ನಗರದಲ್ಲೇ ಕಾಲ ಕಳೆದ ಕೇಂದ್ರ ಸಚಿವ

 ಮೈಸೂರು: ನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡ ಕೇಂದ್ರ ವಾಣಿಜ್ಯ ಮತ್ತು ನಾಗರಿಕ ವಿಮಾನಯಾನ ಸಚಿವ ಸುರೇಶ್‌ಪ್ರಭು ಅವರು ಶನಿವಾರವೂ ನಗರದಲ್ಲೇ ಉಳಿದು ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು.

ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ತೆರಳಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡರು. ಪತ್ನಿಯೊಂದಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದರು. ‘ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ದೇವಿ ಬಳಿ ಪ್ರಾರ್ಥನೆ ಮಾಡಿದ ಅವರು, ಈ ದೇಗುಲವು ಈ ಭಾಗದ ಸಾಂಸ್ಕೃತಿಕ ಪರಂಪರೆಯನ್ನು ಇನ್ನಷ್ಟು ಶ್ರೀಮಂತಗೊಳಿಸಿದೆ ಎಂದು ಬಣ್ಣಿಸಿದರು.

ಬಳಿಕ ತಮ್ಮ ನೆಚ್ಚಿನ ಇಂಗ್ಲಿಷ್ ಸಾಹಿತಿ ಆರ್.ಕೆ.ನಾರಾಯಣ್ ಮನೆಗೆ ಭೇಟಿ ನೀಡಿದರು. ಲಂಡನ್‌ನಲ್ಲಿರುವ ಷೇಕ್ಸ್‌ಪಿಯರ್ ಮನೆ ಮಾದರಿಯಲ್ಲಿ ಸ್ಮಾರಕವಾಗಿ ಪುನರುಜ್ಜೀವನಗೊಂಡಿರುವ ನಿವಾಸ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಇಲ್ಲಿರುವ ಮಾಲ್ಗುಡಿ ಡೇಸ್, ಗಾಡ್ಸ್-ಡೆಮನ್ಸ್ ಆ್ಯಂಡ್ ಅದರ್ಸ್‌, ದಿ ರೈಟರ್ಸ್‌ ಲೈಫ್, ಸ್ವಾಮಿ ಆ್ಯಂಡ್ ಫ್ರೆಂಡ್ಸ್, ಎ ಡೈಗರ್ಸ್‌ ಫಾರ್ ಮಾಲ್ಗುಡಿ ಮತ್ತು ಮೈ ಡೇಸ್…ಹೀಗೆ ಇತರ ಜನಪ್ರಿಯ ಕಾದಂಬರಿ ಹಾಗೂ ವಿಮರ್ಶಾ ಗ್ರಂಥಗಳನ್ನು ಕುತೂಹಲದಿಂದ ನೋಡಿದರು.

ಆರ್‌ಕೆಎನ್ ಧರಿಸುತ್ತಿದ್ದ ಬಟ್ಟೆಬರೆಗಳು, ಕೋಟು, ಕನ್ನಡಕ, ಲೇಖನಿ, ಅವರ ನೆಚ್ಚಿನ ಚಿತ್ರಕಲಾಕೃತಿಗಳು, ಅವರು ಬಳಸುತ್ತಿದ ಕುರ್ಚಿ, ಮೇಜು, ಅವರಿಗೆ ದೊರೆತ ಪದ್ಮಭೂಷಣ ಹಾಗೂ ಪದ್ಮವಿಭೂಷಣ ಪ್ರಶಸ್ತಿಗಳನ್ನೂ ಕಣ್ತುಂಬಿಕೊಂಡರು.

‘ಈ ತಾಣಕ್ಕೆ ಭೇಟಿ ನೀಡಿದ್ದು ನಿಜಕ್ಕೂ ಹೃದಯಸ್ಪರ್ಶಿಯಾಗಿದೆ. ಅವರ ಅನೇಕ ಪುಸ್ತಕಗಳನ್ನು ಓದಿದ್ದೇನೆ. ಆ ಕೃತಿಗಳು ಸದಾ ಕಾಲ ಸ್ಮರಣೀಯವಾಗಿದೆ’ ಎಂದು ಹೇಳಿದರು.

ಅಲ್ಲಿಂದ ಮೈಸೂರು ರೇಷ್ಮೆ ಕಾರ್ಖಾನೆಗೆ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮೈಸೂರು ರೇಷ್ಮೆ ಸೀರೆಯ ಗುಣಮಟ್ಟ ಉತ್ಕೃಷ್ಟವಾಗಿದ್ದು, ಇದಕ್ಕೆ ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಕಲ್ಪಿಸಿಕೊಡಬೇಕಾಗಿದೆ. ಈ ಸೀರೆಯ ರಫ್ತಿಗೆ ಉತ್ತೇಜನ ನೀಡಬೇಕಾಗಿದೆ. ಇದರಿಂದ ಉದ್ಯೋಗಾವಕಾಶಗಳು ವೃದ್ಧಿಯಾಗಿ, ಕೈಗಾರಿಕೆಗಳು ಅಭಿವೃದ್ಧಿಯಾಗಲಿದೆ. ಈ ವಿಷಯವಾಗಿ ಚರ್ಚಿಸಲು ದೆಹಲಿಯಲ್ಲಿ ಶೀಘ್ರವೇ ರಾಜ್ಯ ಸರ್ಕಾರದ ಪ್ರತಿನಿಧಿಯೊಂದಿಗೆ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಈ ಎಲ್ಲ ಮಾಹಿತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.