More

    ಕೈ ನಲ್ಲಿ ಒಗ್ಗಟ್ಟು, ಬಿಜೆಪಿಯಲ್ಲಿ ಒಡಕು

    ತುಮಕೂರು: ವಿಧಾನಸಭೆ ಚುನಾವಣೆಗೆ ಇನ್ನೂ 8 ತಿಂಗಳು ಇರುವಾಗಲೇ ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.


    ತಿಪಟೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಚಿಕ್ಕನಾಯಕನಹಳ್ಳಿ ಬಿಜೆಪಿಯಲ್ಲಿ ನಡೆದಿರುವ ವಿದ್ಯಮಾನಗಳು ಜಿಲ್ಲೆಯೆಲ್ಲೆಡೆ ಚರ್ಚೆಯಾಗುತ್ತಿದ್ದು ಮುಂಬರುವ ಚುನಾವಣೆಯ ಮೇಲೂ ಪರಿಣಾಮ ಬೀರುವಂತಿದೆ.


    ತಿಪಟೂರು ಕಾಂಗ್ರೆಸ್‌ನಲ್ಲಿ ಪ್ರಮುಖ ಬೆಳವಣಿಗೆಯಾಗಿ ಪ್ರಮುಖ ಮುಖಂಡರಾದ ಮಾಜಿ ಶಾಸಕ ಕೆ.ಷಡಕ್ಷರಿ, ಟೂಡಾ ಶಶಿಧರ್, ಲೋಕೇಶ್ವರ್ ಒಟ್ಟಾಗಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದೆ. 75ನೇ ವರ್ಷದ ಭಾರತದ ಸ್ವಾತಂತ್ರೋತ್ಸವದ ಅಂಗವಾಗಿ ಕಾಂಗ್ರೆಸ್ ವತಿಯಿಂದ ಇತ್ತೀಚೆಗೆ ಹೊನ್ನವಳ್ಳಿಯಿಂದ ಪ್ರಾರಂಭವಾದ ಪಾದಯಾತ್ರೆಯಲ್ಲಿ ಲಿಂಗಾಯತ ಸಮುದಾಯದ ಈ ತ್ರಿಮೂರ್ತಿಗಳು ಮುನಿಸು ಮರೆತು ಒಟ್ಟಾಗಿ ಹೆಜ್ಜೆಹಾಕಿರುವುದು ಪಕ್ಷದ ಮಟ್ಟಿಗೆ ಪ್ಲಸ್ ಪಾಯಿಂಟ್ ಎನಿಸಿದೆ. ತಿಪಟೂರು ರಾಜಕೀಯ ಇತಿಹಾಸದಲ್ಲಿ ಕಾಂಗ್ರೆಸ್ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಿರುವ ಪರಿಪಾಠವಿದ್ದರೂ ಈ ಭಾರಿ ಒಕ್ಕಲಿಗ ಸಮುದಾಯದ ಕೆ.ಟಿ.ಶಾಂತಕುಮಾರ್ ಕೂಡ ಟಿಕೆಟ್ ಬಯಸಿದ್ದಾರೆ. ಮುಖಂಡರ ಈ ಒಗ್ಗಟ್ಟು ಎಷ್ಟು ದಿನ ಇರಲಿದೆ ಎಂಬ ಕುತೂಹಲ ಇದ್ದೇ ಇದೆ.


    ಇನ್ನು ಚಿಕ್ಕನಾಯಕನಹಳ್ಳಿ ಕ್ಷೇತ್ರದ ಬಿಜೆಪಿಯಲ್ಲಿ ಬಿರುಗಾಳಿಯೇ ಸೃಷ್ಠಿಯಾಗಿದೆ. ರಾಜ್ಯದ ಪ್ರಭಾವಿ ಸಚಿವ ಜೆ.ಸಿ.ಮಾಧುಸ್ವಾಮಿ ವಿರುದ್ಧ ಗುಡುಗಿರುವ ಮಾಜಿ ಶಾಸಕ ಕೆ.ಎಸ್.ಕಿರಣಕುಮಾರ್ ಪಕ್ಷದ ಟಿಕೆಟ್ ನನಗೇ ಸಿಗಲಿದೆ ಎಂದು ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿರುವುದು ಜೆಸಿಎಂ ನಿದ್ದೆಗೆಡಿಸಿದೆ. ಪಟ್ಟಣದಲ್ಲಿ ಜನಸಂಪರ್ಕ ಕಚೇರಿ ಕೂಡ ಆರಂಭಿಸಿರುವ ಕೆಎಸ್‌ಕೆಗೆ ಅಪಾರ ಬೆಂಬಲಿಗರು ಇದ್ದು ಬಂಡಾಯದ ಬಿಸಿ ಯಾರಿಗೆ ತಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ.

    ಪಕ್ಷಕ್ಕಾಗಿ ನನ್ನ ದುಡಿಮೆ ಇದ್ದರೂ 2018ರಲ್ಲಿ ಪಕ್ಷಕ್ಕಾಗಿ ಟಿಕೆಟ್ ತ್ಯಾಗ ಮಾಡಿದ್ದಾಗಿದೆ. 2023ರಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ, ಬಿಎಸ್‌ವೈ ಹೇಳಿದರೆ ತಗೀತಾರೆ, ಬೇರೆ ಪಕ್ಷಕ್ಕೆ ಹೋಗ್ತಾರೆ ಎಂಬ ವದಂತಿಗಳಿಗೆ ಕಾರ್ಯಕರ್ತರು ಕಿವಿಗೊಡಬಾರದು.
    ಕೆ.ಎಸ್.ಕಿರಣ್‌ಕುಮಾರ್ ಮಾಜಿ ಶಾಸಕ

    ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಅರಿವು ನಮ್ಮಲ್ಲಿದೆ. ಕಾಂಗ್ರೆಸ್ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಲೇ ಇದ್ದೇನೆ. ಮುಖಂಡರ ಮನೆಗಳಲ್ಲಿ ನಡೆಯುವ ಸಭೆಗಳನ್ನು ಪಕ್ಷದ ಸಭೆ ಎಂದು ಪರಿಗಣಿಸಬೇಡಿ, ಪಕ್ಷದ ಸೂಚನೆಯಂತೆ ನಡೆಯುವ ಎಲ್ಲ ಕಾರ್ಯಕ್ರಮದಲ್ಲಿಯೂ ಭಾಗಿಯಾಗಿದ್ದೇವೆ.
    ಟೂಡಾ ಶಶಿಧರ್ ಕಾಂಗ್ರೆಸ್ ಮುಖಂಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts