ಮೋದಿ ಮತ್ತೆ ಖಚಿತ: ಕೇಂದ್ರ ಸಚಿವ ಸುರೇಶ್ ಪ್ರಭು ವಿಶ್ವಾಸ

ಮಂಗಳೂರು: ದೇಶದ ಎಲ್ಲೆಡೆ ತೆರಳಿ ಪ್ರಚಾರ ವೀಕ್ಷಿಸಿದ್ದೇನೆ, ಮೋದಿ ಮತ್ತೊಮ್ಮೆ ಪ್ರಧಾನಿ ಗಾದಿ ಏರುವುದು ಖಚಿತ ಎಂದು ಕೇಂದ್ರ ವಾಣಿಜ್ಯ ಮತ್ತು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ವಿಶ್ವಾಸ ವ್ಯಕ್ತಪಡಿಸಿದರು.

ಐದು ವರ್ಷಗಳಲ್ಲಿ ಎಲ್ಲ ಕ್ಷೇತ್ರಗಳ ಪ್ರಗತಿ, ಸಾಮಾಜಿಕ ಕ್ಷೇತ್ರದ ಸೌಹಾರ್ದತೆ ಇದಕ್ಕೆ ಕಾರಣ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮೂಲಸೌಕರ್ಯ ಕ್ಷೇತ್ರಕ್ಕೆ ಬಹಳ ದೊಡ್ಡ ಪ್ರಮಾಣದ ಹೂಡಿಕೆ ನಡೆಸಲಾಗಿದೆ. ರೈಲ್ವೇ ಕ್ಷೇತ್ರದ ಆಧುನೀಕರಣ, ಸುಧಾರಣೆಗಾಗಿ ಐದು ವರ್ಷಗಳಲ್ಲಿ 8,54,000 ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಹಂತ ಹಂತವಾಗಿ ಕೈಗೊಳ್ಳಲಾಗಿದೆ. ಕರ್ನಾಟಕಕ್ಕೂ ಇದರಲ್ಲಿ ಸಾಕಷ್ಟು ಅನುದಾನ ಹರಿದು ಬಂದಿದ್ದು, ಇಷ್ಟೇ ಅಲ್ಲದೆ ಪ್ರತ್ಯೇಕವಾಗಿ ಖಾಸಗಿ ಸಹಭಾಗಿತ್ವದ ಯೋಜನೆಗಳನ್ನೂ ಕೈಗೊಳ್ಳಲಾಗುತ್ತಿದೆ ಎಂದರು. ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು, ಶಾಸಕ ವೇದವ್ಯಾಸ ಕಾಮತ್, ಮಾಜಿ ಶಾಸಕ ಎನ್.ಯೋಗೀಶ್ ಭಟ್, ರವಿಶಂಕರ ಮಿಜಾರು ಹಾಜರಿದ್ದರು.

ಖಾಸಗೀಕರಣ ಅಂತಿಮವಾಗಿಲ್ಲ: ಮಂಗಳೂರು ವಿಮಾನ ನಿಲ್ದಾಣ ಖಾಸಗೀಕರಣ ನಿರ್ಧಾರದ ಕುರಿತು ಕೇಳಿದ ಪ್ರಶ್ನೆಗೆ, ಈ ಪ್ರಸ್ತಾ ಪ ಇನ್ನೂ ಅಂತಿಮವಾಗಿಲ್ಲ. ಜೆಟ್‌ಏರ್‌ವೇಸ್ ತೀವ್ರ ಹಣಕಾಸು ಬಿಕ್ಕಟ್ಟು ಎದುರಿಸುತ್ತಿದೆ. ಈ ಕುರಿತು ಸಾಲಗಾರರು, ಬ್ಯಾಂಕ್‌ನವರು ಹಣಕಾಸು ವಿಚಾರಗಳನ್ನು ಪರಿಶೀಲಿಸುತ್ತಿದ್ದಾರೆ, ಸರ್ಕಾರ ಸಂಸ್ಥೆಯ ಗ್ರಾಹಕರು, ಸಿಬ್ಬಂದಿಗೆ ಅಗತ್ಯ ಸಹಕಾರ ನೀಡಲು ಬದ್ಧ. ನಮ್ಮ ಸರ್ಕಾರ ಆಡಳಿತದಲ್ಲಿ 30 ಹೊಸ ವಿಮಾನ ನಿಲ್ದಾಣಗಳು ಆರಂಭಗೊಂಡಿವೆ ಎಂದು ಸುರೇಶ್ ಪ್ರಭು ಹೇಳಿದರು.

ಸಂಸದ ನಳಿನ್ 10 ವರ್ಷಗಳಲ್ಲಿ ಸಂಸತ್ತಿನಲ್ಲಿ ಹಾಗೂ ಹೊರಗೆ ಉತ್ತಮ ಕೆಲಸ ಮಾಡಿದ್ದಾರೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಇನ್ನಷ್ಟು ನ್ಯಾಯ ಸಲ್ಲಿಸುವುದಕ್ಕಾಗಿ ಅವರು ಮತ್ತೆ ಆಯ್ಕೆಯಾಗಿ ಬರುತ್ತಾರೆ.
|ಸುರೇಶ್ ಪ್ರಭು, ಕೇಂದ್ರ ಸಚಿವ