ತಿರುವನಂತಪುರ: ಜಲಜಲಕ ಚಾಲಿತ ವಾಹನಗಳ ಉತ್ಪಾದನೆ ಮಾಡುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಹೈಡ್ರೋಜನ್ ಫ್ಯುಯೆಲ್ ಸೆಲ್ ವಾಹನಗಳ ಉತ್ಪಾದನೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಪ್ರಕಟಿಸಿದ್ದು, ಅಂತಿಮ ಅಧಿಸೂಚನೆ ಈ ತಿಂಗಳ ಕೊನೆಗೆ ಪ್ರಕಟವಾಗಲಿದೆ.
ಈಗಾಗಲೇ ವಿದ್ಯುತ್ಚಾಲಿತ ವಾಹನಗಳ ಉತ್ಪಾದನೆಯಾಗಿ ರಸ್ತೆಯಲ್ಲಿ ಸಂಚರಿಸತೊಡಗಿವೆ. ಅವುಗಳ ಹಿನ್ನಡೆ ಏನೆಂದರೆ, 4-5 ಗಂಟೆಗಳ ಅವಧಿಯಲ್ಲೇ ಬ್ಯಾಟರಿ ಚಾರ್ಜ್ ಖಾಲಿಯಾಗಿ ಬಿಡುತ್ತದೆ. ಆದಾಗ್ಯೂ, ಯಾವ ವಾಹನಗಳ ಬ್ಯಾಟರಿಯಲ್ಲಿ ಹೈಡ್ರೋಜನ್ ಫ್ಯುಯೆಲ್ ಸೆಲ್ ಇದೆಯೋ ಅಂಥವುಗಳನ್ನು ಪೆಟ್ರೋಲ್, ಡೀಸೆಲ್ ತುಂಬಿಸುವಂತೆ ಕೆಲವೇ ನಿಮಿಷಗಳಲ್ಲಿ ಮರು ಚಾರ್ಜ್ ಮಾಡುವುದು ಸಾಧ್ಯವಾಗುತ್ತದೆ.
ಹೈಡ್ರೋಜನ್ ರೀಫ್ಯೂಯೆಲ್ಲಿಂಗ್ ಸೆಂಟರ್ಗಳನ್ನು ಪೆಟ್ರೋಲ್ ಬಂಕ್ಗಳ ಮಾದರಿಯಲ್ಲಿ ಸ್ಥಾಪಿಸುವುದು ಸಾಧ್ಯವಿದೆ. ಜಲಜನಕ ಚಾಲಿತ ವಾಹನಗಳ ಮೈಲೇಜ್ ಇಲೆಕ್ಟ್ರಿಕ್ ವಾಹನಗಳ ಮೈಲೇಜ್ಗಿಂತ ಹೆಚ್ಚಿದೆ. ಈ ವಾಹನಗಳು ಮಾಲಿನ್ಯ ಉಂಟುಮಾಡುವುದಿಲ್ಲ. ಆದರೆ, ಇವುಗಳ ಉತ್ಪಾದನಾ ವೆಚ್ಚ ಕೊಂಚ ಅಧಿಕವೇ ಆಗಿದೆ. ಪರಿಣತರು ಹೇಳುವ ಪ್ರಕಾರ, ಈ ವೆಚ್ಚ ಟೆಕ್ನಾಲಜಿ ಅಭಿವೃದ್ಧಿಯಾದಂತೆ ಕಡಿಮೆಯಾಗಲಿದೆ.
ಇದನ್ನೂ ಓದಿ: ಹಾಸಿಗೆ ಮಾರಾಟಕ್ಕೆ ಹೊರಟು 91,000 ರೂಪಾಯಿ ಕಳ್ಕೊಂಡ್ರು..
ಹೈಡ್ರೋಜನ್ ವಾಹನಗಳಲ್ಲಿ ಎಲೆಕ್ಟ್ರೋ ಕೆಮಿಕಲ್ ಇಂಜಿನ್ಗಳನ್ನು ಬಳಸಲಾಗುತ್ತದೆ. ಆಮ್ಲಜನಕದೊಂದಿಗೆ ಸೇರಿಸಿ ಹೈಡ್ರೋಜನ್ ಅನ್ನು ಎಲೆಕ್ಟ್ರೋ ಕೆಮಿಕಲ್ ಸೆಲ್ಗೆ ತಳ್ಳುವ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ಈ ಶಕ್ತಿಯಿಂದಲೇ ವಾಹನ ಚಲಾಯಿಸಲ್ಪಡುತ್ತದೆ. ವಿದ್ಯುತ್ ಚಾಲಿತ ವಾಹನಗಳಲ್ಲಿ ಬ್ಯಾಟರಿಯಲ್ಲಿ ಶೇಖರಿಸಲ್ಪಟ್ಟ ವಿದ್ಯುತ್ ಬಳಸಿಕೊಂಡು ವಾಹನ ಚಲಾಯಿಸಲಾಗುತ್ತದೆ. ಈ ವಾಹನಗಳ ರೂಪ ಬದಲಾಯಿಸದೇ ಹೈಡ್ರೋಜನ್ ಟ್ಯಾಂಕ್ ಅಳವಡಿಸುವುದು ಸಾಧ್ಯವಿದೆ.
ಹೈಡ್ರೋಜನ್ ಚಾಲಿತ ವಾಹನಗಳ ಸಾಧ್ಯಾಸಾಧ್ಯತೆ ಬಗ್ಗೆ ಅಧ್ಯಯನ ನಡೆಸುವ ಹೊಣೆಗಾರಿಕೆ ತಿರುವನಂತಪುರದ ಶ್ರೀ ಚಿತ್ರ ತಿರುನಾಳ್ ಕಾಲೇಜ್ ಆಫ್ ಇಂಜಿನಿಯರಿಂಗ್ ಹೆಗಲೇರಿದೆ. ಇದಕ್ಕೆ ಸಂಬಂಧಿಸಿದ ಮೊದಲ ಪ್ರಾಜೆಕ್ಟ್ ಅನ್ನು ಕೇರಳವೇ ಮಂಡಿಸಿದ್ದು, ಪರಿಣಾಮಕಾರಿಯಾಗಿದೆ ಎಂಬ ಮಾತು ಕೇಳಿಬಂದಿದೆ. (ಏಜೆನ್ಸೀಸ್)