ಪಾಕ್​ನ ಮನೆ-ವರಾಂಡದ ಮೇಲೆ ಕಣ್ಣು!

ಬೆಂಗಳೂರು: ಗಡಿಭಾಗದ ಆಚೆಗೆ ಪಾಕಿಸ್ತಾನದಲ್ಲಿರುವ ಮನೆಯ ಕೊಠಡಿ ಹಾಗೂ ವರಾಂಡಗಳನ್ನು ವೀಕ್ಷಿಸುವ ಸಾಮರ್ಥ್ಯವನ್ನು ಪ್ರಸ್ತುತ ಪರೀಕ್ಷಾ ಹಂತದಲ್ಲಿರುವ ‘ಸಮಗ್ರ ಗಡಿ ನಿರ್ವಹಣೆ ವ್ಯವಸ್ಥೆ’ ಹೊಂದಿದೆ ಎಂದು ಬಾಹ್ಯಾಕಾಶ ಇಲಾಖೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಹಳೇ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಯು.ಆರ್. ರಾವ್ ಉಪಗ್ರಹ ಕೇಂದ್ರದಲ್ಲಿ (ಯುಆರ್​ಎಸ್​ಸಿ) ಗುರುವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ‘ಯುನಿಸ್ಪೇಸ್ ನ್ಯಾನೋಸ್ಯಾಟಲೈಟ್ ಅಸೆಂಬ್ಲಿ ಆಂಡ್ ಟ್ರೖೆನಿಂಗ್’ (ಉನ್ನತಿ) ಯೋಜನೆ ಉದ್ಘಾಟನೆ ಮಾಡಿ ಮಾತನಾಡಿದರು.

ಉಪಗ್ರಹ ಹೇಗೆ ಕಾರ್ಯ ನಿರ್ವಹಿಸುತ್ತದೆ, ರಾಕೆಟ್ ಉಡಾವಣೆ ಹೇಗೆ ಮಾಡಲಾಗುತ್ತದೆ ಎಂಬ ಮಾಹಿತಿಗಳು ಇಲ್ಲದೆ ಇದ್ದರೂ ಬಾಹ್ಯಾಕಾಶ ತಂತ್ರಜ್ಞಾನದ ಉಪಯೋಗವನ್ನು ಪ್ರತಿಯೊಬ್ಬ ವ್ಯಕ್ತಿ ಬಳಸಿಕೊಳ್ಳುತ್ತಿದ್ದಾನೆ. ಇಂತಹ ಸಂದರ್ಭಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಪ್ರಯೋಜನ, ಸುರಕ್ಷತೆ ಹಾಗೂ ಭವಿಷ್ಯದಲ್ಲಿ ಬಳಸಬಹುದಾದ ತಂತ್ರಜ್ಞಾನ ಸವಾಲಾಗಿದೆ ಎಂದು ಅವರು ಹೇಳಿದರು.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಸ್ರೋಗೆ ಹಿಂದೆಂದೂ ನೀಡದಷ್ಟು ಹೆಚ್ಚಿನ ಗಮನ ನೀಡಿದೆ. ಪ್ರಸ್ತುತ ಬಾಹ್ಯಾಕಾಶ ತಂತ್ರಜ್ಞಾನವನ್ನು ಮೂಲಸೌಕರ್ಯ ಅಭಿವೃದ್ಧಿ, ರಸ್ತೆ ನಿರ್ವಣ, ನರೇಗಾ ಯೋಜನೆಗಳಿಗೂ ಬಳಸಿಕೊಳ್ಳಲಾಗುತ್ತಿದೆ ಎಂದರು. ಇಸ್ರೋ ಅಧ್ಯಕ್ಷ ಕೆ. ಶಿವನ್ ಮತ್ತಿತರರು ಉಪಸ್ಥಿತರಿದ್ದರು.

ಬಾಹ್ಯಾಕಾಶ ಸಂಶೋಧನೆಯಲ್ಲಿ ದಾಪುಗಾಲು

1966ರಲ್ಲಿ ನೀಲ್ ಆಮರ್್​ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟರೂ, ನೀರು ಪತ್ತೆ ಮಾಡಲು ಆಗಿರಲಿಲ್ಲ. ಆದರೆ ಇಸ್ರೋದ ಚಂದ್ರಯಾನ-1 ಯೋಜನೆ ಚಂದ್ರನ ಮೇಲೆ ನೀರಿತ್ತು ಎಂಬ ಸಂದೇಶವನ್ನು ನೀಡಿದೆ. ಇಸ್ರೋದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಗಗನ್​ಯಾನ್’ ಮೂಲಕ ಮತ್ತೊಂದು ಮೈಲಿಗಲ್ಲು ಶೀಘ್ರದಲ್ಲೇ ಸಾಧ್ಯ ಆಗಲಿದೆ ಎಂದು ಜಿತೇಂದ್ರ ಸಿಂಗ್ ಹೇಳಿದರು. ಭಾರತಕ್ಕಿಂತ ಹಲವಾರು ದಶಕಗಳ

ಹಿಂದೆ ಬಾಹ್ಯಾಕಾಶ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ಅನೇಕ ದೇಶಗಳನ್ನು ಹಿಂದಕ್ಕೆ ಹಾಕಿ ಭಾರತ ದಾಪುಗಾಲು ಇರಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.