More

    ಸಾರ್ವತ್ರಿಕ ಆರೋಗ್ಯ ಸೇವೆ ಭಾರತೀಯ ಆದರ್ಶ

    ಸಾರ್ವತ್ರಿಕ ಆರೋಗ್ಯ ಸೇವೆ ಭಾರತೀಯ ಆದರ್ಶಈಗಾಗಲೇ ನಾವು ಮುದ್ದೇನಹಳ್ಳಿಯಲ್ಲಿ ಒಂದು ಸಂಪೂರ್ಣ ಉಚಿತ ನರ್ಸಿಂಗ್ ಹಾಗೂ ಇತರ ವೈದ್ಯಕೀಯ ವಿಜ್ಞಾನಗಳ ಕಾಲೇಜನ್ನು ಪ್ರಾರಂಭಿಸಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ, ನಮ್ಮ ದೇಶದ ಮೊಟ್ಟಮೊದಲ ಸಂಪೂರ್ಣ ಉಚಿತ ಮೆಡಿಕಲ್ ಕಾಲೇಜನ್ನು ಪ್ರಾರಂಭಿಸುತ್ತಿದ್ದೇವೆ. ಇದರ ಭಾಗವಾಗಿ ಈಗಾಗಲೇ ಸಂಪೂರ್ಣ ಉಚಿತ ಚಿಕಿತ್ಸೆಯನ್ನು ನೀಡುವ ಆಸ್ಪತ್ರೆಯು ಪ್ರಾರಂಭವಾಗಿದೆ.

    ನ ತ್ವಹಂ ಕಾಮಯೇ ರಾಜ್ಯಂ ನ ಸ್ವರ್ಗ ನ ಪುನರ್ಭವಮ್ !

    ಕಾಮಯೇ ದುಃಖತಪ್ತಾನಾಂ ಪ್ರಾಣಿನಾಂ ಆರ್ತಿನಾಶನಮ್ !!

    ನಾನು ರಾಜ್ಯವನ್ನಾಗಲೀ, ಸ್ವರ್ಗವನ್ನಾಗಲೀ ಅಥವಾ ಮೋಕ್ಷವನ್ನಾಗಲೀ ಆಶಿಸುವುದಿಲ್ಲ. ದುಃಖತಪ್ತರಾದ ಎಲ್ಲಾ ಜೀವಿಗಳ ಸಂಕಟನಾಶವನ್ನು ಮಾತ್ರ ನಾನು ಆಶಿಸುತ್ತೇನೆ.

    ಮಹಾಭಾರತದ ದ್ರೋಣಪರ್ವದಲ್ಲಿ ಬರುವ ರಂತಿದೇವನೆಂಬ ರಾಜನ ಈ ಪ್ರಾರ್ಥನೆಯನ್ನು ಭಾರತದಲ್ಲಿ ಸೇವಾ ಮನೋಭಾವನೆಯಿಂದ ಪ್ರೇರಿತರಾದ ವೈದ್ಯರ ಸ್ವಯಂಸೇವಾ ಸಂಸ್ಥೆಯು (National Medicos Association) ತನ್ನ ಧ್ಯೇಯವಾಕ್ಯವನ್ನಾಗಿ ಆರಿಸಿಕೊಂಡಿರುವುದು ಅತ್ಯಂತ ಸ್ತುತ್ಯಾರ್ಹ. ಜಗತ್ತಿನ ಎಲ್ಲಾ ವೈದ್ಯರೂ ಈ ಧ್ಯೇಯದಿಂದ ಸ್ಪೂರ್ತಿ ಪಡೆಯಲೆಂದು ನಾನು ಹಾರೈಸುತ್ತೇನೆ.

    ವೈದ್ಯೋ ನಾರಾಯಣೋ ಹರಿಃ ಎಂದು ಘೊಷಿಸಿ ವೈದ್ಯನನ್ನು ಭಗವಂತನ ಸ್ವರೂಪವೆಂದೇ ಪರಿಗಣಿಸಿದ ದೇಶವೆಂದರೆ, ಇಡೀ ಜಗತ್ತಿನಲ್ಲಿ ಭಾರತ ಮಾತ್ರ. ನಿಸ್ವಾರ್ಥ ಪ್ರೇಮ-ಸೇವೆಗಳೇ ಭಗವಂತನ ಸ್ವಭಾವವಾಗಿರುವುದರಿಂದ, ಇಂತಹ ಸ್ವಭಾವನ್ನೇ ವೈದ್ಯರು ಅಳವಡಿಸಿಕೊಳ್ಳಬೇಕೆಂಬುದೇ ಇದರ ಅರ್ಥ. ಆದರೆ, ವೈದ್ಯಕೀಯ ಶಿಕ್ಷಣ ಹಾಗೂ ಸೇವೆಗಳ ಸಂಪೂರ್ಣ ವ್ಯಾಪಾರೀಕರಣವಾಗಿರುವ ಇಂದಿನ ಕಾಲದಲ್ಲಿ ಇಂತಹ ಉನ್ನತ ಆದರ್ಶದ ಪಾಲನೆಯು ಸಾಧ್ಯವಿದೆಯೇ? ಇಂದು, ಆರೋಗ್ಯವೇ ಸಂಪತ್ತು (Health is wealth) ಎನ್ನುವುದರ ಬದಲು ಸಂಪತ್ತೇ ಆರೋಗ್ಯ (Wealth is Health) ಎನ್ನುವಂತಾಗಿದೆ! ಎಂದರೆ, ಇಂದಿನ ದಿನಗಳಲ್ಲಿ ಆರೋಗ್ಯ ಸೇವೆಯನ್ನು ಕೊಂಡುಕೊಳ್ಳಲು ಶಕ್ತರಾಗಿರುವ ಸಂಪದ್ಭರಿತ ವ್ಯಕ್ತಿಗಳು ಮಾತ್ರ ಆರೋಗ್ಯವಂತರಾಗಿರಲು ಸಾಧ್ಯವಷ್ಟೆ!

    ಪ್ರಾಚೀನ ಭಾರತದಲ್ಲಿ ವೈದ್ಯರು ಯಾವುದೇ ಷರತ್ತಿಲ್ಲದೆ ತಮ್ಮ ಸಮುದಾಯಗಳಿಗೆ ಉಚಿತ ಸೇವೆಯನ್ನು ನೀಡುತ್ತಿದ್ದರು, ಅವರು ತಮ್ಮ ಸೇವೆಯನ್ನು ಪಡೆದವರಿಂದ ಅವರ ಶಕ್ಱಾನುಸಾರವಾಗಿ ನೀಡಿದ ಕಾಣಿಕೆಯನ್ನು ಸ್ವೀಕರಿಸಿ ಸಂತೃಪ್ತಿಕರ ಸರಳ ಜೀವನವನ್ನು ನಡೆಸುತ್ತಿದ್ದರು. ಅಂದಿನ ಕಾಲದಲ್ಲಿ, ಈಗಿರುವಂತೆ ಆರೋಗ್ಯ ಸೇವೆಗಳಿಗೆ ಕ್ರಯಪಟ್ಟಿ (Menu Card) ಇರುತ್ತಿರಲಿಲ್ಲ! ಆದ್ದರಿಂದ ಆಗ ಎಲ್ಲರಿಗೂ ಧನಿಕ-ದರಿದ್ರರೆಂಬ ಭೇದವಿಲ್ಲದೆ ಸಾರ್ವತ್ರಿಕವಾಗಿ ಆರೋಗ್ಯ ಸೇವೆಯು ಲಭ್ಯವಾಗುತ್ತಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ, ವೈದ್ಯವೃತ್ತಿಯನ್ನು ಸ್ವೀಕರಿಸುವುದೇ ಸೇವೆಗಾಗಿ, ಧನಸಂಪಾದನೆಗಾಗಿ ಅಲ್ಲವೆಂಬ ಉನ್ನತ ಆದರ್ಶವು ಆಗ ಜನಮನದಲ್ಲಿ ಪ್ರತಿಷ್ಠಿತವಾಗಿತ್ತು. ಅಲ್ಲದೆ, ಶ್ರೇಷ್ಠವಾದ ವೈದ್ಯವೃತ್ತಿಯನ್ನು ಸ್ವೀಕರಿಸಿರುವವರನ್ನು ಪೋಷಿಸುವುದು ತನ್ನ ಕರ್ತವ್ಯವೆಂದು ಭಾವಿಸಿ ಸಮುದಾಯವು ಅವರ ಭೌತಿಕ ಅವಶ್ಯಕತೆಗಳನ್ನು ವಿವಿಧ ಅಂಗಸಂಸ್ಥೆಗಳ ಮೂಲಕ ಚೆನ್ನಾಗಿ ನೋಡಿಕೊಳ್ಳುತ್ತಿತ್ತು. ರೋಗ-ರುಜಿನಗಳಿಂದ ನರಳುತ್ತಿರುವವರ ಸೇವೆಯೇ ತಮ್ಮ ಜೀವನಧ್ಯೇಯವೆಂಬ ಉನ್ನತ ಆದರ್ಶವು ವೈದ್ಯರ ಹೃದಯಗಳಲ್ಲಿ ಮನೆಮಾಡಿಕೊಂಡಿದ್ದು, ಅವರು ಸರಳ ಉದಾತ್ತ ಜೀವನವನ್ನು ನಡೆಸುತ್ತಿದ್ದರು.

    ಇದನ್ನೂ ಓದಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದಿದ್ದ ಬಿಜೆಪಿ ಕಾರ್ಯಕರ್ತ ಕುಸಿದು ಬಿದ್ದು ಸಾವು

    ಆದರೆ, ನಮ್ಮ ದೇಶದಲ್ಲಿ ವಸಾಹತುಶಾಹಿ ಕಾಲದಲ್ಲಿ ವೈದ್ಯಕೀಯ ವೃತ್ತಿಯ ರೀತಿ-ನೀತಿಗಳಲ್ಲಿ ಬಹು ತೀವ್ರ ಬದಲಾವಣೆಗಳಾಗಿ, ಇಂದು ಅದು ಒಂದು ಸೇವಾಸಾಧನವಾಗಿ ಉಳಿದಿಲ್ಲ; ಬದಲಿಗೆ ಅದೊಂದು ಧನಸಂಪಾದನೆಯ ಸಾಧನವಾಗಿ ಪರಿವರ್ತಿತವಾಗಿದೆ. ನಮ್ಮ ಕಾಲದಲ್ಲಿ ವೈದ್ಯಕೀಯ ಶಿಕ್ಷಣ ಮತ್ತು ಸೇವೆಗಳು ಸಂಪೂರ್ಣ ವ್ಯಾಪಾರೀಕರಣವಾಗಿದ್ದು, ಸಾಮಾನ್ಯ ಜನರಿಗೆ ಅವೆರಡೂ ಅಲಭ್ಯವಾಗಿವೆ. ವೈದ್ಯಕೀಯ ಶಿಕ್ಷಣ ಮತ್ತು ಸೇವೆಗಳ ಸುಸಂಘಟಿತ ಸಂಸ್ಥೆಗಳು ಇಂದು ಸಮಾಜದ ಹೆಚ್ಚು-ಹೆಚ್ಚು ಜನರಿಗೆ ಸೇವೆಗಳನ್ನು ಕೊಂಡೊಯ್ಯುವ ತಮ್ಮ ಸಂಭಾವ್ಯ ಶಕ್ತಿಯನ್ನು ಕಳೆದುಕೊಂಡಿವೆ. ತದ್ವಿರುದ್ಧವಾಗಿ ಅಂತಹ ಹೆಚ್ಚಿನ ಸಂಸ್ಥೆಗಳು ಜನರ ರೋಗ-ರುಜಿನಗಳಿಂದ ಲಾಭ ಮಾಡಿಕೊಳ್ಳುವ ಶೋಷಕ ಧೋರಣೆಯನ್ನು ಅನುಸರಿಸುತ್ತಿರುವುದು ಸಮಾಜದ ದೌರ್ಭಾಗ್ಯವೇ ಸರಿ! ಇದರ ಪರಿಣಾಮವಾಗಿ, ಬಹುತೇಕ ವೈದ್ಯರು ಭಾರತೀಯ ಆದರ್ಶದಂತೆ ಭಗವತ್ ಸ್ವರೂಪಿಗಳಾಗುವುದರ ಬದಲು ವ್ಯಾಪಾರಿಗಳಾಗಿ ಮಾರ್ಪಟ್ಟಿದ್ದಾರೆ! ಇದಕ್ಕಾಗಿ ಕೇವಲ ವೈದ್ಯರನ್ನು ದೂರುವುದು ಸರಿಯಲ್ಲ. ಇಂತಹ ದುರದೃಷ್ಟಕರ ವಿಪರ್ಯಾಸವು ಇಂದು ಕೇವಲ ವೈದ್ಯಕೀಯ ರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಇಂದು ಸಮಾಜದ ಎಲ್ಲಾ ರಂಗಗಳನ್ನು ಆವರಿಸಿರುವ ಧನಲೋಭವೇ ಇದಕ್ಕೆ ಮೂಲ ಕಾರಣ. (ಇದಕ್ಕೆ ಹೊರತಾಗಿ ಸೇವಾಮನೋಭಾವವುಳ್ಳ ಕೆಲವು ವೈದ್ಯರು ಇಂದಿಗೂ ನಮ್ಮ ಸಮಾಜದಲ್ಲಿ ಇರುವುದು ಒಂದು ಆಶಾಕಿರಣ).

    ಮೇಲೆ ಹೇಳಿದ ಪರಿಸ್ಥಿತಿಯಿಂದಾಗಿ, ಆರೋಗ್ಯ ಸೇವೆ ಮತ್ತು ಚಿಕಿತ್ಸೆಗಳ ಖರ್ಚು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉತ್ತಮ ಗುಣಮಟ್ಟದ ಚಿಕಿತ್ಸೆಯು ಜನಸಾಮಾನ್ಯರ ಕೈಗೆಟುಕದಂತಾಗಿದೆ. ಅದರಲ್ಲೂ ಉಲ್ಬಣಗೊಂಡ ಗಂಭೀರ ಕಾಯಿಲೆಗಳಿಗೆ ತೃತೀಯ ಹಂತದ ಚಿಕಿತ್ಸೆಯು (tertiary healthcare) ಹೆಚ್ಚಿನ ಮಧ್ಯಮ ವರ್ಗದ ಜನರಿಗೂ ದೂರದ ಮಾತೇ ಸರಿ. ತೃತೀಯ ಹಂತದ ಚಿಕಿತ್ಸೆಗಾಗಿ ಅಗತ್ಯ ಪರಿಣತಿಯನ್ನು ಪಡೆದುಕೊಳ್ಳಲು ವೈದ್ಯಕೀಯ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಮಾಡಬೇಕಾದ ವೆಚ್ಚ ಹಾಗೂ ಅಂತಹ ಚಿಕಿತ್ಸೆಗಾಗಿ ಅಗತ್ಯವಾದ ಯಂತ್ರೋಪಕರಣಗಳ ವೆಚ್ಚವು ಅತ್ಯಂತ ದುಬಾರಿಯಾಗಿರುವುದರಿಂದ ಇಂತಹ ದುರದೃಷ್ಟಕರ ಪರಿಸ್ಥಿತಿಯುಂಟಾಗಿದೆ. ಭಾರತದಲ್ಲಿ ಪ್ರತಿವರ್ಷ ಆರು ಕೋಟಿ ಜನರು ವೈದ್ಯಕೀಯ ಚಿಕಿತ್ಸೆಯ ದುಬಾರಿ ಖರ್ಚಿನಿಂದಾಗಿ ದಾರಿದ್ರ್ಯಕ್ಕೆ ದೂಡಲ್ಪಡುತ್ತಿದ್ದಾರೆ. (ಇತ್ತೀಚೆಗೆ ಕೇಂದ್ರ ಸರ್ಕಾರವು ಅಳವಡಿಸಿರುವ ಆಯುಷ್ಮಾನ್ ಭಾರತ್ ಇತ್ಯಾದಿ ಯೋಜನೆಗಳು ಬಡವರಿಗೆ ವರಗಳೇ ಸರಿ.) ಹೀಗಿರುವಾಗ, ವೈದ್ಯವೃತ್ತಿಯು ಒಂದು ಸೇವಾಸಾಧನ ಹಾಗೂ ವೈದ್ಯರು ಭಗವತ್ಸ್ವರೂಪಿಗಳು – ಎಂಬ ಪ್ರಾಚೀನ ಭಾರತೀಯ ಆದರ್ಶವನ್ನು ಇಂದು ನಾವು ಹೇಗೆ ಪುನರುಜ್ಜೀವನಗೊಳಿಸಬಹುದು?

    ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ

    ಮೊದಲನೆಯ ಸಮಸ್ಯೆಯೆಂದರೆ, ವೈದ್ಯಕೀಯ ಶಿಕ್ಷಣದ ದುಬಾರಿ ವೆಚ್ಚ. ಶ್ರೀಮಂತರ ಮಕ್ಕಳನ್ನು ಬಿಟ್ಟು ಉಳಿದವರೆಲ್ಲರೂ ಬ್ಯಾಂಕುಗಳಿಂದ ಸಾಲವನ್ನು ಪಡೆದು ತಮ್ಮ ಶಿಕ್ಷಣವನ್ನು ಮುಗಿಸಿ ವೈದ್ಯರಾಗುತ್ತಾರೆ. ತದನಂತರ ಸಾಲವನ್ನು ಹಿಂದಿರುಗಿಸಲು ಅವರು ತಮ್ಮ ರೋಗಿಗಳಿಂದ ಧನಸಂಪಾದನೆ ಮಾಡಲೇಬೇಕಷ್ಟೆ. ಎರಡನೆಯ ಸಮಸ್ಯೆಯೆಂದರೆ, ಯೋಗ್ಯ ಯಂತ್ರೋಪಕರಣಗಳು ಮತ್ತು ಔಷಧೋಪಚಾರಗಳಿಂದ ಸುಸಜ್ಜಿತವಾದ ಆಸ್ಪತ್ರೆಗಳನ್ನು ತೆರೆಯಲು ಅಗತ್ಯವಾದ ಅತ್ಯಂತ ಹೆಚ್ಚಿನ ಬಂಡವಾಳ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಆಸ್ಪತ್ರೆಗಳನ್ನು ತೆರೆಯಲು ಯಾರು ಮುಂದೆ ಬರುತ್ತಾರೆ? ಅಲ್ಲದೆ, ಬಹುತೇಕ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಗ್ರಾಮೀಣ ಪ್ರದೇಶಗಳಿಗೆ ಹೋಗಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇವೆರಡು ಸಮಸ್ಯೆಗಳನ್ನು ಬಗೆಹರಿಸದೆ, ಇಂದಿನ ವೈದ್ಯಕೀಯ ರಂಗದಲ್ಲಿ ಪ್ರಾಚೀನ ಭಾರತದ ಆದರ್ಶವನ್ನು ಅಳವಡಿಸುವುದು ಒಂದು ಕನಸೇ ಸರಿ!

    ನಮ್ಮ ದೇಶದಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಕನಿಷ್ಠ ವೆಚ್ಚದಲ್ಲಿ ಜನತೆಗೆ ಒದಗಿಸಲು ಸತತ ಪ್ರಯತ್ನಗಳನ್ನು ಸರ್ಕಾರಗಳು ಮಾಡುತ್ತಲೇ ಇವೆ. ಆದರೆ, ನಮ್ಮ ಬೃಹತ್ ಜನಸಂಖ್ಯೆಗೆ ಹೋಲಿಸಿದರೆ, ಈ ದಿಶೆಯಲ್ಲಿ ಸರ್ಕಾರಗಳ ಪರಿಶ್ರಮವು ಸಾಲದಾಗಿದೆ. ಅದರಲ್ಲೂ, ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಹೆಚ್ಚಿನ ಜನಸಂಖ್ಯೆಗೆ ಉತ್ತಮ ವೈದ್ಯಕೀಯ ಸವಲತ್ತುಗಳನ್ನು ಕಲ್ಪಿಸುವುದು ದೊಡ್ಡ ಸವಾಲೇ ಸರಿ.

    ಕೋವಿಡ್ ಸಾಂಕ್ರಾಮಿಕವು ಉಲ್ಬಣಗೊಂಡಾಗ ನಮ್ಮ ದೇಶದ ವೈದ್ಯಕೀಯ ಸೇವಾ ವ್ಯವಸ್ಥೆಯು ಕಠಿಣ ಪರೀಕ್ಷೆಯನ್ನು ಎದುರಿಸಬೇಕಾಯಿತು. ಅದರ ನಂತರ, ದೇಶದಲ್ಲಿ ನಮ್ಮ ವೈದ್ಯಕೀಯ ಸೇವಾ ವ್ಯವಸ್ಥೆಯನ್ನು ಸದೃಢಗೊಳಿಸಿ ಸುಧಾರಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಯೋಗ್ಯ ಯಂತ್ರೋಪಕರಣಗಳನ್ನು ಒದಗಿಸಿ, ವೈದ್ಯರು ಹಾಗೂ ದಾದಿಯರಲ್ಲಿ ಗ್ರಾಮೀಣ ಪ್ರದೇಶಗಳ ವೈದ್ಯಕೀಯ ಅವಶ್ಯಕತೆಗಳ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು, ದಾದಿಯರು ಹಾಗೂ ಇತರ ವೈದ್ಯಕೀಯ ತಾಂತ್ರಿಕ ಕುಶಲಕರ್ವಿುಗಳನ್ನು ಸೃಷ್ಟಿಸಲು ಹೆಚ್ಚಿನ ಕಾಲೇಜುಗಳನ್ನು ಸ್ಥಾಪಿಸಲು ಪ್ರಯತ್ನಗಳು ನಡೆದಿವೆ. ಇತ್ತೀಚೆಗಿನ ಆಯ-ವ್ಯಯ ಪತ್ರದಲ್ಲಿ (ಫೆಬ್ರವರಿ 2023) ಸರ್ಕಾರಿ ಜಿಲ್ಲಾ ಆಸ್ಪತ್ರೆಗಳ ಸಹಯೋಗದೊಂದಿಗೆ ಸ್ಥಾಪಿಸಲಾಗುತ್ತಿರುವ ಮೆಡಿಕಲ್ ಕಾಲೇಜುಗಳ ಜೊತೆಗೆ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ತೆರೆಯುವ ಪ್ರಸ್ತಾಪವಿದೆ. ವೈದ್ಯಕೀಯ ಪದವೀಧರರೆಲ್ಲರಿಗೂ ಸ್ನಾತಕೋತ್ತರ ಶಿಕ್ಷಣದ ಅವಕಾಶಗಳನ್ನು ನೀಡಲು, ಸ್ನಾತಕೋತ್ತರ ಕಾಲೇಜುಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಕಲ್ಪಿಸುವ ಆಶ್ವಾಸನೆಯೂ ಇದೆ. ಆದರೆ, ಕೇವಲ ವೈದ್ಯರ ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸುವುದರಿಂದ ಸಮಸ್ಯೆಯು ಪರಿಹಾರವಾಗುವುದಿಲ್ಲ. ಅವರಲ್ಲಿ ತ್ಯಾಗ ಮತ್ತು ಸೇವಾ ಮನೋಭಾವನೆಗಳನ್ನು ಬೆಳೆಸಬೇಕು.

    2019 ರಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ, ನಮ್ಮ ದೇಶದ ಆಸ್ಪತ್ರೆಗಳಲ್ಲಿರುವ ಒಟ್ಟು ಹಾಸಿಗೆಗಳ (hospital beds) ಸಂಖ್ಯೆ 19 ಲಕ್ಷ. ಈ ಪೈಕಿ 7 ಲಕ್ಷ ಮಾತ್ರ ಗ್ರಾಮೀಣ ಪ್ರದೇಶಗಳಲ್ಲಿದ್ದು, ಉಳಿದವು ನಗರ ಪ್ರದೇಶಗಳಲ್ಲಿವೆ. ಜನಸಂಖ್ಯಾ ಪ್ರಮಾಣದ ಪ್ರಕಾರ, ಇದೊಂದು ವಿಪರ್ಯಾಸವಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ 11,000 ಜನರಿಗೆ ಕೇವಲ ಒಬ್ಬ ವೈದ್ಯರು ಲಭ್ಯವಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ ಪ್ರತಿ 1,000 ಜನರಿಗೆ ಒಬ್ಬ ವೈದ್ಯರಿರಬೇಕು. ದಾದಿಯರು ಮತ್ತು ಇತರ ವೈದ್ಯಕೀಯ ಸಿಬ್ಬಂದಿಯ ಕೊರತೆಯೂ ಗ್ರಾಮೀಣ ಜನರನ್ನು ಕಾಡುತ್ತಿದೆ. ಇನ್ನು, ಅಲ್ಲಿ ಲಭ್ಯವಿರುವ ನುರಿತ ವಿಶೇಷ ತಜ್ಞರ (specialists) ಸಂಖ್ಯೆಯನ್ನು ಕೇಳುವುದೇ ಬೇಡ! ಈ ಸಮಸ್ಯೆಯು ಭಾರತ ದೇಶವನ್ನಲ್ಲದೆ, ಜಗತ್ತಿನ ಬಹುತೇಕ ದೇಶಗಳನ್ನು ಕಾಡುತ್ತಿದೆ. ಅತ್ಯಂತ ಶ್ರೀಮಂತ ರಾಷ್ಟ›, ಉತ್ತರ ಅಮೆರಿಕಾವೂ ಇದಕ್ಕೆ ಹೊರತಲ್ಲ!

    ಆದ್ದರಿಂದ ಇಂದು ನಾವು ಸಾಧಿಸಬೇಕಾದ ಮೊದಲ ಕಾರ್ಯವೆಂದರೆ, ಹೆಚ್ಚಿನ ಸಂಖ್ಯೆಯಲ್ಲಿ ತ್ಯಾಗ-ಸೇವೆಗಳ ಸ್ಪೂರ್ತಿಯಿರುವ ವೈದ್ಯರನ್ನು ಹಾಗೂ ಇತರ ವೈದ್ಯಕೀಯ ಸಿಬ್ಬಂದಿಯನ್ನು ಸಿದ್ಧಗೊಳಿಸುವುದು. ನಮ್ಮ ವೈದ್ಯರು ಮತ್ತು ಸಿಬ್ಬಂದಿ ಪರದೇಶಗಳಿಗೆ ಹೋಗಿ ಸೇವೆ ಸಲ್ಲಿಸಬಾರದೆಂದು ನಾನು ಹೇಳುವುದಿಲ್ಲ. ಆದರೆ, ನಮ್ಮ ದೇಶದ ಅವಶ್ಯಕತೆಯು ತೀರಿದ ಮೇಲೆ, ನಮ್ಮವರು ಹೊರಗೆ ಹೋಗಬಹುದು. ಊರಿಗೆ ಉಪಕಾರಿಯಾಗುವುದರ ಮೊದಲು ಯಾವುದೇ ವ್ಯಕ್ತಿ ತನ್ನ ಮನೆಗೂ ಒಂದಿಷ್ಟು ಉಪಕಾರವೆಸಗಬೇಕಷ್ಟೆ.

    ಸಮಾಜದ ಇಂದಿನ ಪರಿಸ್ಥಿತಿಯಲ್ಲಿ ಸೇವಾ ಮನೋಭಾವನೆಯ ವೈದ್ಯರನ್ನು ಹಾಗೂ ಇತರ ಸಿಬ್ಬಂದಿಯನ್ನು ಸೃಷ್ಟಿಸಲು ಸಾಧ್ಯವೇ? ಈ ಪ್ರಶ್ನೆಯು ಯಾರಿಗಾದರೂ ಬಂದರೆ ಆಶ್ಚರ್ಯವಿಲ್ಲ. ಆದರೆ, ಈ ದಿಶೆಯಲ್ಲಿ ನಮ್ಮ ವಿಶ್ವವಿದ್ಯಾಲಯವು ಒಂದು ಪ್ರಯೋಗಶಾಲೀ ದಿಟ್ಟ ಹೆಜ್ಜೆಯನ್ನು ಇದೀಗ ಮುಂದಿಟ್ಟಿದೆ. ಈಗಾಗಲೇ ನಾವು ಮುದ್ದೇನಹಳ್ಳಿಯಲ್ಲಿ ಒಂದು ಸಂಪೂರ್ಣ ಉಚಿತ ನರ್ಸಿಂಗ್ ಹಾಗೂ ಇತರ ವೈದ್ಯಕೀಯ ವಿಜ್ಞಾನಗಳ ಕಾಲೇಜನ್ನು ಪ್ರಾರಂಭಿಸಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ, ನಮ್ಮ ದೇಶದ ಮೊಟ್ಟಮೊದಲ ಸಂಪೂರ್ಣ ಉಚಿತ ಮೆಡಿಕಲ್ ಕಾಲೇಜನ್ನು ಪ್ರಾರಂಭಿಸುತ್ತಿದ್ದೇವೆ. ಇದರ ಭಾಗವಾಗಿ ಈಗಾಗಲೇ ಸಂಪೂರ್ಣ ಉಚಿತ ಚಿಕಿತ್ಸೆಯನ್ನು ನೀಡುವ ಆಸ್ಪತ್ರೆಯು ಪ್ರಾರಂಭವಾಗಿದ್ದು, ಸಾವಿರಾರು ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರು ದಾರಿದ್ರ್ಯ ಮತ್ತು ಅನಾರೋಗ್ಯದ ವಿಷವರ್ತಲದಿಂದ ಯಶಸ್ವಿಯಾಗಿ ಹೊರಬರುತ್ತಿದ್ದಾರೆ. ಇಲ್ಲಿ ನಡೆಯುತ್ತಿರುವ ನಿಸ್ವಾರ್ಥ ಸೇವೆಯಿಂದ ಸ್ಪೂರ್ತಿ ಪಡೆದು, ಹಲವು ನುರಿತ ವೈದ್ಯರು ನಮ್ಮ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇರಿದ್ದಾರೆ. ಇಂತಹ ವಾತಾವರಣದಲ್ಲಿ ಯುವಕ-ಯುವತಿಯರಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ನೀಡಿ ನಿಸ್ವಾರ್ಥ ಸೇವಾ ಮನೋಭಾವದ ವೈದ್ಯರನ್ನು ಹಾಗೂ ಇತರ ಸಿಬ್ಬಂದಿಯನ್ನು ಸೃಷ್ಟಿಸಲು ಸಾಧ್ಯವಿದೆಯೆಂದು ನಾವು ನಂಬಿದ್ದೇವೆ. ಇದೇ ಮಾದರಿಯ ಶಿಕ್ಷಣದಿಂದಾಗಿ ನಮ್ಮ ವಿಶ್ವವಿದ್ಯಾಲಯದಲ್ಲಿ ಹಲವಾರು ತ್ಯಾಗ ಮತ್ತು ಸೇವಾ ಮನೋಭಾವದ ಶಿಕ್ಷಕರನ್ನು ಸೃಷ್ಟಿಸುವಲ್ಲಿ ನಾವು ಈಗಾಗಲೇ ಯಶಸ್ವಿಯಾಗಿದ್ದೇವೆ. ಈ ಮಹಾಯಜ್ಞದಲ್ಲಿ ಸರ್ವರ ಸಹಕಾರ-ಬೆಂಬಲಗಳು ಅತಿ ಮುಖ್ಯ. ಪ್ರಾಚೀನ ಭಾರತದಲ್ಲಿ ಇಂತಹ ಸಂಸ್ಥೆಗಳು ರಾಜ್ಯಪಾಲಕರು, ವಾಣಿಜ್ಯೋದ್ಯಮಿಗಳು ಹಾಗೂ ಇತರ ರಂಗಗಳ ಶ್ರೀಮಂತರಿಂದ ಪೋಷಿಸಲ್ಪಡುತ್ತಿದ್ದವು. ಈಗಲೂ ನಮ್ಮ ಈ ಪ್ರಯತ್ನಕ್ಕೆ ವಸುಧೈವ ಕುಟುಂಬಕಂ, ವಿಶ್ವ ಕುಟುಂಬದ ಧ್ಯೇಯದಲ್ಲಿ ನಂಬಿಕೆಯಿರುವ ದೇಶ-ವಿದೇಶಗಳ ವಿಶಾಲ ಹೃದಯದ ಸಜ್ಜನರಿಂದ ನೆರವು ಬರಲಾರಂಭಿಸಿದೆ. ಭಾರತೀಯ ಆದರ್ಶದ ಸಾರ್ವತ್ರಿಕ ಆರೋಗ್ಯ ಸೇವೆಯನ್ನು ನಮ್ಮ ಆಧುನಿಕ ಯುಗದಲ್ಲಿ ಪುನರುಜ್ಜೀವನಗೊಳಿಸಲು ನಾವೆಲ್ಲರೂ ಕೂಡಲೇ ಕಾರ್ಯಪ್ರವೃತ್ತರಾಗಬೇಕಾಗಿದೆ!

    (ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)

    ಇದೋ ಬಂದಿದೆ ಕಿಸ್ಸಿಂಗ್ ಡಿವೈಸ್; ಚುಂಬಿಸುವ ಇಬ್ಬರು ಎಷ್ಟೇ ದೂರದಲ್ಲಿದ್ದರೂ ಸಿಗುವುದು ನೈಜ ಮುತ್ತಿನ ಗಮ್ಮತ್ತು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts