ಹೊಸಪೇಟೆ: ಸ್ಪರ್ಧಾತ್ಮಕ ಬದುಕಿನಲ್ಲಿ ಒತ್ತಡ ನಿವಾರಣೆಗೆ ಜನ ಸಂಗೀತಕ್ಕೆ ಮೊರೆ ಹೋಗುತ್ತಿದ್ದಾರೆ ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.
ಕನ್ನಡ ವಿವಿ ಸಂಗೀತ ಮತ್ತು ನೃತ್ಯ ವಿಭಾಗದಿಂದ ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮಾಲೆ 1 ನ್ನು ಉದ್ಘಾಟಿಸಿ ಮಾತನಾಡಿದರು. ನಮ್ಮಲ್ಲಿ ಸ್ನೇಹ-ಸಂಬಂಧ ಬೆಸೆಯುವಲ್ಲಿ ಸಂಗೀತ ಪ್ರಮುಖ ಪಾತ್ರವಹಿಸುತ್ತದೆ. ನಿಜವಾದ ಕಲೆಯನ್ನು ಪ್ರೀತಿಸುವವರು ಇತರರಿಗೆ ಒಳಿತನ್ನೇ ಬಯಸುವರು. ಸಂಗೀತ ಎಲ್ಲರಿಗೂ ಒಲಿಯುವಂತದ್ದಲ್ಲ. ಸಂಗೀತ ಕ್ಷೇತ್ರಕ್ಕೆ ಕಾಲಿಡುತ್ತಿರುವ ಯುವ ಪ್ರತಿಭೆಗಳು ತಮ್ಮ ಆತ್ಮತೃಪ್ತಿಯ ಜತೆಗೆ ಇತರರಿಗೆ ಸಂತೋಷ ಹಂಚಿ ಸಾಧಕರಾಗಬೇಕು ಎಂದರು.
ಹುಬ್ಬಳ್ಳಿಯ ನಿವೃತ್ತ ಸಂಗೀತ ಪ್ರಾಧ್ಯಾಪಕ ಡಾ.ಅಶೋಕ ಹುಗ್ಗಣ್ಣವರ ಮಾತನಾಡಿ, ಸಂಗೀತಕ್ಕೆ ಭಾಷೆಯ ಅಗತ್ಯವಿಲ್ಲ. ಅದು ಎಲ್ಲ ಕಡೆಯೂ ತನ್ನ ಛಾಪು ಮೂಡಿಸಿರುವುದು. ಸಂಗೀತದ ಮೂಲ ಜನಪದವೇ ಆಗಿದೆ. ಜನಪದ ಸಂಗೀತವೇ ಇರಲಿ, ಶಾಸ್ತ್ರೀಯ ಸಂಗೀತವೇ ಇರಲಿ ಎರಡಕ್ಕೂ ಅದರದೇ ಆದ ಪೂರ್ವಸಿದ್ಧತೆಗಳು ಬೇಕು. ರಂಗಭೂಮಿ ಮತ್ತು ಸಂಗೀತಕ್ಕೆ ಅವಿನಾಭಾವ ಸಂಬಂಧವಿದೆ ಎಂದರು.
ಸಂಗೀತ ಮತ್ತು ನೃತ್ಯ ವಿಭಾಗದ ಮುಖ್ಯಸ್ಮಂ ಡಾ.ವೀರೇಶ ಬಡಿಗೇರ ಇದ್ದರು.