ಬೀಳಗಿ: ಮಠ ಮಾನ್ಯಗಳು ಮಾಡುವ ಕಾರ್ಯವನ್ನು ಯಾವುದೇ ಸರ್ಕಾರಗಳು ಮಾಡಲು ಆಗುವುದಿಲ್ಲ ಎಂದು ಶ್ರೀಮದ್ ಉಜೈನಿ ಮಹಾಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಗಿರಿಸಾಗರ ಕಲ್ಯಾಣ ಹಿರೇಮಠದಲ್ಲಿ ಗುರುವಾರ ಆಯೋಜಿಸಿದ್ದ ಲಿಂ.ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವ, ನೂತನ ಶಿಲಾ ಮಂದಿರದ ಲೋಕಾರ್ಪಣೆ, ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ, ಭಾವೈಕ್ಯ ಧರ್ಮ ಸಮ್ಮೇಳನ, ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಜಾತಿ, ಜನಾಂಗ, ಧರ್ಮದ ತಾರತಮ್ಯವಿಲ್ಲದೆ ಎಲ್ಲರನ್ನೂ ತಮ್ಮ ಮಕ್ಕಳೆಂದು ತಿಳಿದು ಪ್ರೀತಿ ಮಾಡಿ ಶಿಕ್ಷಣ, ಆಸರೆ, ಅನ್ನ, ಅರಿವೆ ಕೊಟ್ಟು ಅವರ ಬದುಕಿಗೆ ಆಧಾರವಾದ ಮಠ ಮಾನ್ಯಗಳೆನಾದರೂ ಇದ್ದರೆ ಅವುಗಳು ವೀರಶೈವ ಮಠಗಳು ಮಾತ್ರ ಎಂದರು.
ಗುರುವಿನ ಬೋಧನೆ, ತತ್ವ ಕೇಳುವಂಥ ಶಿಷ್ಯರು ಇರುವ ಕ್ಷೇತ್ರವೆ ಮಠ. ಭಕ್ತರ ಜೀವನಮಟ್ಟ ಸುಧಾರಿಸುವ ಶಕ್ತಿ ಕೇಂದ್ರಕ್ಕೆ ಮಠ ಎನ್ನಬೇಕು. ಇದಕ್ಕೆ ಗಿರಿಸಾಗರ ಕಲ್ಯಾಣ ಹಿರೇಮಠ ಅನ್ವಯಿಸುತ್ತದೆ. ಗಿರಿಸಾಗರ ರುದ್ರಮುನಿ ಶ್ರೀಗಳು ಕಳೆದ 35 ವರ್ಷಗಳಿಂದ 866 ಜೋಡಿಗಳ ಸರ್ವಧರ್ಮ ಸಾಮೂಹಿಕ ವಿವಾಹ ಮಾಡಿಕೊಂಡು ಬಂದಿದ್ದಾರೆ ಎಂದರು.
ಶಾಸಕ ಜೆ.ಟಿ. ಪಾಟೀಲ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಮದುವೆಯಾದ ವಧುವರರು ಪುಣ್ಯವಂತರು. ಇಲ್ಲಿ ಯಾವುದೆ ಜಾತಿ, ಧರ್ಮ, ಪಕ್ಷಗಳಿಲ್ಲದೆ ಮಾಡುವಂತ ಕಾರ್ಯ ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ಆರ್. ನಿರಾಣಿ ಮಾತನಾಡಿ, ಆರ್ಥಿಕವಾಗಿ ಭಕ್ತರಿಗೆ ಹೊರೆಯಾಗಬಾರದೆಂಬ ಉದ್ದೇಶದಿಂದ ಪ್ರತೀ ವರ್ಷ ಉಚಿತ ಸಾಮೂಹಿಕ ವಿವಾಹ ಮಾಡುತ್ತಿರುವುದು ಶ್ಲಾಘನೀಯ ಎಂದರು.
ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಇಂದು ಸರಳವಾಗಿ ವಿವಾಹವಾಗಬೇಕಾದರೆ ಕನಿಷ್ಠ 5 ಲಕ್ಷ ರೂ. ಖರ್ಚು ಆಗುತ್ತದೆ. ಈ ದುಂದು ವೆಚ್ಚದ ಜಗತ್ತಿನಲ್ಲಿ ಸಾಮೂಹಿಕ ವಿವಾಹದಲ್ಲಿ ಲಗ್ನ ಮಾಡಿಕೊಳ್ಳುವುದರಿಂದ ಜಗದ್ಗರುಗಳ, ಶ್ರೀಗಳ, ಗಣ್ಯ ಮಾನ್ಯರು ಸೇರಿ ಸಾವಿರಾರು ಭಕ್ತರ ಆಶೀರ್ವಾದ ಸಿಗುತ್ತದೆ ಎಂದರು.
ಬಿಲ್ ಕೆರೂರ ಸಿದ್ಧಲಿಂಗ ಶ್ರೀಗಳು, ಮುತ್ತತ್ತಿ ಗುರುಲಿಂಗ ಶ್ರೀ, ಎಮ್ಮಿಗನೂರು ವಾಮದೇವ ಶ್ರೀ, ಕೊಣ್ಣೂರ ಡಾ.ವಿಶ್ವಪ್ರಭುದೇವ ಶ್ರೀ, ಬೀಳಗಿ ಗುರುಪಾದ ಶ್ರೀ, ಮಾಜಿ ಸಚಿವ ಎಸ್.ಆರ್. ಪಾಟೀಲ, ಎಂ.ಎನ್. ಪಾಟೀಲ, ಬಸವಪ್ರಭು ಸರನಾಡಗೌಡರ, ಅಣವೀರಯ್ಯ ಪ್ಯಾಟಿಮಠ, ಹೊಳಬಸು ಬಾಳಶಟ್ಟಿ ಇದ್ದರು.