಡಿ ಮತ್ತಿತರರು ಇದ್ದರು.