ಆಲ್​ ಇಂಡಿಯಾ ರೇಡಿಯೋ ಕೇಂದ್ರಗಳಲ್ಲಿ ಲೈಂಗಿಕ ದೌರ್ಜನ್ಯ: ಸೂಕ್ತ ತನಿಖೆಗೆ ಸಚಿವೆ ಮನೇಕಾ ಗಾಂಧಿ ಒತ್ತಾಯ

ನವದೆಹಲಿ: ದೇಶಾದ್ಯಂತ ಆಲ್​ ಇಂಡಿಯಾ ರೇಡಿಯೋ ಕೇಂದ್ರಗಳಲ್ಲಿ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ ಎಂದು ದೂರುಗಳು ಬರುತ್ತಿದ್ದು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯವನ್ನು ಒತ್ತಾಯಿಸಿದ್ದಾರೆ.

ಮೀ ಟೂ ಅಭಿಯಾನದಡಿ ಹಲವು ಲೈಂಗಿಕ ದೌರ್ಜನ್ಯದ ಪ್ರಕರಣಗಳು ಬಂದಿದ್ದು, ಕಳೆದ ವಾರ ಆಲ್​ ಇಂಡಿಯಾ ರೇಡಿಯೋ ಕ್ಯಾಶುವಲ್​ ಅನೌನ್ಸರ್​ ಮತ್ತು ಸಂಯೋಜಕರ ಒಕ್ಕೂಟ (AICACU) ಮನೇಕಾ ಗಾಂಧಿಯವರಿಗೆ ಪತ್ರ ಬರೆದಿತ್ತು. ಹಾಗೇ ತಾವು ಆರೋಪ ಮಾಡಿದ ದಿನದಿಂದ ನಮಗೆ ಕೆಲಸವನ್ನೂ ಕೊಡುತ್ತಿಲ್ಲ ಎಂದೂ ಕೂಡ ತಿಳಿಸಿದೆ.

ರೇಡಿಯೋದಲ್ಲಿ ಕೆಲಸ ಮಾಡುವ ನಿವೇದಕರು, ಸಂಯೋಜಕರು, ರೇಡಿಯೋ ಜಾಕಿಗಳು ಈ ಪತ್ರ ಬರೆದಿದ್ದು, ಕಚೇರಿಯ ಹಿರಿಯ ಅಧಿಕಾರಿಗಳಿಂದ ನಡೆಯುವ ಯಾವುದೇ ರೀತಿಯ ದೌರ್ಜನ್ಯದ ವಿರುದ್ಧ ಧ್ವನಿ ಎತ್ತುವುದು ತುಂಬ ಕಷ್ಟವಾಗಿದೆ. ಯಾವಾಗ ಕೆಲಸ ಕಳೆದುಕೊಳ್ಳುತ್ತೇವೋ ಎಂಬ ಭಯದಲ್ಲೇ ಇರಬೇಕಾಗುತ್ತದೆ. ಲೈಂಗಿಕ ದೌರ್ಜನ್ಯದ ಆರೋಪ ಮಾಡಿದವ ಕೆಲವರನ್ನು ಈಗಾಗಲೇ ಕೆಲಸದಿಂದ ತೆಗೆದು ಹಾಕಲಾಗಿದ್ದು ಅವರಿಗೆ ಸಾಕ್ಷಿಯಾದವರನ್ನೂ ಕೂಡ ಹೊರಗೆ ಹಾಕಲು ಹುನ್ನಾರ ನಡೆಯುತ್ತಿದೆ ಎಂದು ಎಐಸಿಎಸಿಯು ಒಕ್ಕೂಟ ಮನೇಕಾ ಗಾಂಧಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದೆ.

ವಿವಿಧ ರಾಜ್ಯದ ಆಲ್​ ಇಂಡಿಯಾ ರೇಡಿಯೋ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವು ಮಹಿಳೆಯರು ತಮಗೆ ಕೆಲಸದ ಸ್ಥಳದಲ್ಲಿ ತಮ್ಮ ಮೇಲೆ ಆದ ಲೈಂಗಿಕ, ಮಾನಸಿಕ ದೌರ್ಜನ್ಯದ ಕುರಿತು ಮಾಧ್ಯಮದೆದುರು ಹೇಳಿಕೊಂಡಿದ್ದರು.

ಒಮ್ಮೆ ಡಬ್ಬಿಂಗ್​ ಸಮಯದಲ್ಲಿ ಕರೆಂಟ್​ ಹೋದಾಗ ನನ್ನನ್ನು ಕುರ್ಚಿ ಮೇಲೆ ನೂಕಿದ ನನ್ನ ಬಾಸ್​ ನನಗೆ ಬಲವಂತದಿಂದ ಚುಂಬಿಸಿದ್ದರು ಎಂದು ಹಿಮಾಚಲ ಪ್ರದೇಶದ ಧರ್ಮಶಾಲಾ ಕೇಂದ್ರದಲ್ಲಿ ಕೆಲಸ ಮಾಡುವ ಜ್ಯೋತಿ ಪಠಾಣಿಯಾ ಎಂಬುವರು ಆರೋಪಿಸಿದ್ದರು. ಇದೇ ರೀತಿಯ ದೂರು ಗಳು ಹಲವು ಕಡೆಯಿಂದ ಬಂದ ನಂತರ ಸಚಿವೆ ಮನೇಕಾ ಗಾಂಧಿಯವರಿಗೆ ಪತ್ರ ಬರೆಯಲಾಗಿತ್ತು.