More

    ಅನ್ಯರ ಅಂತಃಕರಣ ಗೆದ್ದ ಅನನ್ಯ ಹಿಂದೂ ಧರ್ಮ

    ಅನ್ಯರ ಅಂತಃಕರಣ ಗೆದ್ದ ಅನನ್ಯ ಹಿಂದೂ ಧರ್ಮಮನುಷ್ಯರ ಸ್ವಭಾವಗಳಲ್ಲಿ ವಿಭಿನ್ನತೆಗಳಿರುವುದು ಸಹಜ. ತಾತ್ತ್ವಿಕ ವಿಭಿನ್ನತೆ ಸಹ್ಯ, ಆದರೆ ವಾಸ್ತವಿಕತೆಯನ್ನು ಗೌಣವಾಗಿಸುವ, ಸುಳ್ಳನ್ನೇ ವೈಭವೀಕರಿಸುವ ರೋಗಗ್ರಸ್ತ ಮನಸ್ಸುಗಳು ಜಗತ್ತಿಗೆ ಮಾಡಿರುವ ಅಪಚಾರ, ಅಪಕಾರಗಳು ಅಕ್ಷಮ್ಯ! ಜಗತ್ತಿನಲ್ಲಿ ಧರ್ಮ-ಅಧ್ಯಾತ್ಮಗಳು ವಿಕೃತವಾಗಿ ಬಿಂಬಿತವಾದರೂ, ಬಹುಕಾಲ ಉಳಿಯದೇ, ತಮ್ಮ ನೆಲೆಗಟ್ಟೇ ಕುಸಿದಾಗ ಟೊಳ್ಳು, ಸುಳ್ಳು ವಿಚಾರಗಳು ಬೆತ್ತಲೆಗೊಂಡಾಗ ಈ ವಿಚಾರವಂಚಕರ ಇಂಗುತಿಂದ ಮಂಗನ ಸ್ಥಿತಿ ಅಸಹ್ಯ!

    ಭಾರತ ಕುರಿತಾದ ಅತ್ಯಮೂಲ್ಯ ವಿಚಾರಗಳನ್ನು ಸೂತ್ರರೂಪದಲ್ಲಿ ಹಿಡಿದಿಡುವ ಪ್ರಯತ್ನವೇ ಈ ಲೇಖನ. ಸನಾತನ ಹಿಂದೂಧರ್ಮ ಕುರಿತಾದ ಶ್ರೇಷ್ಠ ದಾರ್ಶನಿಕರ, ಚಿಂತಕರ, ಇತಿಹಾಸಜ್ಞರ, ವಿಜ್ಞಾನಿಗಳ ಹಾಗು ಗಣ್ಯಮಾನ್ಯರ ಅಭಿಪ್ರಾಯಗಳೇ ಲೇಖನದ ಹೂರಣ!

    ಕಿಪ್ಲಿಂಗ್, ’Oh, East is East and West is West and never the twain shall meet… ಎಂದಿದ್ದನು. ಹತ್ತೊಂಬತ್ತನೇ ಶತಮಾನದಲ್ಲಿ ಅಮೆರಿಕಾ ನಾಟಕಕಾರ ಜಾನ್ ಡ್ರೂಟೆನ್, ‘ಭೌತಜಗತ್ತಿನಿಂದ ನ್ಯೂಟನ್, ಜೀವಜಗತ್ತಿನಿಂದ ಡಾರ್ವಿನ್ ಮತ್ತು ಮನೋಜಗತ್ತಿನಿಂದ ಸಿಗ್ಮಂಡ್ ಫ್ರಾಯ್್ಡ ಎಂಬ ವಿಜ್ಞಾನಿಗಳು ದೇವರನ್ನು ಉಚ್ಚಾಟಿಸಿದ್ದಾರೆ’ ಎಂದಿದ್ದ. ಆದರೆ ಜಗತ್ತಿನ ಏಳ್ಗೆಗಾಗಿ ಕಾರ್ಲ್​ವಾರ್ಕ್ಸ್, ಲೆನಿನ್, ಮಾವೋ, ಹೋಚಿಮಿನ್ ಮೊದಲಾದವರ ಕ್ರಾಂತಿಗಳು ಅಲ್ಪಕಾಲದಲ್ಲೇ ಅಸ್ತಂಗತವಾಗಲಿಲ್ಲವೇ?

    ಬ್ರಿಟನ್ನಿನ ಬರಹಗಾರ ಸರ್ ಚಾರ್ಲ್ಸ್ ಇಲಿಯೆಟ್ ಹೇಳುತ್ತಾನೆ: ‘ಬ್ರಿಟಿಷ್ ಬರಹಗಾರರು ಭಾರತೀಯರ ಅದ್ಭುತ ಸಾಧನೆಗಳತ್ತ ದಿವ್ಯನಿರ್ಲಕ್ಷ್ಯ ತಾಳಿ ಕೇವಲ ಭಾರತದ ಮೇಲೆ ಆಕ್ರಮಣಗೈದವರನ್ನಷ್ಟೇ ವೈಭವೀಕರಿಸುವ ಕೀಳು ಪ್ರವೃತ್ತಿಯನ್ನೇ ಬಿಂಬಿಸಿದ್ದಾರೆ. ತನ್ನ ಚಿಂತನೆಗಳ ಮೂಲಕ ಜಗತ್ತಿನ ಮೇಲೆ ನೈತಿಕ ಮತ್ತು ರಾಜಕೀಯವಾದ ಅಸಾಧಾರಣ ಪ್ರಭಾವವನ್ನು ಭಾರತ ಬೀರಿದೆ…’

    ಇತಿಹಾಸ ತಜ್ಞರ ಅನಿಸಿಕೆ: ಇತಿಹಾಸಜ್ಞ ಮಾರ್ಕ್​ಟ್ವೈನ್ ಹೇಳುತ್ತಾರೆ: ‘ಭಾರತವೇ ಮಾನವ ಜನಾಂಗದ ನಾಗರಿಕತೆಯ ತೊಟ್ಟಿಲು, ಚರಿತ್ರೆಯ ತಾಯಿ, ಅದ್ಭುತಗಳ ಅಜ್ಜಿ, ಶ್ರೇಷ್ಠ ಸಂಪ್ರದಾಯಗಳ ಮುತ್ತಜ್ಜಿ. ಧರ್ಮದ ವಿಚಾರದಲ್ಲಿ ಭಾರತವು ಕೋಟ್ಯಧಿಪತಿ ಎನಿಸಿದರೆ ಇತರರು ಕಡುಬಡವರು!’

    ವಿಲಿಯಂ ಎಚ್ ಗಿಲ್ಬರ್ಟ್ ಹೇಳುತ್ತಾರೆ: ‘ಸರ್ವಕ್ಷೇತ್ರಗಳಲ್ಲೂ ಮಾನವನ ಅಭಿವೃದ್ಧಿಗೆ ಪೂರಕವಾದ ಚಿಂತನೆಗಳ ಕೊಡುಗೆಯನ್ನು ಭಾರತ ನೀಡಿದೆ. ಸಾಂಬಾರ ಪದಾರ್ಥಗಳು, ಚದುರಂಗದಂಥ ಕ್ರೀಡೆ, ಗಣಿತದ ದಶಮಾನ ಪದ್ಧತಿ, ಭಾಷಾಶಾಸ್ತ್ರತತ್ತ್ವಗಳು, ತಪಸ್ಸು-ಸಂನ್ಯಾಸವೇ ಮೊದಲಾದ ಧಾರ್ವಿುಕ ವಿಚಾರಗಳೆಲ್ಲವೂ ಜಗತ್ತಿಗೆ ಪ್ರಾಪ್ತವಾದದ್ದು ಭಾರತದಿಂದಲೇ.’

    ‘ಮಾನವ ಇತಿಹಾಸದ ಆಘಾತಕಾರಿಯಾದ ಕಾಲಘಟ್ಟದಲ್ಲಿ ನಮ್ಮ ಬದುಕಿಗೆ ಇರುವ ಒಂದೇ ಮಾರ್ಗವೆಂದರೆ ಹಿಂದೂ ಜೀವನಶೈಲಿ. ಇದು ನಾವೆಲ್ಲರೂ ವಿಶ್ವಕುಟುಂಬವಾಗಿ ಅಭ್ಯುದಯ ಸಾಧಿಸಲು ಪೂರಕವಾಗುವ ಜೀವನದೃಷ್ಟಿಕೋನ ಹಾಗೂ ಚೈತನ್ಯವನ್ನು ನೀಡುತ್ತದೆ’ ಎಂದಿದ್ದಾರೆ ಅರ್ನಾಲ್ಟ್ ಟಾಯ್ನಬಿ.

    ವಿಲ್ ಡ್ಯೂರೆಂಟ್ ಹೇಳುತ್ತಾರೆ: ‘ಬಹುಶಃ ನಮ್ಮ ದಿಗ್ವಿಜಯಗಳು, ದುರಹಂಕಾರ ಪ್ರವೃತ್ತಿ ಹಾಗೂ ಶೋಷಣೆಗಳಿಗೆ ಪ್ರತಿಯಾಗಿ ಭಾರತವು ನಮಗೆ ಸಹನೆ, ಪ್ರಬುದ್ಧ ಸೌಮ್ಯತೆ, ಅನ್ವೇಷಕ ಆತ್ಮದ ಪೂರ್ಣತೃಪ್ತಿ, ವಿಚಾರಗಳನ್ನು ತಿಳಿಯುವ ಸಮಾಧಾನಚಿತ್ತತೆ ಹಾಗೂ ಸಕಲರನ್ನೂ ಒಗ್ಗೂಡಿಸುವ ಪ್ರೀತಿ ಇವುಗಳನ್ನು ಕಲಿಸುತ್ತದೆ.’

    ತತ್ತ್ವಜ್ಞಾನಿಗಳು: ಸಾಕ್ರಟೀಸ್ ತನ್ನ ಶಿಷ್ಯರೊಂದಿಗೆ ಡೆಲ್ಪಿ ದೇವಾಲಯದ ಮೇಲೆ ಕೆತ್ತಿದ್ದ ಶಾಸನ ’ಓಟಡಿ ಠಿಜಢಠಛ್ಝಿ್ಛ ಅರ್ಥಾತ್ ನಿನ್ನನ್ನು ನೀನು ತಿಳಿ ಎಂಬ ವಿಷಯವಾಗಿಯೇ ರ್ಚಚಿಸುತ್ತಿದ್ದ. ಈ ವೇದಾಂತದ ವಿಚಾರವಾಗಿಯೇ ಆತ್ಮಾವಲೋಕನಕ್ಕೆ ಪ್ರೇರೇಪಿಸುತ್ತಿದ್ದ.

    ಜರ್ಮನಿಯ ಶೋಪನ್​ಹೋವರ್ ಹೇಳುತ್ತಾನೆ: ‘ಹಿಂದೂಧರ್ಮವನ್ನಾಗಲಿ, ಬೌದ್ಧಧರ್ಮವನ್ನಾಗಲಿ, ಕ್ರೈಸ್ತಧರ್ಮವು ತನ್ನ ಮತಪ್ರಚಾರಗಳಿಂದ ಸ್ಥಾನಪಲ್ಲಟ ಮಾಡುವುದು ಅಸಾಧ್ಯದ ಮಾತು. ವ್ಯತಿರಿಕ್ತವಾಗಿ, ಸಂಸ್ಕೃತ ಭಾಷಾಧ್ಯಯನ ಹಾಗೂ ಪ್ರಚಾರಗಳಿಂದ ಹಿಂದೂಧರ್ಮಶಾಸ್ತ್ರಗಳು ಯೂರೋಪ್ ಖಂಡವನ್ನು ಆಕ್ರಮಿಸಿ ತನ್ನದೇ ಪ್ರಭಾವವನ್ನು ಅಧಿಕವಾಗಿ ಬೀರಬಲ್ಲವು.’

    ‘ನನ್ನನ್ನು ಆವರಿಸಿಕೊಂಡಿರುವ ವೇದೋಪನಿಷತ್ತುಗಳಿಂದಲೇ ನಿರಂತರ ಸಮಾಧಾನ, ಅಳೆಯಲಾಗದ ಶಕ್ತಿ ಮತ್ತು ಅಖಂಡ ಶಾಂತಿ ಪ್ರಾಪ್ತವಾಗಿದೆ’ ಎಂದಿದ್ದಾನೆ ರಾಲ್ಪ್ ವಾಲ್ಡೊ.

    ವಿದ್ವಾಂಸರು: ರಾಮಾಯಣ ಮತ್ತು ಭಗವದ್ಗೀತೆಯನ್ನು ಸಂಸ್ಕರಿಸಿ ಪ್ರಕಟಿಸಿದ ಕೀರ್ತಿ ಜರ್ಮನಿಯ ಶೆಲೆಗಲ್ ಸಹೋದರರದ್ದು. ಯೂರೋಪಿನ ಪಾಲ್​ಡ್ಯೂಸನ್ ’The philosophy of Upanishads’ ಎಂಬ ಪುಸ್ತಕ ಬರೆದ. ಅಮೆರಿಕಾದಲ್ಲಿ ಎಮರ್​ಸನ್ ವೇದಾಂತ ತತ್ತ್ವವನ್ನು ಪರಿಚಯಿಸಿದ.

    ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತ ಭಾಷೆಗಳ ಬಗ್ಗೆ ಸಂಶೋಧನೆಗೈದ ಐರೋಪ್ಯ ವಿದ್ವಾಂಸರಾದ ಹೆಚ್.ಟಿ.ಕೋಲ್​ಬ್ರೂಕ್, ಹೆಚ್.ಹೆಚ್.ವಿಲ್ಸನ್, ಯೂಜಿನ್ ಬರ್ನಾಫ್, ಫ್ರಾನ್ಸ್ ಬಾಪ್, ಹರ್ಮನ್ ಬ್ರೋಕ್​ಹೌಸ್, ಹರ್ಮನ್ ಗಂಡರ್ಟ್, ಫೆಡ್ರಿಚ್ ವ್ಯಾನ್ರೋಥ್, ಭಾರತ ಮತ್ತು ಸಂಸ್ಕೃತವೇ ಜಗತ್ತಿನ ಸಾಂಸ್ಕೃತಿಕ ಇತಿಹಾಸಕ್ಕೆ ಮೂಲಸ್ರೋತದ ಖನಿ ಎಂದು ನಂಬಿದ್ದರು. ಹಲವು ಸಂಪುಟಗಳಲ್ಲಿ ಸಂಸ್ಕೃತ-ಜರ್ಮನ್ ನಿಘಂಟನ್ನು ಬಾತ್​ಲಿಂಕ್ ಮತ್ತು ರಾಥ್ ಪ್ರಕಟಿಸಿದ್ದರು.

    ಗುರು ಪ್ರೊ. ಹರ್ಮನ್ ಬ್ರೋಕ್​ಹೌಸ್ ಶಿಷ್ಯ ಮ್ಯಾಕ್ಸ್​ಮುಲ್ಲರ್​ಗೆ, ‘ನೀನು ಸಾಹಿತ್ಯಾಧ್ಯಯನದಲ್ಲಷ್ಟೇ ಸಮಯ, ಸಾಮರ್ಥ್ಯಗಳನ್ನು ವ್ಯರ್ಥಮಾಡದೇ ವೇದೋಪನಿಷತ್ತುಗಳ ಅಧ್ಯಯನದತ್ತ ಪರಿಶ್ರಮಿಸು’ ಎಂದಿದ್ದರು. ಮ್ಯಾಕ್ಸ್​ಮುಲ್ಲರ್ ಹೇಳುತ್ತಿದ್ದರು, ‘ಶಾಲೆಗಳಲ್ಲಿ ವೇದ-ವೇದಾಂತಗಳಿಂದ ಕಲಿಯಬೇಕಾದ ಪಾಠವು ಹೋಮರ್, ವರ್ಗಿಲ್, ಪ್ಲೇಟೋ ಮತ್ತು ಸ್ಪಿನೋಜ ತತ್ತಾ್ವಧ್ಯಯನಕ್ಕಿಂತ ಬಹುಮುಖ್ಯವೆನಿಸುತ್ತದೆ.’

    ದರೋಡೆಕೋರ ಘಸ್ನಿ ಮಹಮದ್ ಭಾರತದ ಸಂಪತ್ತಿನ ಲೂಟಿಕಾರ್ಯದಲ್ಲಿ ಮಗ್ನನಾದರೆ ಅವನ ಮಿತ್ರ ಆಲ್​ಬರೂನಿ ಭಾರತೀಯರ ಆಚಾರ-ವಿಚಾರಗಳಿಂದ ಆಕರ್ಷಿತನಾಗಿ ಇಲ್ಲಿನ ಭಾಷೆ ಹಾಗೂ ಸಂಸ್ಕೃತಿಯನ್ನು ಅಧ್ಯಯನಗೈದ. ಭಗವದ್ಗೀತೆಯ ಪ್ರಭಾವಕ್ಕೆ ಒಳಗಾಗಿ ಹಿಂದೂಧರ್ಮ ಹಾಗೂ ಖಗೋಳಶಾಸ್ತ್ರಗಳ ವಿವರಗಳನ್ನೊಳಗೊಂಡ ‘ಇಂಡಿಯಾ’ ಎಂಬ ಪುಸ್ತಕ ಬರೆದ!

    ‘ಮಾನವನ ವೈಚಾರಿಕ ಜಗತ್ತಿನಲ್ಲಿ ಭಾರತ ಅದಾಗಲೇ ಸಾಧನೆಯ ಉತ್ತುಂಗದಲ್ಲಿ ವಿರಾಜಿಸಿದೆ’ ಎಂದಿದ್ದಾನೆ ರಾಲ್ಪ್​ವಾಲ್ಡೊ ಎಮರ್​ಸನ್. ‘ಜಗತ್ತಿನ ಯಾವುದೇ ಕಾಲಘಟ್ಟದ ಸಂದಿಗ್ಧತೆಗಳಲ್ಲಿ ಚಿತ್ತಸ್ವಾಸ್ಥ್ಯದಿಂದ, ಮುಕ್ತಿಯ ಗಳಿಕೆಯಲ್ಲಿ ಭರವಸೆ ತಾಳಲು ಭಾರತೀಯ ಚಿಂತನೆಗಳಷ್ಟೇ ನಮಗೆ ದಾರಿದೀಪ’ ಎಂದಿದ್ದಾನೆ ನೊಬೆಲ್ ಪುರಸ್ಕೃತ ರೋಮರೋಲಾ.

    ಆಕ್ಸ್​ಫರ್ಡ್​ನಲ್ಲಿ Indian Institute in England ಎಂಬ ಭಾರತೀಯ ಸಂಸ್ಥೆಯ ಉದ್ಘಾಟನೆಗೈದ ಇಂಗ್ಲೆಂಡಿನ ರಾಜಕುಮಾರ ಪ್ರಿನ್ಸ್ ಆಫ್ ವೇಲ್ಸ್ ಉದ್ಘಾಟನಾ ಫಲಕದಲ್ಲಿ,

    ಈಶಾನುಕಂಪಯಾ ನಿತ್ಯಂ ಆರ್ಯವಿದ್ಯಾ ಮಹೀಯತಾಂ|

    ಆರ್ಯಾವರ್ತಾಂಗ್ಲಭೂಮ್ಯೋಶ್ಚ ಮಿಥೋ ಮೈತ್ರೀ ವಿವಿರ್ಧತಾಮ್|

    ಎಂದರೆ- ‘ದೈವಾನುಗ್ರಹದಿಂದ ಎಂದೆಂದಿಗೂ ಭಾರತೀಯ ವಿದ್ಯೆ ಗೌರವ ಪಡೆಯಲಿ, ಭಾರತ-ಆಂಗ್ಲದೇಶಗಳ ನಡುವಿನ ಮೈತ್ರಿ ಮತ್ತಷ್ಟು ವೃದ್ಧಿಸಲಿ’ ಎಂದು ಕೆತ್ತಿಸಿದ್ದರು!

    ಸಂಸ್ಕೃತ ಕುರಿತು: ಸರ್ ವಿಲಿಯಂ ಜೋನ್ಸ್ ಹೇಳುತ್ತಾರೆ- ‘ಸಂಸ್ಕೃತವು ಗ್ರೀಕ್ ಭಾಷೆಗಿಂತಲೂ ಪರಿಪೂರ್ಣತೆ ಸಾಧಿಸಿದೆ, ಲ್ಯಾಟಿನ್ ಭಾಷೆಗಿಂತ ವಿಚಾರಭರಿತವಾದ ವಾಕ್​ಸಂಪತ್ತನ್ನು ಹೊಂದಿದೆ ಮತ್ತು ಈ ಎರಡೂ ಭಾಷೆಗಳಿಗಿಂತ ಅತಿಸುಂದರ ಹಾಗೂ ವಿವೇಚನಾಯುಕ್ತವೂ ಆಗಿದೆ.’

    ಪ್ರೊ. ಮ್ಯಾಕ್ಸ್​ಮುಲ್ಲರ್ ಹೇಳುತ್ತಾರೆ: ‘ಪ್ರಾಚೀನ ಭಾರತದ ತತ್ತ್ವಶಾಸ್ತ್ರಜ್ಞರು ಗ್ರೀಕ್ ಅಥವಾ ಮಧ್ಯಯುಗದ ಅಥವಾ ಆಧುನಿಕ ಯುಗದ ತತ್ತ್ವಶಾಸ್ತ್ರಜ್ಞರಿಗಿಂತ, ಆತ್ಮದ ವಿಷಯದಲ್ಲಿ ಹೆಚ್ಚಿನ ಜ್ಞಾನಿಗಳಾಗಿದ್ದರು. ಎಲ್ಲ ಭಾಷೆಗಳ ತಾಯಿ ಎನಿಸಿರುವ ಸಂಸ್ಕೃತವು ಭಾರತೀಯರ ಐಕ್ಯತೆ ಮತ್ತು ಜಾತ್ಯತೀತ ತತ್ತ್ವಕ್ಕೆ ಕಾರಣವಾಗಿದೆ. ವಿಶ್ವಸಂದೇಶವೆಂದೇ ಸ್ವೀಕೃತವಾದ ಭಗವದ್ಗೀತೆಯು ಅನ್ಯಧರ್ಮಗಳನ್ನು ಟೀಕಿಸದೇ ವಿವಿಧ ದೇವರೋಪಾಸನೆಗಳಿಗೆ ಒತ್ತು ನೀಡುತ್ತದೆ.’

    ನೊಬೆಲ್ ಪುರಸ್ಕೃತ ಹರ್ಮನ್ ಹೆಸ್ಸೆ ಭಗವದ್ಗೀತೆಯನ್ನು ಆಮೂಲಾಗ್ರವಾಗಿ ಅಧ್ಯಯನಗೈದು, ವಿಶ್ವಕ್ಕೆ ಭಾರತೀಯ ಧರ್ಮ-ಅಧ್ಯಾತ್ಮಗಳ ಅನಿವಾರ್ಯತೆಯನ್ನು ಸಾರಿದ್ದಾನೆ.

    ಪಾಕಿಸ್ತಾನದ ಇಸ್ಲಾಮಿಕ್ ವಿಶ್ವವಿದ್ಯಾಲಯದ ಪೊ›. ದಿಲ್ ಮಹಮದ್, ಮಾನವ ಜೀವನದ ಉದ್ದೇಶ, ದೇವರ ಅವಶ್ಯಕತೆ, ಪ್ರೀತಿಯ ಸ್ವರೂಪ, ಕರ್ಮ-ಜ್ಞಾನಗಳ ರಹಸ್ಯ ಕುರಿತು ಮನೋಜ್ಞವಾಗಿ ತಿಳಿಹೇಳುವ ಭಗವದ್ಗೀತೆ ಅಧ್ಯಾತ್ಮಿಕ ಗ್ರಂಥಗಳ ಸಾಲಿನಲ್ಲಿ ಅತ್ಯುತ್ಕೃಷ್ಟವಾದದ್ದು ಎಂದಿದ್ದಾರೆ.

    ಗಣ್ಯಮಾನ್ಯರು ಕಂಡಂತೆ: ‘ಉಪನಿಷತ್ತುಗಳ ಆನಂದದಾಯಕ ಹಾಗೂ ಸ್ತುತ್ಯರ್ಹ ಲಕ್ಷಣಗಳಲ್ಲಿ ಅತಿಮುಖ್ಯವೆಂದರೆ ಸತ್ಯಾನ್ವೇಷಣೆಯ ಬಗ್ಗೆ ಅದು ತೋರುವ ಅತೀವ ಶ್ರದ್ಧೆ’ ಎಂದಿದ್ದಾರೆ ಅಮೆರಿಕಾದ ಕ್ಯಾಥೋಲಿಕ್ ಮುಖಂಡ ರಾಬರ್ಟ್ ಅರ್ನ್​ಸ್ ಹ್ಯೂಮ್

    ವಿಜ್ಞಾನ-ತತ್ತ್ವಶಾಸ್ತ್ರದ ಪಿತಾಮಹ ಗ್ರೀಕ್​ನ ಪೈಥಾಗೋರಸ್, ಹಿಂದೂ ಗುರುಕುಲ ಪದ್ಧತಿ ಜಾರಿಗೆ ತಂದ. ಭಾರತೀಯ ದರ್ಶನಶಾಸ್ತ್ರ, ಸಂಖ್ಯಾಶಾಸ್ತ್ರಗಳನ್ನು ಅಧ್ಯಯನಗೈದು ಪಾಶ್ಚಾತ್ಯ ಸಂಗೀತ ಪದ್ಧತಿಯಲ್ಲಿ ಸಂಖ್ಯಾಶಾಸ್ತ್ರ ಅಳವಡಿಸಿದ. ಸಸ್ಯಾಹಾರಿ ಪದ್ಧತಿ, ಸರಳ ಜೀವನಕ್ಕೆ ಒತ್ತುಕೊಟ್ಟ.

    ‘ಪರೋಪಕಾರ ತತ್ತಾ್ವನುಷ್ಠಾನದಿಂದ ಇಹ-ಪರಗಳೆರಡರಲ್ಲೂ ಜೀವನ ಸಾರ್ಥಕ್ಯ ಸಾಧ್ಯವೆಂಬ ಆದರ್ಶವನ್ನು ನನಗೆ ಕಲಿಸಿದವರು ಹಿಂದೂಸಂತ ವಿವೇಕಾನಂದರು’ ಎಂದಿದ್ದಾನೆ ಜಾನ್ ಡಿ ರಾಕ್​ಫೆಲ್ಲರ್.

    ಉಪಸಂಹಾರ: ಪ್ರಬುದ್ಧ ಚಿಂತಕ ಟಿಲ್​ಹಾರ್ಡ್ ಡಿ ಚಾರ್ಡಿನ್, ‘ರಾಷ್ಟ್ರ, ರಾಷ್ಟ್ರೀಯತೆಯ ಯುಗಾಂತ್ಯವನ್ನು ಜನತೆ ತಮ್ಮ ಪುರಾತನ-ಪೂರ್ವಾಗ್ರಹ ಪೀಡನೆಗಳ ನಿಮೂಲನೆಗೈದು ಸಾಧಿಸಿದ್ದಾರೆ. ಎಲ್ಲರೂ ಒಬ್ಬ ವ್ಯಕ್ತಿಯಂತೆ ಒಂದಾಗಿ ಜಗತ್ತನ್ನು ನಿರ್ವಹಿಸುವ ಕಾಲ ಸನ್ನಿಹಿತವಾಗಿದೆ’ ಎಂದಿದ್ದಾರೆ. ‘ವಿವೇಕಾನಂದರು ಸಂಕುಚಿತ ರಾಷ್ಟ್ರೀಯತೆಗೆ ಸೊಪ್ಪುಹಾಕಲಿಲ್ಲ. ಅವರು ಬೋಧಿಸಿದ್ದು ಶ್ರೇಷ್ಠ ರಾಷ್ಟ್ರೀಯತೆಯನ್ನಷ್ಟೇ ಅಲ್ಲ, ಉನ್ನತೀಕರಣಗೊಂಡ ವಿಶಿಷ್ಟ ರೀತಿಯ ಅಂತಾರಾಷ್ಟ್ರೀಯತೆ’ ಎಂದರು ಕ್ರಿಸ್ಟೋಫರ್ ಇಷರ್​ವುಡ್.

    ಯುನೆಸ್ಕೋದ ವಿಶ್ರಾಂತ ಮುಖ್ಯ ನಿರ್ದೇಶಕ ಫೆಡರಿಕೋ ಮೇಯರ್, ‘1897ರಲ್ಲಿ ವಿವೇಕಾನಂದರಿಂದ ಸ್ಥಾಪಿತವಾದ ರಾಮಕೃಷ್ಣ ಮಿಷನ್ ಮತ್ತು 1945ರಲ್ಲಿ ರೂಪುಗೊಂಡ ಯುನೆಸ್ಕೋ ಸಂವಿಧಾನಗಳಲ್ಲಿ ಬಹಳಷ್ಟು ಸಾಮ್ಯತೆಗಳನ್ನು ಕಂಡು ಬೆರಗಾಗಿದ್ದೇನೆ’ ಎಂದರೆ, ಮತ್ತೋರ್ವ ವಿಶ್ರಾಂತ ಮುಖ್ಯ ನಿರ್ದೇಶಕಿ ಇರೀನಾ ಬೊಕೋವಾ, ‘ವಿವೇಕಾನಂದರ ವಿಶ್ವಸಂದೇಶವನ್ನು ಅಧ್ಯಯನಗೈಯ್ಯುವುದರಿಂದ, ಛಿದ್ರವಾಗುತ್ತಾ ಸಾಗಿರುವ, ಆದರೆ ಅಂತಃಸಂಪರ್ಕವನ್ನು ಸಾಧಿಸಬಯಸುವ ವಿಶ್ವದ ಹತ್ತಾರು ದೇಶಗಳಿಗೆ ದಾರಿದೋರಿದಂತಾಗುತ್ತದೆ’ ಎಂದಿದ್ದಾರೆ.

    ನೊಬೆಲ್ ಪುರಸ್ಕೃತ ಐನ್​ಸ್ಟೀನ್, ‘ವೈಜ್ಞಾನಿಕ ಅನ್ವೇಷಣೆ ಮತ್ತು ನನ್ನ ಸಿದ್ಧಾಂತಗಳ ನಿರೂಪಣೆಗೆ ಭಗವದ್ಗೀತೆಯಿಂದ ಅಪಾರ ಸ್ಪೂರ್ತಿ ದೊರೆತಿದೆ’ ಎಂದಿದ್ದಾರೆ.

    ಅಮೆರಿಕಾದ ಬರಹಗಾರ ಎಲಿನರ್​ಸ್ಟಾಕ್ ತಮ್ಮ ’The Gift unopened; A new American Revolution’ ಪುಸ್ತಕದಲ್ಲಿ, ‘ಅಮೆರಿಕಾದ ಜಡಭೂಪ್ರದೇಶವನ್ನು ಕೊಲಂಬಸ್ ಪತ್ತೆಹಚ್ಚಿದರೆ ಅವರಿಗೆ ಸುಪ್ತ ಚೈತನ್ಯವನ್ನು ಹುಡುಕಿಕೊಟ್ಟವರು ಸ್ವಾಮಿ ವಿವೇಕಾನಂದರು’ ಎಂದಿದ್ದಾರೆ.

    ಸ್ವಾಮಿ ವಿವೇಕಾನಂದರು, ‘ನಾನು ಉಪನಿಷತ್ತುಗಳನ್ನಷ್ಟೇ ಮಾತನಾಡಿದ್ದೇನೆ. ಭಾರತೀಯರೇ, ಉಪನಿಷತ್ತುಗಳಿಗೆ ಹಿಂದಿರುಗಿ… ಭಾರತೀಯ ಮೂಲವಾದ ವಿಚಾರಗಳನ್ನು ಮೊದಲು ಒಪ್ಪಿ ಅನಂತರ ಪರೀಕ್ಷಿಸಿ, ಪಾಶ್ಚಾತ್ಯ ಚಿಂತನೆಗಳನ್ನು ಪರೀಕ್ಷಿಸಿದ ನಂತರವಷ್ಟೇ ಸ್ವೀಕರಿಸಿ… ಭಾರತ ಸಾಯಬೇಕೆ? ಭಾರತ ಸತ್ತರೆ ಜಗತ್ತಿಗೆ ಬದುಕುಂಟೆ? ಭಾರತ ಬದುಕಿದರೆ ಬೇರ್ಯಾರಿಗೂ ಸಾವು ಬರದು, ತಿಳಿಯಿತೇ?’ ಎಂದು ಎಚ್ಚರಿಸಿದ್ದಾರೆ.

    ಭಾರತೀಯತೆಯನ್ನೇ ಜರಿಯುತ್ತಾ, ಹಿಂದೂಧರ್ಮವನ್ನು ಶಪಿಸುತ್ತಾ, ಕಾಲಹರಣವನ್ನೇ ಅಹೋಭಾಗ್ಯವೆಂದು ಭಾವಿಸಿರುವ ಸ್ವಾರ್ಥಕೇಂದ್ರಿತ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ. ದೇಶದ ಶ್ರೇಷ್ಠ ವಿಚಾರಗಳನ್ನು ಗೌರವಿಸಲು ಒಪ್ಪದ, ಸತ್ಯವೇನೆಂದು ಪ್ರಯತ್ನಮಾಡಿ ತಿಳಿಯಲು ಪರಿಜ್ಞಾನ ಇಲ್ಲದ ಈ ರೋಗಗ್ರಸ್ತ, ಮಾನಸಿಕ ಅಸ್ವಸ್ಥ ಅತೃಪ್ತಾತ್ಮರಿಗೆ ಏನೆಂದು ಹೇಳೋಣ? ಜನರನ್ನು ಅಕ್ಷರಸ್ಥರನ್ನಾಗಿಸಬಹುದೇನೋ, ವಿಚಾರವಂತರಾಗಿಸುವುದು ಅದೆಷ್ಟು ಕಷ್ಟ! ಅಲ್ಲವೇ?

    (ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts