ಪುಲ್ವಾಮಾ ದಾಳಿ: ಹುತಾತ್ಮ ಯೋಧನ ಪಾಲಕರಿಗೆ ಒಂದುವರೆ ಲಕ್ಷ ರೂ. ವಂಚಿಸಿದ ನಕಲಿ ಅಧಿಕಾರಿ

ಚಂಡೀಗಢ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರೊಬ್ಬರ ಪಾಲಕರಿಗೆ ಸಿಆರ್​ಪಿಎಫ್​ನಿಂದ ಧನಸಹಾಯ ಕೊಡಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ 1.5 ಲಕ್ಷ ರೂ. ಪಡೆದು ಪರಾರಿಯಾಗಿದ್ದಾನೆ.

ಪಂಜಾಬ್​ನ ರೋಪರ್​ ಜಿಲ್ಲೆಯ ರೌಲಿ ಗ್ರಾಮದ ಕುಲ್ವಿಂದರ್​ ಸಿಂಗ್​ ಫೆಬ್ರವರಿ 14ರಂದು ನಡೆದ ದಾಳಿಯಲ್ಲಿ ಹುತಾತ್ಮರಾಗಿದ್ದರು. ಸಿಆರ್​ಪಿಎಫ್​ನಿಂದ 29 ಲಕ್ಷ ರೂ. ಮತ್ತು ಒಂದು ಪೆಟ್ರೋಲ್​ ಬಂಕ್​ ಕೊಡಿಸುವುದಾಗಿ ಹೇಳಿಕೊಂಡು ವ್ಯಕ್ತಿಯೊಬ್ಬ ಕುಲ್ವಿಂದರ್​ ಸಿಂಗ್​ ಪಾಲಕರನ್ನು ಭೇಟಿ ಮಾಡಿದ್ದ. ಆತ ತಾನು ಸಿಆರ್​ಪಿಎಫ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದ.

ಸಿಆರ್​ಪಿಎಫ್​ನಿಂದ ಧನಸಹಾಯ ಬರಬೇಕಾದರೆ ನಿಮ್ಮ ಖಾತೆಯಲ್ಲಿ ಹಣವಿರಬಾರದು. ಖಾತೆಯಲ್ಲಿರುವ ಹಣವನ್ನು ವಿತ್​ಡ್ರಾ ಮಾಡಿ ಎಂದು ಆತ ತಿಳಿಸಿದ್ದಾನೆ. ವಂಚಕನ ಮಾತನ್ನು ನಂಬಿದ ಕುಲ್ವಿಂದರ್​ ಪಾಲಕರು ಆತನೊಂದಿಗೆ ಬ್ಯಾಂಕ್​ಗೆ ತೆರಳಿದ್ದಾರೆ. ಮೊದಲಿಗೆ 20 ಲಕ್ಷ ರೂ. ಹಣ ತೆಗೆಯುವಂತೆ ಆತ ತಿಳಿಸಿದ್ದಾನೆ. ಆದರೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅಷ್ಟು ದೊಡ್ಡ ಪ್ರಮಾಣ ಹಣ ವಿತ್​ಡ್ರಾ ಮಾಡಲು ಸಾಧ್ಯವಿಲ್ಲ ಎಂದು ಬ್ಯಾಂಕ್​ ಅಧಿಕಾರಿಗಳು ತಿಳಿಸಿದ್ದಾರೆ.

ಕೊನೆಗೆ ಆತ 1.5 ಲಕ್ಷ ರೂ.ಗಳನ್ನು ವಿತ್​ಡ್ರಾ ಮಾಡಿಸಿದ್ದಾನೆ. ಸಿಆರ್​ಪಿಎಫ್​ಗೆ ಕೆಲವು ದಾಖಲೆಗಳನ್ನು ಸಲ್ಲಿಸಬೇಕು ಅದರ ಅಫಿಡವಿಟ್ ಮಾಡಿಸಬೇಕೆಂದು ಹುತಾತ್ಮ ಯೋಧನ ತಂದೆಯನ್ನು ಕೋರ್ಟ್​ಗೆ ಕರೆದೊಯ್ದಿದ್ದಾನೆ. ಅಲ್ಲಿ ಯೋಧನ ತಾಯಿಯೂ ಇರಬೇಕು, ಅವರನ್ನು ಬ್ಯಾಂಕ್​ನಿಂದ ಕರೆತರುತ್ತೇನೆ ಎಂದು ವಂಚಕ ಯೋಧನ ತಂದೆಯ ದ್ವಿಚಕ್ರ ವಾಹನ ಮತ್ತು ಹಣ ಪಡೆದು ಅಲ್ಲಿಂದ ತೆರಳಿದ್ದಾನೆ.

ಎಷ್ಟು ಹೊತ್ತು ಕಾದರೂ ವಂಚಕ ಮರಳದಿದ್ದಾಗ ಯೋಧನ ಪಾಲಕರಿಗೆ ತಾವು ವಂಚನೆಗೊಳಗಾಗಿರುವುದು ತಿಳಿದು ಬಂದಿದೆ. ಈ ಕುರಿತು ಅವರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ವಂಚನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *