ಡಿಸೆಂಬರ್​ವರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್​ ಷಾ ಮುಂದುವರಿಕೆ ಸಾಧ್ಯತೆ

ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರು ಡಿಸೆಂಬರ್​ವರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

2019ರ ಜನವರಿಯಲ್ಲಿ ಅಮಿತ್​ ಷಾ ಅವರ ಅಧಿಕಾರಾವಧಿ ಮುಕ್ತಾಯವಾಗುತ್ತಿತ್ತು. ಆದರೆ, 2018ರ ಸೆಪ್ಟೆಂಬರ್​ನಲ್ಲಿ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಲೋಕಸಭೆ ಚುನಾವಣೆ ಮುಗಿಯುವವರಿಗೆ ಅಮಿತ್​ ಷಾ ಅವರನ್ನು ರಾಷ್ಟ್ರೀಯ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸಲು ಒಪ್ಪಿಗೆ ನೀಡಲಾಗಿತ್ತು. ಅದರಂತೆ ಅವರು ಪಕ್ಷದ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದಿದ್ದಾರೆ.

ಅಮಿತ್​ ಷಾ ಅವರು ಪ್ರಸ್ತುತ ಕೇಂದ್ರ ಗೃಹ ಸಚಿವರಾಗಿರುವುದರಿಂದ ಮುಂದಿನ ಅಧ್ಯಕ್ಷರ ಆಯ್ಕೆ ಆಗುವವರಿಗೆ ಅವರೇ ಪಕ್ಷದ ಅಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತು ಗುರುವಾರ ನಡೆಯಲಿರುವ ಪಕ್ಷದ ಪದಾಧಿಕಾರಿಗಳು, ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಡಿಸೆಂಬರ್​ನಲ್ಲಿ ನೂತನ ಅಧ್ಯಕ್ಷರ ಆಯ್ಕೆ ನಡೆಯುವ ಸಾಧ್ಯತೆ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅಮಿತ್​ ಷಾ 2014ರ ಜುಲೈನಲ್ಲಿ ರಾಜನಾಥ್​ ಸಿಂಗ್​ ಅವರ ಉತ್ತರಾಧಿಕಾರಿಯಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ರಾಜನಾಥ್​ ಸಿಂಗ್​ ಅವರ ಅಧಿಕಾರಾವಧಿ 18 ತಿಂಗಳು ಬಾಕಿ ಇತ್ತು. ಇಷ್ಟು ಅವಧಿಗೆ ಅಮಿತ್​ ಷಾ ಅಧ್ಯಕ್ಷರಾಗಿದ್ದರು. ಆ ನಂತರ 2016ರ ಜನವರಿಯಲ್ಲಿ ಅವರ 3 ವರ್ಷಗಳ ಪೂರ್ಣಾವಧಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಬಿಜೆಪಿ ಪಕ್ಷದಲ್ಲಿ ಓರ್ವ ವ್ಯಕ್ತಿ 2 ಬಾರಿ 3 ವರ್ಷಗಳ ಪೂರ್ಣಾವಧಿಗೆ ಅಧ್ಯಕ್ಷರಾಗಿ ಮುಂದುವರಿಯಲು ಅವಕಾಶವಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *